ರಾಮನಗರ, ಜೂನ್ 23 : ಸ್ಥಳೀಯ ಸಂಸ್ಥೆಗಳ ಕಾರ್ಯನಿರ್ವಹಣೆಯಲ್ಲಿ ಪೌರಕಾರ್ಮಿಕರ ಪಾತ್ರ ಮಹತ್ವವಾದದ್ದು, ಪೌರಕಾರ್ಮಿಕರಿಗೆ ವರ್ಷಕ್ಕೆ ಎರಡು ಬಾರಿ ಮಾಸ್ಟರ್ ಹೆಲ್ತ್ ಚೆಕ್ಅಪ್ ಮಾಡಿಸುವಂತೆ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಕೆ ಅವರು ತಿಳಿಸಿದರು.
ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಫಾಯಿ ಕರ್ಮಚಾರಿಗಳ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಗಳ ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಜಿಲ್ಲೆಯಲ್ಲಿ ಇತ್ತೀಚೆಗೆ ಮ್ಯಾನ್ ಹೋಲ್ ನಲ್ಲಿ ಕೆಲಸ ಕೈಗೊಂಡ ಸಂದರ್ಭದಲ್ಲಿ 3 ಜನ ಮೃತ ಪಟ್ಟಿದ್ದು ನೋವಿನ ಸಂಗತಿ. ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಮರುಕಳಿಸದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದರು.ಕಾರ್ಮಿಕ ಕಾಯ್ದೆ ಅನ್ವಯ ಕಾರ್ಮಿಕ ಇಲಾಖೆಯು ಗುತ್ತಿಗೆ ಆಧಾರದ ಮೇಲೆ ಹಾಗೂ ಗುತ್ತಿಗೆ ಪೌರಕಾರ್ಮಿಕರಿಗೆ ಪಾವತಿ ಮಾಡುವ ಪರಿಷ್ಕೃತ ವೇತನದ ಬಗ್ಗೆ ಮೇಲ್ವಿಚಾರಣೆ ಮಾಡಿದರು.
ಗುತ್ತಿಗೆ ಸಫಾಯಿ ಕರ್ಮಚಾರಿಗಳಿಗೆ ವೇತನದಲ್ಲಿ ಇ.ಎಸ್.ಐ ಮತ್ತು ಪಿ.ಎಫ್.ಮೊತ್ತವನ್ನು ಕಡಿತಗೊಳಿಸಿವುದರ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು. ಸಫಾಯಿ ಕರ್ಮಚಾರಿಗಳ ವೈಯಕ್ತಿಕ ಖಾತೆಗೆ ವೇತನ ಜಮೆ ಮಾಡುವ ಬಗ್ಗೆ ಪರಿಶೀಲನೆ ನಡೆಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪೌರಕಾರ್ಮಿಕರಿಗೆ ಕೆಲಸ ನಿರ್ವಹಿಸಲು ಬೇಕಿರುವ ಸುರಕ್ಷತಾ ಪರಿಕರಗಳನ್ನು ಒದಗಿಸಬೇಕು ಹಾಗೂ ಅವುಗಳನ್ನು ಬಳಸುವಂತೆ ಅವರಲ್ಲಿ ಜಾಗೃತಿ ಮೂಡಿಸಿ, ಅಧಿಕಾರಿಗಳು ಪೌರಕಾರ್ಮಿಕರು ಸುರಕ್ಷತಾ ಪರಿಕರಗಳನ್ನು ಉಪಯೋಗಿಸುತ್ತಿರುವ ಬಗ್ಗೆ ಖಾತ್ರಿ ಮಾಡಿಕೊಳ್ಳಬೇಕು ಎಂದರು.
ಸಫಾಯಿ ಕರ್ಮಚಾರಿಗಳು ವೃತ್ತಿ ಸಂಬಂಧಿತ ಖಾಯಿಲೆಗಳಿಂದ ನರಳುತ್ತಿದ್ದಲ್ಲಿ, ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಕೊಡಿಸಬೇಕು. ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳಿಂದ ವಸತಿ ಶಾಲೆಗಳಲ್ಲಿ, ಪ್ರತಿಷ್ಟಿತ ಶಾಲೆಗಳಲ್ಲಿ, ಹಾಸ್ಟೆಲ್ಗಳಲ್ಲಿ ಹಾಗೂ ವಿದ್ಯಾರ್ಥಿ ವೇತನ ಹಾಗೂ ಇತರೆ ಶೈಕ್ಷಣಿಕ ಪ್ರೋತ್ಸಾಹ ಕಾರ್ಯಕ್ರಮಳಿದ್ದು ಕ್ರಮಬದ್ಧವಾಗಿ ಅನುಷ್ಠಾನವಾಗಬೇಕು.ಈ ಕಾರ್ಯಕ್ರಮಗಳ ಬಗ್ಗೆ ಅವರಿಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಪೌರ ಕಾರ್ಮಿಕರು ವಾಸಿಸುವ ಕಾಲೋನಿಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಂಬಂಧಿಸಿದ ಇಲಾಖೆಗಳಿಗೆ ನಿರ್ದೇಶನ ನೀಡಿದರು.
ಪೌರ ಕಾರ್ಮಿಕರ ಗೃಹಭಾಗ್ಯ ಯೋಜನೆಯಡಿಯಲ್ಲಿ ಪೌರಕಾರ್ಮಿಕರು ವಾಸಿಸಲು ಸುಸಜ್ಜಿತವಾದ ಮೂಲಭೂತ ಸೌಕರ್ಯಗಳಿಂದ ಕೂಡಿದ ಮನೆಗಳನ್ನು ನಿರ್ಮಿಸಿಕೊಳ್ಳಲು ತಿಳಿಸಿದರು.
ಇನ್ಸ್ಯಾನಿಟರಿ ಲೆಟ್ರನ್ಗಳನ್ನು ಗುರುತಿಸುವುದು, ಸ್ಯಾನಿಟರಿ ಲೆಟ್ರನ್ಗಳಾಗಿ ಪರಿವರ್ತಿಸುವುದು, ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಸಮೀಕ್ಷೆ ನಡೆಸುವುದು ಗುರುತಿಸಲ್ಪಟ್ಟ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಗಳ ಕುಟುಂಬದ ಸದಸ್ಯರು ವಿವರಗಳನ್ನು “ ಒಳಗೊಂಡಂತೆ ಭಾವಚಿತ್ರವಿರುವ ಗುರುತಿನ ಚೀಟಿಯನ್ನು ವಿತರಿಸಲು ತಿಳಿಸಿದರು.
ಕೌಶಲ್ಯ ತರಬೇತಿ ಉದ್ಯೋಗಗಳಿಗೆ ಸಹಾಯಧನ ಮತ್ತು ಹಣಕಾಸಿನ ನೆರವಿನ ಕಾರ್ಯಕ್ರಮಗಳನ್ನು ಕಲ್ಪಿಸಲು ನೀಡುತ್ತಿರುವ ಅನುದಾನದ ಬಳಕೆ ಮಾಡಲು ಕ್ರಮ ಕೈಗೊಳ್ಳಲು ಸೂಚಿಸಿದರು
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಿರೀಶ್, ಅಪಾರ ಜಿಲ್ಲಾಧಿಕಾರಿ ಜವರೇ ಗೌಡ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಲಲಿತಾ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.