ಅತಿಥಿ ಅಂಕಣ

ಹಾಲಿನಲ್ಲಿ ಎಂಟಿಬಯಾಟಿಕ್ಸ್ – ಒಳ್ಳೆಯದೇ ಅಥವಾ ಕೆಟ್ಟದ್ದೇ ?

ಎಂಟಿ ಬಯೋಟಕ್ಸ್ ಎಂದರೇನು? :- ಬ್ಯಾಕ್ಟೇರಿಯಾದ ಖಾಯಿಲೆಯನ್ನು ತಡೆಗಟ್ಟಲು ಬಳಸುವ ಔಷಧ, ಇವು ಬ್ಯಾಕ್ಟೀರಿಯಾಗಳನ್ನು ಸಾಯಿಸುತ್ತವೆ. ಅಥವಾ ಬ್ಯಾಕ್ಟೇರಿಯಾಗಳ ಸಂಖ್ಯೆ ವೃದ್ಧಿ ಆಗುವುದನ್ನು ನಿಲ್ಲಿಸುತ್ತವೆ.

ಸಾಮಾನ್ಯವಾಗಿ ಬಳಸಲಾಗುವ ಬ್ಯಾಕ್ಟೀರಿಯಾ ನಿರೋಧಕಗಳು:ಪೆನ್‍ಸಿಲ್ಲಿನ್ – ಪ್ಲೋಕ್ಸಸಿಲ್ಲಿನ್, ಅಮಾಕ್ಷಸಿಲ್ಲಿನ್, ಮೆಟ್ರನಿಡಯೋಲ್, ಸೆಪೆಲೋಸ್ಪೋರಿನ್, Tetracycline, , ಜಂಟಾಮೈಸಿನ್, ಸಲ್ಹನಿಲಮೈಡ್ (Sulphanilamide) ಇತ್ಯಾದಿ ಬ್ಯಾಕ್ಟೀರಿಯಾ ನಿರೋಧಕಗಳನ್ನು ಗುಳಿಗೆ, ಕ್ಯಾಪ್ಯೂಲ್ ಹಾಗೂ ದ್ರವ ರೂಪದಲ್ಲಿ ನೀಡಲಾಗುತ್ತದೆ. ಅಲ್ಲದೇ ಇಂಜಕ್ಷನ್ ರೂಪದಲ್ಲಿ ಸಹ ನೀಡಲಾಗುತ್ತದೆ. ಕೆಲವೊಮ್ಮೆ ಗಾಯಗಳಿಗೆ ಕೂಡಾ ಎಂಟಿಬಯೋಟಿಕ್ ಮುಲಾಮು ಹಚ್ಚಲಾಗುತ್ತದೆ.

ಎಂಟಿಬಯೋಟಿಕ್ಸ್‍ಗಳನ್ನು ಎಂತಹ ಸಂದರ್ಭದಲ್ಲಿ ರಾಸುಗಳಿಗೆ ನೀಡಲಾಗುತ್ತದೆ: –
ಹಸುಗಳಿಗೆ ರೋಗ ಬಂದಾಗ ಅದರಲ್ಲೂ ಮುಖ್ಯವಾಗಿ ಹಸುಗಳಲ್ಲಿ ಬರುವ ಕೆಚ್ಚಲು ಬಾವಿಗೆ ಮೊಲೆಯ ತೊಟ್ಟುಗಳ ಮುಖಾಂತರ ಎಂಟಿಬಯೋಟಿಕ್ ಸೇರಿಸುವುದು, ಹಾಗೂ ಎಂಟಿಬಯೋಟಿಕ್ ಇಂಜಕ್ಷನ್ ನೀಡುವುದು ಸರ್ವೇಸಾಮಾನ್ಯ.

ಕೆಲವು ಬ್ಯಾಕ್ಟೀರಿಯಾದಿಂದ ಉಂಟಾಗುವ ಖಾಯಿಲೆ ಸಂದರ್ಭದಲ್ಲಿ ಎಂಟಿಬಯೋಟಿಕ್ ರಾಮಭಾಣದಂತೆ ಕೆಲಸ ಮಾಡುತ್ತದೆ ಎಂಬುದನ್ನು ಒಪ್ಪಿಕೊಳ್ಳಲೇ ಬೇಕು, ಆದರೆ ಎಂಟಿಬಯೋಟಿಕ್‍ನ್ನು ಅವಶ್ಯಕತೆಗಿಂತ ಹೆಚ್ಚುವರಿ ಪ್ರಮಾಣದಲ್ಲಿ ಬಳಸುವುದು ಸೂಕ್ತವಲ್ಲ. ಜೊತೆಗೆ ಧೀರ್ಘಕಾಲ ಒಂದು ರಾಸುವಿಗೆ ಎಂಟಿಬಯೋಟಿಕ್ ನೀಡುತ್ತಿದ್ದಲ್ಲಿ ವಿರೋಧ (resistance)  ಬರುತ್ತದೆ. ಹಾಗೂ ಅದರಿಂದಾಗಿ ಎಂಟಿಬಯೋಟಿಕ್‍ಗಳು ಅವುಗಳ ಪರಿಣಾಮ ಮಾಡುವುದಿಲ್ಲ.

ರಾಸುಗಳಲ್ಲಿ ಬರುವ ಕೆಚ್ಚಲು ಬಾವು, ಚಪ್ಪೆರೋಗ, ಗಂಟಲು ಭಾವು, ಕಾಲು ಬಾಯಿ ರೋಗ, ಥೈಲೇರಿಯಾ, ಬೆಬಿಸಿಯಾ ಮುಂತಾದವುಗಳಿಗೆ, ಎಂಟಿಬಯೋಟಿಕ್ಸ್ ಔಷಧ ನೀಡಲಾಗುತ್ತದೆ. ಹಾಗೂ ಸಾಮಾನ್ಯವಾಗಿ ಯಾವುದೇ ಜ್ವರ ಕಂಡುಬಂದಲ್ಲಿ, ಕೂಡಲೇ ಯಾವುದಾದರೊಂದು ಎಂಟಿಬಯೋಟಿಕ್ಸ್ ಬಳಸುವುದು ಪದ್ದತಿಯಾಗಿಬಿಟ್ಟಿದೆ.ಕೆಚ್ಚಲುಬಾವು ರೋಗಕ್ಕೆ ಚಿಕಿತ್ಸೆ ಮಾಡಬೇಕಾದರೆ, 2-3 ಎಂಟಿಬಯೋಟಿಕ್‍ಗಳು ಸೇರಿದ ಮುಲಾಮು ಅಥವಾ ಇಂಜಕ್ಷನ್ ನ್ನು ಮೊಲೆಯ ತೊಟ್ಟುಗಳ ಮುಖಾಂತರ 4-5 ದಿನಗಳ ಕಾಲ ಸೇರಿಸಿ ಚಿಕಿತ್ಸೆ ನೀಡಲಾಗುತ್ತದೆ.ಯಾವುದೇ ಎಂಟಿಬಯೋಟಿಕ್ ಔಷಧ ಇಂಜಕ್ಷನ್/ ಮಾತ್ರೆ ರೂಪದಲ್ಲಿ ನೀಡಿದಾಗ, ಅವುಗಳು ತಮ್ಮ ಕಾರ್ಯವನ್ನು ಮುಗಿಸಿ, ಪರಿವರ್ತನೆಗೊಂಡು ಮೂತ್ರ ಹಾಗೂ ಸಗಣೆ, ಹಾಲಿನ ಮೂಲಕ ದೇಹದಿಂದ ಹೊರಕ್ಕೆ ಹೋಗುತ್ತವೆ. ಪೂರ್ಣ ಪ್ರಮಾಣದಲ್ಲಿ ಹೊರಕ್ಕೆ ಹೋಗಲು ಸಾಮಾನ್ಯವಾಗಿ 7-10 ದಿನಗಳ ಅವಕಾಶಬೇಕಾಗುತ್ತದೆ.

ಕೆಚ್ಚಲಬಾವು ಅಥವಾ ಇತರ ರೋಗ ಬಂದ ಹಸುವಿಗೆ ಎಂಟಿಬಯೋಟಿಕ್ ನೀಡಿದ ನಂತರ, ಹಾಲಿನ ಮೂಲಕ ಎಂಟಿಬಯೋಟಿಕ್ ಅವಶೇಷ ಹೊರಬೀಳುತ್ತಿರುತ್ತದೆ. ಅಂತಹ ಹಾಲನ್ನು ನಿರಂತರವಾಗಿ ಸೇವನೆ ಮಾಡುವವರ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಆಗಬಹುದಾಗಿದೆ ಹಾಗೂ ಅವರಲ್ಲಿ ಎಂಟಿಬಯೋಟಿಕ್ resistance ಕೂಡಾ ಬರಬಹುದಾಗಿದೆ. ಅಲ್ಲದೇ ಎಂಟಿಬಯೋಟಿಕ್ ಅವಶೇಷವಿರುವ ಹಾಲಿನಿಂದ ಉತ್ತಮ ಗುಣಮಟ್ಟದ ಉತ್ಪನ್ನ ತಯಾರಿಸಲು ಸಾಧ್ಯವಾಗದು. ಆದುದರಿಂದ ಕೇಂದ್ರ ಸರ್ಕಾರವು ಹಾಲಿನಲ್ಲಿ ಪ್ರತಿ ಎಂಟಿಬಯೋಟಿಕ್ ಇರಬಹುದಾದ ಗರಿಷ್ಟ ಪ್ರಮಾಣ ನಿಗದಿಪಡಿಸಿದೆ. ಹಾಲಿನಲ್ಲಿ ನಿಗದಿತ ಗರಿಷ್ಟ ಪ್ರಮಾಣಕ್ಕಿಂತ, ಹೆಚ್ಚಿಗೆ ಎಂಟಿಬಯೋಟಿಕ್ ಇದ್ದ ಪಕ್ಷದಲ್ಲಿ, ಅಂತಹ ಹಾಲನ್ನು ಮಾರಾಟ ಮಾಡುವ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಜರುಗಿಸುವುದಕ್ಕೆ ಅವಕಾಶ ಕಲ್ಪಿಸಿರುತ್ತದೆ.

ರಾಸುಗಳ ಆರೋಗ್ಯ ಹಾಗೂ ಹಾಲನ್ನು ಬಳಸುವ ಸಾರ್ವಜನಿಕರ ಆರೋಗ್ಯವನ್ನು ಗಮನದಲ್ಲಿಟ್ಟಿಕೊಂಡು ಕರ್ನಾಟಕ ಹಾಲು ಮಹಾಮಂಡಳ ಹಾಗೂ ಹಾಲು ಒಕ್ಕೂಟಗಳು, ಹಾಲಿನಲ್ಲಿ ಎಂಟಿಬಯೋಟಿಕ್ ಬರದಂತೆ ಮಾಡಲು ಕೆಲವು ಕ್ರಮವನ್ನು ಕೈಗೊಂಡಿರುತ್ತದೆ.

ಕೆಚ್ಚಲಭಾವು ನಿಯಂತ್ರಣ ಕಾರ್ಯಕ್ರಮವನ್ನು ವ್ಯಾಪಕವಾಗಿ ಜಾರಿಗೆ ತಂದಿದ್ದು, ಅಗೋಚರ ಕೆಚ್ಚಲಭಾವು ಹಂತದಲ್ಲೇ ಚಿಕಿತ್ಸೆ ನೀಡಿ ನಿಯಂತ್ರಣ ಕೈಗೊಳ್ಳುವುದು. ಎಲ್ಲಾ ರೈತರೂ ತಮ್ಮ ಹಸುವಿಗೆ ಅಗೋಚರ ಹಂತದ ಕೆಚ್ಚಲಭಾವು ಇಲ್ಲವೆಂದು ದೃಢೀಕರಿಸಿಕೊಳ್ಳಬೇಕು.
• ರಾಸುಗಳಿಗೆ ಸರಿಯಾಗಿ ನಂದಿನಿ ಪಶು ಆಹಾರ, ಖನಿಜ ಮಿಶ್ರಣ ಬಳಕೆ ಮಾಡುವುದರಿಂದ ಹಾಗೂ ಸಂದರ್ಭಕ್ಕೆ ಸರಿಯಾಗಿ ಲಸಿಕೆ ಹಾಕಿಸುವುದರಿಂದ ಎಲ್ಲಾ ರೀತಿಯ ಖಾಯಿಲೆ ತಡೆಗಟ್ಟಲಾಗುತ್ತಿದೆ.
• ಕೆಲವು ರೋಗಗಳಿಗೆ ಆರ್ಯುವೇದ ಹಾಗೂ ಹೋಮಿಯೋಫಥಿಕ್ ಔಷಧ ಬಳಸಲು ಅವಕಾಶ ಮಾಡಿಕೊಡಲಾಗಿದ್ದು, ಇದಕ್ಕೆ ಸೂಕ್ತ ತರಬೇತಿ ಸಹ ನೀಡಲಾಗುತ್ತಿದೆ. ಇದರಿಂದಾಗಿ ಎಂಟಿಬಯೋಟಿಕ್ ಬಳಕೆ ಕಡಿಮೆ ಮಾಡಲಾಗುತ್ತದೆ.
• ರೈತರಿಗೆ ಸೂಕ್ತ ತಿಳುವಳಿಕೆ ನೀಡಿ ಎಂಟಿಬಯೋಟಿಕ್ ಔಷಧ ನೀಡಲಾದ ರಾಸುವಿನ ಹಾಲನ್ನು ಸಂಘಗಳಿಗೆ ಚಿಕಿತ್ಸೆ ಮುಗಿದ 4-5 ದಿನಗಳ ನಂತರವೇ ಪೂರೈಕೆ ಮಾಡಲು ಹಾಗೂ ಅಲ್ಲಿಯವರೆಗೆ ಹಾಲು ಬಳಸದಿರಲೂ ಸಹ ಮಾರ್ಗದರ್ಶನ ನೀಡಲಾಗುತ್ತಿದೆ.
• ಅನಾವಶ್ಯಕವಾಗಿ ಎಂಟಿಬಯೋಟಿಕ್ ಬಳಕೆ ಮಾಡದಂತೆ ಹಾಗೂ ನಿರ್ದಿಷ್ಟ ಎಂಟಿಬಯೋಟಿಕ್‍ಗಳನ್ನು ಬಳಸುವಂತೆ ಸಹ, ಸಂಬಂಧಿಸಿದವರಿಗೆ ಸೂಕ್ತ ತಿಳುವಳಿಕೆ ನೀಡಲಾಗುತ್ತದೆ.
• ಇಂತಹ ಕ್ರಮಗಳಿಂದಾಗಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳು ಉತ್ತಮ ಗುಣಮಟ್ಟಕ್ಕೆ ಮನೆಮಾತಾಗಿದೆ.

ಡಾ : ಡಿ ಎನ್ . ಹೆಗಡೆ
ಸಲಹೆಗಾರರು
ಕರ್ನಾಟಕ ಹಾಲು ಮಹಾಮಂಡಳಿ

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!