ಉಪಯುಕ್ತ ಮಾಹಿತಿ

ನಂಜನಗೂಡಿನ ಹಲ್ಲುಪುಡಿಗೆ 106 ವರ್ಷ.

ನಂಜನಗೂಡಿನ ಹಲ್ಲುಪುಡಿಗೆ 106 ವರ್ಷ.ಒಂದಾಣೆ ಹಲ್ಲುಪುಡಿ ಎಂದೇ ಖ್ಯಾತವಾಗಿದ್ದ ಬಿ.ವಿ. ಪಂಡಿತರ ನಂಜನಗೂಡಿನ ಹಲ್ಲಿನಪುಡಿಗೆ ಈಗ ನೂರು ವರ್ಷ. ಹಳೆ ಮೈಸೂರು ಭಾಗದಲ್ಲಿ ಈಗಲೂ ಜನಪ್ರಿಯವಾಗಿರುವ ನಂಜನಗೂಡಿನ ಹಲ್ಲಿನಪುಡಿ ಸದ್ಯ ಮೂರು ರೂಪಾಯಿಗೆ ಮಾರಾಟವಾಗುತ್ತಿದೆ

ಮೈಸೂರಿನ ಆಯುರ್ವೇದ ಕಾಲೇಜಿನ ಮೊದಲ ಬ್ಯಾಚಿನ ವಿದ್ಯಾರ್ಥಿಯಾಗಿದ್ದ ಬಿ.ವಿ. ಪಂಡಿತರು ನಂಜನಗೂಡಿನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಹೋಮ ನಡೆದ ನಂತರ ಅದರ ಬೂದಿಯನ್ನು ಕಂಡು ಹಲ್ಲಿನಪುಡಿಯಾಗಿ ತಯಾರಿಸಬಹುದು ಎಂದು ನಿರ್ಧರಿಸಿದರು. ನಂತರ ಭತ್ತದ ಹೊಟ್ಟನ್ನು ತರಿಸಿ ಅದನ್ನು ಬೂದಿ ಮಾಡಿದ ನಂತರ ಗಿಡಮೂಲಿಕೆಗಳನ್ನು ಮಿಶ್ರಣ ಮಾಡಿ ಹಲ್ಲಿನಪುಡಿ ಸಿದ್ಧಗೊಳಿಸಿದರು. ಹೀಗೆ 1913ರ ಫೆಬ್ರುವರಿ ತಿಂಗಳಲ್ಲಿ ನಂಜನಗೂಡಿನ ನಾರಾಯಣ ಅಗ್ರಹಾರದಲ್ಲಿಯ ತಮ್ಮ ಮನೆಯಲ್ಲಿ ಹಲ್ಲಿನಪುಡಿ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ಇದು ರಾಜ್ಯದಾದ್ಯಂತ ಅಲ್ಲದೇ ಆಂಧ್ರಪ್ರದೇಶ ಹಾಗೂ ತಮಿಳುನಾಡಿನ್ಲ್ಲಲೂ ಪ್ರಸಿದ್ಧವಾಯಿತು.

ಬಿ.ವಿ. ಪಂಡಿತರ ಜತೆಗೆ ಅವರ ಪುತ್ರರಾದ ಬಿ.ವಿ. ನಂಜುಂಡಸ್ವಾಮಿ, ಬಿ.ವಿ. ರಾಮಸ್ವಾಮಿ, ಬಿ.ವಿ. ಬಾಲಸುಬ್ರಹ್ಮಣ್ಯ ಹಾಗೂ ಬಿ.ವಿ. ವೆಂಕಟೇಶಮೂರ್ತಿ ಅವರು ಹಲ್ಲಿನಪುಡಿ ತಯಾರಿಕೆ ಹಾಗೂ ಮಾರುಕಟ್ಟೆ ವ್ಯವಸ್ಥೆ ನೋಡಿಕೊಂಡರು. ಇವರಲ್ಲಿ ನಂಜುಂಡಸ್ವಾಮಿ ಹಾಗೂ ವೆಂಕಟೇಶಮೂರ್ತಿ ಆಯುರ್ವೇದ ವೈದ್ಯರು. ಇದರೊಂದಿಗೆ ಸದ್ವೈದ್ಯ ಶಾಲಾ ಪ್ರೈವೇಟ್ ಲಿಮಿಟೆಡ್ ಕಂಪೆನಿ ಎಂದು ಕಟ್ಟಿಕೊಂಡು ಆಯುರ್ವೇದ ಔಷಧಿ ತಯಾರಿಕೆ ಹಾಗೂ ಮಾರಾಟ ಕೈಗೊಂಡರು.

1975ರಲ್ಲಿ ಬಿ.ವಿ. ಪಂಡಿತರು ವಿಧಿವಶರಾದ ನಂತರ ಅವರ ಪುತ್ರರು ಹಲ್ಲಿನಪುಡಿ ವಹಿವಾಟು ಮುಂದುವರಿಸಿದರು. ಎಂಬತ್ತರ ದಶಕದವರೆಗೆ ಪ್ರಸಿದ್ಧವಾಗಿದ್ದ ಹಲ್ಲಿನಪುಡಿ, ಟೂತ್ ಪೇಸ್ಟ್‌ಗಳು ಮಾರುಕಟ್ಟೆಗೆ ಬಂದ ಪರಿಣಾಮ ಬೇಡಿಕೆ ಕುಸಿಯಿತು. ತಿಂಗಳಿಗೆ 10 ಲಕ್ಷ ಪ್ಯಾಕೆಟುಗಳು ಮಾರಾಟವಾಗುತ್ತಿದ್ದುದು ಈಗ ಕೇವಲ 1 ಲಕ್ಷ ಪ್ಯಾಕೆಟುಗಳು ಮಾತ್ರ ಮಾರಾಟವಾಗುತ್ತಿವೆ.

ಸದ್ಯ ಮೂರನೇ ತಲೆಮಾರಿನ ಬಿ.ಎಸ್. ಜಯಂತ್ ಕಾರ್ಯನಿರ್ವಾಹಕ ನಿರ್ದೇಶಕರಾಗಿ, ಅವರ ಸೋದರರಾದ ರಾಜೇಶ್ ಹಾಗೂ ರಾಮಗೋಪಾಲ್ ಕಂಪೆನಿಯ ನಿರ್ದೇಶಕರಾಗಿ ದುಡಿಯುತ್ತಿದ್ದಾರೆ.“ಈಗಲೂ ಭತ್ತದ ಹೊಟ್ಟಿನ ಬೂದಿಯಿಂದಲೇ ಹಲ್ಲಿನಪುಡಿಯನ್ನು ತಯಾರಿಸಲಾಗುತ್ತಿದೆ. ಕೈಬೆರಳಿನಿಂದ ತಿಕ್ಕುವುದರಿಂದ ಹಲ್ಲುಗಳು ಸ್ವಚ್ಛಗೊಳ್ಳುತ್ತವೆ ಎನ್ನುತ್ತಾರೆ” ಸಂಸ್ಥೆಯ ನಿರ್ವಾಹಕರಲ್ಲೊಬ್ಬರಾದ ರಾಮಗೋಪಾಲ್.

“ಪುಡಿಯಲ್ಲಿ ಗಿಡಮೂಲಿಕೆಗಳ ಮಿಶ್ರಣ ಇರುವುದರಿಂದ ಒಸಡಿನ ನೋವು ನಿವಾರಣೆಯಾಗುತ್ತದೆ. ಎಲೆ-ಅಡಿಕೆ, ತಂಬಾಕು ಸೇವನೆಯಿಂದ ಹಲ್ಲಿನ ಮೇಲೆ ಉಂಟಾಗುವ ಕೆಂಪು ಬಣ್ಣ ಕೂಡಾ ಹೋಗುತ್ತದೆ. ಬೆಳಿಗ್ಗೆ ಹಾಗೂ ರಾತ್ರಿ ಮಲಗುವ ಮುನ್ನ ಉಜ್ಜುವುದರಿಂದ ಹಲ್ಲುಗಳು ಸುರಕ್ಷಿತವಾಗಿರುತ್ತವೆ. ಮುಖ್ಯವಾಗಿ ಯಾವುದೇ ಅಡ್ಡಪರಿಣಾಮಗಳಿಲ್ಲ” ಎಂದು ಅವರು ಸ್ಪಷ್ಟಪಡಿಸುತ್ತಾರೆ.

“ಟೂತ್‌ಪೇಸ್ಟ್‌ಗಳ ಎದುರು ನಮ್ಮ ದೇಸಿ ಹಲ್ಲಿನಪುಡಿ ಸೊರಗಿದೆ ನಿಜ, ಆದರೆ ಗುಣಮಟ್ಟವನ್ನು ಕಾಪಾಡಿಕೊಂಡು ಬಂದಿದ್ದೇವೆ. ಹೀಗಾಗಿ ಅದರ ಮಹತ್ವ ಗೊತ್ತಿರುವವರು ಈಗಲೂ ಬಳಸುತ್ತಾರೆ. ಅದರ ಮಾರುಕಟ್ಟೆ ವಿಸ್ತರಿಸಲು ಶ್ರಮಿಸುತ್ತೇವೆ. ಹಲ್ಲಿನ ಪುಡಿಯ ಶತಮಾನೋತ್ಸವ ಸಮಾರಂಭವನ್ನು ಶೀಘ್ರದಲ್ಲೇ ಆಯೋಜಿಸಲಾಗುತ್ತದೆ. ಆ ಸಮಾರಂಭದಲ್ಲಿ ಬಿ.ವಿ. ಪಂಡಿತರ ನಂಜನಗೂಡಿನ ಟೂತ್ ಪೇಸ್ಟ್ ಬಿಡುಗಡೆಗೊಳಿಸುವ ಯೋಜನೆಯಿದೆ. ಹಲ್ಲಿನಪುಡಿಗೆ ಬಳಸುವ ಸಾಮಗ್ರಿಗಳಿಂದಲೇ ಪೇಸ್ಟ್ ತಯಾರಿಸುತ್ತೇವೆ’ ಎಂದು ರಾಮಗೋಪಾಲ್ ತಮ್ಮ ಸಂಸ್ಥೆಯ ಯೋಜನೆಗಳನ್ನು ತೆರೆದಿಡುತ್ತಾರೆ. 1887ರಲ್ಲಿ ಜನಿಸಿದ್ದ ಬಿ.ವಿ. ಪಂಡಿತರ ಜನ್ಮಶತಮಾನೋತ್ಸವವನ್ನು 1988ರಲ್ಲಿ ಆಚರಿಸಲಾಗಿತ್ತು.

Information credti:PV

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!