ಆಧುನಿಕತೆ ಸಮೂಹ ಮಾಧ್ಯಮಗಳ ಓಲೈಸುವಿಕೆ ಯಲ್ಲೇ ಯುವ ಜನತೆ ದಿಕ್ಕು ತಪ್ಪುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಸಿ ಎಂ ಲಿಂಗಪ್ಪ ಆತಂಕ ವ್ಯಕ್ತಪಡಿಸಿದರು.ಅವರು ನಗರದ ಅಂಬೇಡ್ಕರ್ ಭವನದಲ್ಲಿ ಕೃಷ್ಣಾಪುರದೊಡ್ಡಿಯ ಕೆಎಸ್ ಮುದ್ದಪ್ಪ ಸ್ಮಾರಕ ಟ್ರಸ್ಟ್ ರಾಮನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸ್ಪಂದನ ಚಾರಿಟೇಬಲ್ ಟ್ರಸ್ಟ್ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಕುವೆಂಪು ಜನ್ಮ ದಿನಾಚರಣೆಯ ಅಂಗವಾಗಿ ನಡೆದ ಕಾಲಭೈರವ ಪುರಾಣ ಬಯಲಾಟ ಉದ್ಘಾಟಿಸಿ ಮಾತನಾಡುತ್ತಿದ್ದರು.
ನಮ್ಮ ಯುವ ಜನತೆ ಇಂಥ ಅಪರೂಪದ ಕಲೆಗಳನ್ನು ಪ್ರೋತ್ಸಾಹಿಸದಿದ್ದರೆ ಈ ಕಲೆಗಳು ಇನ್ನಷ್ಟು ನಶಿಸಿ ಹೋಗುವ ಅಪಾಯವಿದೆ ಎಂದು ಹೇಳಿದರು.
ಆದಿಚುಂಚನಗಿರಿಯ ರಾಮನಗರ ಶಾಖಾ ಮಠದ ಅನ್ನದಾನೇಶ್ವರನಾಥ ಸ್ವಾಮಿಗಳು ಮಾತನಾಡಿ ಜಾತಿಪದ್ಧತಿಯ ದುಷ್ಪರಿಣಾಮ ನಮ್ಮಮೇಲೆ ಕರಾಳತೆಯನ್ನ ಬೀರುತ್ತಿದೆ. ಯುವಜನತೆ ಕುವೆಂಪು ಅವರ ಸಾಹಿತ್ಯದ ಓದಿನ ಕಡೆ ಗಮನ ಕೊಡದಿದ್ದರೆ. ಬುದ್ಧ ಬಸವ ಗಾಂಧೀಜಿ ಅಂಬೇಡ್ಕರರಷ್ಟೇ ಮಹಾನ್ ಚೇತನ ಕುವೆಂಪು ವಿಚಾರಧಾರೆಗಳು ಕೂಡ ಮರೆತು ಹೋಗುತ್ತವೆ ಎಂದರು. ವಿಶ್ವಮಾನವ ಸಂದೇಶವನ್ನು ಸಾರಿದ ಕುವೆಂಪು ಅವರ ಸಾಹಿತ್ಯ ಸಂಗತಿಗಳು ಜಗತ್ತಿನ ಮನೆಮನೆಗಳಿಗೆ ತಲುಪಬೇಕಿದೆ ಎಂಬುದು ನನ್ನ ಆಶಯ ಎಂದರು.
ಕೆ ಎಸ್ ಎಮ್ ಟ್ರಸ್ಟ್ ನ ಕಾರ್ಯದರ್ಶಿ ಎಂ ಬೈರೇಗೌಡ ಮಾತನಾಡಿ ಆದಿಚುಂಚನಗಿರಿಯ ಅಧಿಪತಿ ಕಾಲಭೈರವ ಅಲ್ಲಿ ನೆಲೆ ನಿಂತ ಬಗೆಯನ್ನು ಪುರಾಣ ಜಾನಪದ ಮತ್ತು ವರ್ತಮಾನದ ವಿವರಗಳನ್ನು ಒಳಗೊಂಡ ಮಾಹಿತಿ ಪೂರ್ಣವಾದ ಪ್ರದರ್ಶನ ಇದಾಗಿದೆ ಮುದ್ದುಶ್ರೀ ದಿಬ್ಬದಲ್ಲಿ ಸುಮಾರು 1ವಾರ ಕಾಲ ಮಕ್ಕಳಿಗೆ ತರಬೇತಿ ನೀಡಿ ಇಲ್ಲಿಗೆ ಕರೆತರಲಾಗಿದೆ ಎಂದು ತಿಳಿಸಿದರು. ಜಾನಪದ ವಿದ್ವಾಂಸರೂ ಆಗಿರುವ ಎಂ ಬೈರೇಗೌಡರು ರಚಿಸಿ ನಿರ್ದೇಶಿಸಿದ ಕಾಲಭೈರವ ಪುರಾಣ ಎಂಬ ಬಯಲಾಟ ಪ್ರದರ್ಶನವು ತುಂಬ ಅದ್ಭುತವಾಗಿ ಮೂಡಿಬಂದಿತು. ಕಾಲೇಜು ಯುವಕರನ್ನು ಒಗ್ಗೂಡಿಸಿಕೊಂಡು ಉತ್ತರ ಕರ್ನಾಟಕದ ಕಲಾವಿದರನ್ನು ಕರೆಸಿ ಮುದ್ದುಶ್ರೀ ದಿಬ್ಬದಲ್ಲಿ ತರಬೇತು ಮಾಡಿ ನಗರದ ಅಂಬೇಡ್ಕರ್ ಭವನದಲ್ಲಿ ಅತ್ಯಂತ ವ್ಯವಸ್ಥಿತವಾಗಿ ಪ್ರದರ್ಶನ ನಡೆಸಿದರು.
ಕಾರ್ಯಕ್ರಮದಲ್ಲಿ ರಾಮನಗರ ನಗರಸಭೆಯ ಪೌರಾಯುಕ್ತ ನಂದಕುಮಾರ್ ರೋಟರಿ ಸಿಲ್ಕ್ ಸಿಟಿಯ ಫೌಂಡರ್ ಪ್ರೆಸಿಡೆಂಟ್ ಗೋಪಾಲ್ ಜೆವಿಐಟಿ ನಿರ್ದೇಶಕ ಗಂಗಣ್ಣ ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗಾಣಕಲ್ ನಟರಾಜು ಸ್ಪಂದನಾ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಡಾಕ್ಟರ್ ಮುತ್ತಣ್ಣ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ ಟಿ ದಿನೇಶ್ ಬಿಳಗುಂಬ ಚಿಗುರು ಫೌಂಡೇಶನ್ ನ ನವೀನ್ ದೊಡ್ಡಾಟ ಮತ್ತು ಬಯಲಾಟದ ಗುರು ಬಸವರಾಜ ಶಿಗ್ಗಾಂವ್ ದೊಡ್ಡಬಳ್ಳಾಪುರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಜಿ ದಯಾನಂದ ರಂಗಕರ್ಮಿ ಎಲ್ ಪ್ರಸಾದ್ ರಾಮನಗರ ಜಿಲ್ಲಾ ರಂಗಭೂಮಿ ಒಕ್ಕೂಟದ ಅಧ್ಯಕ್ಷ ಬೈರೇಗೌಡ ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚನ್ನಬಸಪ್ಪ ಬೆಂಡಿಗೇರಿ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಪಕ್ಕವಾದ್ಯದಲ್ಲಿ ಹಾರ್ಮೋನಿಯಂ ವಾದಕರಾಗಿ ಫಕ್ಕಿರಪ್ಪ ಕೊಂಡಾಯಿ ಶಹನಾಯ್ ವಾದನದಲ್ಲಿ ಹೇಮಂತಕುಮಾರ ಭಜಂತ್ರಿ ತಮ್ಮ ಕಲಾನೈಪುಣ್ಯತೆಯನ್ನು ಮೆರೆದರು.