ಇವತ್ತು ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಕಲಾವಿದರ ಜನುಮ ದಿನ ಸಾಹಸಸಿಂಹ ದಿ: ಡಾ: ವಿಷ್ಣುವರ್ಧನ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ನಟಿ ಶೃತಿ. ಇವರಿಗೆ ಜನುಮ ದಿನದ ಶುಭಾಶಯಗಳು.
ಸಾಹಸ ಸಿಂಹ ಡಾ: ವಿಷ್ಣುವರ್ಧನ್: ಮೈಸೂರಿನ ಹೆಚ್.ಎಲ್. ನಾರಾಯಣರಾವ್ ಮತ್ತು ಕಾಮಾಕ್ಷಮ್ಮ ದಂಪತಿಯ ಮಗನಾಗಿ ದಿನಾಂಕ: 18, ಸೆಪ್ಟಂಬರ್ 1950ರಲ್ಲಿ ಜನಿಸಿದ ಸಂಪತ್ ಕುಮಾರ್ ಮುಂದೆ ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಚಿತ್ರದ ಮೂಲಕ ನಾಯಕ ನಟನಾಗಿ ಅಭಿನಯಿಸಿ ಚಿತ್ರರಂಗದಲ್ಲಿ ವಿಷ್ಣುವರ್ಧನ್ ಆಗಿ ಜನಪ್ರಿಯರಾದರು. ಇವರಿಗೆ ವಿಷ್ಣುವರ್ಧನ್ ಅಂತ ಹೆಸರಿಟ್ಟಿದ್ದು ಅವರ ಗುರು ಪುಟ್ಟಣ್ಣ ಕಣಗಾಲ್! ಕನ್ನಡ, ತಮಿಳು, ಮಲೆಯಾಳಿ,ಹಿಂದಿ, ತೆಲುಗು ಹೀಗೆ ಬಹುಭಾಷೆಗಳ ನಟನಾಗಿ ಜನಪ್ರಿಯವಾರಾಗಿದ್ದ ವಿಷ್ಣುವರ್ಧನ್ ಸುಮಾರು 220ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಟಿ ಭಾರತಿಯವರನ್ನು ಮದುವೆಯಾಗಿದ್ದರು. ಅತಿ ಹೆಚ್ಚು ದ್ವಿಪಾತ್ರಗಳಲ್ಲಿ ನಟಿಸಿದ ನಾಯಕ ನಟ ಇವರಾಗಿದ್ದರು. ಹಿನ್ನೆಲೆ ಗಾಯಕರಾಗಿಯೂ ಯಶಸ್ವಿಯಾಗಿದ್ದ ವಿಷ್ಣುವರ್ಧನ್ ಜೊತೆ ಅತಿ ಹೆಚ್ಚುಬಾರಿ ನಾಯಕಿಯಾಗಿ ನಟಿಸಿದ್ದು ನಟಿ ಆರತಿ ವಿಷ್ಣುವರ್ಧನ್ ಮತ್ತು ಸುಹಾಸಿನಿ ಜೋಡಿ ಅತ್ಯಂತ ಜನಪ್ರಿಯವಾಗಿತ್ತು. ರೆಬಲ್ ಸ್ಟಾರ್ ಅಂಬರೀಷ್ ಮತ್ತು ವಿಷ್ಣು ಆತ್ಮೀಯ ಗೆಳೆಯರು. ಕನ್ನಡ ಚಿತ್ರರಂಗದಲ್ಲಿ ತಮ್ಮ ಅಭಿನಯದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದ ವಿಷ್ಣು 2009ರಲ್ಲಿ ನಿಧನರಾದರು. ಇಂದಿಗೂ ಇವರ ಅಭಿಮಾನಿಗಳು ತಮ್ಮ ಅಭಿಮಾನಿ ಸಂಘಗಳ ಮೂಲಕ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಾರೆ.
ರಿಯಲ್ ಸ್ಟಾರ್ ಉಪೇಂದ್ರ: ಕುಂದಾಪುರ ಮೂಲದವರಾದ ಉಪೇದ್ರ ಹುಟ್ಟಿದ್ದು 18 ಸೆಪ್ಟಂಬರ್ 1968ರಲ್ಲಿ. ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ ನಟ ನಿರ್ದೇಶಕ ಕಾಶಿನಾಥ್ ರವರ ಗರಡಿಯಲ್ಲಿ ಪಳಗಿದ ಉಪ್ಪಿ ಅವರ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತ ನಮ್ಮ ಪ್ರತಿಭೆಯನ್ನು ಗಟ್ಟಿಗೊಳಿಸಿಕೊಂಡರು. ನಂತರ ತರ್ಲೆ ನನ್ಮಗ ಚಿತ್ರದ ಮೂಲಕ ನಿರ್ದೇಶಕರಾಗಿ ಹೆಸರು ಮಾಡಿದ ಉಪ್ಪಿ ಮೊದಲ ಬಾರಿಗೆ ಎ ಚಿತ್ರದ ಮೂಲಕ ನಾಯಕನಟನಾಗಿಯೂ ಹೆಸರು ಗಳಿಸಿದರು. ಸದಾ ವಿಭಿನ್ನ ಚಿಂತನೆಗಳಿಗೆ ಹೆಸರುವಾಸಿಯಾದ ಇವರು ರಿಯಲ್ ಸ್ಟಾರ್ ಎಂತಲೇ ಜನಪ್ರಿಯರಾದರು ಇವರ ನಟನೆಯ ಉಪ್ರೇಂದ್ರ ಚಿತ್ರವೂ ಕೂಡ ಯಶಸ್ವಿಯಾಗಿತ್ತು. ಸಾಕಷ್ಟು ಚಿತ್ರಗಳಲ್ಲಿ ನಾಯಕ ನಟನಾಗಿ ನಟಿಸಿರುವ ಉಪ್ಪಿ ರಾಜಕೀಯದಲ್ಲೂ ತಮ್ಮನ್ನು ಗುರುತಿಸಿಕೊಂಡರು. ನಟಿ ಪ್ರಿಯಾಂಕರವನ್ನು ಮದುವೆಯಾಗಿರುವ ಇವರಿಗೆ ಮುದ್ದಾದ ಇಬ್ಬರು ಮಕ್ಕಳಿದ್ದಾರೆ.
ಶೃತಿ: ಮೂಲ ಹೆಸರು ಪ್ರಿಯದರ್ಶಿನಿ ಹುಟ್ಟಿದ್ದು ಸೆಪ್ಟಂಬರ್ 18, 1975ರಲ್ಲಿ. ವೀರ ಸಿಂಧೂರ ಲಕ್ಷ್ಮಣ ಚಿತ್ರದಲ್ಲಿ ಒಂದು ವರ್ಷದ ಮಗುವಾಗಿದ್ದಾಗಲೇ ಬೆಳ್ಳಿಪರದೆಯ ಮೇಲೆ ಕಾಣಿಸಿಕೊಂಡಿದ್ದ ಪ್ರಿಯದರ್ಶಿನಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದರು. 1990ರಲ್ಲಿ ಕನ್ನಡದ ಜನಪ್ರಿಯ ನಿರ್ದೇಶಕ, ನಟ ದ್ವಾರಕೀಶ್ ನಿರ್ಮಿಸಿದ ಶೃತಿ ಚಿತ್ರದಲ್ಲಿ ಮೊಟ್ಟ ಮೊದಲ ಬಾರಿಗೆ ನಾಯಕಿಯಾಗಿ ನಟ ಸುನೀಲ್ ಜೊತೆ ನಟಿಸಿ ಶೃತಿಯಾಗಿ ಚಿತ್ರರಂಗದಲ್ಲಿ ನೆಲೆಯೂರಿದರು. ಇತ್ತೀಚೆಗೆ ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿ ಮೊದಲ ಸ್ಥಾನ ಪಡೆದರು. ಶೃತಿ ಎಂದರೆ ಗ್ರಾಮೀಣ ಭಾಗದ ಮಹಿಳೆಯರಿಗೆ ಬಲು ಇಷ್ಟ ಇವರ ನಟನೆಯ ಎಲ್ಲಾ ಚಿತ್ರಗಳಲ್ಲೂ ಶೃತಿ ಭಾವನಾತ್ಮಕವಾಗಿ ನಟಿಸಿ ಎಲ್ಲರಿಂದಲೂ ಮೆಚ್ಚುಗೆ ಗಳಿಸಿದ್ದರು. ರಮೇಶ್ ನಿರ್ದೇಶನದ ರಾಮ ಶಾಮ ಭಾಮ ಚಿತ್ರದಲ್ಲಿ ಕಮಲ್ ಹಾಸನ್ ಜೊತೆ ನಟಿಸಿ ಚಿತ್ರರಸಿಕರಿಗೆ ರಂಜಿಸಿ ಇನ್ನಷ್ಟು ಜನಪ್ರಿಯರಾದರು.
ಮತ್ತೊಮ್ಮೆ ಈ ಕಲಾವಿದರಿಗೆ ನಾಡಿನ ಸಮಸ್ತ ಚಿತ್ರರಸಿಕರ ಪರವಾಗಿ ಜನುಮದಿನದ ಶುಭಾಶಯಗಳು!
-ನವೀನ್ ರಾಮನಗರ