ಸುದ್ದಿ

ಅಗಲಿದ ಅಜಾತ ಶತ್ರು ವಾಜಪೇಯಿಯವರಿಗೆ ನುಡಿ ನಮನ!

           ಮಾಜಿ ಪ್ರಧಾನ ಮಂತ್ರಿ, ದೇಶಕಂಡ ಅಪ್ರತಿಮ ರಾಜಕಾರಣಿ, ಅಜಾತ ಶತ್ರು, ಕವಿ, ಶ್ರೇಷ್ಟವಾಗ್ಮಿ, ಚಿಂತಕ, ದಾರ್ಶನಿಕ, ನಿಸ್ವಾರ್ಥ ರಾಜಕಾರಣಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಇನ್ನಿಲ್ಲ. ಕಳೆದ ಹಲವು ವರ್ಷಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅಟಲ್ ಬಿಹಾರಿ ವಾಯಪೇಯಿ ತೀವ್ರ ಅನಾರೋಗ್ಯದ ಕಾರಣ ಕೆಲದಿನಗಳಿಂದ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು 16.08.2018ರಂದು ವಿಧಿವಶರಾಗಿದ್ದಾರೆ.

ಕುಟುಂಬ ಮತ್ತು ಬಾಲ್ಯ: ಕೃಷ್ಣದೇವಿ ಮತ್ತು ಕೃಷ್ಣಬಿಹಾರಿ ವಾಜಪೇಯಿ ರವರ ಮಗನಾಗಿ 24 ಡಿಸೆಂಬರ್ 1924ರಂದು ಮಧ್ಯಪ್ರದೇಶದ ಗ್ವಾಲಿಯರ್‍ನಲ್ಲಿ ಜನಿಸಿದ ಅಟಲ್ ಬಿಹಾರಿ ವಾಜಪೇಯಿಯವರ ತಂದೆ ಕವಿ ಮತ್ತು ಸಾಮಾನ್ಯ ಶಾಲೆಯ ಉಪಾಧ್ಯಾಯರಾಗಿದ್ದರು, ಅವರ ಅಜ್ಜ ಪಂಡಿತ್ ಶ್ಯಾಮ್ ಲಾಲ್‍ವಾಜಪೇಯಿರವರು ಊರಿನಲ್ಲಿ ಹೆಸರುವಾಸಿಯಾಗಿದ್ದರು.

ವಿದ್ಯಾಭ್ಯಾಸ ಮತ್ತು ಪ್ರಾರಂಭಿಕ ದಿನಗಳು: ಕಾನ್ಪುರದ ಲಕ್ಷ್ಮೀಬಾಯಿ ಕಾಲೇಜಿನಲ್ಲಿ ರಾಜ್ಯಶಾಸ್ತ್ರದಲ್ಲಿ ಮಾಸ್ಟರ್ ಡಿಗ್ರಿ ಪಡೆದ ಅಟಲ್ 1942ರಲ್ಲಿ ಕ್ವಿಟ್ ಇಂಡಿಯ ಚಳುವಳಿಯ ಮೂಲಕ ಭಾರತೀಯ ಜನಸಂಘದ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ನಿಕಟವರ್ತಿಯಾಗಿ ಬೆಳೆದರು. ತದನಂತರ ಆರ್.ಎಸ್.ಎಸ್. ಸೇರಿದರು. ವೀರ ಅರ್ಜುನ ಮತ್ತು ಪಾಂಚಜನ್ಯ ಪತ್ರಿಕೆಗಳಿಗೆ ಪತ್ರಕರ್ತರಾಗಿ ಕವಿಯಾಗಿ ಸೇವೆ ಸಲ್ಲಿಸಿದ್ದರು.

ರಾಜಕೀಯ ಬದುಕು: ವಾಜಪೇಯಿರವರು 1957ರಲ್ಲಿ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾಗುತ್ತಾರೆ. ಮೂರಾರ್ಜಿ ದೇಸಾಯಿ ಸರಕಾರದಲ್ಲಿ ವಿದೇಶ ಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಾರೆ. 11ನೇ ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ ಇವರು ಸೇವೆ ಸಲ್ಲಿಸಿದ್ದರು. ಮೊದಲ ಬಾರಿಗೆ ಪ್ರಧಾನಿಯಾಗಿ ಕೇವಲ 13ದಿನದಲ್ಲಿ ಅಧಿಕಾರ ಕಳೆದುಕೊಳ್ಳಬೇಕಾಯಿತು. ತದನಂತರ 1998ರಲ್ಲಿ ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಿ ಕಾರ್ಯನಿರ್ವಹಿಸಿದರು. ಕಾರ್ಗಿಲ್ ಯುದ್ದ, ಪ್ರೋಖ್ರಾನ್ ಅಣ್ವಸ್ತ್ರ ಪರೀಕ್ಷೆಗಳು ಇವರು ಪ್ರಧಾನ ಮಂತ್ರಿಗಳಾಗಿದ್ದಾಗ ನಡೆದ ಘಟನೆಗಳು. ಕಾರ್ಗಿಲ್ ಯುದ್ದ ನಡೆದ ಕೆಲವೇ ತಿಂಗಳುಳಲ್ಲಿ ನಡೆದ ಹದಿಮೂರನೇ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ಮುನ್ನಡೆ ಸಾಧಿಸಿ 3ನೇ ಭಾರಿಗೆ ಪ್ರಧಾನಮಂತ್ರಿಯಾಗಿ 5 ವರ್ಷಗಳ ಪೂರ್ಣ ಆಡಳಿತ ನಡೆಸಿದರು.

 

ಸಾಧನೆಯ ಹೆಜ್ಜೆಗುರುತುಗಳು: ದೇಶದ ನಾಲ್ಕೂ ಮೂಲೆಗಳಿಗೂ ಸಂಪರ್ಕ ಕಲ್ಪಿಸುವ 15ಸಾವಿರ ಕಿ.ಮೀ. ಉದ್ದದ ಸುವರ್ಣ ಚತುಷ್ಟದ ಹೆದ್ದಾರಿಯನ್ನು ದಾಖಲೆಯ ಸಮಯದಲ್ಲಿ ಪೂರ್ಣಗೊಳಿಸಿದ ವಾಜಪೇಯಿಯವರ ಸಾಧನೆ ಅಸಾಮಾನ್ಯವಾದುದ್ದು. ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆಯ ಮೂಲಕ ಪ್ರತಿ ಹಳ್ಳಿ ಹಳ್ಳಿಗೂ ರಸ್ತೆಯನ್ನು ಒದಗಿಸಿದ್ದು, ಸರ್ವ ಶಿಕ್ಷಣಾ ಆಭಿಯಾನದ ಮೂಲಕ ಎಲ್ಲರನ್ನೂ ಸಾಕ್ಷರರನ್ನಾಗಿ ಮಾಡಲು ಶ್ರಮಿಸಿದ್ದರು.

ಇತರೇ ವಿಷಯಗಳು: ರಾಜಕಾರಣಿಗಳಲ್ಲೆ ಸಭ್ಯ ರಾಜಕಾರಣಿ ಮತ್ತು ಗೌರವಾನ್ವಿತ ಮುತ್ಸದ್ಧಿ ಎಂದು ತಮ್ಮ ರಾಜಕೀಯ ವಿರೋದಿಗಳಿಂದಲೇ ಕರೆಸಿಕೊಂಡವರು ವಾಜಪೇಯಿ. ಮಾಜಿ ಪ್ರಧಾನಿ ಮನ್‍ಮೋಹನ್ ಸಿಂಗ್ ವಾಜಪೇಯಿರವರನ್ನು ಭಾರತೀಯ ‘ರಾಜಕೀಯ ರಂಗದ ಭೀಷ್ಮ’ ಎಂದು ಬಣ್ಣಿಸಿದ್ದರು ಇಷ್ಟೇಲ್ಲ ಸಾಧನೆ ಮಾಡಿದ ವಾಜಪೇಯಿ ಸ್ವಂತ ಮನೆಯನ್ನು ಮಾಡಿಕೊಳ್ಳಲಿಲ್ಲ! ತಮ್ಮ ಸ್ವಂತ ಮನೆಯನ್ನು ಗ್ರಂಥಾಲಯವನ್ನಾಗಿ ಮಾಡಿ ಸಮಾಜಕ್ಕೆ ಅರ್ಪಿಸಿದ್ದಾರೆ. ಇಂತಹ ಸಭ್ಯ ನಿಸ್ವಾರ್ಥ ರಾಜಕಾರಣಿ ಪ್ರತಿಯೊಬ್ಬರಿಗೂ ಆದರ್ಶ. ಕವಿಯಾಗಿದ್ದ ವಾಜಪೇಯಿ ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಕೊನೆಯ ದಿನಗಳು: 2005ರಲ್ಲಿ ಸಕ್ರಿಯ ರಾಜಕೀಯದಿಂದ ನಿವೃತ್ತಿ ಘೋಷಿಸಿದ ವಾಜಪೇಯಿರವರು ಸಾರ್ವಜನಿಕ ಬದುಕಿನಿಂದ ದೂರ ಉಳಿದಿದ್ದರು. ಜಗಮೆಚ್ಚಿದ ಮಗನಾಗಿ ಎಲ್ಲರ ಹೃದಯಗೆದ್ದ ಕವಿ ಹೃದಯಿ ಅಜಾತ ಶತ್ರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿರಬಹುದು ಆದರೆ ಅವರ ಆದರ್ಶ ಬದುಕು ಸದಾ ಜೀವಂತವಾಗಿರುತ್ತದೆ
  ‘ಅಗಲಿದ ಅಜಾತ ಶತ್ರು ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿಯವರಿಗೆ ಭಾವಪೂರ್ಣ ಶ್ರದ್ದಾಂಜಲಿ.’
-ನವೀನ್ ರಾಮನಗರ

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!