ಚನ್ನಪಟ್ಟಣ :- ನೇರ ನಡೆ-ನುಡಿಯ ಆದರ್ಶ ವ್ಯಕ್ತಿತ್ವದೊಂದಿಗೆ ಅಜಾತಶತ್ರುವಾಗಿ ಬದುಕಿ ಬಾಳಿದ ಹೃದಯವಂತ ವ್ಯಕ್ತಿ ಕಾಂತರಾಜ್ ಪಟೇಲ್ ಅವರ ನಿಧನದಿಂದ ಜಿಲ್ಲೆಯ ಸಾಂಸ್ಕೃತಿಕ ಕ್ಷೇತ್ರಕ್ಕೆ ಅಪಾರವಾದ ನಷ್ಟ ಉಂಟಾಗಿದೆ ಎಂದು ಹಿರಿಯ ರಂಗಭೂಮಿ ಕಲಾವಿದ ಮಂಗಳವಾರಪೇಟೆ ಎಂ .ಟಿ .ತಿಮ್ಮರಾಜು ತಿಳಿಸಿದರು .
ಪಟ್ಟಣದ ಕೊಲ್ಲಾಪುರದಮ್ಮನ ದೇವಸ್ಥಾನ ಆವರಣದ
ಡಾ. ರಾಜ್ ಬಯಲು ರಂಗಮಂದಿರದಲ್ಲಿ ತಾಲೂಕಿನ ವಿವಿಧ ಸಂಘಟನೆಗಳು, ರಂಗಭೂಮಿ ಕಲಾವಿದರು ಒಟ್ಟಾಗಿ ಸೇರಿ ಆಯೋಜಿಸಿದ್ದ ಅಗಲಿದ ಹಿರಿಯ ರಂಗಭೂಮಿ ಕಲಾವಿದ ,ಸಮಾಜ ಸೇವಕ, ರಕ್ತದಾನಿ, ರಾಮನಗರದ ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡರಾದ ಕಾಂತರಾಜ್ ಪಟೇಲ್ ರವರ
ಶ್ರದ್ದಾಂಜಲಿ ಸಭೆ ಮತ್ತು ನುಡಿನಮನ ಕಾರ್ಯಕ್ರಮದಲ್ಲಿ ಶ್ರದ್ಧಾಂಜಲಿ ಅರ್ಪಿಸಿ ಅವರು ಮಾತನಾಡಿದರು . ಉತ್ತಮ ರಂಗಭೂಮಿ ಕಲಾವಿದರಾಗಿ ದುರ್ಯೋಧನ, ಎಚ್ಚಮನಾಯಕ ಮೊದಲಾದ ಪೌರಾಣಿಕ ಐತಿಹಾಸಿಕ ಪಾತ್ರಗಳಿಗೆ ಜೀವ ತುಂಬುತ್ತಿದ್ದರು . ರಾಜಕೀಯ ಮತ್ತು ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡ ಅಪರೂಪದ ಅಸಾಮಾನ್ಯ ವ್ಯಕ್ತಿತ್ವದ ವ್ಯಕ್ತಿಯಾಗಿದ್ದರು .ಎಲ್ಲಾ ಜನರನ್ನು ಪ್ರೀತಿಸುವ ಗುಣ ಹೊಂದಿದ್ದರು. ಗ್ರಾಮೀಣ ಭಾಗದ ವ್ಯಾಜ್ಯಗಳನ್ನು ಪರಿಹರಿಸುವ ನ್ಯಾಯವಾದಿಯಾಗಿದ್ದರು .ಇಂತಹ ಸಹೃದಯ ವ್ಯಕ್ತಿಯನ್ನು ಕಳೆದುಕೊಂಡಿರುವುದು ನಮ್ಮೆಲ್ಲರ ದುರ್ದೈವ ಎಂದರು .
ಶ್ರೀ ಕೆಂಗಲ್ ಆಂಜನೇಯ ಸಾಂಸ್ಕೃತಿಕ ಕಲಾ ಟ್ರಸ್ಟ್ ನ ಗೌರವಾಧ್ಯಕ್ಷ ಗುರುಮಾದಯ್ಯ ಮಾತನಾಡಿ ಕಾಂತರಾಜ್ ಪಟೇಲ್ ರವರು ತತ್ವ ಸಿದ್ಧಾಂತ ಮೈಗೂಡಿಸಿಕೊಂಡಿದ್ದ ಆದರ್ಶ ರಾಜಕೀಯ ಮುಖಂಡರಾಗಿದ್ದರು.
ಅಪ್ರತಿಮ ಕಲಾಪ್ರೌಢಿಮೆಯೊಂದಿಗೆ ಕಲಾರಸಿಕರನ್ನು ಮನಸೂರೆಗೊಳಿಸಿ ಅಪಾರ ಜನಮನ್ನಣೆ ಗಳಿಸಿ ನಿರಂತರವಾಗಿ ಕಲೆ,ಸಾಹಿತ್ಯ , ಸಾಂಸ್ಕೃತಿಕ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದರು, ಪ್ರಗತಿಪರ ಸಾವಯುವ ಕೃಷಿಕರಾಗಿ ನನ್ನಂತಹ ಅದೆಷ್ಟೋ ಮಂದಿ ಕೃಷಿ ಕಾಯಕದಲ್ಲಿ ತೊಡಗಿಸಿಕೊಳ್ಳಲು ಪ್ರೇರಕರಾಗಿದ್ದರು. ಶಿಸ್ತು, ಗಾಂಭೀರ್ಯ ,ವಿವೇಕ ,ವಿವೇಚನೆಯ ವ್ಯಕ್ತಿತ್ವ ಉಳ್ಳವರಾಗಿದ್ದ ಕಾಂತರಾಜ್ ಪಟೇಲ್ ರವರು ಅಕಾಲಿಕವಾಗಿ ನಿಧನವಾಗಿರುವುದು ಜಿಲ್ಲೆಯ ರಾಜಕೀಯ ಮತ್ತು ಸಾಂಸ್ಕೃತಿಕ ವಲಯಕ್ಕೆ ಅಗಾಧವಾದ ನಷ್ಟ ಉಂಟು ಮಾಡಿದೆ ಎಂದರು.
ಅನಿಕೇತನ ಕನ್ನಡ ಸಾಂಸ್ಕೃತಿಕ ಬಳಗದ ಅಧ್ಯಕ್ಷ ಯೋಗೇಶ್ ಚಕ್ಕೆರೆ ಮಾತನಾಡಿ ರಕ್ತದ ಕೊರತೆಯನ್ನು ನೀಗಿಸಲು ವಿನೂತನ ಸೇವೆ ಮಾಡುತ್ತಾ ಬಂದಿದ್ದ ಕಾಂತರಾಜ್ ಪಟೇಲ್ ರವರು ಸುಮಾರು ನೂರಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡುವ ಮೂಲಕ ಶತಕವೀರ ರಕ್ತದಾನಿ ಎನಿಸಿದ್ದರು. ಸಂಕಷ್ಟದಲ್ಲಿದ್ದವರಿ ಗೆ ನೆರವಾಗುವ ಹೃದಯವಂತಿಕೆ ಹೊಂದಿದ್ದ ಮಾನವೀಯ ಮೌಲ್ಯಗಳುಳ್ಳ ಸಹೃದಯಿ ವ್ಯಕ್ತಿಯಾಗಿದ್ದರು, ವ್ಯಕ್ತಿಯಾಗಿದ್ದರು . ಇಂತಹ ಗತ್ತು ಗೈರುತ್ತಿನ ಭಾವದ, ವೈಶಿಷ್ಟ ಪೂರ್ಣ ಆದರ್ಶ ವ್ಯಕ್ತಿತ್ವದ ವ್ಯಕ್ತಿಯ ಬದುಕು, ನಡೆದ ಹಾದಿ , ಅವರ ಜೀವನ ಎಂದೆಂದಿಗೂ ಯುವಜನಾಂಗಕ್ಕೆ ಆದರ್ಶಪ್ರಾಯ ಮತ್ತು ಮಾರ್ಗದರ್ಶಕವಾಗಿತ್ತು ಎಂದರು .
ಈ ಸಂದರ್ಭದಲ್ಲಿ ಶ್ರೀ ಕೆಂಗಲ್ ಆಂಜನೇಯ ಸಾಂಸ್ಕೃತಿಕ ಕಲಾ ಟ್ರಸ್ಟ್ ಅಧ್ಯಕ್ಷ ಚಕ್ಕೆರೆ ವಿಜೇಂದ್ರ ,ಭಾರತ ವಿಕಾಸ ಪರಿಷತ್ ಅಧ್ಯಕ್ಷ ವಸಂತಕುಮಾರ್ ,ರಂಗಭೂಮಿ ಕಲಾವಿದರಾದ ನಾಗವಾರ ಶಂಭುಗೌಡ ,ಮಹೇಶ್ ಕುಮಾರ್ , ಲಾಳಘಟ್ಟ ಶಾಲೆಯ ಶಿಕ್ಷಕ ರಾಜಶೇಖರ್ ,ಕುಂತೂರುದೊಡ್ಡಿ ಪುಟ್ಟರಾಜು ,ಕೆಂಚಪ್ಪ ,ಬೈ.ಪು. ಪ್ರಭುಸ್ವಾಮಿ , ಕೃಷ್ಣಮೂರ್ತಿ , ಚಿಕ್ಕೇನಳ್ಳಿ ಹನುಮಂತಪ್ಪ , ನಾಗವಾರ ಮೈಕ್ ಸೆಟ್ ಕುಮಾರ, ಹಾರೋಕೊಪ್ಪ ಶಂಕರೇಗೌಡ, ವಿಜೇಂದ್ರ , ಕೃಷ್ಣಪ್ಪ ,ಚಂದ್ರಮೋಹನ್, ಮಾದೇಗೌಡ, ಸಿದ್ದರಾಜು ಬಿ.ಎಸ್ ,ಬೇವೂರು ಯೋಗೇಶ್ ಗೌಡ ,ಎ .ಟಿ. ವೆಂಕಟೇಶ್ ಮೊದಲಾದವರು ಉಪಸ್ಥಿತರಿದ್ದರು .ಒಂದು ನಿಮಿಷ ಮೌನಾಚರಣೆ ಮಾಡಿ, ಕಾಂತರಾಜ್ ಪಟೇಲ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರದ್ದಾಂಜಲಿ ಸಲ್ಲಿಸಲಾಯಿತು .