ನಮ್ಮ ರಾಮನಗರ : ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಚಿಕ್ಕನದೊಡ್ಡಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಆಡಳಿತ ಮಂಡಳಿಯು ಮುಖ್ಯ ಕಾರ್ಯನಿರ್ವಾಹಕರ ವಿಚಾರದಲ್ಲಿ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಚನ್ನಪಟ್ಟಣ ತಾಲ್ಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಹಾಗೂ ತಾಲ್ಲೂಕಿನ ಎಲ್ಲಾ ಎಂಪಿಸಿಎಸ್ ಕಾರ್ಯದರ್ಶಿಗಳು ರಾಮನಗರ ಉಪ ವಿಭಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕ ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಿದರು.
ನಗರದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಎದುರು ಮಂಗಳವಾರ ಜಮಾವಣೆಗೊಂಡು ಘೋಷಣೆಗಳನ್ನು ಕೂಗಿ, ಪ್ರತಿಭಟನೆ ನಡೆಸಿದ ಕಾರ್ಯದರ್ಶಿಗಳು, ಆನಂತರ ಕೋರ್ಟ್ ಆದೇಶವನ್ನು ಲೆಕ್ಕಿಸದೆ, ದೌರ್ಜನ್ಯ ನಡೆಸುತ್ತಿರುವ ಚಿಕ್ಕನದೊಡ್ಡಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಆಡಳಿತ ಮಂಡಳಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒಕ್ಕೊರಲಾಗಿ ಆಗ್ರಹಿಸಿದರು.
ಸಂಘದ ಅಧ್ಯಕ್ಷ ಎಚ್.ಆರ್.ಪುಟ್ಟೇಗೌಡ ಮಾತನಾಡಿ, ಚಿಕ್ಕನದೊಡ್ಡಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ ಪ್ರಾಮಾಣಿಕವಾಗಿ ಮುಖ್ಯ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿರುವ ಶಿವಲಿಂಗಮ್ಮ (ಬೇಬಿ) ಅವರನ್ನು ಯಾವುದೇ ಮಾಹಿತಿ ಅಥವಾ ನೋಟಿಸ್ ಜಾರಿ ಮಾಡದೆ, ಈಗಿನ ಆಡಳಿತ ಮುಂಡಳಿಯು ತುರ್ತು ಸಭೆ ಸೇರಿ ಕಳೆದ ಆಗಸ್ಟ್ 19ರಂದು ಅಮಾನತು ಮಾಡಿರುತ್ತಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಘನ ನ್ಯಾಯಾಲಯವು ಇದೇ ಅಕ್ಬೋಬರ್ 12 ರಂದು ತಡೆಯಾಜ್ಞೆ ನೀಡಿರುತ್ತದೆ. ಆದರೆ, ನ್ಯಾಯಾಲಯದ ಆದೇಶವನ್ನೇ ಗಾಳಿಗೆ ತೂರಿರುವ ಸಂಘದ ಆಡಳಿತ ಮಂಡಳಿಯು ಮುಖ್ಯ ಕಾರ್ಯ ನಿರ್ವಾಹಕರಿಗೆ ಸಂಘದ ಜವಾಬ್ದಾರಿಯನ್ನು ವಹಿಸಿರುವುದಿಲ್ಲ ಎಂದು ಆರೋಪಿಸಿದರು.
ಪ್ರಗತಿಪರ ಕೃಷಿಕ ತ್ಯಾಗರಾಜು ತೋಟದಲ್ಲಿ ಮಾವು ಪುನಶ್ಚೇತನ ತರಬೇತಿ, ತಾಂತ್ರಿಕ ಪ್ರಾತ್ಯಕ್ಷಿಕೆ
ಸಂಘದ ಉಪಾಧ್ಯಕ್ಷೆ ಕೆ.ಟಿ.ಲಕ್ಷ್ಮಮ್ಮ ಮಾತನಾಡಿ, ಚಿಕ್ಕನದೊಡ್ಡಿ ಮಹಿಳಾ ಸಹಕಾರ ಸಂಘದ ಆಡಳಿತದಲ್ಲಿ ಕೆಲವು ಗಂಡಸರು ಹಸ್ತಕ್ಷೇಪ ಮಾಡುತ್ತಿದ್ದು, ತಮಗೆ ಬಂದಂತೆ ಅವ್ಯವಹಾರ ನಡೆಸುತ್ತಿದ್ದಾರೆ. ಇದರಿಂದ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ನಿಯಮವನ್ನು ಗಾಳಿಗೆ ತೂರಿದಂತಾಗಿದೆ. ಈ ವಿಚಾರ ಚನ್ನಪಟ್ಟಣ ಬಮೂಲ್ ಶಿಬಿರ ಕಚೇರಿಗೆ ಗೊತ್ತಿದ್ದರೂ ಜಾಣ ಮೌನ ವಹಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿವಲಿಂಗಮ್ಮ (ಬೇಬಿ) ಅವರು ಸಂಘದ ಕಾರ್ಯದರ್ಶಿಯಾಗುವ ಮುನ್ನ ಅಧ್ಯಕ್ಷರಾಗಿದ್ದವರು. ಅವರ ಅವಧಿಯಲ್ಲಿ ಕಾರ್ಯದರ್ಶಿಯಾಗಿದ್ದ ಪ್ರತಿಭಾ ಶಿವಕುಮಾರ್ ಎಂಬುವವರು ಸಂಘದ ಹಣ ದುರುಪಯೋಗ ಮಾಡಿಕೊಂಡು ಸದಸ್ಯರಿಗೆ 5 ಬಿಲ್ಲುಗಳ ಮೊತ್ತ 3 ಲಕ್ಷ ರೂಪಾಯಿಗಳನ್ನು ಪಾವತಿ ಮಾಡಿರಲಿಲ್ಲ. ಈ ದಿಕ್ಕಿನಲ್ಲಿ ಸಂಘದ ಸದಸ್ಯರು ಹಾಗೂ ಹಾಲು ಉತ್ಪಾದಕರ ಹಿತದೃಷ್ಟಿಯಿಂದ ಶಿವಲಿಂಗಮ್ಮ (ಬೇಬಿ) ಅವರು ಸಂಘದ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡು, ಎರಡು ವರ್ಷಗಳು ಸಂಬಳವನ್ನು ಸಹ ಪಡೆಯದೇ ಪರಿಶ್ರಮವಹಿಸಿ ಸಂಘದ ಸದಸ್ಯರಿಗೆ ಹಣವನ್ನು ಪಾವತಿಸಿರುತ್ತಾರೆ. ಆ ಸಂದರ್ಭದಲ್ಲಿ ಕಾರ್ಯದರ್ಶಿಯವರು ಮುಂಗಡ ಹಣ ಪಾವತಿಸಿ ಸ್ವಂತ ಹಣದಲ್ಲಿ ಪಶು ಆಹಾರ ಒದಗಿಸಿರುತ್ತಾರೆ. ಆದರೆ, ಅಂದಿನ ಕಾರ್ಯಕಾರಿ ಮಂಡಳಿ, ಈಗಿನ ಕಾರ್ಯದರ್ಶಿಯವರು ಉತ್ಪಾದಕರಿಗೆ ನೀಡಿರುವ ಹಳೆಯ ಬಾಕಿ ಹಣವನ್ನು ಕಾರ್ಯದರ್ಶಿ ಹೆಸರಿನಲ್ಲಿ ಠೇವಣಿಯನ್ನಾಗಿ ಪರಿವರ್ತಿಸಿರುವುದಿಲ್ಲ ಎಂದು ಲಕ್ಷ್ಮಮ್ಮ ದೂರಿದರು.
ರೋಗ ನಿರೋಧಕ ಶಕ್ತಿ ಹೆಚ್ಚಿಸುವ ನಂದಿನಿ ವಿವಿಧ ಆಯುರ್ವೇದಿಕ್ ಹಾಲು ಬಿಡುಗಡೆ
ಪ್ರಧಾನ ಕಾರ್ಯದರ್ಶಿ ಪುಟ್ಟರಾಜು ಮಾತನಾಡಿ, ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಲಿಂಗಮ್ಮ (ಬೇಬಿ) ಅವರು ಹಣ ದುರುಪಯೋಗದ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಿಂದಿನ ಕಾರ್ಯದರ್ಶಿ ಪ್ರತಿಭಾ ಶಿವಕುಮಾರ್ ಅವರ ಮೇಲೆ ಕ್ರಮ ಕೈಗೊಳ್ಳಿ ಎಂದು ಹಲವಾರು ಬಾರಿ ಆಡಳಿತ ಮಂಡಳಿ ಸಭೆಗಳಲ್ಲಿ ಒತ್ತಾಯಿಸಿದ್ದರು. ಆದರೆ ಈಗಿನ ಆಡಳಿತ ಮಂಡಳಿಯವರು ಮಾಜಿ ಕಾರ್ಯದರ್ಶಿ ಅವರ ಪುತ್ರರ ಜೊತೆ ಸೇರಿ ಚಿತಾವಣೆ ನಡೆಸಿ ಶಿವಲಿಂಗಮ್ಮ ಅವರಿಗೆ ತೊಂದರೆ ನೀಡುತ್ತಿರುತ್ತಾರೆ ಎಂದು ಆರೋಪಿಸಿದರು.
ನ್ಯಾಯಲಯದ ಆದೇಶವನ್ನು ಧಿಕ್ಕರಿಸಿ ಸರ್ವಾಧಿಕಾರಿ ಧೋರಣೆಯಿಂದ ಆಡಳಿತ ನಡೆಸುತ್ತಿರುವವರ ವಿರುದ್ಧ ಈ ಕೂಡಲೇ ತಾವು ತುರ್ತು ಕ್ರಮ ಕೈಗೊಂಡು ಆಡಳಿತ ಮಂಡಳಿಯ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಂಡು ಆಡಳಿತ ಮಂಡಳಿಯನ್ನು ವಜಾಗೊಳಿಸಿ ವಿಶೇಷಾಧಿಕಾರಿಯವರನ್ನು ನೇಮಿಸಿಬೇಕು ಎಂದು ಒತ್ತಾಯಿಸಿದರು.
ಸಂಘದ ನಿರ್ದೇಶಕ ಜಿ.ಎಂ.ಶಿವಕುಮಾರ್ ಮಾತನಾಡಿ, ರಾಜ್ಯದಲ್ಲಿ ಎಲ್ಲಿಯೂ ನಡೆಯದ ರಾಜಕೀಯ ಹಾಗೂ ಕಿರುಕುಳ ಚನ್ನಪಟ್ಟಣ ತಾಲ್ಲೂಕಿನಲ್ಲಿ ನಡೆಯುತ್ತಿದ್ದು, ಬಮೂಲ್ ಅಧಿಕಾರಿಗಳು,ಎಂಪಿಸಿಎಸ್ ಸಂಘದ ಕಾರ್ಯದರ್ಶಿಗಳನ್ನು ಜೀತದ ಆಳುಗಳಂತೆ ನೋಡುತ್ತಿದ್ದಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಚನ್ನಪಟ್ಟಣ ತಾಲ್ಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಹಾಗೂ ತಾಲ್ಲೂಕಿನ ಎಲ್ಲಾ ಎಂಪಿಸಿಎಸ್ ಕಾರ್ಯದರ್ಶಿಗಳ ಅಹವಾಲುಗಳನ್ನು ಆಲಿಸಿ, ಮನವಿ ಪತ್ರ ಸ್ವೀಕರಿಸಿದ ರಾಮನಗರ ಉಪ ವಿಭಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಕಾನೂನು ಉಲ್ಲಂಘನೆ ಮಾಡಿದ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ನಿರಪರಾಧಿಗಳಿಗೆ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದರು.
ಲವಂಗದಿಂದ ಏನೆಲ್ಲಾ ಉಪಯೋಗವಿದೆ ಗೊತ್ತಾ? ಓದಿ
ಗೌರವಾಧ್ಯಕ್ಷ ಟಿ.ಎನ್.ದೇವರಾಜು, ಕಾರ್ಯಾಧ್ಯಕ್ಷ ಎಲ್.ಲಿಂಗೇಗೌಡ, ಉಪಾಧ್ಯಕ್ಷ ಸಿ.ಎಂ.ಮಾದಯ್ಯ, ಖಚಾಂಚಿ ಎಸ್.ಆರ್.ಕೃಷ್ಣ, ನಿರ್ದೇಶಕರಾದ ಜಿ.ಎಂ.ಶಿವಕುಮಾರ್, ಎಂ.ಪಿ.ರವಿಕುಮಾರ್, ಬಿ.ರಮೇಶ್, ಬಿಳಿಗೌಡ, ದಾಸೇಗೌಡ, ಬಿ.ಎಸ್.ಸುಧಾಕರ್, ಸಿ.ಕೆ.ನಂದೀಶ್, ಶ್ರೀಹರ್ಷ, ಬಸವರಾಜು ಸೇರಿದಂತೆ ತಾಲ್ಲೂಕಿನ ಎಲ್ಲಾ ಎಂಪಿಸಿಎಸ್ ಕಾರ್ಯದರ್ಶಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು
-Hemanthgowda