ಬಳ್ಳಾರಿಯ ಸತ್ಯನಾರಾಯಣ ಪೇಟೆಯಿಂದ ಕನಸುಗಳನ್ನು ಕಟ್ಟಿಕೊಂಡು ಬೆಂಗಳೂರೆಂಬ ಕಾಕ್ರಿಟ್ ಕಾಡಿನೊಳಗೆ ಬಂದು ಹಸಿವಿನಿಂದ ಕೆಲಸವಿಲ್ಲದೇ ಓಡಾಡಿಕೊಂಡಿದ್ದ ಹುಡುಗನೊಬ್ಬ ಮುಂದೊಂದು ದಿನ ಪತ್ರಿಕೋದ್ಯಮದ ಬಿಗ್ ಬಾಸ್ ಆಗಿ ಬೆಳೆಯುತ್ತಾನೆಂದು ಯಾರಿಗೂ ಗೊತ್ತಿರಲಿಲ್ಲ. ಅಕ್ಷರ ಪ್ರೀತಿಯೊಂದರಿಂದಲೇ ಈ ನಾಡಿನ ಅಸಂಖ್ಯ ಮನಸ್ಸುಗಳನ್ನು ಗೆದ್ದ ರವಿ ಬೆಳೆಗೆರೆ ನಿನ್ನೆ ಮಧ್ಯರಾತ್ರಿ ( 12.11.2020) ಹೃದಯಾಘಾತದಿಂದ ಬದುಕಿನ ಆಟ ಮುಗಿಸಿದ್ದಾರೆ.
ಸಾಯುವ ವಯಸ್ಸಲ್ಲ ಕೆಲವ 62 ವರ್ಷ ರವಿಬೆಳೆಗೆರೆಗೆ! ರವಿಬೆಳೆಗೆರೆ ಎಂದರೆ ಕೇವಲ ಪತ್ರಕರ್ತನಲ್ಲ ರವಿ ಬೆಳೆಗೆರೆ ಎಂದರೆ ಬತ್ತದ ಜೀವನೋತ್ಸಾಹ, ಕನಸು, ಕನವರಿಕೆ, ಸಾಧನೆ ಅಕ್ಷರಗಳ ದೇವರು, ಅಕ್ಷರಬ್ರಹ್ಮ, ಅಲೆದಾಟ, ಕಾಂಟ್ರೋವರ್ಸಿ, ಕಾದಂಬರಿಕಾರ, ನಟ, ನಿರೂಪಕ, ಒಂದೇ ಎರಡೇ ಒಬ್ಬ ಮನಷ್ಯ ತನ್ನ ಜೀವಿತಾವಧಿಯಲ್ಲಿ ಬದುಕನ್ನು ಹಿಡಿ ಹಿಡಿಯಾಗಿ ಹೇಗೆ ಬದುಕಬೆಂಕೆಂದು ತೋರಿಸಿಕೊಟ್ಟ ಒಬ್ಬ ಅದ್ಭುತ ವ್ಯಕ್ತಿ ರವಿ ಬೆಳಗೆರೆ.
ಪ್ರಾರಂಭದಲ್ಲಿ ಉಪನ್ಯಾಸಕ ವೃತ್ತಿ, ನಂತರ ಕರ್ಮವೀರ ಪತ್ರಿಕೆಯಲ್ಲಿ ಕೆಲಸ, ಕರ್ಮವೀರ ಬಿಟ್ಟಮೇಲೆ ಹಾಯ್ ಬೆಂಗಳೂರು ಎಂಬ ಕಪ್ಪು ಬಿಳುಪಿನ ವಾರ ಪತ್ರಿಕೆ ಸೃಷ್ಟಿಸಿ ಲವ್ ಲವಿಕೆ, ಖಾಸ್‍ಬಾತ್, ಬಾಟಂ ಐಟಂ ಹೀಗೆ ವಿಭಿನ್ನ ಅಂಕಣಗಳ ಮೂಲಕ ಯುವಮನಸ್ಸುಗಳ ಹೃದಯಕ್ಕೆ ಲಗ್ಗೆ ಇಟ್ಟು ಪತ್ರಿಕೋದ್ಯಮದಲ್ಲಿ ಒಂದೊಂದೆ ಮೆಟ್ಟಿಲು ಏರಿದ ರವಿಬೆಳೆಗೆರೆ ಸಾಕಷ್ಟು ಜನ ಮೆಚ್ಚುವ ಮೆಚ್ಚದಿರುವ ವ್ಯಕ್ತಿ!!
ರವಿಬೆಳೆಗೆರೆಯವರ ವೈಯಕ್ತಿಕ ಬದುಕನ್ನು ಬದಿಗಿಟ್ಟು ನೋಡಿದಾಗ ಅವರ ಅಕ್ಷರ ಪ್ರೀತಿ, ಸಾಧನೆ ಸುತ್ತಾಟ, ಹುಚ್ಚಾಟ, ಅಂದುಕೊಂಡಿದ್ದನ್ನು ಸಾಧಿಸಿದ್ದು, ಪ್ರಾರ್ಥನಾ ಶಾಲೆ, ಓ ಮನಸ್ಸೆ ಪತ್ರಿಕೆ, ಕಾದಂಬರಿ, ಕಥೆ, ಲೇಖನಗಳು, ಅವರ ಮಾತಿನ ಶೈಲಿ ಎಲ್ಲವೂ ಅತ್ಯಧ್ಬುತವೇ. ರವಿಬೆಳೆಗೆರೆ ಭೌತಿಕವಾಗಿ ಇಲ್ಲದಿದ್ದರು ಅವರು ಬಿಟ್ಟು ಹೋದ ಅಕ್ಷರಗಳು ಕನ್ನಡ ನಾಡಿನಲ್ಲಿ ಶಾಶ್ವತವಾಗಿ ಉಳಿಯುತ್ತವೆ.
ಬದುಕೆಂಬ ಆಟ ಮುಗಿದ ಮೇಲೆ ಎಲ್ಲರೂ ಹೋಗಲೇ ಬೇಕು.. ಹೋಗಿ ಬನ್ನಿ ರವಿ ಸರ್. ನಿಮಗಿದೋ ನನ್ನ ಅಕ್ಷರಗಳ ಭಾವಪೂರ್ಣ ಶ್ರದ್ದಾಂಜಲಿ.
-ನವೀನ್ ರಾಮನಗರ (ಒಂದು ಕಾಲದ ಹಾಯ್ ಬೆಂಗಳೂರು ಅಭಿಮಾನಿ)