ಶ್ರೀಮತಿ ಸುಧಾಮೂರ್ತಿ ಅಂದ ತಕ್ಷಣ ನೆನಪಿಗೆ ಬರುವುದು ಅವರ ಸರಳತೆ. ಇನ್ಫೊಸೀಸ್ ಕಂಪನಿಯ ನಾರಾಯಣ ಮೂರ್ತಿಯವರ ಧರ್ಮಪತ್ನಿ ಇವರು. ಕೋಟಿಗಟ್ಟಲೇ ಆಸ್ತಿ, ವಿವಿಐಪಿ ಸ್ಟೇಟಸ್ ಇಂಟರ್ ನ್ಯಾಷನಲ್ ಬ್ರಾಂಡ್ ಕಂಪನಿ. ಪ್ರಪಂಚದಾದ್ಯಂತ ಬ್ರಾಂಚ್ಗಳು ಇವರು ಮನಸ್ಸು ಮಾಡಿದರೆ ಸುಖದ ಸುಪ್ಪತ್ತಿಗೆಯಲ್ಲೇ ಕಾಲ ಕಳೆಯಬಹುದು!
ಆದರೆ ಶ್ರೀಮಂತಿಕೆಯನ್ನು ತಲೆಗೇರಿಸಿಕೊಳ್ಳದೆ ಸರಳತೆಯ ಬದುಕನ್ನು ಬದುಕುವ ಮೂಲಕ ಈಗಿನ ಮಹಿಳೆಯರಿಗೆ ಆದರ್ಶವಾಗಿರುವ ಇವರ ಗುತ್ತಿಗೆಯಲ್ಲಿ ಕರಿಮಣಿ ಸರ ಸದಾ ಕಂಗೋಳಿಸುತ್ತದೆ. ಇವರು ಮನಸ್ಸು ಮಾಡಿದರೆ ಚಿನ್ನ ವಜ್ರ ಇವೆಲ್ಲವನ್ನೂ ಕೆ.ಜಿ. ಗಟ್ಟಲೇ ಧರಿಸ ಬಹುದಾದ ಶ್ರೀಮಂತಿಕೆ ಇದ್ದರು, ಸರಳವಾಗಿ ಕರಿಮಣಿ ಸರ ಹಾಕಿಕೊಂಡು ಮುಖದಲ್ಲಿ ಸದಾ ಮುಗುಳುನಗೆಯೊಂದಿಗೆ ತಮ್ಮ ಬದುಕನ್ನು ನಡೆಸುತ್ತಿದ್ದಾರೆ.
ಶ್ರೀಮತಿ ಸುಧಾಮೂರ್ತಿಯವರು ಕಾಲೇಜಿನಲ್ಲಿ ಓದುವಾಗ ಟಾಟ ಕಂಪನಿಯಿಂದ ಅವರ ಕಾಲೇಜಿಗೆ ಒಂದು ಪತ್ರ ಬರುತ್ತದೆ. ಅದರಲ್ಲಿ ಟಾಟ ಕಂಪನಿಯಲ್ಲಿ ಕೆಲಸ ಮಾಡಲು ಯುವಕರು ಬೇಕಾಗಿದ್ದಾರೆ ಅಂತೆ ಬರೆದಿರುತ್ತಾರೆ. ಇದನ್ನು ಗಮನಿಸಿದ ಸುಧಾ ಮೂರ್ತಿಯವರು ಆಗಿನ ಟಾಟ ಕಂಪನಿಯ ರತನ್ ಟಾಟರವರಿಗೆ ಒಂದು ಪತ್ರ ಬರೆಯುತ್ತಾರೆ. ಅದರಲ್ಲಿ ಅವರು ಹೆಣ್ಣು ಮಕ್ಕಳ ಪರ ಧ್ವನಿ ಎತ್ತುತ್ತಾರೆ. ಕೇವಲ ಯುವಕರು ಮಾತ್ರ ಬೇಕಾಗಿದ್ದಾರೆ ಎಂದು ಬರೆದಿರುವ ನಿಮ್ಮ ಪತ್ರವನ್ನು ಖಂಡಿಸುತ್ತೇನೆಂದು ಆ ಪತ್ರದಲ್ಲಿ ಬರೆದಿರುತ್ತಾರೆ.
ಇದನ್ನು ಓದಿದ ರತನ್ ಟಾಟ ಸುಧಾ ಮೂರ್ತಿಯವರ ಆತ್ಮವಿಶ್ವಾಸ ಮೆಚ್ಚಿ ಖುದ್ದಾಗಿ ಬಂದು ಸುಧಾ ಮೂರ್ತಿಯವರನ್ನು ಸಂದರ್ಶಿಸಿ ಕೆಲಸಕ್ಕೆ ಆಹ್ವಾನಿಸುತ್ತಾರೆ. ಹೆಣ್ಣೆಂದರೆ ಕೇವಲ ಮನೆಗೆ ಮಾತ್ರ ಎಂದು ಸೀಮಿತವಾಗಿದ್ದ ಕಾಲದಲ್ಲೇ ಸುಧಾಮೂರ್ತಿಯವರು ಹೆಣ್ಣಿಗೆ ಗಂಡಿನಷ್ಟೇ ಸಮಾನ ಹಕ್ಕಿದೆ, ಹೆಣ್ಣು ಕೂಡ ಗಂಡಿನ ಹಾಗೆ ಹೊರಗೆ ಕಾರ್ಖಾನೆಗಳಲ್ಲಿ ದುಡಿಯಬಲ್ಲಳು ಎಂದು ತೋರಿಸಿ ಕೊಡುತ್ತಾರೆ.
ಮತ್ತೊಂದು ಸ್ವಾರಸ್ಯಕರ ಸಂಗತಿಯೆಂದರೆ ಸುಧಾಮೂರ್ತಿ ಮತ್ತು ನಾರಾಯಣಮೂರ್ತಿಯವರ ಮದುವೆಯ ಖರ್ಚು ಕೇವಲ ರೂ. 400 ಮಾತ್ರ! ಸರಳತೆಯನ್ನು ತಮ್ಮ ಬದುಕಿನೂದ್ದಕ್ಕೂ ಮೈಗೂಡಿಸಿಕೊಂಡು ಬೆಳೆದ ಶ್ರೀಮತಿ ಸುಧಾಮೂರ್ತಿಯವರು ಇಂದು ತಮ್ಮ ಪೌಂಡೇಷನ್ ಮುಖೇನ ಶಾಲಾ ಮಕ್ಕಳಿಗೆ, ವೃದ್ದರಿಗೆ, ಬಡವರಿಗೆ, ಸಹಾಯ ಹಸ್ತ ನೀಡುವ ಮೂಲಕ ಬೆಳಕಾಗಿದ್ದಾರೆ.
ಸುಸಂಸ್ಕøತ ಹೆಣ್ಣು ಮಕ್ಕಳು ಹೇಗಿರಬೇಕು ಎಂಬುದನ್ನು ಇವತ್ತಿನ ಹೆಣ್ಣುಮಕ್ಕಳು ಶ್ರೀಮತಿ ಸುಧಾಮೂರ್ತಿಯವರನ್ನು ನೋಡಿ ಕಲಿಯಬೇಕು! ಕೋಟಿಗಟ್ಟಲೇ ಹಣವಿದ್ದರೂ, ಸಮಾಜದಲ್ಲಿ ಒಳ್ಳೆಯ ಹೆಸರಿದ್ದರೂ, ಕೊಂಚವೂ ಅಹಂ ಇಲ್ಲದೇ ಸರಳತೆಯ ಬದುಕನ್ನು ನಡೆಸುತ್ತಿರುವ ಇವರು ಎಲ್ಲರಿಗೂ ಮಾದರಿ.
-ನವೀನ್ ರಾಮನಗರ