ನಮ್ಮ ರಾಮನಗರ

ಬದುಕು ಬೆತ್ತಲಾದಾಗ ಕಾದಂಬರಿ ಲೋಕಾರ್ಪಣೆ

ನಮ್ಮ ರಾಮನಗರ: ಗ್ರಾಮೀಣ ಭಾಗದ ಉದಯೋನ್ಮುಖ ಬರಹಗಾರ ದೇವರಾಜು ಚನ್ನಸಂದ್ರ ತಮ್ಮ ಚೊಚ್ಚಲ ಕಾದಂಬರಿಯಲ್ಲೇ ಸಾಹಿತ್ಯ ಪ್ರಿಯರ ಗಮನ ಸೆಳೆಯುವ ರೀತಿಯಲ್ಲಿ ಸಾಹಿತ್ಯ ಕೃಷಿ ಮಾಡಿದ್ದು, ಸಿದ್ಧತೆ ಮತ್ತು ಬದ್ಧತೆಯೊಂದಿಗೆ ಮುಂದಿನ ದಿನಗಳಲ್ಲಿ ಎತ್ತರಕ್ಕೆ ಬೆಳೆಯುವ ಮುನ್ಸೂಚನೆ ನೀಡಿದ್ದಾರೆ ಎಂದು ಖ್ಯಾತ ಸಾಹಿತಿ ಡಾ.ಬೈರಮಂಗಲ ರಾಮೇಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರ ಹೊರವಲಯದ ಜಾನಪದ ಲೋಕದ ಸರಸ್ವತಿ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉದಯೋನ್ಮುಖ ಲೇಖಕ ದೇವರಾಜು ಚನ್ನಸಂದ್ರ ಅವರ ಚೊಚ್ಚಲ ಕಾದಂಬರಿ ಬದುಕು ಬೆತ್ತಲಾದಾಗ ಪುಸ್ತಕ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಕನ್ನಡ ಸಾಹಿತ್ಯ ಲೋಕ ನಿಂತರ ನೀರಲ್ಲ. ವರ್ಷವೊಂದಕ್ಕೆ ಸಾವಿರಾರು ಪುಸ್ತಕಗಳು ಪ್ರಕಟವಾಗುತ್ತಿರುತ್ತವೆ. ನೂರಾರು ಹೊಸ ಹೊಸ ಪ್ರತಿಭೆಗಳು ಹೊರ ಹೊಮ್ಮುತ್ತಿರುತ್ತವೆ. ಇವುಗಳಲ್ಲಿ ಗಟ್ಟಿ ಉಳಿದುಕೊಳ್ಳುತ್ತದೆ. ಟೊಳ್ಳು ಹೊರಗುಳಿಯುತ್ತದೆ. ಈ ದಿಕ್ಕಿನಲ್ಲಿ ಶ್ರದ್ಧೆ, ಅರ್ಪಣಾ ಮನೋಭಾವ, ಸಿದ್ಧತೆ ಹಾಗೂ ಬದ್ಧತೆಯೊಂದಿಗೆ ಯಾರು ಕಾಯಕ ಮಾಡುತ್ತಾರೋ ಅಂತಹವರು ಬಹು ಎತ್ತರಕ್ಕೆ ಏರುತ್ತಾರೆ. ಅಂತಹ ಒಂದು ಬೆಳವಣಿಗೆಯ ಲಕ್ಷಣವನ್ನು ಉದಯೋನ್ಮುಖ ಲೇಖಕ ದೇವರಾಜು ಅವರು ತಮ್ಮ ಚೊಚ್ಚಲ ಕಾದಂಬರಿಯಲ್ಲಿಯೇ ತೋರಿರುವುದು ನಿಜಕ್ಕೂ ಮೆಚ್ಚುವ ವಿಚಾರ. ಗ್ರಾಮೀಣ ಸೊಗಡನ್ನು ಉಳಿಸಿಕೊಂಡು ನಗರೀಕರಣದ ಜೀವನವನ್ನು ಅನುಭವಿಸುತ್ತಿರುವ ಲೇಖಕರು ತಮ್ಮ ಮೊದಲ ಕಾದಂಬರಿಯಲ್ಲಿ ಎಲ್ಲ ಅಂಶಗಳು ಮೇಳೈಸುವಂತೆ ಮಾಡಿರುವುದು ಸಾಹಿತ್ಯ ಪ್ರಿಯರ ಗಮನ ಸೆಳೆಯಲಿದೆ ಎಂದು ಶ್ಲಾಘಿಸಿದರು.

ಇಂದಿನ ಪೀಳಿಗೆಯು ಹದಿ ಹರೆಯದಿಂದ ಏರು ಯೌವ್ವನದವರೆಗೂ ಹಲವಾರು ಆಕರ್ಷಣೆಯ ಅಡ್ಡಗಳನ್ನು ಮಾಡಿಕೊಂಡು, ಈ ಮೂಲಕ ಪ್ರಪಾತಕ್ಕೆ ಇಳಿಯುತ್ತಿರುವುದು ದುರ್ದೈವದ ಸಂಗತಿ. ಬದುಕು ಬೆತ್ತಲಾದಾಗ ಕಾದಂಬರಿಯಲ್ಲಿ ಬರುವ ಹಲವಾರು ಪಾತ್ರಗಳು ಇವತ್ತಿನ ವಾಸ್ತವ ಪರಿಸ್ಥಿತಿಯನ್ನು ಬಿಂಬಿಸುತ್ತವೆ. ಪ್ರತಿ ಪಾತ್ರವೂ ತನ್ಮೂಲಕ ಸಮಾಜಕ್ಕೆ ಒಂದು ಉತ್ತಮ ಸಂದೇಶ ಸಾರುವ ಪ್ರಯತ್ನ ಮಾಡುತ್ತವೆ. ಪಾತ್ರಗಳ ನಿರೂಪಣೆ, ವಸ್ತು ವಿಷಯ ಆಯ್ಕೆ ಸೇರಿದಂತೆ ಒಂದು ಕಾದಂಬರಿಗೆ ಇರಬೇಕಾದ ಎಲ್ಲಾ ಅಂಶಗಳನ್ನು ಅಚ್ಚುಕಟ್ಟಾಗಿ ಜೋಡಿಸಿರುವ ಕೃತಿಕಾರ ದೇವರಾಜು ಇದು ತಮ್ಮ ಚೊಚ್ಚಲ ಕಾದಂಬರಿ ಎಂಬುದನ್ನು ಮರೆ ಮಾಚಿ ನಿಲ್ಲುತ್ತಾರೆ. ಮುದ್ರ ರಾಕ್ಷಸನ ಹಾವಳಿ ಇಲ್ಲದ, ಪುಸ್ತಕ ಕೈಗೆ ತೆಗೆದುಕೊಂಡೊಡನೆ ಸರಾಗವಾಗಿ ಓದಿಸಿಕೊಂಡು ಹೋಗುವ ಬದುಕು ಬೆತ್ತಲಾದಾಗ ಕಾದಂಬರಿ ಹೆಚ್ಚು ಜನಪ್ರಿಯವಾಗಲಿ ಎಂದು ಬೈರಮಂಗಲ ರಾಮೇಗೌಡ ಹಾರೈಸಿದರು.

ಕನಕಪುರ ರೂರಲ್ ಪದವಿ ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ.ಎಸ್.ಎಚ್. ಭುವನೇಶ್ವರ ಮಾತನಾಡಿ, ಯಾವುದೇ ಪುಸ್ತಕವನ್ನು ಓದಲು ಹಿಡಿದಾಗ ಬೇರೆಲ್ಲವನ್ನು ಪಕ್ಕಕ್ಕಿಟ್ಟು ಒಂದೇ ಗುಕ್ಕಿನಲ್ಲಿ ಸರಾಗವಾಗಿ ಓದಿಸಿಕೊಂಡು ಹೋದರೆ, ಮೊದಲ ವಿಮರ್ಶೆಯಲ್ಲೇ ಅದು ಗೆದ್ದಂತೆ, ಅದಕ್ಕೆ ಬೇರೆ ವಿಮರ್ಶೆಯೇ ಬೇಕಿಲ್ಲ. ಈ ವಿಚಾರದಲ್ಲಿ ನನ್ನ ವಿದ್ಯಾರ್ಥಿ ದೇವರಾಜು ಚನ್ನಸಂದ್ರ ತಮ್ಮ ಮೊದಲ ಕಾದಂಬರಿಯಲ್ಲಿಯೇ ಸಾಹಿತ್ಯಾಸಕ್ತರು ಹುಬ್ಬೇರುವಂತೆ ಮಾಡಿದ್ದಾರೆ. ಕಾದಂಬರಿ ಒಂದೇ ಟೇಕ್ ನಲ್ಲಿ ಓದಿಸಿಕೊಂಡು ಹೋಗುತ್ತದೆ ಎಂಬುದೊಂದುಹೆಗ್ಗಳಿಕೆಯಾದರೆ, ನಾನು ನನ್ನ ಶಿಷ್ಯ ಎಂಬ ಕಾರಣಕ್ಕೆ ಅಥವಾ ಮುಖಸ್ತುತಿಗಾಗಿ ಹೇಳುತ್ತಿಲ್ಲ ಒಂದು ಕಾದಂಬರಿ ಬೇಕಾದ ವಸ್ತು, ಪಾತ್ರಗಳು, ಸನ್ನಿವೇಶ ಹಾಗೂ ಒಂದು ಪರಿಣಾಮಕಾರಿ ಮುಕ್ತಾಯವನ್ನು ಅತ್ಯಂತ ನಾಜುಕಾಗಿ ಆಯ್ಕೆ ಮಾಡಿಕೊಳ್ಳುವ ಮೂಲಕ ಮುಂದಿನ ದಿನಗಳಲ್ಲಿ ಸಾಹಿತ್ಯ ವಲಯದಲ್ಲಿ ಬೇರೂರಿ ಉನ್ನತ ಮಟ್ಟಕ್ಕೆ ಏರುವ ಲಕ್ಷಣಗಳನ್ನು ತಮ್ಮ ಮೊದಲ ಕಾದಂಬರಿಯಲ್ಲಿಯೇ ಅನಾವರಣಗೊಳಿಸಿರುವುದು ಮೆಚ್ಚುವ ವಿಚಾರವಾಗಿದೆ ಎಂದರು.

ನಮ್ಮೊಳಗೆ ನಾವಿಲ್ಲ, ವಾಕಿಂಗ್ ವಿತ್ ವಿದ್ಯಾರ್ಥಿ, ಪೋಷಕರು ಬೋಧಕರಲ್ಲ ಸಾಧಕರು ಎಂಬ ವ್ಯಕ್ತಿತ್ವ ವಿಕಸನ ಪುಸ್ತಕಗಳು ಸೋಲು-ಸಾವಲ್ಲ, ಗುಲುವು- ಸುಖವಲ್ಲ ಕಾದಂಬರಿ ಶೈಲಿಯ ವ್ಯಕ್ತಿತ್ವ ವಿಕಸನ ಪುಸ್ತಕ ಒಳಗೊಂಡಂತೆ ಇದೀಗ ಲೋಕಾರ್ಪಣೆಯಾಗತ್ತಿರುವ ಬದುಕು ಬೆತ್ತಲಾದಾಗ ಕಾದಂಬರಿಯ ಮೂಲಕ ದೇವರಾಜು ಸಾಹಿತ್ಯದಲ್ಲಿ ಹೆಜ್ಜೆ ಗುರುತುಗಳನ್ನು ಮೂಡಿಸಲು ಹೊರಟಿದ್ದಾರೆ ಅವರಿಗೆ ಒಳಿತಾಗಲಿ ಎಂದು ಆಶೀರ್ವದಿಸಿದರು.

ಜಾನಪದ ಲೋಕದ ಮುಖ್ಯ ಆಡಳಿತಾಧಿಕಾರಿ ಸಿ.ಎನ್.ರುದ್ರಪ್ಪ ಮಾತನಾಡಿದರು. ಲೇಖಕ ದೇವರಾಜು ಚನ್ನಸಂದ್ರ ಅವರು ವಂದನಾರ್ಪಣೆಯೊಂದಿಗೆ ತಾವು ಸಾಹಿತ್ಯದೆಡೆಗೆ ಬೆಳಿಸಿಕೊಂಡ ಅಭಿರುಚಿ, ವಿದ್ಯಾರ್ಥಿ ದಿಸೆಯಿಂದಲೂ ಹಲವಾರು ಚರ್ಚಾಗೋಷ್ಠಿಗಳಲ್ಲಿ ಭಾಗವಹಿಸಿದ್ದು ಸೇರಿದಂತೆ ಹಲವಾರು ವಿಚಾರಗಳನ್ನು ಹಂಚಿಕೊಂಡರು. ಇದೇ ವೇಳೆ ಉದಯೋನ್ಮುಖ ಚಿತ್ರ ಕಲಾವಿದ ನವೀನ್ ತಲಘಟ್ಟಪುರ ಅವರು ಕೆಲವೇ ಕ್ಷಣಗಳಲ್ಲಿ ಲೇಖಕ ದೇವರಾಜು ಚನ್ನಸಂದ್ರ ಅವರ ಭಾವಚಿತ್ರ ಬಿಡಿಸುವ ಮೂಲಕ ಸಾಹಿತ್ಯಾಸಕ್ತರ ಮನಸೂರೆಗೊಂಡರು. ಕಾರ್ಯಕ್ರಮದಲ್ಲಿ ಭಾಗಿಯಾದ ಗಣ್ಯರನ್ನು ಲೇಖಕ ದೇವರಾಜು ಹಾಗೂ ನೀತು ದೇವರಾಜು ಶಾಲು ಹೊದಿಸಿ, ಫಲ-ತಾಂಬೂಲ ನೀಡುವ ಮುಖೇನ ಸತ್ಕರಿಸಿದರು.

ಬಿಡದಿಯ ಮದರ್ ಸನ್ ಕಂಪನಿ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆ ಆರ್.ಟಿ.ವೈಶಾಲಿ ಪೊನ್ನಸ್ವಾಮಿ ನಿರೂಪಿಸಿದರು. ಮಂಡ್ಯದ ಸಹಾಯಕ ಸಿಡಿಪಿಒ ನಂಜಾಮಣಿ ಸ್ವಾಗತಿಸಿದರು. ಸಾಮಾಜಿಕ ಕಾರ್ಯಕರ್ತ ಸುರೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೊಲೀಸ್ ಅಧಿಕಾರಿಗಳಾದ ವಸಂತ್ ಕುಮಾರ್, ಶೋಭಾ ವಸಂತ್ ಕುಮಾರ್, ಕೋಕಾ ಕೋಲಾ ಕಂಪನಿ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ವೆಂಕಟಾಚಲಪತಿ, ಉದ್ಯಮಿಗಳಾದ ಬಲ್ಲಾಪಟ್ಟಣ ಜಯಕುಮಾರ್, ಸಿದ್ದೇಶ್, ಶಾಹಿ ಎಕ್ಸ್ ಪರ್ಟ್ ನ ಪೊನ್ನಸ್ವಾಮಿ, ಕೆಪಿಟಿಸಿಎಲ್ ನೌಕರ ಕಂಚನಹಳ್ಳಿ ನಾಗೇಗೌಡ, ಸಾಮಾಜಿಕ ಕಾರ್ಯಕರ್ತರಾದ ಯಲಿಯೂರು ರಾಮಕೃಷ್ಣೇಗೌಡ, ಹೇಮಂತ್ ಗೌಡ ಸರಗೂರು, ಪುಟ್ಟಸ್ವಾಮಿಗೌಡ ಮತ್ತಿತರರು ಉಪಸ್ಥಿತರಿದ್ದರು.

-Hemanth Gowda

About the author

bbmadmin

Leave a Comment

Facebook Like Box

ಮಿಸ್ ಮಾಡದೆ ಓದಿ

ವಿಡಿಯೋ

Copyright © 2020 BBMNAVEEN2012.COM All Rights Reserved. Design and Developed By Vinyas Infotech

error: Content is protected !!