ಪದ್ಮಶ್ರೀ ಸೂಲಗಿತ್ತಿ ನರಸಮ್ಮ ಇನ್ನಿಲ್ಲ! ಸುಮಾರು 98ವರ್ಷ ವಯಸ್ಸಿನ ನರಸಮ್ಮನವರು ಸುಮಾರು 15000ಕ್ಕೂ ಹೆಚ್ಚು ಹೆರಿಗೆಗಳನ್ನು ಮಾಡಿಸುವ ಮೂಲಕ ನಾಡಿನ ಉದ್ದಗಲಕ್ಕೂ ಸೂಲಗಿತ್ತಿ ನರಸಮ್ಮ ಎಂದೇ ಚಿರಪರಿಚಿತರಾಗಿದ್ದರು. ಇವರ ಯಶೋಗಾಥೆಯನ್ನು ಓದಿದರೆ ಎಂತವರಿಗೂ ಅಚ್ಚರಿ ಯಾಗುತ್ತದೆ.
ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕು ಕೃಷ್ಣಾಪುರದ ಮೂಲದವರು ನರಸಮ್ಮ ಆಸ್ಪತೆ, ವೈದ್ಯರಿಲ್ಲದ ಕಾಲದಲ್ಲಿ ಆಧುನಿಕ ಹೆರಿಗೆ ತಜ್ಞೆಯಂತೆ ಹಳ್ಳಿ ಹಳ್ಳಿಗಳಲ್ಲಿ ಸುಮಾರು 15000ಕ್ಕೂ ಹೆಚ್ಚು ಹೆರಿಗೆ ಮಾಡಿಸಿದ ಕೀರ್ತಿ ಸೂಲಗಿತ್ತಿ ನರಸಮ್ಮನವರಿಗೆ ಸಲ್ಲುತ್ತದೆ. ಈ ಮಹತ್ತರ ಕಾರ್ಯವನ್ನು ಪರಿಗಣಿಸಿದ ಭಾರತ ಸರ್ಕಾರ 2018ರಲ್ಲಿ ಸೂಲಗಿತ್ತಿ ನರಸಮ್ಮನವರಿಗೆ ಅತ್ಯಂತ ಶ್ರೇಷ್ಠ ನಾಗರಿಕ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಹಾಗೂ ಭಾರತ ಸರ್ಕಾರದ ವಯೋಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದಾರೆ.ಜೊತೆಗೆ ರಾಜ್ಯ ಸರ್ಕಾರ ಮತ್ತು ಹಲವಾರು ಸಂಘ ಸಂಸ್ಥೆಗಳು ಇವರ ಸೇವೆಯನ್ನು ಗುರುತಿಸಿ ಹತ್ತು ಹಲವಾರು ಪ್ರಶಸ್ತಿಗಳನ್ನು ನೀಡಿದ್ದಾರೆ.ತುಮಕೂರು ವಿಶ್ವವಿದ್ಯಾನಿಲಯ ಇವರ ಸೇವೆಗೆ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಡಾ: ಸೂಲಗಿತ್ತಿ ನರಸರಮ್ಮನವರು ಕರ್ನಾಟಕದವರಾದರೂ ಅವರ ಆಡುಭಾಷೆ ತೆಲುಗು. ಇವರಿಗೆ 12 ವರ್ಷಕ್ಕೆ ಮದುವೆಯಾಗಿತ್ತು. ತಮ್ಮ 20ನೇ ವಯಸ್ಸಿನಲ್ಲಿಯೇ ತಮ್ಮ ಚಿಕ್ಕಮ್ಮನ ಹೆರಿಗೆಗೆ ನರಸಮ್ಮನವರು ಸಹಾಯ ಮಾಡಿದ್ದರು. ನರಸಮ್ಮ ಹಾಗೂ ಆಚಿಜಿನಪ್ಪನವರಿಗೆ 12ಮಕ್ಕಳಿದ್ದರು. ಅವರಲ್ಲಿ ನಾಲ್ವರು ಗಂಡು ಮಕ್ಕಳು ಚಿಕ್ಕವರಿರುವಾಗಲೇ ತೀರಿಕೊಂಡಿದ್ದಾರೆ. ನರಸಮ್ಮನವರಿಗೆ 22 ಮೊಮ್ಮಕ್ಕಳಿದ್ದಾರೆ. ನರಸಮ್ಮನವರ ಅಜ್ಜಿ ವ್ಮರಿಗೆಮ್ಮ ಹೆರಿಗೆ ಮಾಡಿಸುತ್ತಿದ್ದರು. ಅವರ ಜೊತೆ ನರಸಮ್ಮ ಕೂಡ ಹೋಗುತ್ತಿದ್ದರು. ಹೆರಿಗೆ ಮಾಡಿಸುವಾಗ ಬೇರೆ ಯಾರನ್ನೂ ಒಳಗೆ ಬಿಡುತ್ತಿರಲಿಲ್ಲ. ಆದರೆ ಇವರನ್ನು ಮಾತ್ರ ಜೊತೆಯಲ್ಲೇ ಇಟ್ಟುಕೊಳ್ಳುತ್ತಿದ್ದರು. ಆಗ ಆಕೆಗೆ 16-17 ವಯಸ್ಸು! ಹನುಮಕ್ಕ ಎಂಬುವರ ಹೆರಿಗೆ ಸಮಯದಲ್ಲಿ ಅಜ್ಜಿ ಇರದ ಕಾರಣ ಇವರು ಹೆರಿಗೆ ಮಾಡಿಸಿದರು. ಇದೇ ನರಸಮ್ಮನವರು ಮಾಡಿಸಿದ ಮೊದಲ ಹೆರಿಗೆ ಅಲ್ಲಿಂದ ಇಲ್ಲಿಯವರೆಗೂ 15000ಕ್ಕೂ ಹೆಚ್ಚು ಹೆರಿಗೆ ಮಾಡಿಸಿದ್ದಾರೆ. ಗರ್ಭಿಣಿಯರಿಗೆ ನೈಸರ್ಗಿಕ ಆಯುರ್ವೇದ ಔಷಧಗಳನ್ನು ಕೂಡ ತಯಾರಿಸಿ ಕೊಡುತ್ತಿದ್ದರು. ಕಣ್ಣಿಗೆ ಬಿದ್ದ ಕಸ ತೆಗೆಯುವುದು, ಗಂಟಲಿನ ಶೀತದ ಗೆಡ್ಡೆಗೆ, ಕಿರುನಾಲಿಗೆ ಬೆಳೆದರೆ ಎಲ್ಲದಕ್ಕೂ ನೈಸರ್ಗಿಕ ಔಷದ ಕೊಡುವ ಮೂಲಕ ಹೆಸರುವಾಸಿಯಾಗಿದ್ದರು.
ಸುಮಾರು 98ವರ್ಷಗಳ ಸಾರ್ಥಕ ಬದುಕನ್ನು ಬದುಕಿದ ಸೂಲಗಿತ್ತಿ ನರಸಮ್ಮ ಅನಾರೋಗ್ಯದ ಕಾರಣ ವಿಧಿವಶರಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ನೀಡಲೇಂದು ಭಗವಂತನಲ್ಲಿ ಪ್ರಾರ್ಥಿಸೋಣ.