ಕೆಎಂಎಫ್ ಮಾಜಿ ಅಧ್ಯಕ್ಷ ಹಾಗೂ ಬಮಲ್ ನಿರ್ದೆಶಕ ಪಿ. ನಾಗರಾಜ್ ರಾಮನಗರ ತಾಲ್ಲೂಕಿನ ಮಾಯಗಾನಹಳ್ಳಿ ಗ್ರಾಮದಲ್ಲಿ 20ರ ಮೇ 1963ರಲ್ಲಿ ಪುಟ್ಟಸ್ವಾಮಯ್ಯ ಅವರ ಮಗನಾಗಿ ಜನಿಸಿದ ಪಿ.ನಾಗರಾಜ್ ಅವರು ಬಿ.ಎ ಪದವಿ ಪಡೆದಿದ್ದಾರೆ. ವಿದ್ಯಾರ್ಥಿ ಜೀವನದಿಂದಲೂ ಸಕ್ರಿಯವಾಗಿ ಹೋರಾಟದ ಮನೋಭಾವನೆ ರೂಢಿಸಿಕೊಂಡು ಬಂದ ಇವರು 1990 ರಲ್ಲಿ ಮಾಯಗಾನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷನಾಗಿ ರೈತರಿಗೆ 25 ಲಕ್ಷ ರೂ.ಗಳಷ್ಟು ಸಾಲವನ್ನು ನೀಡಿ ರೈತರ ಪರ ಕೆಲಸವನ್ನು ಮಾಡುವ ಮೂಲಕ ರಾಜಕಾರಣಕ್ಕೆ ಸಕ್ರಿಯವಾಗಿ ಕಾಲಿರಿಸಿದರು.
ಮಾಯಗಾನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯನಾಗಿ ಎರಡು ಬಾರಿ ಆಯ್ಕೆಯಾಗಿದ್ದ ಇವರು 2000-2005 ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ತದನಂತರ ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದರು. 2001 ರಲ್ಲಿ ಪ್ರಥಮ ಬಾರಿಗೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಹಾಲು ಒಕ್ಕೂಟದ ನಿರ್ದೇಶಕನಾಗಿ ಆಯ್ಕೆಯಾದ ಇವರು ನಂತರ ಬೆಂಗಳೂರು ಹಾಲು ಒಕ್ಕೂಟದ ಚುನಾವಣೆಯಲ್ಲಿ ಸತತವಾಗಿ ಗೆಲುವು ಸಾಧಿಸಿಕೊಂಡು ಬಂದಿದ್ದಾರೆ. ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷನಾಗಿ ಸುಮಾರು ಐದು ವರ್ಷಗಳ ಕಾಲ ಹಾಲು ಉತ್ಪಾದಕ ರೈತರ ಬಗ್ಗೆ ಹೋರಾಟ ಮಾಡಿಕೊಂಡು ಬಂದಿದ್ದು, ಈ ಅವಧಿಯಲ್ಲಿ ಅನೇಕ ಯೋಜನೆಗಳನ್ನು ರೂಪಿಸಿ ರೈತರ ಪರವಾದ ಕೆಲಸ ಮಾಡಿದ್ದಾರೆ.
2008-2013ರ ಅವಧಿಯಲ್ಲಿ ಕೆಎಂಎಫ್. ನಿರ್ದೇಶಕರಾಗಿದ್ದ ಸಂದರ್ಭದಲ್ಲಿ ಆಡಳಿತ ಮಂಡಳಿಯ ವಿರುದ್ದವೇ ತಿರುಗಿ ಬಿದ್ದು ಕೋಟ್ಯಾಂತರ ರೂಪಾಯಿಗಳ ಹತ್ತಿ ಹಿಂಡಿ ಹಗರಣ ಬಯಲಿಗೆಳೆದು ಲೋಕಾಯುಕ್ತಕ್ಕೆ ದೂರು ನೀಡುವ ಮೂಲಕ ಹಗರಣಕ್ಕೆ ಹೊಸ ತಿರುವು ಕೊಟ್ಟಿದ್ದರು. ತಾವೊಬ್ಬ ರೈತ ಪರ ಎಂಬುದನ್ನು ತೋರಿಸಿದ್ದರು. ಪಿ.ನಾಗರಾಜ್ ಅವರ ರಾಜಕೀಯ ಜೀವನ ಆರಂಭವಾಗಿದ್ದು ಕಾಂಗ್ರೆಸ್ ಪಕ್ಷವಾದರೂ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ 2004ರ ವಿಧಾನಸಭಾ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ 2008ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ 51,076 ಮತಗಳನ್ನು ಗಳಿಸಿದರು.
ನಂತರ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ ಕಳೆದ 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಕಳೆದ ಮೂರು ತಿಂಗಳ ಹಿಂದೆ ನಡೆದ ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಸ್ಥಾನಕ್ಕೆ ರಾಮನಗರದಿಂದ ಅವಿರೋಧ ಆಯ್ಕೆಯಾದ ಇವರು ಕೆಎಂಎಫ್ ನಿರ್ದೇಶಕರಾಗಿಯೂ ಆಯ್ಕೆಯಾಗುವ ಮೂಲಕ ಈಗ ಕೆಎಂಎಫ್ ಅಧ್ಯಕ್ಷ ಗಾದಿಯನ್ನು ಅಲಂಕರಿಸಿ, ಪ್ರಸ್ತುತ ಬಮಲ್ ನಿರ್ದೆಶಕರಾಗಿ ಉತ್ತಮ ಆಡಳಿತ ನಡೆಸುತ್ತಿದ್ದಾರೆ.
ಹಾಲು ಉತ್ಪಾದಕರಿಗೆ ಸಹಕಾರಿ : ಕೆಎಂಎಫ್ 300 ಕೋಟಿ ರೂಪಾಯಿ ವೆಚ್ಚದಲ್ಲಿ ರಾಮನಗರ ತಾಲ್ಲೂಕಿನ ಕನ್ನಮಂಗಲ ಗ್ರಾಮದಲ್ಲಿ ಹಾಲಿನ ಉತ್ಪನ್ನ ಘಟಕ ಹಾಗೂ ಬಮೂಲ್ 436 ಕೋಟಿ ರೂಪಾಯಿ ಖರ್ಚಿನಲ್ಲಿ ಕನಕಪುರ ತಾಲ್ಲೂಕಿನ ಶಿವನಹಳ್ಳಿಯಲ್ಲಿ ಮೆಗಾಡೇರಿ ಸ್ಥಾಪಿಸುತ್ತಿರುವುದರಿಂದ ಹಾಲು ಉತ್ಪಾದಕರಿಗೆ ಸಹಕಾರಿಯಾಗಲಿದೆ ಎಂದು ಪಿ. ನಾಗರಾಜ್ ತಿಳಿಸಿದರು.
ಪ್ರತಿನಿತ್ಯ ಹಾಲಿನ ಉತ್ಪನ್ನ ಘಟಕಕ್ಕೆ 12 ಲಕ್ಷ ಮತ್ತು ಮೆಗಾಡೇರಿಗೆ 5-6 ಲಕ್ಷ ಲೀಟರ್ ಹಾಲು ಪೂರೈಕೆಯಾಗಲಿದೆ. ಇದರಿಂದ ಮಂಡ್ಯ, ಚಾಮಗರಾಜನಗರ, ತುಮಕೂರು, ರಾಮನಗರ ಹಾಗೂ ಬೆಂಗಳೂರು ಗ್ರಾಮಂತರ ಜಿಲ್ಲೆಗಳಿಗೆ ಅನುಕೂಲವಾಗಲಿದೆ. ಚನ್ನಪಟ್ಟಣ ತಾಲ್ಲೂಕಿನ ಕನ್ನಮಂಗಲ ಗ್ರಾಮದಲ್ಲಿ ಹಾಲಿನ ಉತ್ಪನ್ನ ಘಟಕ ಹಾಗೂ ಕನಕಪುರ ತಾಲ್ಲೂಕಿನ ಶಿವನಹಳ್ಳಿಯಲ್ಲಿ ಮೆಗಾಡೇರಿ ಸಂಕೀರ್ಣಕ್ಕೆ ಶಿಲಾನ್ಯಾಸ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
ರೈತ ಮೃತಪಟ್ಟಲ್ಲಿ ವಿಮೆ ಪಾವತಿ : ಪಿ. ನಾಗರಾಜ್ ಅವರ ರೈತಪರ ಕಾಳಜಿಯ ಕೆಲಸ :ಗ್ರಾಮೀಣ ಪ್ರದೇಶದ ರೈತರನ್ನು ಹೈನುಗಾರಿಕೆಯತ್ತ ಆಕರ್ಷಿಸಲು ಹಲವು ಯೋಜನೆಗಳನ್ನು ರೂಪಿಸಿದ್ದು, ಸಹಕಾರ ಸಂಘಕ್ಕೆ ಹಾಲು ಸರಬರಾಜು ಮಾಡಿದ 70 ವರ್ಷ ಮೇಲ್ಪಟ್ಟ ರೈತರಿಗೂ 50 ಸಾವಿರ ರೂಪಾಯಿ ವಿಮೆ ನೀಡಲು ಬೆಂಗಳೂರು ಹಾಲು ಒಕ್ಕೂಟ ತೀರ್ಮಾನಿಸಿರುವುದು ಸ್ವಾಗತಾರ್ಹ. 70 ವರ್ಷ ಮೇಲ್ಪಟ್ಟ ರೈತರಿಗೆ ವಿಮೆ ಹಣ ನೀಡುತ್ತಿರುವುದು ದೇಶದ ಹೈನುಗಾರಿಕೆಯ ಇತಿಹಾಸದಲ್ಲಿಯೆ ಪ್ರಥಮ ಯೋಜನೆಯಾಗಿದೆ. ಇದರಿಂದಾಗಿ ಶ್ರಮಿಕ ರೈತನ ಕೊನೆಯ ದಿನಗಳಲ್ಲಿ ಆತನ ಕುಟುಂಬಕ್ಕೆ ಅಲ್ಪ ಆರ್ಥಿಕ ಆಸರೆ ದೊರೆತಂತಾಗಿದೆ.
ಬೆಂಗಳೂರು ಹಾಲು ಒಕ್ಕೂಟ ಮತ್ತು ಬಮೂಲ್ ಕಲ್ಯಾಣ ಟ್ರಸ್ಟ್ ವತಿಯಿಂದ ಈಗಾಗಲೆ ಹಾಲು ಉತ್ಪಾದಕ ರೈತ ಸಹಜವಾಗಿ ಮರಣ ಹೊಂದಿದರೆ ಒಂದು ಲಕ್ಷ, ಅಪಘಾತದಲ್ಲಿ ಮರಣ ಹೊಂದಿದರೆ ಎರಡು ಲಕ್ಷ ವಿಮಾ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಕಳೆದ ಆರು ತಿಂಗಳಲ್ಲಿ ರಾಮನಗರ ತಾಲ್ಲೂಕಿನಲ್ಲಿ ಸುಮಾರು 100 ರೈತರ ಕುಟುಂಬಗಳಿಗೆ ಇದರಿಂದ ಅನುಕೂಲವಾಗಿದೆ. ಇದೀಗ ಈ ಯೋಜನೆಯನ್ನು ಮತ್ತಷ್ಟು ವಿಸ್ತರಿಸಿ ಹೈನುಗಾರಿಕೆ ಕುಟುಂಬದಲ್ಲಿ ಗಂಡ ಅಥವಾ ಹೆಂಡತಿ ಯಾರೆ ಮೃತರಾದರೂ ಸಹಜ ಸಾವಿಗೆ ಎರಡು ಲಕ್ಷ, ಅಪಘಾತದಲ್ಲಿ ಮಡಿದರೆ ನಾಲ್ಕು ಲಕ್ಷ ನೀಡುವ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ. ಸರ್ಕಾರಿ ನೌಕರ ನಿವೃತ್ತನಾದರೆ ಅವನ ಕುಟುಂಬ ನಿರ್ವಹಣೆಗೆ ಹಣ ದೊರೆಯುತ್ತದೆ. ಅದೇ ರೀತಿ ಹಾಲು ಉತ್ಪಾದಕ ಸಹಕಾರ ಸಂಘದಲ್ಲಿ ಕಾರ್ಯನಿರ್ವಹಿಸುವ ನೌಕರರು, ಕಾರ್ಯದರ್ಶಿಗಳು, ಹಾಲು ಪರೀಕ್ಷಕರಿಗೆ 60 ವರ್ಷಗಳ ನಂತರ ಅವರ ಜೀವನ ನಿರ್ವಹಣೆಗೆ ಆರ್ಥಿಕ ನೆರವು ನೀಡಲಾಗುತ್ತದೆ.
ಆದರೆ ಹಾಲು ಉತ್ಪಾದಕ ಸಹಕಾರ ಸಂಘಗಳ ಬೆನ್ನೆಲುಬಾದ ರೈತನಿಗೆ ಆರ್ಥಿಕ ನೆರವು ನೀಡಬೇಕೆಂಬ ತಮ್ಮ ಹಲವು ವರ್ಷಗಳ ಆಲೋಚನೆ 70 ವರ್ಷ ಮೇಲ್ಪಟ್ಟ ಹಾಲು ಉತ್ಪಾದಕ ರೈತರು ಮೃತಪಟ್ಟಲ್ಲಿ 50 ಸಾವಿರ ರೂ. ವಿಮಾ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ ಎನ್ನುತ್ತಾರೆ ಪಿ. ನಾಗರಾಜ್. ಗ್ರಾಮೀಣ ಪ್ರದೇಶದ ರೈತರನ್ನು ಹೈನುಗಾರಿಕೆಯತ್ತ ಆಕರ್ಷಿಸಲು ಹಲವು ಯೋಜನೆಗಳನ್ನು ರೂಪಿಸಿದ್ದು, ಸಹಕಾರ ಸಂಘಕ್ಕೆ ಹಾಲು ಸರಬರಾಜು ಮಾಡಿದ 70 ವರ್ಷ ಮೇಲ್ಪಟ್ಟ ರೈತರಿಗೂ 50 ಸಾವಿರ ರೂ.ಗಳ ವಿಮೆ ನೀಡಲು ಬೆಂಗಳೂರು ಹಾಲು ಒಕ್ಕೂಟ ತೀರ್ಮಾನಿಸಿದ್ದು, ದೇಶದ ಹೈನುಗಾರಿಕೆಯ ಇತಿಹಾಸದಲ್ಲಿಯೆ ಪ್ರಥಮ ಯೋಜನೆಯಾಗಿದೆ. ಇದರಿಂದಾಗಿ ಶ್ರಮಿಕ ರೈತನ ಕೊನೆಯ ದಿನಗಳಲ್ಲಿ ಆತನ ಕುಟುಂಬಕ್ಕೆ ಅಲ್ಪ ಆರ್ಥಿಕ ಆಸರೆ ದೊರೆತಂತಾಗಿದೆ ಎಂದು ಅವರು ಹೇಳಿದರು.
ಎಸ್. ರುದ್ರೇಶ್ವರ
ಸಂಶೋಧನಾ ವಿದ್ಯಾರ್ಥಿ
ಬೆಂಗಳೂರು ವಿಶ್ವವಿದ್ಯಾಲಯ