ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ…… ಈ ಗೀತೆಯನ್ನು ಕೇಳ್ತಾ ಇದ್ರೆ ಎಸ್.ಪಿ.ಬಿಗಿದ್ದ ಕನ್ನಡ ಭಾಷೆಯ ಮೇಲಿನ ಪ್ರೀತಿ ಎಂತವರಿಗೂ ಅರ್ಥವಾಗುತ್ತೆ. ಮುಂದಿನ ಜನ್ಮ ಅಂತ ಇದ್ರೆ ನಾನು ಈ ಕರುನಾಡ ಮಣ್ಣಲ್ಲಿ ಹುಟ್ಟುತ್ತೇನೆಂದು ಹೇಳುತ್ತಿದ್ದ ಸಂಗೀತ ದಿಗ್ಗಜ ಎಸ್.ಪಿ.ಬಾಸುಬ್ರಮಣ್ಯಂ ಇನ್ನೂ ಶ್ವಾಶ್ವತ ನೆನಪು.
ಬಾಲಸುಬ್ರಹ್ಮಣ್ಯಂ ಅವರು ಹುಟ್ಟಿದ ದಿನ ಜೂನ್ 4, 1946 . ಅವರು ಆಂಧ್ರಪ್ರದೇಶ ಚಿತ್ತೂರಿನ ಕೊನೇಟಮ್ಮಪೇಟಾ ಎಂಬಲ್ಲಿನ ಸಂಪ್ರದಾಯಸ್ಥ ಕುಟುಂಬವೊಂದರಲ್ಲಿ ಜನಿಸಿದರು. ಬಾಲು ವ್ಯವಸ್ಥಿತವಾಗಿ ಸಂಗೀತ ಕಲಿಯಲಿಲ್ಲ. ಹರಿಕಥೆ ಹೇಳುತ್ತಿದ್ದ ತಂದೆ ಎಸ್.ಪಿ.ಸಾಂಬಮೂರ್ತಿ ಯವರೇ ಅವರಿಗೆ ಪ್ರೇರಣೆ. ಹಾಡುವುದನ್ನು, ಹಾರ್ಮೋನಿಯಂ, ಕೊಳಲುಗಳನ್ನು ತಮ್ಮಷ್ಟಕ್ಕೆ ತಾವು ನುಡಿಸುತ್ತಾ ಸಂಗೀತದ ಪರ್ವತವೇ ಆದರು. ಮುಂದೆ ಮೇರು ಪ್ರಸಿದ್ಧಿ ಪಡೆದ ನಂತರದಲ್ಲಿ ವಿಧೇಯ ವಿದ್ಯಾರ್ಥಿಯಂತೆ ಶಾಸ್ತ್ರೀಯ ಸಂಗೀತವನ್ನೂ ಅಭ್ಯಾಸ ಮಾಡಿದರು.
1966 ರ ವರ್ಷದಲ್ಲಿ ಬಾಲು ಅವರು, ಘಂಟಸಾಲಾ ಮತ್ತು ಎಸ್.ಪಿ. ಕೋದಂಡಪಾಣಿ ತೀರ್ಪುಗಾರರಾಗಿದ್ದ ಸಂಗೀತ ಸ್ಪರ್ಧೆಯಲ್ಲಿ ವಿಜೇತರಾದರು. ಇಬ್ಬರಿಂದಲೂ ಅವರಿಗೆ ಮೆಚ್ಚುಗೆಯ ಸುರಿಮಳೆಯಾಯಿತು. ಕೋದಂಡಪಾಣಿಯವರು ತಮ್ಮ ತೆಲುಗು ಚಿತ್ರ ‘ಶ್ರೀ ಶ್ರೀ ಶ್ರೀ ಮರ್ಯಾದಾ ರಾಮಣ್ಣ’ದಲ್ಲಿ ಹಾಡಲು ಬಾಲೂಗೆ ಅವಕಾಶ ನೀಡಿದರು.
ಕೊರೊನಾ ಎಂಬ ಹೆಮ್ಮಾರಿಯ ಸೋಂಕಿಗೆ ತುತ್ತಾಗಿ ಆಸ್ಪತ್ರೆ ಸೇರಿದ್ದ ಎಸ್.ಪಿ. ಬಾಲಸುಬ್ರಣ್ಯಂ ಕೊನೆಗೂ ಕೊರೊನಾ ವಿರುದ್ದ ಗೆಲ್ಲಲಾಗದೇ ಹೋದರು. ದೇಶದ ಸಂಗೀತ ಪ್ರೇಮಿಗಳ ಪ್ರಾರ್ಥನೆ ದೇವರಿಗೆ ಕೇಳಿಸಲಿಲ್ಲವೇನೊ. ಆಂಧ್ರದಲ್ಲಿ ಹುಟ್ಟಿ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡು 40 ಸಾವಿರಕ್ಕೂ ಹೆಚ್ಚು ವಿವಿಧ ಬಾಷೆಯ ಹಾಡುಗಳನ್ನು ಹಾಡಿ ಲೆಕ್ಕವಿಲ್ಲದಷ್ಟು ಮಾನ ಸನ್ಮಾನಗಳು, ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು. ಎಸ್.ಪಿ.ಬಿ.
ಇಂದು ಮದ್ನಾಹ್ನ 1.04 ನಿಮಿಷಕ್ಕೆ ಚೆನೈನ ಎಂಜಿಎಂ ಆಸ್ಪತ್ರೆಯಲ್ಲಿ ಎಸ್.ಪಿ. ಬಾಲಸುಬ್ರಮಣ್ಯಂ ನಿಧನರಾದರೂ ಎಂಬ ಸುದ್ದಿಯನ್ನು ಮಗ ಚರಣ್ ಮಾದ್ಯಮಗಳಿಗೆ ತಿಳಿಸಿದರು. ಆಗಸ್ಟ್ 5 ರಂದು ಆಸ್ಪತ್ರೆ ಸೇರಿದ್ದ ಎಸ್.ಪಿ.ಬಿ ಯ ಆರೋಗ್ಯ ಮಾಹಿತಿಯನ್ನು ಎಫ್.ಬಿ. ಮೂಲಕ ಮಗ ಚರಣ್ ಅಭಿಮಾನಿಗಳಿಗೆ ತಿಳಿಸುತ್ತಿದ್ದರು.
ಸಮಸ್ತ ಕನ್ನಡಿಗರ ಪರವಾಗಿ ನಿಧನರಾದ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಮಣ್ಯಂ ರವರಿಗೆ ಭಾವಪೂರ್ಣ ಶ್ರದ್ದಾಂಜಲಿ. ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ.