ತಮ್ಮ ಮಕ್ಕಳು ಶಾಲೆಗೆ ಮೊದಲಿಗರಾಗಬೇಕು. ಎಲ್ಲರಿಗಿಂತ ಹೆಚ್ಚಾಗಿ ಅಂಕ ಪಡೆಯಬೇಕು ಎಂಬ ಕನಸು ಎಲ್ಲಾ ಪೋಷಕರಿಗೂ ಇದ್ದೇ ಇರುತ್ತದೆ. ಅದಕ್ಕಾಗಿ ಮಕ್ಕಳಿಗೆ ಯಾವುದಕ್ಕೂ ಕೊರತೆ ಬರದಂತೆ ಒಳ್ಳೆಯ ಖಾಸಗಿ ಶಾಲೆಗಳಿಗೆ ಸೇರಿಸಿ ಮನೆಪಾಠ ಕೊಡಿಸಿ ಎಲ್ಲಾ ಸೌಲಭ್ಯವನ್ನು ಕೊಟ್ಟರು ಮಕ್ಕಳು ಕಡಿಮೆ ಅಂಕ ಪಡೆಯುತ್ತಾರೆ. ಆದರೆ ಕುಸುಮ ಉಜ್ಜನಿ ಎಂಬ ಸಾಮಾನ್ಯ ಕುಟುಂಬದ ಹುಡುಗಿ ಅಪ್ಪನ ಪಂಕ್ಚರ್ ಅಂಗಡಿಯಲ್ಲಿ ಅಪ್ಪನಿಗೆ ಸಹಾಯ ಮಾಡುತ್ತಾ ಓದಿನಲ್ಲಿ ಆಸಕ್ತಿ ಹೊಂದಿ ಪಿ.ಯು.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಬಂದಿದ್ದಾಳೆ.
ಕೂಡ್ಲಿಗಿ ತಾಲ್ಲೂಕಿನ ಇಂದು ಪಿ.ಯು ಕಾಲೇಜಿನ ದ್ವೀತಿಯ ಪಿ.ಯು.ಸಿ ವಿದ್ಯಾರ್ಥಿನಿ ಕುಸುಮ ಉಜ್ಜಿನಿ ಕಲಾ ವಿಭಾಗದಲ್ಲಿ 594 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಟಾಪರ್ ಆಗಿದ್ದಾಳೆ. ತಂದೆ ದೇವೆಂದ್ರಪ್ಪ ಪಂಕ್ಚರ್ ಅಂಗಡಿ ಇಟ್ಟು ಕೊಂಡು ಬದುಕನ್ನು ನಡೆಸುತ್ತಾರೆ. ಕುಸುಮ ಕೂಡ ಅಪ್ಪನ ಪಂಕ್ಚರ್ ಅಂಗಡಿಯಲ್ಲಿ ತಾನು ಕೂಡ ಬೈಕ್ಗಳಿಗೆ ಪಂಕ್ಚರ್ ಹಾಕುವ ಕೆಲಸವನ್ನು ಮಾಡುತ್ತಾ ಅತ್ಯಂತ ಆಸಕ್ತಿಯಿಂದ ಓದಿ ಪಿ.ಯು.ಸಿ ಕಲಾವಿಭಾಗದಲ್ಲಿ ರಾಜ್ಯಕ್ಕೆ ಟಾಪರ್ ಆಗುವ ಮೂಲಕ ಸಾಕಷ್ಟು ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾಳೆ.
ಶ್ರದ್ದೆಯಿಂದ ಓದುವ ವಿದ್ಯಾರ್ಥಿಗಳು ತಮ್ಮ ಸ್ಥಿತಿ ಹೇಗಿದ್ದರು ಓದುತ್ತಾರೆ ಎಂಬುದಕ್ಕೆ ಕುಸುಮ ಉಜ್ಜಿನಿ ಸಾಕ್ಷಿ. ಹೆಚ್ಚಿನ ಅಂಕ ತೆಗೆಯಲು ಬೇಕಿರುವುದು ಓದಿನಲ್ಲಿ ಶ್ರದ್ಧೆ ಪರಿಶ್ರಮವೇ ಹೊರತು ಉತ್ತಮ ಸೌಲಭ್ಯಗಳಲ್ಲ. ಕುಸುಮ ಉಜ್ಜಿನಿ ಕೆಎಎಸ್ ಅಥವಾ ಐಎಎಸ್ ಪರೀಕ್ಷೆ ಬರೆಯಬೇಕೆಂಬ ಕನಸನ್ನು ಹೊಂದಿದ್ದಾರೆ. ಅವರ ಕನಸುಗಳು ನನಸಾಗಲಿ ಎಂದು ಹಾರೈಸೋಣ.