ಮಕ್ಕಳು ಬಾಲ್ಯದಿಂದಲೇ ಒಳ್ಳೆಯ ಶಿಕ್ಷಣ ಪಡೆಯಲಿ ಎಂದು ಲಕ್ಷ ಲಕ್ಷ ಸುರಿದು ಪ್ರತಿಷ್ಠಿತ ಶಾಲೆಗಳಿಗೆ ಸೇರಿಸುವ ಈ ಕಾಲಘಟ್ಟದಲ್ಲಿ ಮಗಳು ಸಾಮಾನ್ಯರಂತೆ ಸರ್ಕಾರಿ ಅಂಗನವಾಡಿಯಲ್ಲೆ ಕಲಿಯಲಿ ಎಂಬ ಬಯಕೆಯಂತೆ ಜಿಲ್ಲಾಧಿಕಾರಿಯೊಬ್ಬರು ತಮ್ಮ ಮಗಳನ್ನು ಅಂಗನವಾಡಿಗೆ ಸೇರಿಸಿರುವ ಅಪರೂಪದ ಸ್ಟೋರಿ ಇದು. ಸಾಮಾನ್ಯ ಜನರಾಗಿದ್ದರೆ ಖಂಡಿತ ಇದು ದೊಡ್ಡ ಸುದ್ಧಿ ಅಲ್ಲ, ಆದರೆ ಅಂಗನವಾಡಿಗೆ ಸೇರಿಸುವ ಮೂಲಕ ಸಾಮಾನ್ಯರಲ್ಲಿ ಸಾಮಾನ್ಯರಾದವರು ಜಿಲ್ಲಾಧಿಕಾರಿ ಶ್ರೀಮತಿ ಶಿಲ್ಪಾ ಪ್ರಭಾಕರ್ ಸತೀಶ್, ಇವರು ತಮಿಳುನಾಡಿನ ತಿರುವನೇಲಿಯಲ್ಲಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಕರ್ನಾಟಕ ಮೂಲದವರು.
ಸಮಾಜದ ಎಲ್ಲಾ ವರ್ಗದ ಜನರೊಂದಿಗೆ ನನ್ನ ಮಗಳು ಬೆರೆಯಬೇಕು. ಮತ್ತೊಬ್ಬರೊಂದಿಗೆ ನಾವು ಹೇಗೆ ಬೆರೆಯಬೇಕೆಂಬುದನ್ನು ಕಲಿಯಬೇಕು ಎಂಬ ಉದ್ದೇಶದಿಂದ ಮಗಳನ್ನು ತಮಿಳುನಾಡಿನ ಪಲಯಂಕೊಟ್ಟೈನಲ್ಲಿರುವ ಸರ್ಕಾರಿ ಅಂಗನವಾಡಿಗೆ ಸೇರಿಸುವ ಮೂಲಕ ಮಾದರಿಯಾಗಿದ್ದಾರೆ.
ಶಿಲ್ಪಾರವರು ಕರ್ನಾಟಕದ ಮೂಲದವರಾಗಿದ್ದರು ಕೂಡ ತಮಿಳುನಾಡಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಮಗಳನ್ನು ತಮಿಳು ಭಾಷೆಯ ಶಿಕ್ಷಣ ಕೊಡಿಸುತ್ತಿದ್ದಾರೆ. ತಮ್ಮ ಮಗಳು ಅಂಗನವಾಡಿಗೆ ಹೋದ ದಿನದಿಂದ ತಮಿಳು ಭಾಷೆಯ ಸುಧಾರಣೆ ಬಗ್ಗೆ ನನಗೆ ಖುಷಿ ತಂದಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿರುವ ಅಂಗನವಾಡಿಗಳಲ್ಲಿ ಉತ್ತಮ ಶಿಕ್ಷಣ ನೀಡುತ್ತಿದ್ದು, ಉತ್ತಮ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿದ್ದೇವೆ ತರಬೇತಿ ಹೊಂದಿದ ಸಿಬ್ಬಂದಿಗಳಿದ್ದಾರೆ ಎಂದು ಶಿಲ್ಪಾರವರು ತಮ್ಮ ಅಧಿಕಾರಿ ವ್ಯಾಪ್ತಿಯ ಅಂಗನವಾಡಿಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಒಟ್ಟಾರೇ ಜಿಲ್ಲಾಧಿಕಾರಿಯಾಗಿ ತಮ್ಮ ಮಗಳನ್ನು ಸರ್ಕಾರಿ ಅಂಗನವಾಡಿಗೆ ಸೇರಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ ಶ್ರೀಮತಿ ಶಿಲ್ಪಾ ಪ್ರಭಾಕರ್ ಸತೀಶ್. ಭಾಷಣ ಮತ್ತು ಲೇಖನಗಳಲ್ಲಿ ಮಾತ್ರ ಮಾತೃ ಭಾಷೆಯ ಬಗ್ಗೆ ಉದ್ದುದ್ದ ಹೇಳಿ ತಮ್ಮ ಮಕ್ಕಳು, ಮೊಮ್ಮಕ್ಕಳನ್ನು ಇಂಗ್ಲೀಷ್ ಶಾಲೆಗೆ ಸೇರಿಸುವ ಕೆಲವು ಜನರ ನಡುವೆ ಇಂತಹ ಅಪರೂಪದ ಜಿಲ್ಲಾಧಿಕಾರಿಗಳು ಎಲ್ಲರಿಗೂ ಮಾದರಿಯಾಗಿದ್ದಾರೆ.