ನಮ್ಮ ರಾಮನಗರ

ಹೊಂಗನೂರು ಮಾದರಿ ಪ್ರಾಥಮಿಕ ಶಾಲೆಯಲ್ಲಿ ಗಾಂಧಿ ಜಯಂತಿ ಆಚರಣೆ

ಚನ್ನಪಟ್ಟಣ:- ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಉದ್ಯಮಿ, ಸಮಾಜ ಸೇವಕ ನಿಸರ್ಗ ಲೋಕೇಶ್ ರವರು ತಾಲೂಕಿನ ಹೊಂಗನೂರು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಸುಮಾರು 340 ವಿದ್ಯಾರ್ಥಿಗಳಿಗೆ ಟ್ರ್ಯಾಕ್ ಸೂಟ್ ವಿತರಣೆ ಮಾಡಿದರು.
ಶಾಲೆಯಲ್ಲಿ ಹಮ್ಮಿಕೊಂಡಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಟ್ರ್ಯಾಕ್ ಸೂಟ್ ವಿತರಣೆ ಮಾಡಿ ಮಾತನಾಡಿದ ಅವರು ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಈ ದೇಶ ಕಂಡ ಮಹಾನ್ ವ್ಯಕ್ತಿಗಳಾಗಿದ್ದು ,ದೀನ ದುರ್ಬಲರ, ಬಡವರ ಏಳಿಗೆಗಾಗಿ ಶ್ರಮಿಸಿದ್ದರು, ಅವರ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ,ಆ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುವಂತೆ ನನ್ನ ದುಡಿಮೆಯ ಹಣದಲ್ಲಿ ಉಚಿತವಾಗಿ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ಟ್ರ್ಯಾಕ್ ಸೂಟ್, ಕಂಪ್ಯೂಟರ್ ,ನೋಟ್ ಪುಸ್ತಕ, ಬರವಣಿಗೆ ಸಾಮಗ್ರಿಗಳು ಸೇರಿದಂತೆ ಹಲವು ಕಲಿಕೋಪಕರಣಗಳನ್ನು ವಿತರಿಸುತ್ತಾ ಬರುತ್ತಿದ್ದೇನೆ. ವಿದ್ಯಾರ್ಥಿಗಳು ಸರ್ಕಾರ ಮತ್ತು ದಾನಿಗಳಿಂದ ತಮಗೆ ಸಿಗುತ್ತಿರುವ ಈ ಸೌಲಭ್ಯಗಳನ್ನು ಬಳಸಿಕೊಂಡು ಕಲಿಕೆಯಲ್ಲಿ ನಿರತರಾಗಬೇಕು , ಶೈಕ್ಷಣಿಕ ಪ್ರಗತಿ ಸಾಧಿಸಿ ಪೋಷಕರಿಗೆ ಕೀರ್ತಿ ತರಬೇಕೆಂದು ತಿಳಿಸಿದರು.


ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎನ್. ಮರಿಗೌಡ ಮಾತನಾಡಿನನ್ನ ಜೀವನವೇ ನನ್ನ ಸಂದೇಶ ಎಂದು ಜಗತ್ತಿಗೆ ಸಾರಿದ ಗಾಂಧೀಜಿಯವರು ತಮ್ಮ ಸರಳ‌ ಜೀವನ ಹಾಗೂ ಆದರ್ಶಗಳ ಮೂಲಕ ಗುರುತಿಸಲ್ಪಡುತ್ತಾರೆ. ಅಹಿಂಸಾತ್ಮಕ ಹೋರಾಟದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಅವರು ಇತರೆ ದೇಶಗಳ ಸ್ವಾತಂತ್ರ್ಯ ಹೋರಾಟಕ್ಕೂ ಸ್ಫೂರ್ತಿಯಾಗಿದ್ದರು.
ಅದೇ ರೀತಿ ಸರಳ ಮತ್ತು ಸೌಜನ್ಯಯುತ ನಡವಳಿಕೆಯನ್ನು ಹೊಂದಿದ್ದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರು ಕೂಡ ದೇಶದ ಪ್ರಗತಿಗೆ ಶ್ರಮಿಸಿದರು, ಈ ಮಹಾನ್ ವ್ಯಕ್ತಿಗಳು ನಮಗೆಲ್ಲ ದಾರಿದೀಪವಾಗಿದ್ದು ಇವರ ತತ್ವಗಳನ್ನು ನಾವೆಲ್ಲರೂ ಪಾಲಿಸೋಣ ಎಂದರಲ್ಲದೆ ನಿಸರ್ಗ ಲೋಕೇಶ್ ರವರು ನಮ್ಮ ತಾಲೂಕಿನ ಹಲವಾರು ಶಾಲೆಗಳ ಸಹಸ್ರಾರು
ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿ, ಸಮವಸ್ತ್ರ ಸೇರಿದಂತೆ ಶಾಲೆಗೆ ಅಗತ್ಯವಿರುವ ವಸ್ತುಗಳನ್ನು ಪೂರೈಸುತ್ತಾ ಬಂದಿದ್ದಾರೆ. ಈ ಮೂಲಕ ಸರ್ಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ಸಾಕಷ್ಟು ಶ್ರಮವಹಿಸುತ್ತಿದ್ದಾರೆ. ಅವರ ಸಮಾಜಮುಖಿ ಕಾರ್ಯಗಳು ಹೀಗೆ ಮುಂದುವರೆಯಲಿ ಎಂದರು.

ಕ್ಷೇತ್ರ ಸಮನ್ವಯಾಧಿಕಾರಿ ಕುಸುಮಲತಾ ಮಾತನಾಡಿ ಸರ್ಕಾರಿ ಶಾಲೆಗಳಿಗೆ ಸಾರ್ವಜನಿಕರ ಸಹಕಾರವಿದ್ದರೆ ಹಲವು ಮೂಲಭೂತ ಸೌಲಭ್ಯಗಳು ದೊರೆಯುವಂತಾಗುತ್ತದೆ ಆ ಮೂಲಕ ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೂ ದೊರೆಯುತ್ತದೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಕೈಜೋಡಿಸುತ್ತಿರುವ ದಾನಿಗಳಾದ ಲೋಕೇಶ್ ರವರ ಕಾರ್ಯ ಶ್ಲಾಘನೀಯ ಎಂದರು.

ಶಿಕ್ಷಣ ಸಂಯೋಜಕರಾದ ಯೋಗೇಶ್ ಚಕ್ಕೆರೆ ಮಾತನಾಡಿದರು. ಶಿಕ್ಷಕ ಎಂ. ಟಿ .ಕೃಷ್ಣಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು . ವಿದ್ಯಾರ್ಥಿಗಳಿಂದ ಗಾಂಧಿ ಜೀವನ ಚರಿತ್ರೆ ಕುರಿತು ಭಾಷಣ ಹಾಗೂ ಭಾವೈಕ್ಯತೆ ಸಾರುವ ಗೀತ ಗಾಯನ ,ನೃತ್ಯ ಕಾರ್ಯಕ್ರಮ ನಡೆದವು.

ಎಸ್ ಡಿ ಎಂ ಸಿ ಅಧ್ಯಕ್ಷ ವೆಂಕಟೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು .ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರೂಪ ವೆಂಕಟೇಶ್, ಉಪಾಧ್ಯಕ್ಷ ಶ್ರೀನಿವಾಸ್, ಸಮೂಹ ಸಂಪನ್ಮೂಲ ವ್ಯಕ್ತಿ ನಾಗೇಶ್ ,ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಎಸ್. ಎಂ .ನಾಗೇಶ್, ಪ್ರೌಢಶಾಲಾ ಮುಖ್ಯ ಶಿಕ್ಷಕ ಚಿಕ್ಕರಾಜು, ನಿವೃತ್ತ ಶಿಕ್ಷಕ ಕಾಳಿಯಪ್ಪ, ಶಾಲೆಯ ಶಿಕ್ಷಕರಾದ ಶಿವಣ್ಣ, ಸುಕನ್ಯ, ಸಲೀಮಾ ಬಾನು, ಸವಿತಾ, ರಮ್ಯಾ, ಸುಮಾ ,ಪವಿತ್ರ, ಪ್ರೌಢಶಾಲಾ ವಿಭಾಗದ ಶಿಕ್ಷಕರಾದ ಮಾಲತಿ ,ವಿಜಯಕಾಂತ ,ರಾಜಣ್ಣ ,ಎಸ್ ಡಿ ಎಂ ಸಿ ಸದಸ್ಯರು, ಗ್ರಾಮಸ್ಥರು ಸೇರಿದಂತೆ ಹಲವರು ಉಪಸ್ಥರಿದ್ದರು.

 

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!