ಯಾರು ಮುನಿದರೂ ಸಹಿಸಿಕೊಳ್ಳಬಹುದು ಆದರೆ ಪ್ರಕೃತಿ ಮುನಿದರೆ ಖಂಡಿತ ಸಹಿಸಿಕೊಳ್ಳಲು ಸಾಧ್ಯವಾಗದ ರೀತಿ ಪರಿಣಾಮಗಳಾಗುತ್ತವೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಹಾಮಳೆಗೆ ಪಕ್ಕದ ಕೇರಳ ರಾಜ್ಯ ಮತ್ತು ನಮ್ಮ ಕರ್ನಾಟಕದ ಕೊಡಗು ಶೋಚನಿಯ ಸ್ಥಿತಿಗೆ ತಲುಪುತ್ತಿವೆ. ಮನುಷ್ಯ ಸಂಕುಲದ ಬದುಕು ದುಸ್ತರವಾಗುತ್ತಿದೆ. ಬದುಕು ಮಹಾಮಳೆಗೆ ಕೊಚ್ಚಿಹೋಗುತ್ತಿವೆ!
ಮಳೆ ನಿಲ್ಲುತ್ತದೆ ಬಿಡು ಎಂಬ ಆಶಭಾವನೆಯೇ ಹೊರಟು ಹೊದಂತಾಗಿದೆ. ಸೂರ್ಯನ ಬೆಳಕನ್ನು ನೋಡಿ ತುಂಬಾ ದಿನಗಳಾಗಿವೆ. ಎಲ್ಲಿ ನೋಡಿದರು ನೀರು. ತುಂಬಿ ಹರಿಯುತ್ತಿರುವ ಹೊಳೆಗಳು , ರಸ್ತೆಗಳು, ಓಣಿಗಳು, ಊರಿಗೆ ಊರೆ ನೀರಿನಿಂದ ಆವರಿಸಿಬಿಟ್ಟಿವೆ. ಕಟ್ಟಿಕೊಂಡಿದ್ದ ಬದುಕು ಕಣ್ಣೇದುರಿಗೆ ಉರುಳಿ ಹೋಗುತ್ತಿದೆ. ಏನು ಮಾಡಲಾಗದ ಅಸಹಾಯಕ ಸ್ಥಿತಿ ಆವರಿಸಿದೆ. ಇಷ್ಟೇಲ್ಲವನ್ನು ನಾವು ಟಿವಿ ಪತ್ರಿಕೆಗಳಲ್ಲಿ ನೋಡುತ್ತಲೇ ಇದ್ದೇವೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ ದೃಶ್ಯವೊಂದು ನನ್ನ ಮನಸ್ಸಿನಿಂದ ಇನ್ನೂ ಹೋಗಿಲ್ಲ ಕಣ್ಣೆದುರಿಗೆ ಜಾರಿ ಬೀಳುತ್ತಿರುವ ಮನೆ! ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ವಾಹನಗಳು, ಕೊಚ್ಚಿಹೋಗುತ್ತಿರುವ ವಾಹನದಿಂದ ಜೀವ ಉಳಿಸಿಕೊಳ್ಳಲು ಪರದಾಡುತ್ತಿರುವ ಜನರು. ಮಗುವೊಂದನ್ನು ಹೇಲಿಕ್ಯಾಪ್ಟರ್ನಲ್ಲಿ ರಕ್ಷಿಸುತ್ತಿರುವ ರಕ್ಷಣಾ ಸಿಬ್ಬಂದಿ, ವಯಸ್ಸಾದ ಮಹಿಳೆಯೊಬ್ಬರು ಹಗ್ಗದ ಸಾಹಯದಿಂದ ನೀರನ್ನು ದಾಟುತ್ತಿರುವ ದೃಶ್ಯಗಳು ಮನಸ್ಸನ್ನು ಕಲಕುತ್ತಿವೆ.
ಸರ್ಕಾರ ಪರಿಹಾರ ಕಾರ್ಯಗಳನ್ನು ನಡೆಸುತ್ತಿದೆ. ಮಿಲಿಟರಿ ಪಡೆಗಳು ಜೀವ ರಕ್ಷಿಸಲು ಪಣತೊಟ್ಟು ನಿಂತಿದೆ. ಹಲವಾರು ಸಂಘ ಸಂಸ್ಥೆಗಳು ಹಗಲಿರುಳು ಶ್ರಮಿಸುತ್ತಿವೆ. ದ್ವೀಪದಂತಾಗಿರುವ ಕೊಡಗು ಮತ್ತು ಕೇರಳ ರಾಜ್ಯಗಳಲ್ಲಿ ಸದ್ಯಕ್ಕೆ ಬೇಕಿರುವುದು ಅಗತ್ಯ ಮೂಲಭೂತ ವಸ್ತುಗಳ ಪೂರೈಕೆ! ಸಹಾಯ ಹಸ್ತ! ಜೊತೆಗೆ ಭರವಸೆಯ ಬೆಂಬಲ, ಕನಸುಗಳೊಂದಿಗೆ ಒಂದೊಂದೆ ಇಟ್ಟಿಗೆಯನ್ನು ಕಟ್ಟಿ ಬದುಕನ್ನು ಕಟ್ಟಿಕೊಂಡಿದ್ದ ಅದೇಷ್ಟೋ ಜನ ಇಂದು ನಿರ್ಗತಿಕರಾಗಿದ್ದಾರೆ. ಗಂಜಿ ಕೇಂದ್ರಗಳಲ್ಲಿ ವಾಸವಾಗಿದ್ದಾರೆ. ಆಹಾರ, ಬಟ್ಟೆ, ಬೆಡ್ಶೀಟ್, ಇನ್ನೂ ಅಗತ್ಯ ಮೂಲಭೂತ ವಸ್ತುಗಳನ್ನು ತುರ್ತಾಗಿ ನೇರೆ ಸಂತ್ರಸ್ತರಿಗೆ ತಲುಪಿಸುವ ಹೊಣೆ ನಮ್ಮೆಲ್ಲರ ಮೇಲಿದೆ. ಸರ್ಕಾರ ಮಾಡುತ್ತದೆ ಎಂಬ ಭಾವನೆ ಬೇಡ. ಸರ್ಕಾರದ ಜೊತೆ ನಾವು ಕೈಜೊಡಿಸೋಣ!
ಒಬ್ಬರಿಗಾಗಿ ಎಲ್ಲರೂ ಎಲ್ಲರಿಗಾಗಿ ಒಬ್ಬರು ಎಂಬ ಸಹಕಾರ ಮನೋಭಾವನೆ ನಮ್ಮದಾಗಲಿ. ಪ್ರವಾಸ ಹೋಗಿದ್ದಾಗ ತಂಗಿದ್ದ ಹೋಂ ಸ್ಟೇ ಮಾಲಿಕರ ನಂಬರ್ ನಮ್ಮ ಬಳಿಇದೆ. ನಮ್ಮನ್ನು ಊರೆಲ್ಲಾ ಸುತ್ತಾಡಿಸಿದ ಕಾರು ಚಾಲಕರ ನಂಬರ್ ನಮ್ಮ ಬಳಿ ಇದೆ. ಫೇಸ್ಬುಕ್ ನಲ್ಲಿ ಪರಿಚಯವಿರುವ ಹಲವಾರು ಸ್ನೇಹಿತರು ಅಲ್ಲಿದ್ದಾರೆ. ಅವರಿಗೊಂದು ಕರೆ ಮಾಡಿ ನಾವಿದ್ದೇವೆ ನಿಮ್ಮ ಜೊತೆ ಎಂಬ ಒಂದು ಮಾತು ಹೇಳಿ ಸಾಕು. ಆತ್ಮಸ್ಥೈರ್ಯ ತುಂಬುವ ಒಂದು ಮಾತಿಗೆ ಬದುಕಿಸುವ ಶಕ್ತಿ ಇದೆ. ನುಚ್ಚು ನೂರಾದ ಬದುಕನ್ನು ಕಟ್ಟಿಕೊಳ್ಳುವ ಶಕ್ತಿ ಭರವಸೆಯ ಮಾತಿಗಿದೆ.
ಈಗಾಗಲೇ ನೇರೆ ಸಂತ್ರಸ್ತರಿಗೆ ಸಂಘ, ಸಂಸ್ಥೆಗಳು ಅಗತ್ಯ ಮೂಲಭೂತ ವಸ್ತುಗಳನ್ನು ಸಂಗ್ರಹಿಸಿ ತಲುಪಿಸುವ ಕಾರ್ಯಕ್ಕೆ ಇಳಿದಿವೆ ಜೊತೆಗೆ ಮಾಧ್ಯಮಗಳು ಸಹ ಕೈಜೋಡಿಸಿವೆ. ಪ್ರತಿಯೊಬ್ಬರಿಗೂ ಒತ್ತಡದ ಬದುಕಿದೆ ನಿಜ. ಆದರೆ ಮನುಷ್ಯರಿಗೆ ಸಹಾಯ ಮಾಡುವ ಶಕ್ತಿ ಇರುವುದು ಮನುಷ್ಯರಿಗೆ ಮಾತ್ರ! ನೀವು ಅಲ್ಲಿಗೆ ಹೋಗಿ ಸಹಾಯ ಮಾಡಲು ಸಾಧ್ಯವಾಗದಿರಬಹುದು ಆದರೆ . ನಿಮ್ಮೂರಿನ ಸಂಘ, ಸಂಸ್ಥೆಗೆಳು ಸಂತ್ರಸ್ತರಿಗೆ ಅಗತ್ಯವಸ್ತುಗಳನ್ನು, ತಲುಪಿಸುವ ಕೆಲಸ ಮಾಡುತ್ತಿವೆ. ಅಂತಹ ಸಂಘ, ಸಂಸ್ಥೆಗಳಿಗೆ ನಿಮ್ಮ ಕೈಲಾದ ಸಹಾಯ ನೀಡಿ ಸಾಕು! ಈ ಭೂಮಿ ಎಲ್ಲರಿಗೂ ತಾತ್ಕಲಿಕ ವಸತಿ ಎಂಬುದು ಮರೆಯದಿರೋಣ!!! ಮನುಷ್ಯತ್ವ ಉಳಿಯಲಿ!.
-ನವೀನ್ ರಾಮನಗರ
ಅಡ್ಮಿನ್: ಬದುಕಿಗೊಂದು ಭರವಸೆಯ ಮಾತು!