ಕಷ್ಟಗಳು ಬಂದಾಗ ಕುಗ್ಗಿ, ಬಗ್ಗಿ ಧರೆಗುರುಳಬಾರದು. ಮೈಕೊಡವಿ ಎದ್ದು ನಿಲ್ಲಬೇಕು, ನಮ್ಮೆಲ್ಲ ಶಕ್ತಿ ಸ್ಥೈರ್ಯಗಳನ್ನು ಒಗ್ಗೂಡಿಸಿಕೊಂಡು ಬರಲಿರುವ ಸವಾಲನ್ನು ಪುಡಿಗಟ್ಟಲು ಸೈನಿಕನಂತೆ ಸಜ್ಜಾಗಬೇಕು. ಆಗ ಎಂತಹ ಕಷ್ಟ ಎದುರಾದರೂ ನಾವದನ್ನು ಸಲೀಸಾಗಿ ನಿವಾಳಿಸಬಿಡಬಹುದು. ಆದರೆ ಬಹುತೇಕೆ ಸಂದರ್ಭಗಳಲ್ಲಿ ನಾವು ಹಾಗೆ ಮಾಡುವುದಿಲ್ಲ. ಕಷ್ಟ ಬಂದಾಗ ತಲೆಮೇಲೆ ಕೈಹೊತ್ತು ಕೂತುಬಿಡುತ್ತೇವೆ. ಇನ್ನೇನು ನಮ್ಮ ಕಥೆ ಮುಗಿಯಿತು ಎಂಬಂತೆ ವರ್ತಿಸುತ್ತೇವೆ, ಕಷ್ಟ ಎದುರಾದಾಗ ಹೆದರದೇ, ಹೇಗೆ ಅದನ್ನು ಎದುರಿಸಿ ಗೆಲುವನ್ನು ನಮ್ಮದಾಗಿಸಿಕೊಳ್ಳಬಹುದು ಎಂಬುದಕ್ಕೆ ಸಂವಾದಿಯಾಗಿ ಕಥೆಯೊಂದು ನೆನಪಾಗುತ್ತಿದೆ. ಓದುವಂಥರಾಗಿ.
ಒಂದೂರಿನ ರೈತನೊಬ್ಬನ ಬಳಿ ಕತ್ತಯೊಂದಿತ್ತು. ತುಂಬಾ ಪ್ರಾಮಾಣಿಕವಾಗಿ ತನ್ನ ಯಜಮಾನ ವಹಿಸಿದ ಕೆಲಸಗಳನ್ನು ಮಾಡುತ್ತಿತ್ತು. ರೈತನಿಗೂ ಆ ಕತ್ತೆಯ ಬಗ್ಗೆ ತುಂಬು ಪ್ರೀತಿಯಿತ್ತು. ಅದಕ್ಕೆ ಬೇಕು ಬೇಕಾದ ಹುಲ್ಲು-ಹಿಂಡಿಗಳನ್ನವನು ಒದಗಿಸುತ್ತಿದ್ದ. ಆದರೆ ಅದೊಂದು ದಿನ ಮೇವಿಗೆಂದು ಹೋದ ಕತ್ತೆ ತನ್ನ ಅರಿವಿಗೆ ಬಾರದೇ ದೊಡ್ಡ ಕಮರಿಯೊಂದರಲ್ಲಿ ಬಿದ್ದು ಬಿಡುತ್ತದೆ. ಮೇಲೆತ್ತುವುದು ಹೇಗೆಂದು ಅರಿಯದ ರೈತ ಹತಶನಾಗಿದ್ದ, ದಿನಗಳೇ ಕಳೆದುಹೋಗಿದ್ದವು. ಕತ್ತೆ ಕೂಡ ಅಶಕ್ತವಾಗಿತ್ತು. ತಿನ್ನಲು ಆಹಾರವೂ ಇಲ್ಲದ ಪರಿಸ್ಥಿತಿ ಅದರದು. ಮೇಲೆತ್ತುವ ಬಗೆ ಹೇಗೆಂಬುದು ರೈತನಿಗೂ ಗೊತ್ತಿಲ್ಲ. ಊರವರೆಲ್ಲರೂ ಸೇರಿದ್ದರು. ಕತ್ತೆಯನ್ನು ಮೇಲೆತ್ತುವುದು ಅಸಾಧ್ಯ. ಪಾಪ ಹೊಟ್ಟೆಗಿಲ್ಲದೇ ಸಾಯುವ ಸ್ಥಿತಿ ತಲುಪಿದೆ. ಮಿಸುಕಾಡದೇ ಬಿದ್ದಲೇ ಬಿದ್ದಿರುವ ಸ್ಥಿತಿ ನೋಡಿದರೆ ಅದು ಸತ್ತೇ ಹೋಗಿದೆಯೇನೋ ಎಂಬೆಲ್ಲ ಮಾತುಗಳು ಬಂದವು. ಇನ್ನೇನು ಅದನ್ನು ಮೇಲೆತ್ತಲು ಸಾಧ್ಯವಿಲ್ಲ. ಕಮರಿಯಲ್ಲಿ ಬಿದ್ದಿರುವ ಕತ್ತೆಯ ಮೇಲೆ ಮಣ್ಣು ಹೊತ್ತು ಹಾಕಿ ಅದು ಹೂತುಹೋಗುವಂತೆ ಮಾಡೋಣ, ಇದರ ವಿನ: ಬೇರೇನೂ ದಾರಿ ನಮಗೆ ತೋಚುವುದಿಲ್ಲ ಎಂದೂ ಎಲ್ಲರೂ ಒಮ್ಮತದ ಅಭಿಪ್ರಾಯಕ್ಕೆ ಬಂದರು.
ರೈತ ಬೇಸರದಿಂದಲೇ ಮಣ್ಣು ಹೊತ್ತುತಂದು ಕತ್ತೆಯ ಮೇಲೆ ಸುರಿದ. ಏನಾಶ್ಚರ್ಯ, ತನ್ನ ಮೈ ಮೇಲೆ ಮಣ್ಣು ಬಿದ್ದೊಡನೆ ಕತ್ತೆ ಎದ್ದು ನಿಂತು ಕೊಡವಿಕೊಂಡಿತು. ಅಲ್ಲಿ ಸೇರಿದ ಎಲ್ಲರೂ ತಮ್ಮ ಪಾಲಿನದೆಂಬಂತೆ ಮಣ್ಣನ್ನು ತಂದು ಕಮರಿಗೆ ಸುರಿಯತೊಡಗಿದರು. ಪ್ರತಿಬಾರಿ ತನ್ನ ಮೈಮೇಲೆ ಮಣ್ಣು ಬಿದ್ದಾಗಲೂ ಮೈಕೊಡವಿ ಕತ್ತೆ ಪಕ್ಕಕ್ಕೆ ಸರಿದು ಮತ್ತೆ ಸುರಿದ ಮಣ್ಣಿನ ರಾಶಿಯ ಮೇಲೆಯೇ ಬಂದು ನಿಲ್ಲುತ್ತಿತ್ತು. ಒಂದಷ್ಟು ಹೊತ್ತು ರೈತ ಮತ್ತವನ ಸಂಗಡಿಗರು ಇದೇ ರೀತಿ ಮಣ್ಣು ಹೊತ್ತು ಹಾಕುವ ಕೆಲಸ ಮುಂದುವರೆಸಿದರು. ಕಮರಿಯೊಳಗೆ ಮಣ್ಣಿನ ರಾಶಿ ದೊಡ್ಡೆ ಗುಪ್ಪೆಯಂತಾಗಿತ್ತು. ಕತೆಯು ಮಣ್ಣಗುಪ್ಪೆಯ ಮೇಲೆ ಬರುತ್ತ ಬರುತ್ತಾ ಕಮರಿಯಿಂದ ಹಾರಿ ಮೇಲಕ್ಕೆ ಬಂದುಬಿಡುತ್ತದೆ. ಕಮರಿಯಿಂದ ಈ ರೀತಿ ಪಾರಾಗಿ ಬಂದ ಕತ್ತೆ ತನಗೇನೂ ಆಗಿಲ್ಲವೇನೋ ಎಂಬಂತೆ ಮೇಯಲು ತೊಡಗಿತು. ಎರಡು ದಿನಗಳಿಂದ ಮೇವಿಲ್ಲದೇ ಉಪವಾಸವಿತ್ತಲ್ಲ, ಮೇಲೆ ಬಂದು ಹುಲ್ಲನ್ನು ಮೆದ್ದು ಶಕ್ತಿ ಸಂಚಯನ ಮಾಡಿಕೊಂಡಿತು, ಮತ್ತೆ ಕೆಲಸಕ್ಕೆ ಸಜ್ಜಾಯಿತು.
ಇದನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ. ನಾವು ಕಷ್ಟದಲ್ಲಿದ್ದಾಗಲೂ ಅಷ್ಟೇ ಕಮರಿಗೆ ಬಿದ್ದ ಕತ್ತೆಯಂತಯೇ ಇರುತ್ತೇವೆ. ಇವÀನ ಕಥೆ ಮುಗಿಯಿತು ಎಂಬಂತೆ ನಮ್ಮ ಸುತ್ತಲ ಜನ ನಿಂದನೆಗಳೆಂಬ ಕಲ್ಲನ್ನು ನಮ್ಮ ತಲೆಯ ಮೇಲೆ ಹೊತ್ತು ಹಾಕುತ್ತಾರೆ. ಆದರೆ ಇಂತಹ ಕಲ್ಲುಗಳನ್ನೇ ನಮ್ಮ ಯಶದ ಮೆಟ್ಟಿಲಾಗಿಸಿಕೊಂಡು ನಾವು ಮೇಲೆ ಹತ್ತುತ್ತಾ ಬರಬೇಕು. ತುತ್ತತುದಿಗೇರಬೇಕು.
-ಕೆ.ಬಿ. ಪರಶಿವಪ್ಪ
( ಮಹತ್ವಕಾಂಕ್ಷೆ )