ಚನ್ನಪಟ್ಟಣ :- ಮಾರ್ಚ್ ೧ರಿಂದ ಸರ್ಕಾರಿ ನೌಕರರ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಗೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಸಹಕಾರ ನೀಡುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಮನವಿ ಸಲ್ಲಿಸಿದರು .
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿಗೆ ಕರಪತ್ರ ನೀಡಿ, ಸಹಕಾರ ಕೋರಿ ಮಾತನಾಡಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜು ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಮಾಡಲು ಹಾಗೂ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ರಾಜ್ಯದ ಎಲ್ಲಾ ಸರ್ಕಾರಿ ನೌಕರರು ಕರ್ತವ್ಯಕ್ಕೆ ಗೈರಾಗಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದು ಪ್ರಾಥಮಿಕ ಶಿಕ್ಷಣ ಶಿಕ್ಷಕರೆಲ್ಲರೂ ಈ ಹೋರಾಟಕ್ಕೆ ಬೆಂಬಲಿಸುತ್ತೇವೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಎಲ್ಲಾ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಈ ಹೋರಾಟಕ್ಕೆ ಬೆಂಬಲಿಸಬೇಕೆಂದು ಮನವಿ ಮಾಡಿದರು .
ಸಂಘದ ನಿರ್ದೇಶಕ ಕೃಷ್ಣಕುಮಾರ್ ಮಾತನಾಡಿ ೫ ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ನಡೆಯಬೇಕಿದ್ದು ಕಳೆದ ಬಜೆಟ್ ನಲ್ಲಿ ಈ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ. ರಾಜ್ಯ ಸರ್ಕಾರಿ ನೌಕರರ ನ್ಯಾಯಯುತ ಬೇಡಿಕೆಯಾದ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಮಧ್ಯಂತರ ವರದಿಯನ್ನು ೭ನೇ ವೇತನ ಆಯೋಗದಿಂದ ಶೀಘ್ರವೇ ಪಡೆದು ೨೦೨೨ರ ಜುಲೈ ೧ಕ್ಕೆ ಅನ್ವಯಿಸುವಂತೆ ಶೇ ೪೦ ರಷ್ಟು ವೇತನ ಹೆಚ್ಚಳ ಮಾಡಲು ಆದೇಶ ನೀಡಬೇಕು,ಈ ನಿಟ್ಟಿನಲ್ಲಿ ಎಲ್ಲಾ ರಾಜ್ಯ ಸರ್ಕಾರಿ ನೌಕರರು ಹೋರಾಟಕ್ಕಿಳಿದಿದ್ದು ಇದಕ್ಕೆ ಬಿಇಓ ಕಚೇರಿ ಅಧಿಕಾರಿಗಳು ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ವ್ಯವಸ್ಥಾಪಕರಾದ ನಾಗರತ್ನಮ್ಮ , ಶಿಕ್ಷಣ ಸಂಯೋಜಕರಾದ ಯೋಗೇಶ್ ಚಕ್ಕೆರೆ , ಅಧೀಕ್ಷಕ ಪ್ರಶಾಂತ್ ಶರ್ಮಾ,ವಿಷಯನಿರ್ವಾಕರಾದ ಆರಾಧ್ಯ ,ಚೈತ್ರ ,ಕಾರ್ತಿಕ್ ,ಶಿಕ್ಷಕರಾದ ಹಿರೇಮಠ್, ಡಿ.ಸಿ .ಮೂರ್ತಿ ,ಸಂಘದ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ,ಜಿಲ್ಲಾ ಉಪಾಧ್ಯಕ್ಷ ಮಲ್ಲೇಶ್, ನಿಕಟ ಪೂರ್ವ ಅಧ್ಯಕ್ಷ ಎಸ್ .ಎಂ. ನಾಗೇಶ್ , ನಿರ್ದೇಶಕರಾದ ಸಾಕಮ್ಮ ,ಲಿಂಗರಾಜು, ಸುಧಾಮಣಿ ಮೊದಲಾದವರು ಉಪಸ್ಥಿತರಿದ್ದರು .