ರಾಮನಗರ: ಕೋವಿಡ್ ಹೊರತುಪಡಿಸಿ ಸಾಮಾನ್ಯ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವ ಉದ್ದೇಶದಿಂದ ರಾಮನಗರ ಜಿಲ್ಲಾ ಕೇಂದ್ರದಲ್ಲಿ ಸ್ಥಾಪಿಸಿರುವ ನವೀಕೃತ ರೋಟರಿ ಬಿಜಿಎಸ್ ಆಸ್ಪತ್ರೆಯನ್ನು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಗುರುವಾರ ಲೋಕಾರ್ಪಣೆ ಮಾಡಿದರು.
ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ ಅವರು, “ಈ ಆಸ್ಪತ್ರೆ ಮೊದಲೇ ಇತ್ತು. ಈಗ ಅದನ್ನು ಮತ್ತಷ್ಟು ಉತ್ತಮಪಡಿಸಲಾಗಿದೆ. ಸೌಲಭ್ಯಗಳನ್ನು ಹೆಚ್ಚಿಸಲಾಗಿದೆ” ಎಂದರು.”ಇಲ್ಲಿ ಈಗ ಐಸಿಯು, ವೆಂಟಿಲೇಟರ್ ವ್ಯವಸ್ಥೆ ಇಲ್ಲಿದೆ. ಈ ಆಸ್ಪತ್ರೆಗೆ 15 ವೆಂಟಿಲೇಟರ್, ಮಾನಿಟರ್‌ಗಳನ್ನು ನೀಡಲಾಗಿದೆ. ಇನ್ನು 15 ಮಾನೀಟರ್‌ಗಳು ಬೇಕೆಂದು ಕೇಳಿದ್ದಾರೆ. ಅದನ್ನೂ ವೈಯಕ್ತಿಕವಾಗಿ ಒದಗಿಸುತ್ತೇನೆ. ಇನ್ನು ಮುಂದೆ ರಾಮನಗರ ಜಿಲ್ಲೆಯ ಜನರು ಅನಾರೋಗ್ಯ ಉಂಟಾದ ಕೂಡಲೇ ಬೆಂಗಳೂರು ಕಡೆ ಓಡುವ ಅಗತ್ಯವಿಲ್ಲ” ಎಂದು ಉಪ ಮುಖ್ಯಮಂತ್ರಿ ಹೇಳಿದರು.
ಪ್ರಸ್ತುತ ರಾಮನಗರ ಜಿಲ್ಲೆಯಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಪ್ರತ್ಯೇಕ ಕೋವಿಡ್ ಆಸ್ಪತ್ರೆ ಇದೆ. ತಾಯಿ ಮಕ್ಕಳ ಅಸ್ಪತ್ರೆ ಆರಂಭಿಸಲಾಗತ್ತಿದೆ. ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಬಂದಿದೆ. ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿ ಅವರಿಗೂ ಜಿಲ್ಲಾ ಕೇಂದ್ರದಲ್ಲಿ ಒಂದು ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವಂತೆ ಮನವಿ ಮಾಡಿದ್ದೇನೆ. ಬೆಂಗಳೂರಿನಲ್ಲಷ್ಟೇ ಅಲ್ಲ, ವಿದೇಶದಲ್ಲೂ ಸಿಗುವಂಥ ಉತ್ತಮ ಆರೋಗ್ಯ ಸೇವೆ ರಾಮನಗರದಲ್ಲೂ ಸಿಗುತ್ತದೆ ಎಂದು ಡಿಸಿಎಂ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶ್ರೀ ಶೇಖರ ಸ್ವಾಮೀಜಿ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಜಿಲ್ಲಾಧಿಕಾರಿ ರಾಕೇಶ ಕುಮಾರ, ಸಿಇಒ ಇಕ್ರಂ, ಎಸ್ ಪಿ ಗಿರೀಶ್ ಇದ್ದರು.