ಸುದ್ದಿ

ಗಿರೀಶ್ ಕಾರ್ನಾಡ ಇನ್ನಿಲ್ಲ. ಭಾವಪೂರ್ಣ ನುಡಿನಮನ

ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ ಇಂದು (10.06.2019) ವಿಧಿವಶರಾಗಿದ್ದಾರೆ. ಅವರು ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಅವರಿಗೆ ಭಾವಪೂರ್ಣ ನುಡಿನಮನಗಳು.

ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ನಾಟಕಕಾರ, ನಟ, ಚಲನಚಿತ್ರನಿರ್ದೇಶಕ. 1938 ಮೇ 19ರಂದು ಮುಂಬಯಿ ಸಮೀಪದ ಮಾಥೇರಾನ ಎಂಬ ಊರಲ್ಲಿ ಜನಿಸಿದರು. ತಂದೆ ರಘುನಾಥ ಕಾರ್ನಾಡ್, ವೈದ್ಯರು. ತಾಯಿ ಕೃಷ್ಣಬಾಯಿ. ಗಿರೀಶ್ ಕಾರ್ನಾಡ್ರು ಶಾಲ ಶಿಕ್ಷಣವನ್ನು ಶಿರಸಿಯಲ್ಲಿ ಪಡೆದರು. 1958 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ದಲ್ಲಿ ಗಣಿತಶಾಸ್ತ್ರ ಮತ್ತು ಸಂಖ್ಯಾ ಕಲನಶಾಸ್ತ್ರದಲ್ಲಿ ಬಿ.ಎ.ಪದವಿ ಗಳಿಸಿದರು. ಅನಂತರ ಮುಂಬಯಿ ಯಲ್ಲಿ ಎಂ.ಎ. ವಿದ್ಯಾರ್ಥಿಯಾಗಿ ದ್ದಾಗ ರೋಡ್ಸ್ ವಿದ್ಯಾರ್ಥಿವೇತನ ಪಡೆದು ಮುಂಬಯಿನಲ್ಲಿ ಅಧ್ಯಯನ ಅರ್ಧಕ್ಕೆ ನಿಲ್ಲಿಸಿ ಇಂಗ್ಲೆಂಡಿಗೆ ಪ್ರಯಾಣ ಮಾಡಿದರು. 1963ರಲ್ಲಿ ಆಕ್ಸ್‌ಫರ್ಡಿನ ಎಂ.ಎ. ಪದವಿ ಸಂಪಾದಿಸಿದರು. ಇಂಗ್ಲೆಂಡಿನಲ್ಲಿ ಆಕ್ಸ್‌ಫರ್ಡ್ ಯೂನಿಯನ್ನಿನ ಅಧ್ಯಕ್ಷರಾಗಿ ಇದ್ದರು. ಯೂನಿಯನ್ನಿಗೆ ಪ್ರಪ್ರಥಮವಾಗಿ ಮಹಿಳೆಯರಿಗೂ ಪ್ರವೇಶ ದೊರಕಿದ್ದು ಕಾರ್ನಾಡರ ಅಧ್ಯಕ್ಷತೆಯ ಅವಧಿಯಲ್ಲಿ. ಅವರು ಇಂಗ್ಲೆಂಡಿನಿಂದ ಭಾರತಕ್ಕೆ ಹಿಂದಿರುಗಿದ ಮೇಲೆ ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ ಸಂಸ್ಥೆಯ ಮದರಾಸು ಶಾಖೆಯಲ್ಲಿ ಉಪವ್ಯವಸ್ಥಾಪಕರಾದರು (1963-69); ಅನಂತರ ಅದರ ವ್ಯವಸ್ಥಾಪಕರಾದರು (1969-70). ಕಾನಾರ್ಡ್ ರವರು ಬೆಂಗಳೂರಿನರಾದ ಡಾ.ಸರಸ್ವತಿ ಗಣಪತಿ ಈಕೆಯ ತಾಯಿ ಫಾರಸಿ ನರ್ಗಿಸ್ಮುಗಾಸೇಥ್ ಮತ್ತು ತಂದೆ ಕೊಡವ, ಕೊಡಂದೆರ ಗಣಪತಿ ಈಕೆಯನ್ನು ತಮ್ಮ 48 ವಯಸ್ಸಿನಲ್ಲಿ ವಿವಾಹವಾದರು. ಇವರಿಗೆ ಇಬ್ಬರು ಮಕ್ಕಳು; ಮಗಳು ಶಲ್ಮಲಿ (1981), ರಘು ಅಮಯ್ (1983) ಮಗ.

ಇವರು ಹವ್ಯಾಸಿ ರಂಗಭೂಮಿಯ ಒಳ್ಳೆಯ ನಟರೆಂದೂ ನಾಟಕ ಲೇಖಕರೆಂದೂ ಹೆಸರುಗಳಿಸಿದ್ದಾರೆ. ಇವರು 1961 ರಲ್ಲಿ ಪ್ರಕಟಿಸಿದ ಯಯಾತಿ ನಾಟಕ ಹಲವು ಬಾರಿ ರಂಗಭೂಮಿಯ ಮೇಲೆ ಪ್ರದರ್ಶಿತವಾಗಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ಪುರಾಣದ ಯಯಾತಿಯನ್ನು ಆಧುನಿಕ ದೃಷ್ಟಿಕೋನದಿಂದ ಪರಿವೀಕ್ಷಿಸಿ ಅವನ ಬಾಳಿನ ದುರಂತತೆಯನ್ನು ಎತ್ತಿ ತೋರುವ ಯಯಾತಿಯ ತಂತ್ರ ಅತ್ಯಂತ ಯಶಸ್ವಿಯಾಗಿದೆ. ಭಾರತೀಯ ಇತಿಹಾಸದ ವಾದಗ್ರಸ್ತ ಸುಲ್ತಾನರಲ್ಲೊಬ್ಬನ ಬಾಳಿನ ಸುತ್ತ ಹೆಣೆದಿರುವ ‘ತುಘಲಕ್’ ನಾಟಕವೂ (1964) ನವೀನ ತಂತ್ರದಿಂದ ಕೂಡಿ, ಅವನ ಬಾಳಿನ ಕಥೆಗೆ ಹೊಸ ಆಯಾಮವೊಂದನ್ನು ನೀಡುತ್ತದೆ. ಅದು ಕನ್ನಡದಲ್ಲಿ ಮಾತ್ರವಲ್ಲದೆ ಇಂಗ್ಲಿಷ್, ಹಿಂದಿ ಮತ್ತು ಮರಾಠಿಯಲ್ಲೂ ರಂಗಪ್ರಯೋಗಗೊಂಡು ಆ ಭಾಷೆಗಳ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ನಾಟಕಗಳು : – ಮಾ ನಿಷಾದ (1964), ಹಯವದನ (1977), ಅಂಜುಮಲ್ಲಿಗೆ (1980), ಹಿಟ್ಟಿನ ಹುಂಜ (1980), ನಾಗಮಂಡಲ (1988), ತಲೆದಂಡ (1990), ಅಗ್ನಿ ಮತ್ತು ಮಳೆ (1995), ಟಿಪ್ಪುವಿನಕನಸುಗಳು(2000) ಮತ್ತು ಒಡಕಲು ಬಿಂಬ (2005) ಇವು ಕಾರ್ನಾಡರು ಬರೆದ ಇತರ ನಾಟಕಗಳು. ಇವರ ಯಯಾತಿಗೆ ರಾಜ್ಯಪ್ರಶಸ್ತಿಯೂ (1961) ತುಘಲಕ್ಗೆ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿಯೂ (1969) ಲಬಿsಸಿವೆ. 1971ರಲ್ಲಿ ಭಾರತೀಯ ಭಾಷೆಗಳಲ್ಲಿ ಸೃಷ್ಟಿಯಾದ ನಾಟಕಗಳ ಪೈಕಿ ಅತ್ಯುತ್ಕೃಷ್ಟವಾದದ್ದೆಂದು ಭಾರತೀಯ ನಾಟ್ಯ ಸಂಘದ ಬಹುಮಾನ ಗಳಿಸಿದ ಹಯವದನದಲ್ಲಿ ಯಕ್ಷಗಾನದ ತಂತ್ರವನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ. ಕಾರ್ನಾಡರು ನಾಟಕಗಳಿಗೆ ಆಯ್ದುಕೊಳ್ಳುವ ವಸ್ತು ಪುರಾಣ, ಇತಿಹಾಸ, ಜನಪದಗಳಾದರೂ ಅವರ ಕೃತಿಗಳಲ್ಲಿ ಸಮಕಾಲೀನ ಸಮಸ್ಯೆ ಸಂವೇದನಗೆಳನ್ನು ಅರ್ಥೈಸುವ ಪ್ರಾಮಾಣಿಕ ಪ್ರಯತ್ನ ಗಮನಾರ್ಹ.ಗಿರೀಶ್ ಕಾರ್ನಾಡರು ಹೆಚ್ಚು ಪ್ರಸಿದ್ಧಿ ಪಡೆದದ್ದು ಯು.ಆರ್.ಅನಂತಮೂರ್ತಿ ಯವರ ಸಂಸ್ಕಾರ ಕಾದಂಬರಿಯನ್ನು ಆಧರಿಸಿ ತಯಾರಿಸಲಾದ ಅದೇ ಹೆಸರಿನ ಕನ್ನಡ ಚಲನಚಿತ್ರದಿಂದಾಗಿ. ಸಂಸ್ಕಾರದ ಚಿತ್ರಕಥಾ ಲೇಖಕರೂ ಅದರಲ್ಲಿ ಪ್ರಾಣೇಶಾಚಾರ್ಯನ ಪಾತ್ರ ವಹಿಸಿದವರೂ ಗಿರೀಶ್ ಕಾರ್ನಾಡರೇ. ತುಂಬ ವಾದಗ್ರಸ್ತ ವಾದ ಈ ಚಿತ್ರ ಮೊದಲು ಭಾರತದ ಸೆನ್ಸಾರ್ ಬೋರ್ಡಿನಿಂದ ಬಹಿಷ್ಕೃತವಾಗಿ ಅನಂತರ ಒಪ್ಪಿಗೆಯ ಮುದ್ರೆ ದೊರಕಿಸಿಕೊಂಡಿತು. ಇದು ಅನೇಕ ವಿಮರ್ಶಕರ ಮೆಚ್ಚುಗೆ ಗಳಿಸಿತಲ್ಲದೆ, 1971ರ ಶ್ರೇಷ್ಠ ಚಿತ್ರವೆಂದು ರಾಷ್ಟ್ರಪತಿಗಳ ಸ್ವರ್ಣಪದಕ ಗಳಿಸಿತು. ಬಿ.ವಿ.ಕಾರಂತರ ಸಹಯೋಗದಲ್ಲಿ ಇವರು ನಿರ್ದೇಶಿಸಿದ ಎಸ್.ಎಲ್.ಭೈರಪ್ಪನವರ ವಂಶವೃಕ್ಷ ಕಾದಂಬರಿ ಆಧಾರಿತ ಚಿತ್ರವೂ ತುಂಬ ಯಶಸ್ಸು ಗಳಿಸಿತು. ಇದರ ಚಿತ್ರ ಕಥೆಯನ್ನು ಬರೆದವರೂ ಕಾರ್ನಾಡರೇ. ಇದರಲ್ಲೂ ಕಾರ್ನಾಡರು ಪಾತ್ರವಹಿಸಿದ್ದಾರೆ. ಇದಕ್ಕೆ ರಾಜ್ಯ ಪ್ರಶಸ್ತಿಯೂ ಫಿಲ್ಮ್ ಫೇರ್ ಪ್ರಶಸ್ತಿಯೂ ದೊರಕಿವೆ. ಇವರು ನಿರ್ದೇಶಿಸಿರುವ ಇನ್ನೊಂದು ಚಿತ್ರ ಶ್ರೀಕೃಷ್ಣ ಆಲನಹಳ್ಳಿಯವರ ಕಾಡು ಕಾದಂಬರಿಯನ್ನು ಆಧರಿಸಿದ್ದು. ಉತ್ಸವ್ ಇವರು ನಿರ್ದೇಶಿಸಿದ ಹಿಂದಿ ಚಿತ್ರ. ನಿಶಾಂತ್ ಎಂಬ ಹಿಂದಿ ಚಿತ್ರದಲ್ಲಿ ಕಾರ್ನಾಡರು ಅಭಿನಯಿಸಿದ್ದಾರೆ. ಕುವೆಂಪು ಅವರ ಕಾನೂರು ಹೆಗ್ಗಡತಿ ಕಾದಂಬರಿ ಯನ್ನು ಆಧರಿಸಿ ಅದೇ ಹೆಸರಿನ ಚಿತ್ರವನ್ನು ನಿರ್ದೇಶಿಸಿ, ಅಭಿನಯಿಸಿದ್ದಾರೆ (1999). ನಾಗಮಂಡಲವು ಸೇರಿದಂತೆ ಇವರ ನಾಟಕಗಳು ವಿದೇಶಗಳಲ್ಲೂ ಪ್ರದರ್ಶಿಸಲ್ಪಟ್ಟಿವೆ. ಇವು ಅನೇಕ ಭಾಷೆಗಳಿಗೆ ಭಾಷಾಂತರಗೊಂಡಿವೆ.

ಸಾಹಿತ್ಯ, ರಂಗಭೂಮಿ, ಚಲನಚಿತ್ರ-ಇವುಗಳ ನಡುವೆ ನಿಕಟಬಾಂಧವ್ಯ ಇದ್ದಾಗಲೇ ಹೊಸಹೊಸ ಪ್ರಯೋಗಗಳು ಸಾಧ್ಯವೆಂದೂ ಬಂಗಾಲದಲ್ಲಿ ಇವು ಮೂರೂ ಪರಸ್ಪರ ಪೂರಕವಾಗಿರುವುದರಿಂದಲೇ ಅಲ್ಲಿಯ ಚಲನಚಿತ್ರ ನವ್ಯತೆಯ ಹಾದಿ ಹಿಡಿದಿದೆಯೆಂದೂ ಭಾವಿಸಿರುವ ಕಾರ್ನಾಡರು ಈ ಮೂರೂ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಗಣಿತಶಾಸ್ತ್ರದ ಶಿಸ್ತಿನಂತೆಯೇ ರಂಗಕರ್ಮಕೂಡ ಎಂಬುದು ಕಾರ್ನಾಡರ ನಂಬುಗೆ. ಸ್ವತಃ ಗಣಿತಶಾಸ್ತ್ರದ ವಿದ್ಯಾರ್ಥಿಯಾಗಿ, ವಿದೇಶಯಾತ್ರೆ ಮಾಡಿ ಅಲ್ಲಿಯ ರಂಗಭೂಮಿ, ಚಿತ್ರರಂಗವನ್ನು ವೀಕ್ಷಿಸಿರುವ ಗಿರೀಶ ಕಾರ್ನಾಡರು ಕನ್ನಡ ರಂಗಭೂಮಿ ಹಾಗೂ ಚಲನಚಿತ್ರ ಕ್ಷೇತ್ರದಲ್ಲೂ ನವ್ಯ ವಿಧಾನವನ್ನು ಪ್ರಯೋಗಿಸಿ ಯಶಸ್ವಿಯಾಗಿದ್ದಾರೆ. ತೆರೆಯ ಮೇಲೆ ಪ್ರಸಿದ್ಧರಾದ ಮತ್ತು ಹಣ ದೊರಕಿಸುವ ಭರವಸೆ ಇರುವ ನಟನಟಿಯರನ್ನು ಬಿಟ್ಟು ತಾವು ಚಿತ್ರೀಕರಿಸಲಿರುವ ಕಥೆಗೆ ಸೂಕ್ತರಾದವರನ್ನು ಅಬಿsನಯಕ್ಕೆ ಆರಿಸಿಕೊಳ್ಳುವುದೂ ವೇಷಭೂಷಣಗಳಿಗಾಗಲಿ ಚಿತ್ರನಿರ್ಮಾಣ ಶಾಲೆಯ ಪೂರ್ವಸಿದ್ಧ ದೃಶ್ಯ ಸಂಯೋಜನೆ ಗಾಗಲಿ ಪ್ರಾಮುಖ್ಯ ಕೊಡದೆ ಹೊರಾಂಗಣದ ಸಹಜ ಪರಿಸರದಲ್ಲಿ ನೇರವಾಗಿ ಚಿತ್ರ ತೆಗೆಯುವುದೂ ಇವರು ಸಾಮಾನ್ಯವಾಗಿ ಅನುಸರಿಸುವ ಕ್ರಮ. ಇವರು ಸ್ವಲ್ಪ ಕಾಲ ಪುಣೆಯ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯ ನಿರ್ದೇಶಕರಾಗಿದ್ದರು. ಇವರು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇವರಿಗೆ ಪದ್ಮಶ್ರೀ (1974), ಪದ್ಮಭೂಷಣ (1992), ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ (1976) ಮತ್ತು ಜ್ಞಾನಪೀಠ ಪ್ರಶಸ್ತಿ (1998) ದೊರಕಿವೆ.

ಇವರು ‘ಆಡಾಡತ ಆಯುಷ್ಯ’ ಎಂಬ ತಮ್ಮ ಆತ್ಮಚರಿತ್ರೆಯ ಒಂದನೆಯ ಸಂಪುಟವನ್ನು 2011ರಲ್ಲಿ ಪ್ರಕಟಿಸಿದ್ದಾರೆ. ಎರಡನೆಯ ಸಂಪುಟ ‘ನೋಡ ನೋಡತಾ ದಿನಮನ’ ಪ್ರಕಟವಾಗಲಿದೆ. ಇವರ ತಾಯಿ ಕೃಷ್ಣಬಾಯಿ ಗೌಡ ಸಾರಸ್ವತ ಸಮುದಾಯಕ್ಕೆ ಸೇರಿದವರು. ಈಕೆ ಗೋಕರ್ಣದ ಮನ್ಕೀಕ್ರಾ ಕುಟುಂಬಕ್ಕೆ ಮದುವೆಯಾಗಿದ್ದರು. ಚಿಕ್ಕವಯಸ್ಸಿನಲ್ಲೇ ವಿಧವೆಯಾದಾಗ ಪತಿಯ ಕುಟುಂಬದವರು ನಿರ್ಲಕ್ಷಿಸಿದರು. ಈಕೆಯ ಕಷ್ಟಕಾಲದಲ್ಲಿ ಈಕೆಗೆ ನೆರವು ನೀಡಿದ್ದು ಈಕೆಯ ಭಾವ (ಅಕ್ಕನಗಂಡ) ಮಂಗೇಶ್ರಾವ್. ಆಗ ಬೆಳಗಾವಿಯಲ್ಲಿ ಸರ್ಕಾರಿ ವೈದ್ಯಾಧಿಕಾರಿಯಾಗಿದ್ದ ಸಂಬಂಧಿ ಡಾ. ಕಾರ್ನಾಡರ ಸಹಾಯದಿಂದ ನರ್ಸಿಂಗ್ ಶಾಲೆಯಲ್ಲಿ ಸ್ಥಾನಪಡೆಯಲು ಸಹಾಯ ಮಾಡಿದರು. ಈಕೆ ಕಾರ್ನಾಡರ ಮನೆಯಲ್ಲೇ 5 ವರ್ಷವಾಸವಿದ್ದು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಾ ಕಾರ್ನಾಡರ ಮನೆಯಲ್ಲಿ ಹಾಸಿಗೆ ಹಿಡಿದ ಅವರ ಪತ್ನಿಯನ್ನು ನೋಡಿಕೊಳ್ಳುತ್ತಿದ್ದರು. ಆಕೆ ನಿಧನವಾದ ಅನಂತರ ಕಾನಾರ್ಡರು ಕೃಷ್ಣಬಾಯಿಯನ್ನು ಆರ್ಯ ಸಮಾಜದ ಪದ್ಧತಿಯಂತೆ ವಿವಾಹವಾದರು. ಈ ವಿಷಯವನ್ನು ಗಿರೀಶ್ಕಾರ್ನಾಡರು ತಮ್ಮ ಆತ್ಮ ಚರಿತ್ರೆಯಲ್ಲಿ ಬರೆದಿದ್ದಾರೆ.

credit: whatsapp

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!