ಬಂಧನ ಚಿತ್ರದ ಬಣ್ಣ ನನ್ನ ಒಲವಿನ ಬಣ್ಣ ಈ ಗೀತೆಯಲ್ಲಿ ಬರುವ ಬಣ್ಣದ ವರ್ಣನೆಯನ್ನು ನಾವೆಲ್ಲರೂ ಕೇಳಿದ್ದೇವೆ ಮೆಚ್ಚಿಕೊಂಡಿದ್ದೇವೆ. ಬಣ್ಣ ಅಂದರೆ ಯಾರಿಗಿಷ್ಟವಿಲ್ಲ ಹೇಳಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಬಣ್ಣ ಇಷ್ಟೇ ಇದ್ದೇ ಇರುತ್ತದೆ! ಆಗಸ್ಟ್ 17, 2018ಕ್ಕೆ “ಒಂಥರ ಬಣ್ಣಗಳು” ಎಂಬ ಹೆಸರಿನ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಬಣ್ಣ ಎಂಬ ಪದದಿಂದ ಎಲ್ಲರನ್ನೂ ಸೆಳೆಯುತ್ತಿದೆ, ಅದರಲ್ಲೂ ಒಂಥರ ಬಣ್ಣ ಮತ್ತಷ್ಟು ಇಷ್ಟವಾಗುತ್ತಿದೆ. ವಿವಿಧ ಬಣ್ಣಗಳು ಸೇರಿದರೆ ಒಂದು ಹೊಸ ಬಣ್ಣ ಸೃಷ್ಟಿಯಾಗುತ್ತದೆ. ಬಣ್ಣಗಳು ಅನೇಕ, ಹಾಗೆಯೇ ಭಾವನೆಗಳು ಕೂಡ.
ಒಬ್ಬೊಬ್ಬರ ಭಾವನೆಗಳು ಭಿನ್ನ, ವಿಭಿನ್ನ. ಭಾವನೆಗಳು ಕೆಲವೊಮ್ಮೆ ಗೊಂದಲ ಸೃಷ್ಟಿಸಿದರೆ ಮತ್ತೊಮ್ಮೆ ಸುಮಧುರ ಭಾವನೆಯನ್ನು ಹೊರ ಹೊಮ್ಮಿಸುತ್ತದೆ. ವಿಭಿನ್ನ ಭಾವನೆಗಳಿರುವ ಮೂರು ಜನ ಹುಡುಗರು ಮತ್ತು ಇಬ್ಬರು ಹುಡುಗಿಯರ ಪಯಣದ ಕಥೆಯೇ ಒಂಥರ ಬಣ್ಣಗಳು!
ಪಯಣ ಅಂದ ತಕ್ಷಣ ಇದು ಬರೀ ಪ್ರದೇಶಗಳ ಸುತ್ತಾಟವಲ್ಲ ಇಲ್ಲಿ ಭಾವನೆಗಳ ಸಮ್ಮಿಲನವಿದೆ, ಮನಸ್ಸುಗಳ ಪಯಣವಿದೆ. ನಮ್ಮ ಬದುಕಿನಲ್ಲಿ ಹಲವಾರು ಮಜಲುಗಳನ್ನು ದಾಟಿ ಬದುಕಿನಲ್ಲಿ ಮುನ್ನೆಡೆದಿರುತ್ತೇವೆ. ಮತ್ತೊಮ್ಮೆ ಬದುಕಿನ ಜಂಜಾಟಗಲ್ಲಿ ಸಿಕ್ಕಿಹಾಕಿಕೊಂಡು ಒಂದು ಬ್ರೇಕ್ ಬೇಕೆನಿಸುತ್ತದೆ. ಅಂತಹ ಬ್ರೇಕ್ ಬಗ್ಗೆಯೇ “ಒಂಥರ ಬಣ್ಣಗಳು” ಸಿನಿಮಾ ಸೃಷ್ಟಿಯಾಗಿದೆ ಎನ್ನುತ್ತಾರೆ ನಿರ್ದೇಶಕ ಸುನೀಲ್ ಭೀಮರಾವ್.
ಬದುಕಿನಲ್ಲಿ ಅಜ್ಜ, ಅಜ್ಜಿ, ತಂದೆ , ತಾಯಿ ಇವರೆಲ್ಲರ ಸಂಬಂಧದ ಗಾಢತೆ ಮತ್ತು ಸೂಕ್ಷ್ಮತೆಗಳನ್ನು ಈ ಚಿತ್ರದಲ್ಲಿ ತೋರಿಸಲು ಪ್ರಯತ್ನಿಸಲಾಗಿದೆ. ಸಾಧುಕೋಕಿಲ, ಟೆನ್ನಿಸ್ ಕೃಷ್ಣ, ದತ್ತಣ್ಣ, ವೀಣಾ ಸುಂದರ್, ಸುಚೇಂದ್ರ ಪ್ರಸಾದ್ ಸೇರಿ ಇನ್ನೂ ಮುಂತಾದ ಅನುಭವಿ ಕಲಾವಿದರು ಚಿತ್ರದಲ್ಲಿ ವಿನೂತನವಾಗಿ ಕಾಣಿಸಿಕೊಳ್ಳಲಿದ್ದಾರೆ.ಇವರೆಲ್ಲರ ಪಾತ್ರ ಒಮ್ಮೆ ಮಾತ್ರ ಚಿತ್ರದಲ್ಲಿ ಕಾಣಿಸುತ್ತದೆ ಎಂಬುದು ವಿಶೇಷ!
ಸ್ಕೈ ಫಿಲಂಸ್ ಲಾಂಛನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದ ಲೀಡ್ ರೋಲ್‍ನಲ್ಲಿ ಕಿರಣ್ ಶ್ರೀನಿವಾಸ್, ಹಿತಾ ಚಂದ್ರಶೇಖರ್(ಸಿಹಿ ಕಹಿ ಚಂದ್ರು ಮಗಳು) ಸೋನುಗೌಡ, ಪ್ರತಾಪ್ ನಾರಾಯಣ್, ಪ್ರವೀಣ್ ಜೈನ್ ಕಾಣಿಸಿಕೊಂಡಿದ್ದಾರೆ.ಚಿತ್ರದ ಕಥೆ-ಚಿತ್ರಕಥೆ-ನಿರ್ದೇಶನ ಸುನೀಲ್ ಭೀಮರಾವ್, ಛಾಯಾಗ್ರಹಣ ಮನೋಹರ್ ಜೋಶಿ, ಸಂಗೀತ ಸಂಯೋಜನೆ ಭರತ್ ಬಿ.ಜೆ. ಮಾಡಿದ್ದಾರೆ. ಶ್ರೀಕಾಂತ್‍ರವರ ಸಂಕಲನವಿದೆ. ಹಾಗೂ ಮದನ್ ಹರಿಣಿಯವರ ನೃತ್ಯ ಸಂಯೋಜನೆ ಇದೆ. ಚಿತ್ರದಲ್ಲಿ ಒಟ್ಟು 4 ಹಾಡುಗಳಿವೆ. ಚಿತ್ರದ ನಿರ್ಮಾಪಕರು ಯೋಗೇಶ್ ಬಿ.ದೊಡ್ಡಿ ಮತ್ತು ಸ್ನೇಹಿತರು.
-BBM NEWS