ಕುಂದಾನಗರಿ ಬೆಳಗಾವಿ ಜಿಲ್ಲೆ ಸಹ ಸಾಕಷ್ಟು ಪ್ರವಾಸಿ ತಾಣಗಳಿವೆ. ಮಹಾರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡಿರುವ ಜಿಲ್ಲೆಯಲ್ಲಿನ ತಾಣಗಳನ್ನ ನೋಡಲು ಅಪಾರ ಸಂಖ್ಯೆಯ ಜನರು ಬರುತ್ತಾರೆ. ಅದರಲ್ಲೂ ಗೋಕಾಕ ಫಾಲ್ಸ್ ನೋಡಲು ವರ್ಷಕ್ಕೆ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ. ಗೋಕಾಕ ಫಾಲ್ಸ್ ಜಿಲ್ಲೆಯ ಅತ್ಯಂತ ಪ್ರಮುಖ ಪ್ರೇಕ್ಷಣಿಯ ಸ್ಥಳವಾಗಿದೆ.
ಬೆಳಗಾವಿಯಿಂದ 60 ಕಿಲೋ ಮೀಟರ್, ಗೋಕಾಕ ನಗರದಿಂದ ಕೇವಲ 10 ಕಿಲೋ ಮೀಟರ್ ದೂರದಲ್ಲಿದೆ. ಈ ಫಾಲ್ಸ್ ಮುಖ್ಯ ರಸ್ತೆಯಲ್ಲಿ ಇರೋದ್ರಿಂದ ಇಲ್ಲಿಗೆ ತಲುಪಲು ಸಾಕಷ್ಟು ಅವಕಾಶಗಳಿವೆ. ಮೈತುಂಬಿಕೊಂಡು ಹರಿಯುವ ಫಾಲ್ಸ್ ನೋಡಲು ಎರಡು ಕಣ್ಣುಗಳು ಸಾಲದು. ಜಿಲ್ಲೆಯ ಪ್ರವಾಸಿ ಕೇಂದ್ರವಾಗಿರುವ ಗೋಕಾಕ ಫಾಲ್ಸ್ ಬರೋಬ್ಬರಿ 170 ಅಡಿ ಎತ್ತರದಿಂದ ಧುಮ್ಮಿಕ್ಕುತ್ತದೆ.
ಇನ್ನು ಘಟಪ್ರಭಾ ನದಿಯಿಂದ 52 ಕಿಲೋ ಮೀಟರ್ ನಷ್ಟು ಹರಿದು ಬರುವ ನೀರ, 170 ಅಡಿ ಕೆಳಗೆ ಧುಮುಕುತ್ತದೆ. ಹೀಗೆ ಹರಿದು ಬರುವ ನೀರನ್ನ ನೋಡುವುದೇ ಒಂದು ಸೊಬಗು. ಪ್ರಕೃತಿಯ ತಪ್ಪಲಿನಲ್ಲಿ ತನ್ನದೆಯಾದ ಹೊಸ ಜಗತ್ತನ್ನು ಸೃಷ್ಟಿಸಿದೆ. ಜೂನ್ ಮತ್ತು ಸೆಪ್ಟಂಬರ್ ನಲ್ಲಿ ಜಲಪಾತ ತುಂಬಿ ಹರಿಯುವುದರಿಂದ ಸುತ್ತಾಲಿನ ಜಿಲ್ಲೆಯ ಜೊತೆಗೆ ಹೊರ ರಾಜ್ಯಗಳಿಂದಲೂ ಪ್ರವಾಸಿರು ಗೋಕಾಕ ಫಾಲ್ಸ್ ನೋಡಲು ಬರುತ್ತಾರೆ.
ಇನ್ನು ಜಲಪಾತದ ಹಿಂದೆ ಇನ್ನೊಂದು ಇತಿಹಾಸವಿದೆ. ದೇಶದಲ್ಲಿಯೇ ಪ್ರಪ್ರಥಮಬಾರಿಗೆ ಈ ಜಲಪಾತದಲ್ಲಿ ಮಿದ್ಯುತ್ ಉತ್ಪಾದನೆ ಮಾಡಲಾಯಿತು. ಸುಮಾರು 1887ರಲ್ಲಿಯೇ ಇಲ್ಲಿ ವಿದ್ಯುತ್ ತಯಾರಿಸಲಾಗಿದೆ ಅನ್ನೋದು ಸಂತಸದ ಸಂಗತಿ.