ಆಧುನಿಕ ಯುಗದಲ್ಲಿ ಪ್ರತಿಯೊಬ್ಬರೂ ಯಶಸ್ಸನ್ನು ಬೆನ್ನಟ್ಟಿ ಓಡುತ್ತಿರುವವರೇ ಹೆಚ್ಚು. ಆದರೆ ಯಶಸ್ಸೆಂಬುದು ಅಷ್ಟು ಸುಲಭವಾಗಿ ಸಿಗುವ ವಸ್ತುವಲ್ಲ, ಅದು ಮಾಯ ಜಿಂಕೆ ಎಂದರೆ ತಪ್ಪಾಗಲಾರದು. ಯಶಸ್ಸು ಎಂಬುದನ್ನು ಹೀಗೆ ಎಂದೂ ವಿವರಿಸಲು ಸಾಧ್ಯವಿಲ್ಲ! ಪ್ರತಿಯೊಬ್ಬರು ಒಂದೊಂದು ರೀತಿಯ ಯಶಸ್ಸನ್ನು ಬೆನ್ನಟ್ಟಿರುತ್ತಾರೆ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಮೊದಲು ಬರುವುದೇ ಯಶಸ್ಸು, ವ್ಯಾಪಾರಿಗೆ ತನ್ನ ವ್ಯಾಪಾರದಲ್ಲಿ ಅಪಾರ ಲಾಭ ಗಳಿಸುವುದೇ ಯಶಸ್ಸು, ಕ್ರೀಡಾ ಪಟುವಿಗೆ ತನ್ನ ಕ್ರೀಡೆಯಲ್ಲಿ ಮೊದಲಿಗನಾಗುವುದೇ ಯಶಸ್ಸು, ಈ ರೀತಿ ತಮ್ಮ ತಮ್ಮ ಪರಿಮಿತಿಯಲ್ಲಿ ಯಶಸ್ಸನ್ನು ವ್ಯಾಖ್ಯಾನಿಸಿಕೊಂಡಿರುತ್ತಾರೆ.
ಯಾವುದೇ ಕ್ಷೇತ್ರವಿರಲಿ ಯಶಸ್ಸನ್ನು ಪಡೆಯಬೇಕೆಂದರೆ ಮೊದಲು ಗುರಿಯನ್ನು ನಿರ್ಧರಿಸಿಕೊಳ್ಳಬೇಕು ನಂತರ ಗುರಿಯಡೆಗೆ ಸಾಗಲು ಪ್ರಾಮಾಣಿಕವಾಗಿ ಪ್ರಯತ್ನಮಾಡಬೇಕು. ಎಷ್ಟೋ ಜನರು ತಮ್ಮ ಯಶಸ್ಸನ್ನು ಪಡೆಯಲು ಹೊರಟು ಅರ್ಧದಾರಿಯಲ್ಲೇ ಸೋಲನ್ನು ಕಂಡು ಹಿಂದಿರುಗಿ ಬಂದು ಬಿಡುತ್ತಾರೆ. ಆದರೆ ಯಶಸ್ಸೆಂಬ ಮಾಯ ಜಿಂಕೆ ಸುಮ್ಮನೆ ಕೂತವನ ಬಳಿ ಎಂದೂ ಬರುವುದಿಲ್ಲ. ಒಂದು ಸಣ್ಣ ಯಶಸ್ಸು ಕೂಡ ದೊಡ್ಡ ಮಟ್ಟದ ಶ್ರಮವನ್ನು ಬೇಡುತ್ತದೆ. ಆಗಾಗಿ ಯಶಸ್ಸನ್ನು ಪಡೆಯಬೇಕೆಂದರೆ ಕಟ್ಟುನಿಟ್ಟಾಗಿ ಶ್ರದ್ದಾ ಭಕ್ತಿಯಿಂದ ಪ್ರಯತ್ನ ಮಾಡಲೇಬೇಕು.
ಬಾಲಿವುಡ್ ನ ಖ್ಯಾತ ನಟ ದೇವಾನಂದ್ ಒಮ್ಮೆ ಪತ್ರಿಕೆ ಸಂದರ್ಶನದಲ್ಲಿ ಹೇಳಿದ ಮಾತು ನೆನಪಾಗುತ್ತಿದೆ. “ಏನು ಮಾಡಿದರು ಮನಸ್ಸಿಟ್ಟು ಮಾಡು ಅದೇ ನಿನ್ನ ಯಶಸ್ಸಿನ ಮೊದಲ ಮೆಟ್ಟಿಲು” ಅಂತ ತುಂಬಾ ಸರಳವಾಗಿ ಹೇಳಿದ್ದರು. ಈ ಮಾತನ್ನು ಪ್ರತಿಯೊಬ್ಬರೂ ಪಾಲಿಸಿದರೆ ಯಶಸ್ಸು ಸಿಗುವುದರಲ್ಲಿ ಎರಡು ಮಾತಿಲ್ಲ! ಕೆಲವರೂ ಒತ್ತಡದ ದಾವಂತದ ಬದುಕಿನಲ್ಲಿ ಏಕಾಗ್ರತೆ ಇಲ್ಲದೆ ದುಡಿಯುತ್ತಿದ್ದಾರೆ. ಸ್ಪಷ್ಟ ಗುರಿ ನಿರ್ಧರಿಸದೆ ಬರೀ ದುಡಿಯುತ್ತಾ ಬದುಕನ್ನು ಸವೆಸುತ್ತಿದ್ದರೆ ಯಾವ ಯಶಸ್ಸು ನಿಮಗೆ ದೊರೆಯುವುದಿಲ್ಲ. ಬದುಕಿಗೆ ಒಂದು ಸ್ಪಷ್ಟವಾದ ಗುರಿ ನಿರ್ಧರಿಸಿಕೊಳ್ಳಿ ಆ ಗುರಿಯೆಡೆಗೆ ಸತತ ಪ್ರಾಮಾಣಿಕ ಪ್ರಯತ್ನದೊಂದಿಗೆ ಸಾಗಿ ಆಗ ಯಶಸ್ಸು ನಿಮಗೆ ಒಲಿಯುತ್ತದೆ.