ಮೈಸೂರು ಅರಮನೆ ಕಟ್ಟಿ ನೂರು ವರ್ಷ ಮೇಲಾಗಿದೆ. ಇದು ಹಳೆಯದು ಎಂಬ ಕಾರಣವೊಡ್ಡಿ ಕೆಡವಿ ಬೇರೆ ಕಟ್ಟಡ ಕಟ್ಟಲು ಸಾಧ್ಯವೇ? ಹಾಗೆಂದು ರಾಜವಂಶಸ್ಥ ಯದುವೀರ್ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.
ಮೈಸೂರಿನ ಪಾರಂಪರಿಕ ಕಟ್ಟಡಗಳಾದ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್‍ಡೌನ್ ಕಟ್ಟಡಗಳನ್ನು ಕೆಡವಿ ಮರುನಿರ್ಮಾಣ ಮಾಡಲು ತೀರ್ಮಾನ ಮಾಡಿರುವ ಸರ್ಕಾರದ ನಿಲುವು
ಬದಲಾವಣೆಗೆ ಆಗ್ರಹಿಸಿ ಬುಧವಾರ ಮೈಸೂರಿನಲ್ಲಿ ನಡೆದ ಬೃಹತ್ ಪ್ರತಿಭಟನೆ ವೇಳೆ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ಪಾರಂಪಾರಿಕ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿರುವುದರಿಂದ ಅವುಗಳನ್ನು ಪಾರಂಪರಿಕ ರೀತಿಯಲ್ಲೇ ಹೊಸದಾಗಿ ನಿರ್ಮಾಣ ಮಾಡಲು ಕಳೆದ ವಾರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು.
ದೇವರಾಜ ಮಾರುಕಟ್ಟೆ ಕೇವಲ ಮಾರುಕಟ್ಟೆಯಲ್ಲ, ಇದು ಸಂಸ್ಕøತಿಯ ಪಾರಂಪರಿಕ ಸಂಬಂಧ ಹೊಂದಿದೆ, ನೂರು ವರ್ಷ ಆಗಿದೆ ಎಂದು ಪಾರಂಪರಿಕ ಕಟ್ಟಡವನ್ನು ಕೆಡವಲು ಸಾಧ್ಯವೇ? ಹಾಗಾದರೆ ನೂರು ವರ್ಷ ಆಗಿರುವ ಮೈಸೂರು ಅರಮನೆಯನ್ನು ಕೆಡವಿ ಬೇರೆ ಕಟ್ಟಲು ಸಾಧ್ಯವೇ?
ಒಂದು ಪಾರಂಪರಿಕ ಕಟ್ಟಡ ಕೆಡವಿದ ಮೇಲೆ ಅದೇ ಮಾದರಿಯಲ್ಲಿ ಕಟ್ಟಿದರೂ ಆ ಕಟ್ಟಡಕ್ಕೆ ಇತಿಹಾಸ ಮತ್ತು ಪಾರಂಪರಿಕತೆ ಎರಡು ಬರುವುದಿಲ್ಲ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.