ಮುಂಗೋಪಿ ಹುಡುಗನೊಬ್ಬ ಹೋದಲೆಲ್ಲಾ ಗಲಾಟೆ ಮಾಡಿಯೇ ಬರುತಿದ್ದ. ತಂದೆ-ತಾಯಿಗೆ, ನೆರೆಹೊರೆಯವರಿಗೆ ತಲೆ ನೋವಾಗಿ ಪರಿಣಮಿಸಿದ್ದ. ಶಾಲೆಯಲ್ಲೂ ಕೆಟ್ಟ ಚಾಳಿ ಮುಂದುವರೆಸಿದ್ದ ಹುಡುಗ ತನ್ನ ಸಹಪಾಠಿಗಳೊಡನೆ ಸದಾಕಾಲು ಕೆರೆದುಕೊಂಡು ಜಗಳ ಮಾಡುತಿದ್ದ. ಒಂದು ದಿನ ಜಗಳ ವಿಪರೀತಕ್ಕೆ ತಿರುಗಿ ಸಹಪಾಠಿಗೆ ಬಾರಿಸಿದ್ದ, ಪರಿಣಾಮ ಶಾಲೆಯಿಂದ ಅಮಾನತ್ತಾದ. ಈಗ ತಂದೆ-ತಾಯಿಗೆ ಉಭಯ ಸಂಕಟ ನುಂಗಲು ಆಗದ,ಉಗುಳಲು ಆಗದ ಸ್ಥಿತಿ ಮಗನಿಂದಾಗಿ !
ದಿನೆ ದಿನೇ ಕೆಡುತ್ತಿರುವ ಮಗನನ್ನು ಸರಿದಾರಿಗೆ ತರುವುದು “ಅನಿವಾರ್ಯಾತೆ” ಹಾಗೂ “ಅಗತ್ಯತೆ” ಎರಡೂ ಆಗಿತ್ತು ಪೋಷಕರಿಗೆ. ಸರಿ ತಂದೆಯೊಂದು ಉಪಾಯ ಹೂಡಿದ. ಹುಡುಗನಿಗೊಂದು ಶಿಕ್ಷೆ ನೀಡಿದ ಅದೇನೆಂದರೆ ಮರುದಿನದಿಂದ ಅವನು ಎಲ್ಲೆಲ್ಲಿ ಓಡಾಡಲು ಹೋಗುತ್ತಾನೂ ಅಲ್ಲೆಲ್ಲಾ ಒಂದು ಕೈಚೀಲ ಜೊತೆಯಲ್ಲಿ ಇಟ್ಟುಕೊಂಡು, ತನಗೆ ಯಾರ್ಯಾರನ್ನು ಕಂಡಾಗ ರೋಷ, ದ್ವೇಷ, ಕೋಪ ಬರುತ್ತದೋ ಅವರ ಹೆಸರಲ್ಲಿ ಒಂದು ಆಲೂಗೆಡ್ಡೆಯನ್ನು ಇಟ್ಟುಕೊಳ್ಳಬೇಕು ಮತ್ತು ಹೊರಗಡೆ ಓಡಾಡುವಾಗಲೆಲ್ಲಾ ಹೊತ್ತುಕೊಂಡೆ ಹೋಗಬೇಕೆಂದು ನಿಬಂಧನೆಯನ್ನು ಹಾಕಿದ. ಇದೇನು “ಮಹಾಶಿಕ್ಷೆ” ಅಂದುಕೊಂಡ ಹುಡುಗ ತಂದೆಯ ಆಜ್ಞೆಯನ್ನು ಶಿರಸಾ ಪಾಲಿಸಿದ.
ಸರಿ ಮೊದಲ ದಿನವೇ ಹುಡುಗ 5 ಆಲೂಗೆಡ್ಡೆಯನ್ನು ತುಂಬಿಕೊಂಡಿದ್ದ ಮರುದಿನ ಇನ್ನೂ ಸಂಖ್ಯೆ ಹೆಚ್ಚುತ್ತಲೆ ಹೋಯಿತು. ತಾನು ಯಾರ್ಯಾರ ಜೊತೆ ಜಗಳ ಆಡುತಿದ್ದನೊ ಆಗೆಲ್ಲಾ ಆಲೂಗೆಡ್ಡೆಯನ್ನು ಚೀಲದಲ್ಲಿ ತುಂಬುತಿದ್ದ. ಹೀಗೆ ವಾರ ಕಳೆಯುವುದರಲ್ಲಿ ಆಲೂಗೆಡ್ಡೆ ಸಂಖ್ಯೆ ಹೆಚ್ಚಾಗಿ ಅದನ್ನು ಹೊರಲಾರದ ಸ್ಥಿತಿಗೆ ಹುಡುಗ ಬಂದು ಬಿಟ್ಟಿದ್ದ. ಜೊತೆಗೆ ಕೈಚೀಲ ಸೇರಿದ ಆಲೂಗೆಡ್ಡೆಗಳು ಗಾಳಿ ಬೆಳಕು ಕಾಣದೆ ಅಲ್ಲೆ ಕೊಳೆಯಲಾರಂಭಿಸಿ ದುರ್ನಾತ ಬೀರಲಾರಂಭಿಸಿದ್ದವು.
ಒಂದು ಕಡೆ ಭಾರ ಇನ್ನೊಂದು ಕಡೆ ಅಸಹನೀಯ ವಾಸನೆಯಿಂದ ಹುಡುಗ ಸೋತು, ಬಳಲಿ,ಬೆಂಡಾಗಿ ತಂದೆ ಕಾಲಿಗೆ ಬಿದ್ದು ತನಗಿದರಿಂದ ಮುಕ್ತಿ ಕೊಡಿಸೆಂದು ಬಿಕ್ಕಿಳಿಸಿದ. ತಲೆ ನೇವರಿಸಿದ ತಂದೆ “ಮಗು ನಾನು ನಿನಗೆ ಇದನ್ನೆ ತಿಳಿಯಪಡಿಸಿದ್ದು . ಕೋಪ, ತಾಪ, ದ್ವೇಷ, ಅಸೂಯೆ ಎಂಬ ಕೆಟ್ಟ ಗುಣಗಳು ಈ “ಆಲೂಗೆಡ್ಡ”ಯಂತೆಯೆ ಹೆಚ್ಚು ಹೆಚ್ಚು ಸಂಗ್ರಹ ಆದಾಗಲೆಲ್ಲಾ ನಿನಗೆ ಹೊರಲಾರದಂಥ ಭಾರ ಮತ್ತು ಉಸಿರಾಡಲಾಗದಷ್ಟು ವಾಸನೆ ಬೀರಲಾರಂಭಿಸಿ ನೀನು ನಡೆದಾಡುವ ವಿಷದ ಕಾರ್ಖಾನೆಯಾಗುತ್ತೀಯಾ. ದ್ವೇಷಕ್ಕೆ ನಮ್ಮನ್ನು ನಾಶಗೊಳಿಸುವ ಶಕ್ತಿಯಿದೆ. ಅದರ ಬದಲಿಗೆ ನೀನು ಆಯುರಾರೋಗ್ಯ, ಶಾಂತಿ,ಕಾಂತಿಗಳನ್ನು ನೀಡಬಲ್ಲ ಅದ್ಬುತ ಶಕ್ತಿ ಇರುವ ಪ್ರೀತಿಯನ್ನು ನಿನ್ನ ಸುತ್ತ ಮುತ್ತಲಿನವರಿಗೆಲ್ಲಾ ಹಂಚು ಪ್ರೀತಿ ಎಲ್ಲವನ್ನು ಎಲ್ಲರನ್ನು ಒಂದುಗೂಡಿಸುತ್ತದೆ, ಪ್ರೀತಿ ಇದ್ದಲ್ಲಿ ಭೀತಿಯೇ ಇರದು ಎಂದು ಮಗನ ಮೈದಡವಿ ತಬ್ಬಿಕೊಂಡ”. ಹುಡುಗ ತಪ್ಪನ್ನು ತಿದ್ದಿಕೊಂಡು ಮುಂದೆ ಉತ್ತಮ ವಿದ್ಯಾರ್ಥಿಯಾದ.
ದ್ವೇಷಕ್ಕೆ ದ್ವೇಷವೇ ಪ್ರತಿಕಾರವಲ್ಲ, ದ್ವೇಷಿಸುವವರನ್ನು ಪ್ರೀತಿಸಿ ನೋಡಿ ಬದಲಾವಣೆ ಖಂಡಿತ ಸಾಧ್ಯ. ಸೇಡು ತೀರಿಸಿಕೊಳ್ಳಬೇಕು ಎಂಬ ಮನಸ್ಥಿತಿಯೆ ಒಂದು ಖಾಯಿಲೆ ಇನ್ನೊಬ್ಬರಿಗೆ ಹಿಂಸೆ ನೀಡಿ ನಾವು ಸಂತೋಷಪಟ್ಟರೆ ನಮ್ಮ ಬಾಳೆ ಛಿದ್ರವಾಗುತ್ತದೆ. ಅದರ ಬದಲು ಒಬ್ಬರ ತಪ್ಪನ್ನು ಒಬ್ಬರು ಕ್ಷಮಿಸಿ ಪರಸ್ಪರ ಪ್ರೀತಿಯಿಂದ ಕಾಳಜಿಯಿಂದ ಹಂಚಿಕೊಳ್ಳುವಿಕೆಯಿಂದ ಸಾಮರಸ್ಯದಿಂದ ಬದುಕುವುದರ ಮೂಲಕ ಒಂದೊಳ್ಳೆ ಸಮಾಜಕ್ಕೆ ಭದ್ರ ಬುನಾದಿಕಟ್ಟೋಣ.
ರಾಗಿಣಿ (ಲೇಖಕಿ: ಹವ್ಯಾಸಿ ಬರಹಗಾರ್ತಿ)