ಚನ್ನಪಟ್ಟಣ :- ಬೇಂದ್ರೆಯವರು ಆಧುನಿಕ ಕನ್ನಡ ಕಾವ್ಯ ಪರಂಪರೆಯನ್ನು ನಿರ್ಮಿಸಿದ ರೂವಾರಿಗಳಲ್ಲಿ ಬಹುಮುಖ್ಯರು, ದೇಶೀಯ ಭಾಷೆಯನ್ನು ಬಳಿಸಿಕೊಂಡು ಕಾವ್ಯಗಳನ್ನು ರಚಿಸಿ ಶಬ್ದಗಾರುಡಿಗರಾದರು ಎಂದು ಮಕ್ಕಳ ವೈದ್ಯೆ,ಸಾಹಿತಿ ಡಾ. ರಾಜಶ್ರೀ ಅಭಿಪ್ರಾಯಪಟ್ಟರು.
ಪಟ್ಟಣದ ಅಂಚೆ ಕಚೇರಿ ರಸ್ತೆಯಲ್ಲಿರುವ ಡಾ.ರಾಜಶ್ರೀ ಮಕ್ಕಳ ಚಿಕಿತ್ಸಾಲಯದ ಆವರಣದಲ್ಲಿ ಡಾ.ನಾಗರಾಜ್ ಸಾಹಿತ್ಯ ವೇದಿಕೆ ಮತ್ತು ಅನಿಕೇತನ ಕನ್ನಡ ಸಾಂಸ್ಕೃತಿಕ ಬಳಗ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕನ್ನಡದ ವರ ಕವಿ ದ.ರಾ. ಬೇಂದ್ರೆ ಅವರ ಜನ್ಮದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಬೇಂದ್ರೆ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು . ಕನ್ನಡ ಕಾವ್ಯ ಲೋಕಕ್ಕೆ ವಿಶಿಷ್ಟ ಶೈಲಿ ಮತ್ತು ಲಯಗಳ ಮೂಲಕ ನಾದದ ಗುಂಗು ಹಿಡಿಸಿದ ಶಬ್ದ ಗಾರುಡಿಗರೆಂದೇ ಪ್ರಸಿದ್ಧರಾಗಿರುವ ಬೇಂದ್ರೆಯವರು ತಮ್ಮ ಕಾವ್ಯ ಶಕ್ತಿಯಿಂದ ಉತ್ಸಾಹದ ಚಿಲುಮೆಯನ್ನು ಚಿಮ್ಮಿಸಿದ್ದಾರೆ , ನೊಂದ ಜೀವಗಳಿಗೆ ಸಾಂತ್ವನ ನೀಡಿ ಪ್ರೀತಿ ,ಪ್ರೇಮ ಮೂಡಿಸಿ ಸಾಹಿತ್ಯ ಲೋಕವನ್ನು ಶ್ರೀಮಂತ ಗೊಳಿಸಿದ್ದಾರೆ, ಸಂಕೇತ ರೂಪದಲ್ಲಿ ಕಾವ್ಯ ರಚಿಸಿದ ಶ್ರೇಯಸ್ಸು ಬೇಂದ್ರ ಅವರಿಗೆ ಸಲ್ಲುತ್ತದೆ ಎಂದರು .
ಬಾಲಕಿಯರ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಶೈಲಜಾ ಶಿವಾನಂದ್ ಮಾತನಾಡಿ ಬೇಂದ್ರೆಯವರ ಸಾಹಿತ್ಯ ಕೃತಿಗಳಲ್ಲಿ ಸ್ತ್ರೀ ಸಂವೇದನೆ, ನೋವು ನಲಿವುಗಳ ಗಟ್ಟಿಹೂರಣವಿದೆ. ತಮ್ಮ ಬದುಕಿನುದ್ದಕ್ಕೂ ಅನುಭವಿಸಿಕೊಂಡು ಬಂದ ವಿವಿಧ ಆಯಾಮಗಳೇ ಸಾಹಿತ್ಯವಾಗಿ ನಂತರ ಅದು ಸಾರ್ವತ್ರಿಕವಾದ ಸಾಹಿತ್ಯವಾಗಿ ಹೊರಹೊಮ್ಮಿತು. ದ.ರಾ.ಬೇಂದ್ರೆಯವರ ಬದುಕಿನ ಏರಿಳಿತಗಳ ಮೂಲಕ ಬರುವ ಸಂದೇಶಗಳು ಇಂದಿನ ಯುವಪೀಳಿಗೆಗೆ ಮಾದರಿಯಾಗಬೇಕು.ಅವರ ಸಾಹಿತ್ಯ ಕೃತಿಗಳನ್ನು ಗಂಭೀರವಾಗಿ ಅಧ್ಯಯನ ಮಾಡಿ, ಬದುಕಿಗೆ ಪ್ರೇರಣೆ ಪಡೆಯುವಷ್ಟರ ಮಟ್ಟಿಗೆ ಒಂದು ವಿಶ್ವವಿದ್ಯಾಲಯದಂತೆ ಬೇಂದ್ರೆಯವರ ಜೀವನ ಮತ್ತು ಸಾಹಿತ್ಯ ನಮ್ಮ ಮುಂದಿದೆ ಎಂದು ತಿಳಿಸಿದರು.
ಅನಿಕೇತನ ಕನ್ನಡ ಸಾಂಸ್ಕೃತಿಕ ಬಳಗದ ಅಧ್ಯಕ್ಷ ಯೋಗೇಶ್ ಚೆಕ್ಕೆರೆ ಮಾತನಾಡಿ ಬೇಂದ್ರೆಯವರು ಕನ್ನಡ ಸರಸ್ವತ ಲೋಕದ ಮಿನುಗುತಾರೆಯಾಗಿದ್ದು ,ಕಷ್ಟಗಳ ಕುಲುಮೆಯಲ್ಲಿ ಅರಳಿನಿಂತ ಅಪೂರ್ವ ಪ್ರತಿಭೆಯಾಗಿದ್ದರು ,ಪ್ರಕೃತಿ, ಆಧ್ಯಾತ್ಮ , ಸ್ತ್ರೀಸಂಕಟಗಳು ಸೇರಿ ಹಲವು ವಿಷಯಗಳ ಕುರಿತು ಕಾವ್ಯರಚನೆ ಮಾಡಿ ಗಮನ ಸೆಳೆದಿದ್ದಾರೆ. ಅವರಲ್ಲಿನ ಕಾವ್ಯ ಪ್ರತಿಭೆಗೆ ಅವರೇ ಸಾಟಿ,ಕನ್ನಡ ಸರಸ್ವತ ಲೋಕಕ್ಕೆ ಬೇಂದ್ರೆಯವರು ನಿರೀಕ್ಷೆಗೂ ಮೀರಿ ಕೊಡುಗೆ ಕೊಟ್ಟಿದ್ದಾರೆ ಎಂದು ವಿವರಿಸಿದರು.
ಶುಭೋದಯ ಸಾಂಸ್ಕೃತಿಕ ಬಳಗದ ಅಧ್ಯಕ್ಷ ಎಂ . ಶಿವಮಾದು ಮಾತನಾಡಿ ಬೇಂದ್ರೆಯವರ ಮಾತೃಭಾಷೆ ಮರಾಠಿಯಾದರೂ ಕನ್ನಡ ಸಾಹಿತ್ಯಕ್ಕೆ ನಿರೀಕ್ಷೆಗೂ ಮೀರಿದ ಕೊಡುಗೆ ನೀಡಿ ಗಮನ ಸೆಳೆದಿದ್ದಾರೆ. ಅವರ ಸಾಹಿತ್ಯ ಕೃತಿಗಳು ಜನಸಾಮಾನ್ಯರಿಗೆ ಹತ್ತಿರವಾಗಿದ್ದು, ಅವರ ವ್ಯಕ್ತಿತ್ವದಂತೆಯೇ ಭಾಷೆಯೂ ಸರಳವಾಗಿದೆ, ದೇಸಿಯ ಭಾಷೆಯಲ್ಲಿ ಕಾವ್ಯದ ರಸ ನೀಡಿದ ನವೋದಯ ಕಾವ್ಯದ ವರಕವಿ ಎನಿಸಿದ್ದಾರೆ ಎಂದು ಬಣ್ಣಿಸಿದರು.
ಸದೃಢ ದೇಶ ನಿರ್ಮಾಣಕ್ಕೆ ವಿವೇಕಾನಂದರ ತತ್ವಾದರ್ಶ ಅಳವಡಿಸಿಕೊಳ್ಳಿ :- ಯೋಗೇಶ್ ಚಕ್ಕೆರೆ
ಭಾರತ ವಿಕಾಸ ಪರಿಷತ್ ಅಧ್ಯಕ್ಷ ವಸಂತಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು ,ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಗುರುಮಾದಯ್ಯ , ಭಾ.ವಿ.ಪ ಕಾರ್ಯದರ್ಶಿ ಕಾಡಯ್ಯ ,ಶಿಕ್ಷಕರಾದ ಕರಿಯಪ್ಪ, ದೇವರಾಜು, ಟಿ. ಚನ್ನಪ್ಪ , ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಬೆಟ್ಟಯ್ಯ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ಚಂದ್ರಿಕಾ ,ಪುಟ್ಟಸ್ವಾಮಿಗೌಡ (ಡಿಪಿಎಸ್) ಬೇಂದ್ರೆ ರಚಿತ ಗೀತೆಗಳ ಗಾಯನ ನಡೆಸಿಕೊಟ್ಟರು .