ಎಂ.ಆರ್.ಕೆ ಕಾಲಂ

ಆಷಾಢದ ಕಪ್ಪುಮೋಡಗಳ ಸೀಳಿ!

 ಹೊರಗಿನ ಋತುಮಾನಕ್ಕೂ ಒಳಗಿನ ಋತುಮಾನಕ್ಕೂ ಸಂಬಂಧವಿದೆಯೇ ಎಂದು ಹಲವಷ್ಟು ಬಾರಿ ಯೋಚಿಸಿದ್ದೇನೆ. ಖಂಡಿತ ಇದೆ ಎನ್ನುವುದು ನಿಜವಾದರೂ ಪೂರ್ಣಸತ್ಯವಲ್ಲ. ಬಯಲು ಸೀಮೆಯ ಬಿರುಬಿಸಿಲಲ್ಲಿ ಬೆಳೆದ ನನ್ನಂಥವರು ಬಾಯಿಯಲ್ಲಿ ಕೂಡ ಕೆಂಡವನ್ನೇ ಉಗುಳುತ್ತೇವೆ. ವಿನಾಕಾರಣ ಉದ್ವಿಗ್ನಗೊಂಡು . ಸಣ್ಣ ಸಣ್ಣ ವಿಷಯಕ್ಕೆಲ್ಲ ಜಗಳ ತೆಗೆಯುತ್ತೇವೆ. ಬಯಲು ಸೀಮೆಯ ಹೆಚ್ಚಿನ ಜನರ ಬೆಳಗುಗಳು ಗುದ್ದಾಟದಿಂದಲೇ ಆರಂಭವಾಗುತ್ತದೆ. ವಸಂತನೇ ಬರಲಿ, ಗಿಡಮರಗಳು ಚಿಗುರುತ್ತಲೇ ಇರಲಿ, ಹೂವುಗಳು ತೂಗುತ್ತಲೇ ಇರಲಿ ಬೇಸಗೆಯ ಬಿರುಬಿಸಿಲಂಥ ಚಡಪಡಿಕೆ ಮಾತ್ರ ನಿಲ್ಲುವುದೇ ಇಲ್ಲ.

ಆಷಾಢದ ಮೋಡ ಕವಿದ ವಾತಾವರಣ ಯಾರ ಎದೆಯಲ್ಲಿ ದುಗುಡ ಮೂಡಿಸುವುದಿಲ್ಲ ಹೇಳಿ? ಮಳೆ ಸುರಿಸುವುದು ಅಷ್ಟರಲ್ಲೇ ಇದ್ದರೂ ಮೋಡಗಳು ಮಾತ್ರ ದಟ್ಟೈಸುತ್ತಲೇ ಇರುತ್ತವೆ. ಈ ಕವಿದ ಮೋಡಗಳು, ಹಗಲಲ್ಲಿಯೇ ಕಾರ್ಗತ್ತಲನ್ನು ಸೃಷ್ಟಿಸಿ ಮನಸ್ಸಿಗೆ ಮಂಕು ಕವಿಸಿಬಿಡುತ್ತವೆ. ಭೋರೆಂದು ಬೀಸುವ ಗಾಳಿ ಕ್ಷಣಾರ್ಧದಲ್ಲಿ ಎಲ್ಲವನ್ನು ಚದುರಿಸುವಂತೆ ಕಂಡರೂ ಕಪ್ಪಿಟ್ಟ ಮನಸ್ಸು ಹೊಳವಾಗುವುದಿಲ್ಲ. ಇತ್ತ ವೈಶಾಖದ ಬೇಸಗೆಯ ಧಗೆ, ಅತ್ತ ಶ್ರಾವಣದ ಸಂತಸ ಎರಡನ್ನೂ ಹೊತ್ತು ವಿಚಿತ್ರ ತಳಮಳವನ್ನು ಒಳಗೂ ಹೊರಗೂ ಸೃಷ್ಟಿಸಿಬಿಡುತ್ತದೆ.

ಹಾಡು ಹಗಲೇ ರವಿ ಕಾಣದಂತೆ ಮಾಡುವ ಶ್ರಾವಣದ ಮೋಡಗಳು ಸುರಿಸುವ ಮಳೆಯಿಂದಾಗಿ ಒಳಗೆ ತುಂಬಿದ್ದ ಕೊಳೆ ಕಶ್ಮಲಗಳು ತೊಡೆದು ಬದುಕಿಗೆಂಥ ಹುರುಪು ಹುಟ್ಟುತ್ತದೆ. ಸುತ್ತಲಿನ ಹಸಿರು, ಒಳಮನವನ್ನು ಚಿಗುರಿಸುತ್ತ ಹೋಗುತ್ತದೆ. ಶರದೃತುವಿನ ತಿಳಿ ಆಗಸ ಮನಸ್ಸನ್ನು ತಿಳಿ ಮಾಡುತ್ತ ಹೋದರೆ, ಹೇಮಂತದ ಸಂಜೆಗಳು ನೀರವವಾಗುತ್ತ, ಒಂಟಿತನದ ನೋವನ್ನು ದ್ವಿಗುಣಗೊಳಿಸುತ್ತದೆ. ಎಲೆ ಕಳಚುವಂತೆ ಮಾಡುವ ಶಿಶಿರನ ಹೆಜ್ಜೆಗಳು ಬದುಕಿನ ನಶ್ವರತೆಯನ್ನು ಎದೆಗೆ ತುಂಬಿ ಕಳವಳ ಹುಟ್ಟಿಸುತ್ತದೆ.

ಹೀಗಾಗಿಯೇ ಹವಾಮಾನಕ್ಕೆ ಅನುಗುಣವಾಗಿಯೇ ಹೆಚ್ಚಿನವರ ಸ್ವಭಾವಗಳು ರೂಪುಗೊಂಡಿರುತ್ತವೇನೋ ಎನ್ನುವ ಭಾವ ಮೂಡುವುದು. ಅದು ಹೆಚ್ಚಿನಂಶ ನಿಜವೂ ಹೌದು. ತಣ್ಣಗಿನ ಯೂರೋಪಿಯನ್ನರಿಗೂ ಕುಣಿತವೇ ಮೈವೆತ್ತ ಆಫ್ರಿಕನ್ನರಿಗೂ ಮತ್ತು ಮಲೆನಾಡಿನ ಜನಗಳ ಸೌಮ್ಯ ಸ್ವಭಾವಕ್ಕೂ ಬಯಲು ಸೀಮೆಯ ಜನರ ಉರಿಮಾರಿತನಕ್ಕೂ ಇರುವ ವ್ಯತ್ಯಾಸ ಗಮನಿಸಿದರೆ ಹೆಚ್ಚು ಅರ್ಥವಾಗುತ್ತದೆ. ಆದರಿದು ವಿಷಯದ ಹೊರಮೈ. ಅಂತರಂಗದಲ್ಲಿ ಎಲ್ಲರೂ ಕೊನೆಗೆ ಮನುಷ್ಯರೇ. ಮನುಷ್ಯನಿಗಿರುವ ಸ್ವಾರ್ಥ, ಕ್ರೌರ್ಯ, ಒಳ್ಳೆಯತನ ಇತ್ಯಾದಿಗಳು ಉಷ್ಣ, ಶೀತ, ಸಮಶೀತೋಷ್ಣ ಹೀಗೆ ಯಾವ ವಲಯದಲ್ಲಿದ್ದರೂ ಇದ್ದೆ ಇರುತ್ತವೆ.

ಹೊರಗಿನ ವಾತಾವರಣಕ್ಕೆ ಹೊಂದಿಕೊಂಡಂತೆ ನಮ್ಮ ಪ್ರತಿಕ್ರಿಯೆ ಇರುವುದು ಕೂಡ `danger of a single Story’ ಅನ್ನಿಸುತ್ತದೆ. ಮನುಷ್ಯನ ಮನಸ್ಸು ಇವೆಲ್ಲವನ್ನೂ ಮೀರಿ ವರ್ತಿಸುವುದುಂಟು. ನಾನು ಓದಿದ ಒಂದು ಕವಿತೆ ನನಗಿದಕ್ಕೆ ಸಮರ್ಥನೆ ಒದಗಿಸಿತು. ಅದೊಂದು ಶರದೃತುವಿನ ಬೆಳಗು. ಬಾನು ತಿಳಿಯಾಗಿದೆ. ಬಿಳಿಮುಗಿಲಿನ ದೋಣಿ ಆಕಾಶದಲ್ಲಿ ವಿಹಾರಕ್ಕೆ ಹೊರಟಿದೆ. ಕೊಳದ, ಬಯಲ, ಬೆಟ್ಟದ ಮೇಲೆಲ್ಲ ಬೆಚ್ಚನೆಯ ಕಿರುಬಿಸಿಲು ಒರಗಿಕೊಂಡಿದೆ. ಹಸಿರಿನ ಮೇಲಿರುವ ಹಿಮಮಣಿಗಳು ಮುತ್ತಿನ ಬಾಣಗಳನ್ನು ದಿಕ್ಕುದಿಕ್ಕಿಗೂ ಎಸೆದಿವೆ. ಆ ಶರದೃತುವಿನ ಹಗಲಲ್ಲಿ ಚೆಲುವಿದೆ, ಕಳೆಯಿದೆ, ಬಿಡುವಿದೆ.

 

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!