ರಾಮನಗರ ಮಾ. ೧೧ (ಕರ್ನಾಟಕ ವಾರ್ತೆ):- ಚನ್ನಪಟ್ಟಣ ತಾಲ್ಲೂಕಿನ ವಿರೂಪಾಕ್ಷಿಪುರ ಹೋಬಳಿಯ ಇಗ್ಗಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆ ಯಶಸ್ವಿಯಾಗಿದೆ.
ನಿರಂತರವಾಗಿ ಕಳೆದ ೧೫ ದಿನಗಳಿಂದ ನೀಡಿದ ಪ್ರಚಾರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಅಲ್ಲದೆ ೭೬ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಅವುಗಳನ್ನು ನಿಯಮಾನುಸಾರ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನ ಅವರು ತಿಳಿಸಿದರು.
ಇಂದಿನ ಜನಸಂಪರ್ಕ ಸಭೆಯಲ್ಲಿ ಬಂದ ಹೆಚ್ಚಿನ ಅರ್ಜಿಗಳ ಪೈಕಿ ಖಾತೆ ಬದಲಾವಣೆ, ತಿದ್ದುಪಡಿಗೆ ಸಂಬಂಧಿಸಿದ್ದವು ಹಾಗೆಯೇ, ವಿವಿಧ ರೀತಿಯ ಪಿಂಚಣಿ, ಸರ್ಕಾರಿ ಸ್ವತ್ತಿನ ಒತ್ತುವರಿ, ಕೆರೆ-ಕಟ್ಟೆ ಒತ್ತುವರಿ ತೆರವಿಗೆ ಆಗ್ರಹಿಸಿ ಸಲ್ಲಿಸಿದ ಅರ್ಜಿಗಳಾಗಿವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.ಸರ್ಕಾರಿ ಜಮೀನಿನ ಒತ್ತುವರಿ ಹಾಗೂ ರಸ್ತೆ, ಕರೆ-ಕಟ್ಟೆ ಮತ್ತು ಗೋಮಾಳಗಳ ಒತ್ತುವರಿ ಬಗ್ಗೆ ಬಂದಿರುವ ಆಕ್ಷೇಪಣೆಗಳಿಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಜಿಲ್ಲಾಧಿಕಾರಿಗಳು ದೂರು ಬಂದಿರುವ ಸ್ಥಳ/ ಜಾಗಗಳ ಸರ್ವೆ ನಡೆಸಿ ನಿಯಮಾನುಸಾರ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಕಂದಾಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಕಾನೂನು ಪರಿಮಿತಿಯಲ್ಲಿ ಪರಿಶೀಲಿಸಿ ತ್ವರಿತವಾಗಿ ವಿಲೇವಾರಿ ಮಾಡಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಇಕ್ರಂ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಉಮೇಶ್, ಉಪವಿಭಾಗಾಧಿಕಾರಿ ದ್ರಾಕ್ಷಾಯಿಣಿ, ಚನ್ನಪಟ್ಟಣ ತಹಶೀಲ್ದಾರ್ ಸುದರ್ಶನ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.