ಒಬ್ಬ ಶ್ರೀಮಂತ ವರ್ತಕ ವಯಸ್ಸಿನಲ್ಲಿ ಸಾಕಷ್ಟು ಗಳಿಸಿದ, ಹಾಗೂ ಗಳಿಸಿದ್ದನ್ನೆಲ್ಲ ಬಂಗಾರ ಬೆಳ್ಳಿಯ ರೂಪದಲ್ಲಿ ತನ್ನ ಮನೆಯ ನೆಲಮಾಳಿಗೆಯಲ್ಲಿರಿಸಿ ಬೀಗ ಹಾಕಿದ. ಆ ನೆಲಮಾಳಿಗೆಯನ್ನು ಆತ ಯಾರಿಗೂ ತೋರಿಸದೇ ಗುಪ್ತವಾಗಿರಿಸಿದ. ಕೊನೇಪಕ್ಷ ಅವನ ಹೆಂಡತಿ ಮಕ್ಕಳಿಗೂ ಅದನ್ನು ತೋರಿಸಲಿಲ್ಲ. ತಾನು ದುಡಿದು ಕೂಡಿಟ್ಟ ಸಂಪತ್ತನ್ನು ತನಗೆ ಬೇಕೆನಿಸಿದಾಗ ನೆಲಮಾಳಿಗೆಗೆ ಹೋಗಿ ಕಣ್ತುಂಬಾ ನೋಡಿ ಸಂತಸ ಪಡುತ್ತಿದ್ದನೇ ಹೊರತು ತಾನೂ ಅನುಭವಿಸಲಿಲ್ಲ, ತನ್ನ ಸುತ್ತಮುತ್ತಲಿ ನವರಿಗೂ ಹಂಚಲಿಲ್ಲ. ಕೈ ಎತ್ತಿ ದಾನ-ಧರ್ಮ ಮಾಡದೇ ದುರಾಸೆಯಿಂದ ಸಂಪತ್ತನ್ನು ಕೂಡಿಟ್ಟು ಆನಂದ ಅನುಭವಿಸುತ್ತಿದ್ದ.
ವರ್ಷಗಳು ಕಳೆದಂತೆ ವರ್ತಕನಿಗೆ ಮುಪ್ಪು ಆವರಿಸಿತು. ಆದರೂ ಕೋಣೆಗೆ ಹೋಗಿ ಬರುವುದನ್ನು ನಿಲ್ಲಿಸಲಿಲ್ಲ. ಕೊನೆಗೆ ತೀರಾ ನಡೆಯಲಾರದ ಸ್ಥಿತಿಗೆ ಬಂದಾಗಲೂ ಸಂಪತ್ತು ನೋಡಿ ಆನಂದಿಸುವ ದುರಾಸೆ ಮಾತ್ರ ಬಿಡಲಿಲ್ಲ. ಹೀಗೆ ಒಮ್ಮೆ ನಿತ್ರಾಣನಾಗಿ ನೆಲಮಾಳಿಗೆಯ ಕಡೆ ತೆವಳುತ್ತ ಹೋಗಿ ಕೂಡಿಟ್ಟ ಸಂಪತ್ತನ್ನು ಕಣ್ತುಂಬಿಕೊಂಡು ಹಾಗೇ ಮೈಮರೆತ. ಜೋರಾಗಿ ಗಾಳಿ ಬೀಸಲಾರಂಭಿಸಿ ಗಾಳಿಯ ರಭಸಕ್ಕೆ ಕೋಣೆಯ ಬಾಗಿಲು ಗಟ್ಟಿಯಾಗಿ ಮುಚ್ಚಿಕೊಂಡಿತು. ಆತನ ಕೈಲಿದ್ದ ಮೇಣದ ಬತ್ತಿಯೂ ಆರಿಹೋಯಿತು. ಏನೂ ಕಾಣದಂತಾದಾಗ ಮೆಲ್ಲನೆ ಆತ ತೆವಳುತ್ತ ಬಾಗಿಲಿಗಾಗಿ ತಡಕಾಡುತ್ತಾನೆ. ಪ್ರಯೋಜನವಾಗಲಿಲ್ಲ. ಜೋರಾಗಿ ಕೂಗಿದ, ಅದು ಯಾರಿಗೂ ಕೇಳಿಸಲಿಲ್ಲ. ಯಾಕೆಂದರೆ ಆತ ಆ ಕೋಣೆಯನ್ನು ತನ್ನ ಮಕ್ಕಳು ಮೊಮ್ಮಕ್ಕಳಿಗೂ ತೋರಿಸಿರಲಿಲ್ಲ. ಆದ ಕಾರಣ ಯಾರೂ ಆ ಕಡೆ ಬರಲಿಲ್ಲ. ವರ್ತಕ ಅಲ್ಲೇ ತಾನು ಕೂಡಿಟ್ಟ ಸಂಪತ್ತಿನೊಂದಿಗೆ ಸಮಾಧಿಯಾದ.
ಕಾಲಕ್ರಮೇಣ ಆತನ ಮಕ್ಕಳು ಆ ಊರನ್ನೇ ತ್ಯಜಿಸಿ ಪಟ್ಟಣಕ್ಕೆ ಹೊರಡಲು ಅನುವಾದರು. ಮನೆ ಮಾರಾಟವಾಯಿತು. ಮನೆ ಖರೀದಿಸಿದ ಮಾಲೀಕ ಹಳೇಮನೆ ಕೆಡವಿ ಹೊಸಮನೆ ಕಟ್ಟಿಸುವ ಆಲೋಚನೆಗೆ ಮುಂದಾದ. ಕೆಡವಿದ ಮನೆಯ ಅವಶೇಷಗಳಡಿಯಲ್ಲಿ ಹುದುಗಿದ್ದ ಗುಪ್ತಕೋಣೆಯಲ್ಲಿನ ಅಪಾರಸಂಪತ್ತು ಅವನ ಪಾಲಾಯಿತು. ಆದರೆ ಸಂಪತ್ತನ್ನು ಗಳಿಸಿ ತಾನು ಏನೇನೂ ಅನುಭವಿಸದೇ ಬಚ್ಚಿಟ್ಟವ ಮಾತ್ರ ದಾರುಣ ಅಂತ್ಯ ಕಂಡಿದ್ದ.
“ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ” ಎಂಬ ಹಿರಿಯರ ಗಾದೆ ಮಾತು ಅಕ್ಷರಶಃ ನಿಜ. ನಾವು ಪರರಿಗೆ ಕೊಟ್ಟಿದ್ದು ಇಂದಲ್ಲ ನಾಳೆ ಬೇರೆ ರೂಪದಲ್ಲಾದರೂ ಸರಿ ನಮಗೆ ವಾಪಾಸು ಬಂದೇ ಬರುತ್ತದೆ. ಆದರೆ ಬಚ್ಚಿಟ್ಟಿದ್ದು ಮಾತ್ರ ಪರರ ಪಾಲಾಗುವುದರಲ್ಲಿ ಸಂದೇಹವೇ ಇಲ್ಲ. ನಾವು ಸಂಗ್ರಹಿಸಿರುವುದನ್ನು ಇನ್ನುಳಿದವರ ಜೊತೆ ಪ್ರೀತಿಯಿಂದ ಹಂಚಿಕೊಂಡರೆ ಅದರಿಂದ ಸಿಗುವ ಸುಖ ಅನನ್ಯ. ಒಬ್ಬ ತಿನ್ನುವುದನ್ನು ಹತ್ತು ಜನರು ಹಂಚಿ ತಿನ್ನಬಹುದು. ಆದರೆ ಹತ್ತು ಜನ ತಿನ್ನುವುದನ್ನು ಒಬ್ಬನಂತೂ ತಿನ್ನಲಾಗದು, ಅಲ್ಲವೇ?
ಪರಮಾತ್ಮನ ಈ ಸೃಷ್ಟಿಯಲ್ಲಿ ಮಾನವನಿಗೆ ಮಾತ್ರ ಮೋಕ್ಷಕ್ಕೆ ಅವಕಾಶವಿದೆ. ನಾವೆಲ್ಲರೂ ಪೂರ್ವಜನ್ಮದ ಸುಕೃತದಿಂದ ಇಲ್ಲಿಗೆ ಬಂದಿದ್ದೇವೆ. ಇರುವಷ್ಟು ದಿನ ಪ್ರೀತ್ಯಾದರಗಳಿಂದ ಯಾವುದಾದರೊಂದು ರೂಪದಲ್ಲಿ ದಾನ ಮಾಡುವುದರ ಮೂಲಕ ಮೋಕ್ಷ ಗಳಿಸೋಣ.
ರಾಗಿಣಿ
ಹವ್ಯಾಸೀ ಬರಹಗಾರ್ತಿ