ಅತಿಥಿ ಅಂಕಣ

ಸಮಯ ಯಾರ ಸ್ವತ್ತೂ ಅಲ್ಲ “ಈ ಸಮಯ ಕಳೆದುಹೋಗುತ್ತದೆ”

ರಾಜನೊಬ್ಬ ತನ್ನ ಮಂತ್ರಿಯನ್ನು ಕರೆದು “ನನಗೆ ಒಂದೇವಾಕ್ಯದಲ್ಲಿ ಜೀವನದ ಸಾರ” ಏನೆಂಬುದನ್ನು ಹೇಳಿರಿ ಎಂದು ಆಜ್ಞಾಪಿಸುತ್ತಾನೆ. ಇದಕ್ಕೆ ಎಷ್ಟು ಸಮಯ ಬೇಕಾದರೂ ತೆಗೆದುಕೊಳ್ಳಿ. ಆದರೆ ನೆನಪಿರಲಿ, ಒಂದೇ ಒಂದು ವಾಕ್ಯದಲ್ಲಿ ಜೀವನದ ಸಾರದ ಅರಿವು ನನಗಾಗಬೇಕು ಎಂದು ಹೇಳುತ್ತಾನೆ.

ಮಂತ್ರಿಗೆ ಧರ್ಮಸಂಕಟ. “ಜೀವನ ಏನು ಬರೆದಿಟ್ಟ ಪುಸ್ತಕವೇ” ಒಂದು ವಾಕ್ಯದಲ್ಲಿ ಅದರ ಸಾರವನ್ನು ತಿಳಿಸೋಕೆ? ಏನೂ ಮಾಡಲು ತೋಚದೇ ಮಂತ್ರಿ ಊರೂರು ಅಲೆಯುತ್ತಾನೆ. ಆದರೆ ಒಂದು ವಾಕ್ಯದಲ್ಲಿ ಜೀವನದ ಸಾರ ತಿಳಿಯಲು ವಿಫಲನಾಗಿ ಬಂದದಾರಿಗೆ ಸುಂಕವಿಲ್ಲದೆ ಮರಳಿ ರಾಜ್ಯಕ್ಕೆ ಬರುವಾಗ ದಾರಿಯಲ್ಲಿ ಸಾಧುವೊಬ್ಬ ಎದುರಾಗುತ್ತಾನೆ. ಅವನಿಗೆ ನಮಸ್ಕರಿಸಿದ ಮಂತ್ರಿ ತನ್ನೆಲ್ಲ ದುಃಖವನ್ನು ಅಸಹಾಯಕತೆಯನ್ನು ತೋಡಿಕೊಳ್ಳುತ್ತಾನೆ. ಆಗ ಸಾಧು ಮಂತ್ರಿಯನ್ನು ಸಮಾಧಾನಿಸಿ ಅವನ ಕೈಗೆ ಚೀಟಿಯೊಂದನ್ನು ಕೊಡುತ್ತಾನೆ.. “ಚಿಂತಿಸಬೇಡ ನಿನ್ನ ರಾಜನಿಗೆ ಇದನ್ನು ಉಂಗುರದೊಳಗೆ ಅಡಗಿಸಿ ಹಾಕಲು ಹೇಳು” ಇದರಲ್ಲೇ ಜೀವನದ ಸಾರ ಅಡಗಿದೆ. ಆದರೆ ನೆನಪಿರಲಿ, ಕಷ್ಟಕಾಲದಲ್ಲಿ ಮಾತ್ರ ಅವನಿಗೆ ಇದನ್ನು ಓದಲು ಹೇಳು ಎನ್ನುತ್ತಾನೆ. ಮಂತ್ರಿ ಖುಷಿಯಿಂದ ರಾಜನನ್ನು ಭೇಟಿಯಾಗಿ ಎಲ್ಲ ವಿಷಯ ತಿಳಿಸಿ ಈ ಚೀಟಿ ತಾವು ದಯಮಾಡಿ ಈಗ ಓದದೇ ಆಪತ್ಕಾಲದಲ್ಲಿ ಓದಿ ಜೀವನದ ಸಾರ ಅರಿಯಿರಿ ಎನ್ನುತ್ತಾನೆ. ಸರಿ ರಾಜ ಓದದೇ ಉಂಗುರದೊಳಗೆ ಚೀಟಿ ಅಡಗಿಸಿಟ್ಟುಕೊಳ್ಳುತ್ತಾನೆ.

ದಿನಗಳು ಕಳೆದಂತೆ ಒಮ್ಮೆ ರಾಜ ಬೇಟೆಯಾಡಲು ಕಾಡಿಗೆ ಹೋದಾಗ ನೆರೆರಾಜ್ಯದ ಶತ್ರುರಾಜನೊಬ್ಬ ಮೋಸದಿಂದ ಕಾಡಿನೊಳಗಿದ್ದ ಗುಹೆಯೊಂದರಲ್ಲಿ ರಾಜನನ್ನು ಬಂಧಿಸಿ ಇಡುತ್ತಾನೆ. ರಾಜ ಇನ್ನೇನು ತನ್ನ ರಾಜ್ಯದಿಂದ ದೂರದ ಕಾಡಿನಲ್ಲಿ ತನ್ನ ಪ್ರಾಣ ಶತ್ರುಗಳ ಕೈಯ್ಯಲ್ಲಿ ಹೋಗುತ್ತದೆಯಲ್ಲ ಎಂಬ ಅಸಹಾಯಕತೆಯಿಂದ ತಲೆ ಮೇಲೆ ಕೈ ಹೊತ್ತಾಗ ಉಂಗುರ ಕಣ್ಣಿಗೆ ಬೀಳುತ್ತದೆ. ಹೌದಲ್ವ, ಮಂತ್ರಿ ಹೇಳಿದ್ದಾರೆ, ಕಷ್ಟಕಾಲದಲ್ಲಿ ಚೀಟಿ ಓದಬಹುದು. ಸರಿ ಚೀಟಿ ತೆಗೆದಾಗ “ಈ ಸಮಯವು ಕಳೆದುಹೋಗುತ್ತದೆ” ಎಂದು ಬರೆದಿತ್ತು. ರಾಜನಿಗೆ ಅದನ್ನೋದಿ ಸಮಾಧಾನವಾಗಿ “ಹೌದು ಇದು ನನ್ನ ಕಷ್ಟಕಾಲ ಆದರೆ ಇದು ಶಾಶ್ವತವಲ್ಲ, ಬೇಗ ಕಳೆದುಹೋಗುತ್ತದೆ” ಎಂದು ಕುಗ್ಗದೇ ಧೈರ್ಯ ತಂದುಕೊಂಡು ಅಲ್ಲಿಂದ ತಪ್ಪಿಸಿಕೊಳ್ಳಲು ದಾರಿ ಇದೆಯೇ ಎಂದು ಹುಡುಕುವಾಗ ಗುಹೆಯ ಸ್ವಲ್ಪ ದೂರದಲ್ಲಿ ಸ್ವಲ್ಪ ಸೈನಿಕರು ಶತ್ರುರಾಜನಿಗೆ ವಿರೋಧವಾಗಿ ಗುಂಪು ಕಟ್ಟಿರೋದು ಗಮನಕ್ಕೆ ಬರುತ್ತದೆ. ರಾಜ ಸ್ವಲ್ಪವೂ ತಡಮಾಡದೇ ಅವರನ್ನೆಲ್ಲ ಸೇರಿಸಿ ಒಂದು ಗುಂಪು ಮಾಡಿ ಶತ್ರುರಾಜ ನೊಂದಿಗೆ ಯುದ್ಧಮಾಡಿ ಅವನನ್ನು ಸೋಲಿಸಿ ತನ್ನ ರಾಜ್ಯಕ್ಕೆ ಮರಳುತ್ತಾನೆ. ಎಲ್ಲವೂ ಸುಖಾಂತ್ಯವಾಗುತ್ತದೆ. ರಾಜ ತನ್ನ ಸಿಂಹಾಸನಕ್ಕೆ ಮರಳಿ ಸಾಧುವಿನ ವಾಕ್ಯದಿಂದಲೇ ತಾನಿಂದು ಮರಳಿ ರಾಜ್ಯಭಾರ ಮಾಡುವಂತಾಯ್ತು. ಈಗ ಎಲ್ಲವೂ ಸುಖ ಆದರೆ ಈಗೊಮ್ಮೆ ಚೀಟಿ ಓದೋಣ ಅಂತ ಕುತೂಹಲದಿಂದ ರಾಜ ಉಂಗುರ ತೆಗೆದರೆ ಆಗಲೂ “ಈ ಸಮಯ ಕಳೆದುಹೋಗುತ್ತದೆ” ಅಂತ ಬರೆದಿತ್ತು. ರಾಜ ಅಂದುಕೊಂಡ – ಹೌದು, ಇಂದು ತನಗೆ ಸುಖವಿದೆ, ಆದರೆ ಇದು ಕೂಡ ಶಾಶ್ವತವಲ್ಲ್ಲ, ಈ ಸಮಯವೂ ಕಳೆದುಹೋಗುತ್ತದೆ. ಕಷ್ಟಸುಖ ಯಾವುದೂ ಶಾಶ್ವತವಲ್ಲ, ಸಮಯದೊಂದಿಗೆ ಎಲ್ಲವೂ ಕಳೆದುಹೋಗುತ್ತದೆ. ಜೀವನವನ್ನು ಜೀವಿಸಿ ಅರಿಯುವುದೇ ಜೀವನದ ಸಾರ ಎನ್ನುವುದು ರಾಜನಿಗೆ ಮನವರಿಕೆಯಾಗುತ್ತದೆ.

ಈ ಪ್ರಪಂಚದಲ್ಲಿ ಯಾರ ಅಪ್ಪಣೆಗೂ ಕಾಯದೇ ತನ್ನ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡುವ  ಏಕೈಕ ಸಾಧನ “ಸಮಯ”. ಕಷ್ಟವೋ, ಸುಖವೋ, ಸಮಯವಂತೂ ನಿಲ್ಲುವುದಿಲ್ಲ, ಕಳೆದುಹೋಗುತ್ತದೆ. ಆದರೆ ನಾವು ಕಷ್ಟಬಂದಾಗ ಕುಗ್ಗದೇ, ಸುಖ ಬಂದಾಗ ಅದುವೇ ಶಾಶ್ವತವೆಂದು ಅಹಂಕಾರದಿಂದ ಮೆರೆಯದೇ ಸಮಯದೊಂದಿಗೆ ಸಮಯಪ್ರಜ್ಞೆಯಿಂದ ಸಂಯಮವನ್ನಿಟ್ಟು ಬದುಕೋಣ.

ರಾಗಿಣಿ
ಹವ್ಯಾಸೀ ಬರಹಗಾರ್ತಿ

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!