ನಮ್ಮ ರಾಮನಗರ

ರಾಮನಗರದಲ್ಲಿ ರಾಜೀವ್‌ ಗಾಂಧಿ ಆರೋಗ್ಯ ವಿವಿ; ಶೀಘ್ರವೇ ನಿರ್ಮಾಣ ಕಾಮಗಾರಿ ಆರಂಭ: ಡಿಸಿಎಂ

ನಮ್ಮ  ರಾಮನಗರ, ಫೆ.10: ಇಲ್ಲಿಗೆ ಸಮೀಪದ ಅರ್ಚಕನಹಳ್ಳಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕ್ಯಾಂಪಸ್ ನಿರ್ಮಾಣ ಕಾಮಗಾರಿಯನ್ನು ಆದಷ್ಟು ಬೇಗ ಆರಂಭಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ ಅಶ್ವತ್ಥನಾರಾಯಣ ಅವರು ತಿಳಿಸಿದರು.
ಬುಧವಾರ ಬೆಳಿಗ್ಗೆ ಅರ್ಚಕನಹಳ್ಳಿಯಲ್ಲಿ ಸ್ಥಳ ಪರಿಶೀಲನೆ ಮಾಡಿದ ಅವರು; ಲಭ್ಯವಿರುವ ಜಾಗದಲ್ಲಿಯೇ ಆಡಳಿತಾತ್ಮಕ ಮಂಜೂರಾತಿ ಪಡೆದು ಕೂಡಲೇ ನಿರ್ಮಾಣ ಕೆಲಸಗಳನ್ನು ಆರಂಭಿಸುವಂತೆ ರಾಜೀವ್‌ ಗಾಂಧಿ ವಿವಿ ಕುಲಪತಿ ಡಾ.ಸಚ್ಚಿದಾನಂದ ಹಾಗೂ ಅಧಿಕಾರಿಗಳಿಗೆ ಸೂಚಿಸಿದರು.


ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಉಪ ಮುಖ್ಯಮಂತ್ರಿ; ವಿವಿಗೆ ಅಗತ್ಯವಿರುವ ಇನ್ನಷ್ಟು ಭೂಮಿಯ ಬಗ್ಗೆ ಕೆಲ ಪ್ರಕರಣಗಳು ನ್ಯಾಯಾಲಯದಲ್ಲಿವೆ. ವಿಚಾರಣೆ ಮುಗಿದು ಆದೇಶ ಹೊರಬಿದ್ದ ಮೇಲೆ ಉಳಿದ ಪ್ರಕ್ರಿಯೆಗಳನ್ನು ವೇಗವಾಗಿ ಪೂರೈಸಬಹುದು. ಕೋರ್ಟ್‌ ಆದೇಶದಂತೆ ಭೂ ಮಾಲೀಕರಿಗೆ ಪರಿಹಾರ ನೀಡಲಾಗುವುದು. ಅದುವರೆಗೂ ಸ್ವಾಧೀನದಲ್ಲಿರುವ ಭೂಮಿಯಲ್ಲಿ ನಿರ್ಮಾಣ ಕಾಮಗಾರಿಗಳನ್ನು ಆರಂಭಿಸಲಾಗುವುದು ಎಂದರು.
ಭೂಮಿ ವರ್ಗಾಯಿಸಲಾಗಿದೆ:
ಈಗಾಗಲೇ 216 ಎಕರೆ ಭೂಮಿಯನ್ನು ಆರೋಗ್ಯ ವಿವಿಗಾಗಿ ಸ್ವಾಧೀನ ಮಾಡಿಕೊಳ್ಳಲಾಗಿದೆ. ಈ ಪೈಕಿ 40 ಎಕರೆ ಸರಕಾರಿ ಜಮೀನು. ಸ್ವಾಧೀನ ಮಾಡಿಕೊಂಡಿರುವ ಕೆಲ ರೈತರ ಭೂಮಿಗೆ ಈಗಾಗಲೇ ಪರಿಹಾರ ನೀಡಲಾಗಿದೆ. ಸುಮಾರು 70 ಎಕರೆಗೆ ಸಂಬಂಧಿಸಿದ ಪರಿಹಾರ ವಿವಾದ ನ್ಯಾಯಾಲಯದಲ್ಲಿ ಇದೆ. ಕೋರ್ಟ್ ಆದೇಶದ ಪ್ರಕಾರ ಪರಿಹಾರ ನೀಡುತ್ತೇವೆ. ಸ್ವಾಧೀನದಲ್ಲಿ ಇರುವ ಜಮೀನಿನಲ್ಲಿ ಕ್ಯಾಂಪಸ್ ನಿರ್ಮಾಣ ಮಾಡಬೇಕು ಎಂದು ಡಿಸಿಎಂ ಅಧಿಕಾರಿಗಳಿಗೆ ಸೂಚಿಸಿದರು.
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅವರ ಜತೆ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಆದಷ್ಟು ಬೇಗ ಕಾಮಗಾರಿಗಳನ್ನು ಆರಂಭಿಸಲು ಅವರೂ ಉತ್ಸುಕರಾಗಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳಾದ ಸಚಿವ ಸಿ.ಪಿ.ಯೋಗೀಶ್ವರ್‌, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಶಾಸಕರಾದ ಡಿ.ಕೆ.ಶಿವಕುಮಾರ್‌, ಅನಿತಾ ಕುಮಾರಸ್ವಾಮಿ, ಮಾಗಡಿ ಮಂಜುನಾಥ್‌ ಹಾಗೂ ಸಂಸದ ಡಿ.ಕೆ.ಸುರೇಶ್‌ ಸೇರಿದಂತೆ ಎಲ್ಲರೂ ಈ ಯೋಜನೆಯನ್ನು ಬೇಗ ಕಾರ್ಯಗತ ಮಾಡುವಂತೆ ಹೇಳುತ್ತಿದ್ದಾರೆ ಎಂದು ಡಿಸಿಎಂ ಮಾಹಿತಿ ನೀಡಿದರು.


ಆರೋಗ್ಯ ವಿವಿ ಜತೆಯಲ್ಲಿಯೇ ಸುಸಜ್ಜಿತವಾದ ಹೆಲ್ತ್‌ ಸಿಟಿಯನ್ನೂ ಇಲ್ಲಿ ನಿರ್ಮಾಣ ಮಾಡುವುದು ಸರಕಾರದ ಉದ್ದೇಶವಾಗಿದೆ. ಈ ಎರಡು ಯೋಜನೆಗಳು ಕಾರ್ಯಗತವಾದರೆ ಈ ಭಾಗದ ಜನರಿಗೆ ರಾಮನಗರದಲ್ಲಿಯೇ ಅಂತಾರಾಷ್ಟ್ರೀಯ ಗುಣಮಟ್ಟದ ಚಿಕಿತ್ಸೆ ದೊರೆಯುತ್ತದೆ ಎಂದು ಡಾ.ಅಶ್ವತ್ಥನಾರಾಯಣ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅರ್ಚನಾ, ಜಿಲ್ಲಾ ಪಂಚಾಯಿತಿ ಸಿಇಒ ಇಕ್ರಂ, ಶಾಸಕಿ ಅನಿತಾ ಕುಮಾರಸ್ವಾಮಿ, ಆರೋಗ್ಯ ವಿವಿ ಕುಲಪತಿ ಡಾ.ಸಚ್ಚಿದಾನಂದ, ಕೆಐಎಡಿಬಿ ಅಧಿಕಾರಿಗಳು ಉಪಸ್ಥಿತರಿದ್ದರು.

Credit: DIPR Ramangara

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!