ರಾಮನಗರ:ಸಂಘ-ಸಂಸ್ಥೆಗಳು ಆಯೋಜಿಸುವ ಆರೋಗ್ಯ ಶಿಬಿರಗಳಲ್ಲಿ ಗ್ರಾಮೀಣ ಭಾಗದ ಜನರು ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ತಮ್ಮ ಆರೋಗ್ಯವನ್ನು ನಿಯಮಿತವಾಗಿ ತಪಾಸಣೆ ಮಾಡಿಕೊಳ್ಳಬೇಕು ಎಂದು ಲಕ್ಷ್ಮೀಪುರ ಗ್ರಾಪಂ ಅಧ್ಯಕ್ಷೆ ಸರಿತಾ ಶ್ರೀಧರ್ ಕಿವಿಮಾತು ಹೇಳಿದರು.
ರಾಮನಗರ ರೋಟರಿ ಸಿಲ್ಕ್ ಸಿಟಿ, ಬೆಂಗಳೂರಿನ ಪೀಪಲ್ ಟ್ರೀ ಆಸ್ಪತ್ರೆ ಹಾಗೂ ಲಕ್ಷ್ಮೀಪುರ ಗ್ರಾಮ ಪಂಚಾಯತಿ ಸಂಯುಕ್ತಾಶ್ರಯದಲ್ಲಿ ಲಕ್ಷ್ಮೀಪುರ ಸರ್ಕಾರಿ ಆರೋಗ್ಯ ಕೇಂದ್ರದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರ ಹಾಗೂ ಔಷಧ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮನುಷ್ಯ ಎಷ್ಟೇ ಸಂಪಾದನೆ ಮಾಡಿದರೂ ಆರೋಗ್ಯ ಭಾಗ್ಯದ ಮುಂದೆ ಅದೆಲ್ಲವೂ ಶೂನ್ಯ ಎನಿಸಿಕೊಳ್ಳುತ್ತದೆ. ಈ ದಿಕ್ಕಿನಲ್ಲಿ ಸರ್ವರೂ ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ಕೆಎಂಎಫ್ ಸಹಾಯಕ ನಿರ್ದೇಶಕ, ರೋಟರಿ ಸಿಲ್ಕ್ ಸಿಟಿ ಪದಾಧಿಕಾರಿ ಜೆ.ನವೀನ್ ಅವರು ನಿರೂಪಣೆ ಜೊತೆಗೆ ಪ್ರಾಸ್ತಾವಿಕವಾಗಿ ಮಾತನಾಡಿ, ರೋಟರಿ ಸಿಲ್ಕ್ ಸಿಟಿಯು ಸಮಾಜ ಸೇವೆ ಮತ್ತು ಜನಪರ ಕಾಳಜಿಯನ್ನು ಮುಖ್ಯ ಗುರಿಯಾಗಿಟ್ಟುಕೊಂಡು ಸೇವೆ ಸಲ್ಲಿಸುತ್ತಿದೆ ಎಂದರು. ವಿಶೇಷವಾಗಿ ಗ್ರಾಮೀಣ ಭಾಗದ ಜನತೆಯ ಆರೋಗ್ಯದ ದೃಷ್ಟಿಯಿಂದ ರೋಟರಿ ಸಿಲ್ಕ್ ಸಿಟಿಯು ಅನೇಕ ಆಸ್ಪತ್ರೆ ಹಾಗೂ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಇಂತಹ ಅನೇಕ ಆರೋಗ್ಯ ಶಿಬಿರಗಳನ್ನು ಏರ್ಪಡಿಸುತ್ತಿರುತ್ತದೆ ಇದನ್ನು ಜನತೆ ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರಾಮನಗರ ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ರೊ.ಸೋಮಶೇಖರ್ ರಾವ್ ಮಾತನಾಡಿದರು.
ರೊ.ಕುಮಾರ್ ಸ್ವಾಗತಿಸಿದರು.
ಬೆಳಗ್ಗೆ ಹತ್ತು ಗಂಟೆಯಿಂದ ಮಧ್ಯಾಹ್ನದವರೆಗೂ ಆರೋಗ್ಯ ಶಿಬಿರದಲ್ಲಿ ಐವತ್ತಕ್ಕೂ ಹೆಚ್ಚು ಮಂದಿ ಭಾಗವಹಿಸಿ ನುರಿತ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಯಿಂದ ತಪಾಸಣೆ ಮಾಡಿಸಿಕೊಂಡು ಉಚಿತವಾಗಿ ಔಷಧವನ್ನೂ ಪಡೆದುಕೊಂಡರು.
ಲಕ್ಷ್ಮೀಪುರ ಗ್ರಾಪಂ ಸದಸ್ಯರೂ ಆದ ರೊ.ಟಿ.ನಾಗೇಶ್ ಅವರು ಅರೋಗ್ಯ ಶಿಬಿರದ ವ್ಯವಸ್ಥಾಪನೆ ಮಾಡಿದ್ದರು.
ಗ್ರಾಪಂ ಉಪಾಧ್ಯಕ್ಷ ತಿರುಮಳಯ್ಯ, ಸದಸ್ಯರಾದ ಜಯಮ್ಮ, ಶಿಲ್ಪಾ, ಅಶ್ವಿನಿ, ದೀಪಿಕಾ, ಅಪ್ಪಾಜಿಗೌಡ, ನಾಗರಾಜು, ರಾಮನಗರ ರೋಟರಿ ಸಿಲ್ಕ್ ಸಿಟಿ ಕಾರ್ಯದರ್ಶಿ ಚಂದ್ರಪ್ಪ,
ಪದಾಧಿಕಾರಿಗಳಾದ ರವಿಕುಮಾರ್, ಪರಮೇಶ್, ದೀಪಕ್, ಶಿವರಾಜ್, ಲತಾ ಗೋಪಾಲ್,ಪುರುಷೋತ್ತಮ್, ಗುರುರಾಜ್, ಪೀಪಲ್ ಟ್ರೀ ಆಸ್ಪತ್ರೆಯ ಡಾ.ನಿಖಿಲ್, ಡಾ.ರಮೇಶ್, ಡಾ.ಮುದಾಪೀರ್, ವೈದ್ಯಕೀಯ ಸಿಬ್ಬಂದಿ ಸೀಮಾ, ಪ್ರಿಯಾಂಕ, ದಿವ್ಯ, ಗಂಗಶ್ರೀ, ಸ್ಥಳೀಯ ಮುಖಂಡರಾದ ಶ್ರೀಧರ್, ವೀರಭದ್ರಯ್ಯ, ಗುಂಡಣ್ಣ, ಅಂಗಡಿ ಕುಮಾರ್, ಲಕ್ಷ್ಮೀಪುರ ಸರ್ಕಾರಿ ಪ್ರಾಥಮಿಕ ಶಾಲೆ ಎಸ್ ಡಿಎಂಸಿ ಅಧ್ಯಕ್ಷ ನಟರಾಜು ಮತ್ತಿತರರು ಉಪಸ್ಥಿತರಿದ್ದರು.