ಕೆಲವರ ಬದುಕೇ ಹಾಗೇ ಕಡಿಮೆ ಅವಧಿಯಲ್ಲಿ ಒಂದೀಷ್ಟು ಸಾಧನೆ ಮಾಡಿ ಎಲ್ಲರಿಗೂ ತಲುಪಿ ಬಹಳ ಬೇಗ ಮರಳಿಬಾರದೂರಿಗೆ ಹೋಗಿ ಬಿಡುತ್ತಾರೆ. ಅಂತವರ ಸಾಲಿನಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕøತ ಕಲಾವಿದ ಬಿ. ವಿಜಯ್ ಕುಮಾರ್ ಆಲಿಯಾಸ್ ಸಂಚಾರಿ ವಿಜಯ್ ಕೂಡ ಒಬ್ಬರು.
ಜುಲೈ 17, 1983ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ರಂಗಾಪುರದಲ್ಲಿ ಜನಿಸಿದ ಬಿ. ವಿಜಯ್ ಕುಮಾರ್ ರವರ ತಂದೆ ಬಸವರಾಜಯ್ಯ ತಾಯಿ ಗೌರಮ್ಮ ಇಬ್ಬರು ಕೂಡ ಕಲಾವಿದರು. ಕಲೆಯ ಹಿನ್ನೆಲೆಯ ಕುಟುಂಬದಲ್ಲಿ ಹುಟ್ಟಿದ್ದ ಬಿ. ವಿಜಯ್ ಕುಮಾರ್ ಓದಿದ್ದು ಇಂಜಿನಿಯರಿಂಗ್! ರಕ್ತಗತವಾಗಿ ಬಂದಿದ್ದ ಕಲೆ ಇವರನ್ನು ಕಲಾ ಪ್ರಪಂಚಕ್ಕೆ ಕರೆಯುತ್ತಲೇ ಇತ್ತು. ಆಗಾಗಿ ತಮ್ಮ ಬದುಕನ್ನು ಕಲೆಯಲ್ಲೆ ಕಂಡುಕೊಳ್ಳಲು ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಬಿ. ವಿಜಯ್ ಕುಮಾರ್ ಸಂಚಾರಿ ನಾಟಕ ತಂಡದಲ್ಲಿ ತಮ್ಮನ್ನು ತಾವು ತೊಡಸಿಕೊಂಡ ಹಿನ್ನೆಲೆ ಇವರು ಮುಂದೆ ಸಂಚಾರಿ ವಿಜಯ್ ಆಗಿ ಹೆಸರುಗಳಿಸುತ್ತಾರೆ.
ಹಲವಾರು ನಾಟಕಗಳಲ್ಲಿ ಅಭಿನಯ, ನಿರ್ದೇಶನ, ಕಿರುತೆರೆ, ಕಿರುಚಿತ್ರ ಸಿನಿಮಾ ಹೀಗೆ ಕಲಾ ಕ್ಷೇತ್ರದಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡು ಕಲಾವಿದರಾಗಿ ಸಮಾಜಮುಖಿ ಕೆಲಸಗಳನ್ನೂ ಮಾಡುತ್ತಾ ಸಮಾಜಮುಖಿಯಾಗಿ ಬದುಕನ್ನು ಕಟ್ಟಿಕೊಂಡಿದ್ದರು. ಬಿ.ಎಸ್.ಲಿಂಗದೇವರು ನಿರ್ದೇಶನದ ನಾನು ಅವನಲ್ಲ ಅವಳು ಎಂಬ ಚಿತ್ರದ ತೃತಿಯ ಲಿಂಗಿ ಪಾತ್ರದ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು ಸಂಚಾರಿ ವಿಜಯ್.
ದಿನಾಂಕ 13.06.2021ರ ರಾತ್ರಿ ಗೆಳೆಯನ ಜೊತೆ ಬೈಕಿನಲ್ಲಿ ತಮ್ಮ ಮನೆಗೆ ತೆರೆಳಬೇಕಾದರೆ ಅಪಘಾತವಾಗಿ ತೀವ್ರವಾಗಿ ತಲೆಗೆ ಪೆಟ್ಟುಬಿದ್ದು ಬೆಂಗಳೂರಿನ ಅಪೊಲೋ ಆಸ್ಪತ್ರೆಯಲ್ಲಿ ತ್ರೀವ್ರ ನಿಘಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರೇ ಘೋಷಿಸಿದಂತೆ ಬ್ರೇನ್ ಡೆಡ್ ಆಗಿದೆ. ಕೃತಕ ಉಸಿರಾಟದಲ್ಲಿ ಜೀವ ಉಳಿದಿದೆ. ಇನ್ನು ಬದುಕುವುದು ಕಷ್ಟಸಾಧ್ಯವೆಂದು ವೈದ್ಯಲೋಕಕ್ಕೆ ತಿಳಿದಿದೆ. ಸಾವಿನ ಅಧಿಕೃತ ಘೋಷಣೆಯೊಂದೇ ಬಾಕಿ! ಕುಟುಂಬದವರು ಸಂಚಾರಿ ವಿಜಯ್‍ನ ಅಂಗಾಂಗದಾನಕ್ಕೆ ಅನುಮತಿ ನೀಡಿದ್ದಾರೆ. ಸಾವಿನಲ್ಲೂ ಸಾರ್ಥಕವೇನಿಸುವ ಕಾರ್ಯಮಾಡಿ ಮರಳಿ ಬಾರದೂರಿಗೆ ಪಯಣ ಬೆಳೆಸುತ್ತಿದ್ದಾರೆ ಸಂಚಾರಿ ವಿಜಯ್.
ಇಲ್ಲಿ ಯಾರು ಶಾಶ್ವತವಲ್ಲ! ಆದರೆ ನೀವು ಬಹಳ ಬೇಗ ಹೋಗುತ್ತಿದ್ದಿರಿ. ಹೋಗಿ ಬನ್ನಿ. ನಿಮ್ಮ ಆತ್ಮಕ್ಕೆ ಚಿರಶಾಂತಿ ಸಿಗಲಿ. ಭಾವಪೂರ್ಣ ಶ್ರದ್ದಾಂಜಲಿ.
-ನವೀನ್ ರಾಮನಗರ