ಖಾಸಗಿ ವಾಹಿನಿ ಟಿ.ವಿ5ನಲ್ಲಿ ಒಂದಿಲ್ಲೊಂದು ಸುದ್ದಿ ತಗೊಂಡು ಪಟ ಪಟ ಅಂತ ಮಾತಾಡೊ ಪತ್ರಕರ್ತೆ, ನಿರೂಪಕಿ ಸ್ವಾತಿ ಚಂದ್ರಶೇಖರ್ ಮತ್ತು ಸುಳ್ಯದ ಡಾ: ಅಕ್ಷರ ದಾಮ್ಲೆ ಮದುವೆ ಆರತಕ್ಷತೆ ಇತ್ತೀಚೆಗೆ ಅರಮನೆ ಮೈದಾನದ ಶೃಂಗಾರ ಪ್ಯಾಲೇಸ್ ಗಾರ್ಡನ್ಸ್ ನಲ್ಲಿ ವಿಜೃಂಬಣೆಯಿಂದ ನಡೆಯಿತು.
ಮದುವೆ ಆರತಕ್ಷತೆ ಮಾತ್ರ ನಡೆದಿದ್ರೆ ಎಲ್ಲರಂತೆ ಇದು ಅಂತ ಸುಮ್ಮನಾಗಬಹುದಿತ್ತು. ಆದರೆ ಈ ಮದುವೆಯ ಆರತಕ್ಷತೆಯಲ್ಲಿ ಕರ್ನಾಟಕ ಸರ್ಕಾರದ ಶಿಕ್ಷಣ ಸಚಿವ ಶ್ರೀ ಸುರೇಶ್ ಕುಮಾರ್ ರವರು ಮಧುಮಗ ಬರೆದ ‘ಮನಸಿನ ಮಾತು ಕೇಳಿ’ ಮತ್ತು ಮಧುಮಗನ ತಂದೆಯವರು ಬರೆದ ‘ಮಗುವಿನ ಮನಸ್ಸು’ ಎಂಬು ಎರಡು ಪುಸ್ತಕಗಳನ್ನು ಲೋಕಾರ್ಪಣೆ ಮಾಡಿದರು. ಆರತಕ್ಷತೆಗೆ ಬಂದಿದ್ದ ಎಲ್ಲರಿಗೂ ತೆಂಗಿನ ಕಾಯಿ ತಾಂಬೂಲದ ಜೊತೆ ಪುಸ್ತಕ ತಾಂಬೂಲವನ್ನು ನೀಡಿದ್ದು ಅತ್ಯಂತ ವಿಶೇಷವಾಗಿತ್ತು.
ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಸಚಿವ ಶ್ರೀ ಸುರೇಶ್‍ಕುಮಾರ್ ಸಾಕಷ್ಟು ಮದುವೆ ಆರತಕ್ಷತೆಗಳಿಗೆ ಹೋಗಿದ್ದೇನೆ ಗೀಡಗಳನ್ನು ಕೊಡುವುದನ್ನು ನೋಡಿದ್ದೆ ಆದರೆ ಈ ಆರತಕ್ಷತೆಯಲ್ಲಿ ಪುಸ್ತಕ ಬಿಡುಗಡೆಮಾಡಿರುವುದು ಸಂತಸ ತಂದಿದೆ. ಈ ಮೂಲಕ ಆರತಕ್ಷತೆ ಸದಾ ಕಾಲ ನೆನಪಿನಲ್ಲಿ ಉಳಿಯುವಂತಾಯಿತು ಎಂದು ಹೇಳಿ ನೂತನ ದಂಪತಿಗಳಿಗೆ ಶುಭ ಹಾರೈಸಿದರು.
ಮದುವೆ ಆರತಕ್ಷತೆಯ ಮತ್ತೊಂದು ವಿಶೇಷವೆಂದರೆ ಪ್ಲಾಸ್ಟಿಕ್ ತ್ಯಜಿಸಿ ‘ಬಟ್ಟೆ ಚೀಲ ಬಳಸಿ’ ಎಂಬ ಸಂದೇಶದ ಬಟ್ಟೆ ಚೀಲಗಳನ್ನು ಪುಸ್ತಕಗಳ ಜೊತೆ ನೀಡಿದ್ದು, ಅಲ್ಲಿ ಬಂದಿದ್ದ ಎಲ್ಲರಿಗೂ ಪ್ರೇರಣೆ ನೀಡುವುದರ ಜೊತೆಗೆ ಖುಷಿ ತಂದಿತು. ಒಟ್ಟಾರೆ ಒಂದೊಳ್ಳೆ ಮದುವೆ ಆರತಕ್ಷತೆಗೆ ಹೋಗಿದ್ದ ನನಗೆ ನಿಜಕ್ಕೂ ಖುಷಿಯಾಯಿತು. ಮತ್ತೊಮ್ಮೆ ಸ್ವಾತಿ ಚಂದ್ರಶೇಖರ್ ಮತ್ತು ಡಾ: ಅಕ್ಷರ ದಾಮ್ಲೆ ಇವರಿಗೆ ಈ ಮೂಲಕ ಶುಭಾಶಯಗಳನ್ನು ತಿಳಿಸುತ್ತೇನೆ.
-ನವೀನ್ ರಾಮನಗರ