ಕೋವಿಡ್ ಹಿನ್ನಲೆಯಲ್ಲಿ ಸರ್ಕಾರ ಮಾರ್ಗಸೂಚಿ ಹೊರಡಿಸಿದ್ದು, ದೇವಸ್ಥಾನಗಳಲ್ಲಿ ಸಾರ್ವಜನಿಕರಿಗೆ ಸಾಮಾಜಿಕ ಅಂತರದೊಂದಿಗೆ ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಿದೆ. ಇದು ಕಟ್ಟುನಿಟ್ಟಾಗಿ ಪಾಲನೆಯಾಗಬೇಕು ಎಂದು ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಕರಗ ಮಹೋತ್ಸವ ಬಂದೋಬಸ್ತ್ ಕುರಿತು ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು.
ರಾಮನಗರದ ಚಾಮುಂಡೇಶ್ವರಿ ಬಡಾವಣೆಯಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಾಲಯ, ತೋಪ್ ಖಾನ್ ಮೊಹಲ್ಲಾದಲ್ಲಿರುವ ಶ್ರೀ ಮುತ್ತು ಮಾರಮ್ಮ ದೇವಸ್ಥಾನ, ಬಾಲಗೇರಿಯ ಶ್ರೀ ಮಗ್ಗದ ಕೇರಿ ಮಾರಮ್ಮ, ಬಾಲಗೇರಿಯ ಭಂಡಾರಮ್ಮ ದೇವಸ್ಥಾನ, ಶೆಟ್ಟಳ್ಳಿ ಬೀದಿಯ ಆದಿಶಕ್ತಿ ದೇವಸ್ಥಾನ, ಐಜೂರು ಆದಿಶಕ್ತಿ ಪುರದ ಆದಿಶಕ್ತಿ ದೇವಸ್ಥಾನ ಹಾಗೂ ಕೊಂಕಾಣಿ ದೊಡ್ಡಿ ಆದಿಶಕ್ತಿ ದೇವಸ್ಥಾನಗಳಲ್ಲಿ ಕರಗ ಮಹೋತ್ಸವವನ್ನು ನಡೆಸಲು ಅವಕಾಶವಿಲ್ಲ ಎಂದು ತಿಳಿಸಿದರು.
ದೇವಸ್ಥಾನದ ಮುಖ್ಯಸ್ಥರಿಗೆ ಈ ಕುರಿತಂತೆ ತಿಳಿಸಿ ಕೋವಿಡ್ ನಿಯಮ ಪಾಲಿಸಿ ನಿಯಮದಲ್ಲಿ ತಿಳಿಸಿರುವಂತೆ ಪೂಜಾ ಕೈಂಕರ್ಯಗಳನ್ನು ಮಾತ್ರ ಕೈಗೊಳ್ಳುವಂತೆ ಪತ್ರ ಬರೆಯುವಂತೆ ಅಧಿಕಾರಿಗಳಿಗೆ ತಿಳಿಸಿದರು.
ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಬರುವ ಭಕ್ತಾಧಿಗಳು ಸಹ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸುವುದು ಕಡ್ಡಾಯ. ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಅವರು ನಿಗಾ ವಹಿಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಗಿರೀಶ್, ಡಿ.ಒ.ಎಸ್.ಪಿ ಮೋಹನ್ ಕುಮಾರ್, ರಾಮನಗರ ತಾಹಶೀಲ್ದಾರ್ ವಿಜಯ್ ಕುಮಾರ್ ಹಾಗೂ ರಾಮನಗರ ನಗರ ಸಭೆ ಆಯುಕ್ತ ನಂದಕುಮಾರ್ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.