ಅತಿಥಿ ಅಂಕಣ

ಈ ಆಗರ್ಭ ಶ್ರೀಮ೦ತ ಸತ್ತಾಗ ಶವಸ೦ಸ್ಕಾರಕ್ಕೂ ದುಡ್ಡಿರಲಿಲ್ಲ !!

ದಕ್ಷಿಣ ಭಾರತದ ಗಾ೦ಧಿ ಎ೦ದೇ ಇವರು ಪ್ರಸಿದ್ಧರಾಗಿದ್ದರು. ಗಾ೦ಧೀಜಿಯವರ ಸಮಕಾಲೀನರಾದ ಇವರ ದೇಶಪ್ರೇಮ ಅಪ್ರತಿಮ. ಹುಟ್ಟಿದ್ದು ಮ೦ಗಳೂರಿನ ಆಗರ್ಭ ಶ್ರೀಮ೦ತ ಕುಟು೦ಬದಲ್ಲಿ. ಮು೦ಬೈನಲ್ಲಿ ಕಾನೂನು ಪದವಿ ಪಡೆದು ಮ೦ಗಳೂರಿನಲ್ಲಿ ವೃತ್ತಿ ಜೀವನ ಆರ೦ಭಿಸಿದ್ದರು. ಸುಖದ ಸುಪ್ಪತ್ತಿಗೆಯಲ್ಲಿ ಹಾಯಾಗಿ ಜೀವನ ಕಳೆಯಬಹುದಾಗಿದ್ದ ಇವರು ಗಾ೦ಧೀಜಿಯವರ ಕರೆಗೆ ಓಗೊಟ್ಟು ಸ್ವಾತ೦ತ್ರ್ಯ ಚಳುವಳಿಯ ಹೋರಾಟಕ್ಕೆ ಧುಮುಕಿದರು. ಮತ್ತು ಜೀವಿತದ ಕೊನೆಯವರೆಗೂ ಹೋರಾಟದಲ್ಲಿಯೇ ಉಳಿದರು.

ಶತಮಾನದ ಹಿ೦ದೆಯೇ, ಅಸ್ಪ್ರಶ್ಯತೆಯ ನಿವಾರಣೆ, ವಿಧವಾ ವಿವಾಹ, ಮಹಿಳಾ ಸಬಲೀಕರಣ, ಮೂಢನ೦ಬಿಕೆ ವಿರುದ್ಧ ಸಮರ ಮತ್ತು ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡಿ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಕೆಲಸ ಮಾಡಿದ ಮಹನೀಯ. ಹರಿಜನರಿಗೆ ದೇವಾಲಯ ಪ್ರವೇಶ ನಿಷಿದ್ಧ ವಿದ್ದ ಬಗ್ಗೆ ವ್ಯವಸ್ಥೆಯ ವಿರುದ್ಧ ಹೋರಾಡಿ ಯಶ ಕ೦ಡವರು. ಕಾಳಿಕಾದೇವಿಗೆ ಪ್ರಾಣಿಬಲಿ ಕೊಡುವುದನ್ನು ನಿಲ್ಲಿಸುವಲ್ಲಿ ಯಶಸ್ವಿಯಾದವರು. ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಮತ್ತು ರೌಲೆಟ್ ಕಾಯ್ದೆಯ ವಿರುದ್ಧ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಸತ್ಯಾಗ್ರಹ ನಡೆಸಿದವರು ಕಾರ್ನಾಡ್. ಗಾಂಧೀಜಿಯವರ ಅತ್ಯಾಪ್ತರಲ್ಲಿ ಇವರು ಒಬ್ಬರು.

ತಮ್ಮ ಹೋರಾಟದ ಬದುಕಿನಲ್ಲಿ ಸ್ವ೦ತ ಕುಟು೦ಬದ ಬಗ್ಗೆ ಗಮನ ವಹಿಸಲು ಇವರಿಗೆ ಆಗುತ್ತಿರಲಿಲ್ಲ. 1921 ರಲ್ಲಿ ಇವರ ಒಬ್ಬಳೇ ಮಗಳು ಸಾವನ್ನಪ್ಪಿದಾಗ ಮಾನಸಿಕವಾಗಿಯೂ ಜರ್ಝರಿತರಾದರು. ಆ ನ೦ತರ ಕೆಲಕಾಲ ಅಹಮದಾಬಾದಿಗೆ ತೆರಳಿ ಗಾ೦ಧೀಜಿಯವರೊ೦ದಿಗೆ ಕಾಲ ಕಳೆದಿದ್ದರು. ಆ ಸಮಯದಲ್ಲಿ ಕರ್ನಾಟಕ ಪ್ರವಾಹಕ್ಕೆ ಬಲಿಯಾಗಿ ಸಾವು ನೋವು ಸ೦ಕಷ್ಟ ಎದುರಿಸಿತ್ತು. ತಮ್ಮ ಮಾನಸಿಕ ನೋವಿನೆಡೆಯಲ್ಲಿಯೂ ಕಾರ್ನಾಡರು ವಾಪಾಸಾಗಿ ಪ್ರವಾಹ ಪರಿಹಾರ ಕಾಮಗಾರಿಯಲ್ಲಿ ನಿರತರಾಗುವ ಮೂಲಕ ತಮ್ಮ ಮನದ ನೋವನ್ನು ಮರೆತರು.

ದಂಡಿ ನಡಿಗೆ, ಉಪವಾಸ ಸತ್ಯಾಗ್ರಹದ ಬಳಿಕ ಅವರ ಆರೋಗ್ಯ ಹದಗೆಡಲು ಆರಂಭವಾಗಿತ್ತು. ಆದರೂ 1936ರಲ್ಲಿ ಫೈಜಾಬಾದ್‌ನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿದ್ದರು. ಅದಾಗಲೇ ಅವರಿಗೆ ಜ್ವರ ವಿಪರೀತವಾಗಿ ಕಂಗೆಡಿಸಿತ್ತು. ಅಲ್ಲಿಂದ ಮುಂಬೈಗೆ ವಾಪಸ್ಸಾದ ಕಾರ್ನಾಡರು 1937ರಲ್ಲಿ ಸಾವನ್ನಪ್ಪಿದ್ದರು. ತನ್ನ ಇಡೀ ಜೀವನವನ್ನೇ ಸ್ವಾತಂತ್ರ್ಯಕ್ಕಾಗಿ ಮೀಸಲಿಟ್ಟ ಕಾರ್ನಾಡರು, ತನ್ನೆಲ್ಲಾ ಸಂಪತ್ತನ್ನು ಬಡವರ, ದೀನ, ದಲಿತರ ಏಳಿಗೆಗಾಗಿ ವಿನಿಯೋಗಿಸಿದ್ದರು. ಅವರು ಸಾವನ್ನಪ್ಪಿದಾಗ ಶವಸಂಸ್ಕಾರಕ್ಕೂ ಹಣವಿರಲಿಲ್ಲವಾಗಿತ್ತು. ಆ ಕಾರಣಕ್ಕಾಗಿಯೇ ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತ ಕಾದಂಬರಿಕಾರ ದಿ.ಡಾ.ಶಿವರಾಮ ಕಾರಂತರು ಕಾರ್ನಾಡರನ್ನು “ಧರ್ಮರಾಜ” ಅಂತ ಕರೆದಿದ್ದರು. ಇ೦ತಹ ಮಹನೀಯರು ಎ೦ದೆ೦ದಿಗೂ ಪ್ರಾತಃ ಸ್ಮರಣೀಯರು.

-ನಿರಂಜನ, ಲೇಖಕರು

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!