ಅತಿಥಿ ಅಂಕಣ

ನಾನು ಎಂಬ ಅಹಂ ಬಿಟ್ಟರೆ, ನೆಮ್ಮದಿ ಬದುಕು ನಮ್ಮದಾಗುತ್ತದೆ.

ಸದ್ಗುಣಗಳು ತುಂಬಿದ ರಾಜನೊಬ್ಬ ತನ್ನ ಪ್ರಜೆಗಳನ್ನು ಮಕ್ಕಳಂತೆ ನೋಡಿಕೊಳ್ಳುತ್ತಿದ್ದ. ಪ್ರಜೆಗಳ ಪಾಲನೆಯನ್ನು ಚ್ಯುತಿಯಿಲ್ಲದೇ ಮಾಡುತ್ತಿದ್ದ. ಜನರ ಕಲ್ಯಾಣಕ್ಕಾಗಿ ಹಗಲಿರುಳು ಪ್ರಯತ್ನಿಸುತ್ತಿದ್ದ. ಆದರೂ ಅನೇಕ ಸಮಸ್ಯೆಗಳು ಎದುರಾಗಿ ರಾಜನಿಗೆ ಜವಾಬ್ದಾರಿಯು ಚಿಂತೆಯಾಗಿ ಕಾಡತೊಡಗಿತು.ಮಾನಸಿಕ ಒತ್ತಡದಿಂದ ಬಳಲಿ ಅವನ ಆರೋಗ್ಯವೇ ಹದಗೆಟ್ಟಿತ್ತು. ಆಗ ರಾಜ ತನ್ನ ಗುರುಗಳ ಬಳಿ ಹೋಗಿ ತನ್ನ ಸಮಸ್ಯೆಗಳನ್ನೆಲ್ಲ ನಿವೇದಿಸಿಕೊಂಡು ತನ್ನಿಂದ ಇನ್ನು ರಾಜ್ಯಭಾರ ಸಾಧ್ಯವಿಲ್ಲ, ತಾನು ರಾಜ್ಯ ತ್ಯಜಿಸುವುದಾಗಿ ಹೇಳಿದ.

ಸಮಾಧಾನಚಿತ್ತದಿಂದ ಆಲಿಸಿದ ಗುರುಗಳು “ನಿನ್ನ ರಾಜ್ಯವನ್ನು ಬೇರೆಯವರಿಗೆ ಕೊಡುವುದಾದರೆ ನನಗೇ ಕೊಟ್ಟುಬಿಡು” ಎಂದು ಹೇಳುತ್ತಾರೆ. ಮರುಮಾತಾಡದೇ ರಾಜ ಒಪ್ಪ್ಪಿಯೂ ಬಿಟ್ಟ. “ ನೋಡು ಇಂದಿನಿಂದ ಈ ರಾಜ್ಯ ನನ್ನದು, ಆದರೆ ನೀನು ನಿನ್ನ ಜೀವನಕ್ಕೆ ಏನು ಮಾಡುವಿ?” ಎಂದು ಕೇಳುತ್ತಾರೆ. “ ನಾನು ಈ ರಾಜ್ಯದ ಬೊಕ್ಕಸದಿಂದ ಹಣ ತೆಗೆದುಕೊಂಡು ಅದರಲ್ಲಿ ವ್ಯಾಪಾರ ಶುರು ಮಾಡುವೆ” ಎನ್ನುತ್ತಾನೆ ರಾಜ.

ಅದಕ್ಕೆ ಗುರುಗಳು “ ನೋಡು ಈ ರಾಜ್ಯ ಈಗ ನನ್ನದು, ನೀನು ಇದರಿಂದ ಹಣ ಪಡೆಯಲು ಸಾಧ್ಯವಿಲ್ಲ” ಎನ್ನುತ್ತಾನೆ. ಹಾಗಾದರೆ ಬೇರೆ ಕಡೆ ಉದ್ಯೋಗ ಹುಡುಕುವೆ ಎನ್ನುತ್ತಾನೆ ರಾಜ. ಅದಕ್ಕೆ ಗುರುಗಳು “ನೀನು ಉದ್ಯೋಗವನ್ನೇ ಮಾಡುವುದಾದರೆ ನನ್ನ ರಾಜ್ಯದಲ್ಲೇ ಮಾಡು, ಅರಮನೆಯಲ್ಲೇ ವಾಸ ಮಾಡಿ ಈ ರಾಜ್ಯದ ಉಸ್ತುವಾರಿ ನೋಡಿಕೊಂಡು ನಿನಗೆ ಬೇಕಾದ ಸಂಬಳ ತೆಗೆದುಕೋ, ಆದರೆ ನೆನಪಿಡು, ನೀನೀಗ ರಾಜನಲ್ಲ, ಬರೀ ಸೇವಕ ಮಾತ್ರ. ಏನಾದರೂ ಸಮಸ್ಯೆಗಳು ಬಂದರೆ ನಾನಿದ್ದೇನೆ” ಎನ್ನುತ್ತಾರೆ. ರಾಜನಿಗೂ ಇದು ಸರಿ ಎನಿಸಿತು. “ ಹೌದು ನನಗೆ ಇನ್ನು ಯಾವ ಜವಾಬ್ದಾರಿಯೂ ಇಲ್ಲ, ಸಮಸ್ಯೆ ಏನೇ ಬಂದರೂ ಗುರುಗಳು ಇದ್ದಾರೆ” ಎಂಬ ಧೈರ್ಯದೊಂದಿಗೆ ಗುರುಗಳನ್ನು ಧ್ಯಾನಿಸುತ್ತ ಸುಖದಿಂದ ರಾಜ್ಯಭಾರ ಮಾಡುತ್ತಾನೆ.

ವರುಷ ಕಳೆದ ಬಳಿಕ ಗುರುಗಳು ರಾಜನನ್ನು ಭೇಟಿಯಾಗಲು ಬರುತ್ತಾರೆ. “ಏನು ರಾಜ ಹೇಗೆ ನಡೆದಿದೆ ನಿನ್ನ ರಾಜ್ಯ ಭಾರ?” ಎಂದು ಕೇಳುತ್ತಾರೆ. ಅದಕ್ಕೆ ರಾಜ “ ಗುರುಗಳೇ ನನ್ನನ್ನು ರಕ್ಷಿಸಿದ್ರಿ, ನನಗೀಗ ನೆಮ್ಮದಿ, ಯಾವುದೇ ಒತ್ತಡಗಳಿಲ್ಲ” ಎನ್ನುತ್ತಾನೆ. “ನಿನ್ನದೇ ರಾಜ್ಯವನ್ನು ನೀನೇ ಆಳುತ್ತಿರುವೆ ಆದರೆ ಅದರ ಭಾರವನ್ನು ನನ್ನ ಮೇಲೆ ಹಾಕಿರುವೆ, ಮೊದಲು ನಿನ್ನಲ್ಲಿ “ನಾನು ರಾಜ, ನನ್ನ ರಾಜ್ಯ, ನಾನೇ ಆಳುತ್ತಿರುವೆ” ಎಂಬ ಅಹಂ ಇತ್ತು. ಆದರೀಗ ನಿನ್ನದೆಂಬ ಅಹಂಕಾರ ಮಾಯವಾಗಿದೆ. ಆದ್ದರಿಂದ ನೀನು ನೆಮ್ಮದಿಯ ರಾಜ್ಯಭಾರ ಮಾಡುತ್ತಿರುವೆ” ಎನ್ನುತ್ತಾರೆ.

ನಾವೂ ಅಷ್ಟೆ. ಯಾವುದೇ ಕೆಲಸವನ್ನು “ನಾನು” ಎಂಬ ಅಹಂಕಾರದೊಂದಿಗೆ ಮಾಡಿದಾಗ ಆ ಕೆಲಸ ನಮಗೆ ಭಾರವೆನಿಸುತ್ತದೆ. ಆದರೆ ನಾನೆಂಬುದನ್ನು ತೊರೆದು ಕೆಲಸ ಮಾಡಿದ್ದೇ ಆದಲ್ಲಿ ಆ ಕೆಲಸದ ಭಾರ, ಒತ್ತಡ, ಶ್ರಮ ಎಲ್ಲವೂ ಕಡಿಮೆಯಾಗಿ ಕೆಲಸವೂ ಸಲೀಸಾಗಿ ನೆರವೇರುತ್ತದೆ.

ರಾಗಿಣಿ
ಹವ್ಯಾಸೀ ಬರಹಗಾರ್ತಿ

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!