ಎಂ.ಆರ್.ಕೆ ಕಾಲಂ

`ಆರು ಹಾಕಿಕೊಂಡು’ ಬದುಕುವುದು! -ಎಂ.ಆರ್. ಕಮಲಾ

ನಿರಂತರ ನಾಟಕ ಮಾಡುತ್ತ, ತನ್ನ ಅಸ್ತಿತ್ವವನ್ನು ಪ್ರತಿಕ್ಷಣ ಎಲ್ಲರೆದುರು ಸ್ಥಾಪಿಸುತ್ತ ಓಡಾಡುತ್ತಿದ್ದ ವಿದ್ಯಾರ್ಥಿಯ ಬಗ್ಗೆ ಅವನು ಯಾವಾಗಲೂ ಆರುಹಾಕ್ಕೋತಾನೆ ಮಿಸ್, ಮೂರು ಕಾಸಿನ ಕೆಲಸ ಮಾಡಲ್ಲ’ ಎಂದು ಉಳಿದ ವಿದ್ಯಾರ್ಥಿಗಳು ಸಿಟ್ಟಿನಿಂದ ಹೇಳುತ್ತಿದ್ದರು. ಆ ಪದ ಮೊದಮೊದಲು ವಿಚಿತ್ರವಾಗಿ ಕೇಳುತ್ತಿದ್ದರೂ ಕೊನೆಗೆ ನಾನೇ, `ಯಾವನೋ ಅವನು ಆರುಹಾಕ್ಕೊಳ್ಳೋದು, ನಿನ್ನ ಯೋಗ್ಯತೆ ಗೊತ್ತು ನನಗೆ’ ಎಂದು ಕಿರುಚುತ್ತಿದ್ದೆ. ಈಗ ಎಲ್ಲವನ್ನು ಕಿರುಚಿ ಕಿರುಚಿ ಹೇಳುವ ಸ್ಥಿತಿ ಬಂದಿದೆ. ಮೆಲುದನಿಗಳು ಇಲ್ಲಿ ಕೇಳುವುದೇ ಇಲ್ಲ. ಯಾರನ್ನಾದರೂ ಉಗಿದು, ಹಂಗಿಸಿ ಅಪಹಾಸ್ಯ ಮಾಡಿ, ದನಿ ಎತ್ತರಿಸುವವರಿಗೆ ಲೆಕ್ಕವಿರದಷ್ಟು ಹಿಂಬಾಲಕರಿರುತ್ತಾರೆ. (ಫೇಸ್ ಬುಕ್ ಭಾಷೆಯಲ್ಲಿ ಫಾಲೋಯರ್ಸ್). ಈ ನಿರಂತರ ನಾಟಕದಲ್ಲಿ ನಾವು ಕೂಡ ಗೊತ್ತಿದ್ದೋ ಗೊತ್ತಿಲ್ಲದೆಯೋ ಶಾಮೀಲಾಗಿದ್ದೇವೆ. 

ಆಯ್ಕೆಯೇ ಕೂಗುಮಾರಿಗಳಾಗಿದ್ದಾಗ!-ಎಂ.ಆರ್. ಕಮಲಾ

ಎಲ್ಲ ವಿಚಾರಗಳು ಬಹುಬೇಗ ಹಳಸಿ ಹೋಗುವ, ಯಾವುದೂ ಅಚ್ಚರಿಯೆನ್ನಿಸದ, ಮನಸ್ಸನ್ನು ಯಾವುದೂ ಗಾಢವಾಗಿ ಕಲಕದ ವಿಚಿತ್ರ ಸನ್ನಿವೇಶದಲ್ಲಿ ಬಹು ಸುಲಭವಾಗಿ ಉಪಯೋಗಿಸುತ್ತಿರುವ ಇನ್ನೊಂದು ಪದವೆಂದರೆ, `ಅಯ್ಯೋ ಬಿಟ್ಟಾಕು’! ಎಲ್ಲವನ್ನು ಬಿಟ್ಟಾಕಿ, ಬಿಟ್ಟಾಕಿ ಒಳಗೆ ಶೂನ್ಯತೆಯನ್ನು ತುಂಬಿಕೊಂಡು ಅಬ್ಬೇಪಾರಿಗಳೋ ಅನಾಥರೋ ಆಗುತ್ತಾ ಹೋಗುತ್ತಿರುವುದರಿಂದಲೇ ಖಿನ್ನತೆ, ಆತ್ಮಹತ್ಯೆ ಮತ್ತು ನೂರೆಂಟು ಮಾನಸಿಕ ರೋಗಗಳು. ಈ ಬಿಟ್ಟಾಕುವುದಕ್ಕಿಂತ ಕಟ್ಟಿಕೊಳ್ಳುವುದೇ ಹೆಚ್ಚು ಜೀವಂತಿಕೆ ಮತ್ತು ಬದುಕಿನ ಅನಿವಾರ್ಯ ಮಾರ್ಗವಾಗಿಬಿಟ್ಟಿದೆ. ಹೀಗಾಗಿ ಎಲ್ಲವನ್ನು ಬಿಟ್ಟಾಕುವವರಿಗಿಂತ ಆರುಹಾಕಿಕೊಳ್ಳುವವರೇ ಸದ್ಯಕ್ಕೆ ಪ್ರಿಯವಾಗಿದ್ದಾರೆ!

ಈ ಮೊಗಹೊತ್ತಿಗೆಯಲ್ಲಿ ಹಾಡನ್ನು ಹಾಡುವವರು, ವಿವಿಧ ಅಡುಗೆ ತಯಾರಿಸುವವರು, ನನ್ನಂಥ ಬರಹಗಾರರು, ಸಿನೆಮಾ ತೆಗೆಯುವವರು, ಪ್ರವಾಸ ಮಾಡುವವರು, ಚಿಂತನೆಗಳನ್ನು ಬಿತ್ತುವವರು ಹೀಗೆ ಪ್ರತಿಯೊಬ್ಬರೂ ದಿನಕ್ಕೊಂದು ಪೋಸ್ಟ್ ಹಾಕಿ ಆರುಹಾಕಿಕೊಳ್ಳುತ್ತಿದ್ದಾರೆ. ಇದನ್ನು ಯಾರಾದರೂ ನೋಡುತ್ತಾರೆ, ಓದುತ್ತಾರೆ ಎನ್ನುವುದಕ್ಕೆ ಯಾವುದೇ ಖಾತ್ರಿಯಿಲ್ಲ. ಬೆಳಗ್ಗೆ ಎದ್ದು ಸುಮ್ಮನೆ ಎಲ್ಲ ಪೋಸ್ಟ್ ಗಳಿಗೆ ಕೆಲವರು ಲೈಕ್ ಒತ್ತುತ್ತಾ ಹೋಗುತ್ತಿರುತ್ತಾರೆ. ತೀರಾ ಗೆಳೆಯರದ್ದು ಅನ್ನಿಸಿದರೆ ಹೃದಯವನ್ನೇ ಕೊಡುತ್ತಾರೆ. ಮಾಡಲೇನೂ ತೋಚದಿದ್ದರೆ ಯಾವುದೋ ಒಂದು ಎಮೋಜಿ ಕುಣಿಯುತ್ತದೆ. ಇವರ ಮಧ್ಯೆ ನಿಜವಾದ ಓದುಗರು, ನೋಡುಗರು ಯಾರೆಂದು ತಿಳಿಯುವುದೇ ಇಲ್ಲ. ನಮಗೆ ಕಾರಿದ ನೆಮ್ಮದಿ ಅಷ್ಟೇ. ಅಲ್ಲಲ್ಲಿ ಇವನ್ನೆಲ್ಲ ನಿಜವಾಗಿ ಪ್ರೀತಿಯಿಂದ ನೋಡುವವರು, ಓದುವವರು ಇದ್ದರೂ ಅವರ್ಯಾರೆಂದು ಸರಿಯಾಗಿ ತಿಳಿಯುವುದೇ ಇಲ್ಲ.
ಆಷಾಢದ ಕಪ್ಪುಮೋಡಗಳ ಸೀಳಿ! -2
ಇವತ್ತು ಇದ್ದಕ್ಕಿದ್ದಂತೆ ಪಂಪನ ಆದಿಪುರಾಣದ ನೀಲಾಂಜನೆಯ ನೃತ್ಯದ ಭಾಗ ನೆನಪಿಗೆ ಬಂತು. ಅರಮನೆಯಲ್ಲಿ ನಡೆಯುತ್ತಿರುವ ನೀಲಾಂಜನೆಯ ನೃತ್ಯವನ್ನು ಆದಿನಾಥ ನೋಡುತ್ತಿರುವಾಗಲೇ ಅವಳು ಆಯುಷ್ಯ ಮುಗಿದು ಸತ್ತು ಹೋಗುತ್ತಾಳೆ. ರಸಭಂಗವಾಗದಿರಲೆಂದು ಇಂದ್ರ ಕ್ಷಣಾರ್ಧದಲ್ಲಿಯೇ ಅವಳಂತೆಯೇ ಮತ್ತೊಬ್ಬಳನ್ನು ಸೃಷ್ಟಿಸಿ ನರ್ತನ ಮುಂದುವರೆಯುವಂತೆ ನೋಡಿಕೊಳ್ಳುತ್ತಾನೆ. ಬೇರಾರಿಗೂ ಇದು ಅರಿವಿಗೆ ಬಾರದಿದ್ದರೂ ಸೂಕ್ಷ್ಮ ಹೃದಯಿಯಾದ ಆದಿನಾಥ ನೀಲಾಂಜನೆಯ ಸಾವನ್ನು ಗಮನಿಸುತ್ತಾನೆ. ಅವನ ಪಕ್ವ ಜೀವದಲ್ಲಿ ಮಡುಗಟ್ಟಿದ್ದ ವೈರಾಗ್ಯ ಈ ಮೂಲಕ ಹೊರಬಂದು ತಪಸ್ಸಿಗೆ ತೆರಳಲು ಸಿದ್ಧವಾಗುತ್ತಾನೆ. ಬದುಕಿನ ನಾಟ್ಯಕ್ಕೆ ನಿರಂತರತೆ ಇಲ್ಲದಿದ್ದರೆ ಸಾವು ಎಂದು ಇಂದ್ರನಿಗೆ ಗೊತ್ತಿದೆ. ಹಾಗಾಗಿಯೇ ನಾಟ್ಯ ಮುಂದುವರಿಯುವಂತೆ ನೋಡಿಕೊಳ್ಳುತ್ತಾನೆ. ಯಾರೇ ಬರಲಿ, ಇರಲಿ ‘ Show must go on ‘!

ತಲೆಕೆಡಿಸುವ ನೂರೆಂಟು ವಾಟ್ಸಾಪ್ ಗ್ರೂಪ್ ಗಳಲ್ಲಿ ಕೆಲವರು ದಿನನಿತ್ಯ ತಾವು ಬರೆಯುವುದನ್ನು ಎಲ್ಲರಿಗೂ ಶೇರ್ ಮಾಡುತ್ತಾರೆ. ಹುಚ್ಚು ಹಿಡಿಸುವಷ್ಟು ಚಿತ್ರಗಳನ್ನು ಕಳಿಸುತ್ತಾರೆ. ಆ ವಿಷಯ, ಈ ವಿಷಯ ಎಂದು ಸಾವಿರ ಮಾಹಿತಿಗಳನ್ನು ತುಂಬಿ ತುಂಬಿ ಯಾವುದೂ ತಲೆಯಲ್ಲಿ ಉಳಿಯದಂತೆ ನೋಡಿಕೊಳ್ಳುತ್ತಾರೆ! ಒಟ್ಟಿನಲ್ಲಿ ನಿರಂತರ ನಾಟ್ಯ ಮಾಡುತ್ತಿರುತ್ತಾರೆ ಅಥವಾ ಆರು ಹಾಕ್ಕೊಳ್ತಾರೆ. ಯಾರು ನನಗೇನು ಕಳಿಸಿದರೂ ನಾನು ಅಸಮಾಧಾನಗೊಳ್ಳುವುದಿಲ್ಲ, ಆದರೆ ಎಲ್ಲವನ್ನೂ ಓದುವುದಿಲ್ಲ. ನಾನು ಓದಲೇಬೇಕೆಂದು ಅವರು ಒತ್ತಾಯಿಸುವುದೂ ಇಲ್ಲ. ಇದರ ಜೊತೆಗೆ ಇನ್ಸ್ಟಾಗ್ರಾಮ್, ಮೆಸೆಂಜರ್ ಗಳು! ಈಗೀಗ ನನಗೆ ಹೆಸರುಗಳೇ ಮರೆತುಹೋಗುತ್ತಿವೆ. ಎಲ್ಲೋ ಸಭೆಯಲ್ಲಿ ಸಿಕ್ಕು `ನಾನು ಫೇಸ್ ಬುಕ್ ಗೆಳೆಯ/ ಗೆಳತಿ, ಮೊನ್ನೆ ಬರೆದ ಕವಿತೆಯನ್ನು ನೀವು ಇಷ್ಟಪಟ್ಟಿದ್ದಿರಿ’ ಎನ್ನುತ್ತಾರೆ. ಆದರೆ ಕವಿತೆ, ಕವಿ ಇಬ್ಬರೂ ಮನಸ್ಸಿನಿಂದ ಮರೆಯಾಗಿದ್ದಾರೆ.

ಈ ಕಬಡ್ಡಿ ಆಡುವಾಗ ಕಬಡಿ ಕಬಡಿ ಎಂದು ಒಳಗೆ ನುಗ್ಗಿದವನನ್ನು ಕುರಿತು, ಎದುರಾಳಿಗಳು ಕೈ ಕೈ ಹಿಡಿದುಕೊಂಡವರು, ‘ಆಡ್ಕೊಳ್ಳಿ ಬಿಡೋ, ಬಿಡೋ’ ಅಂತಿದ್ದರು. ಉಸಿರು ಬಿಗಿ ಹಿಡಿದು ಹೇಳುವುದು ತಾನಾಗೇ ನಿಂತು ಔಟ್ ಆಗಲಿ ಅಂತ…ಅದೇ ಇದಿರಬಹುದು ! ನಾವೂ ಕೆಲವರನ್ನು ಆಡಲಿ ಬಿಡು ಎಂದು ನೋಡುತ್ತೇವೆ, ಕೆಲವರ ಜೊತೆ ಸೇರುತ್ತೇವೆ !

ಇದು ಅರಳು ಮರಳು ಇರಬಹುದೇನೋ ಎಂದು ಮಕ್ಕಳನ್ನು ಈ ಬಗ್ಗೆ ವಿಚಾರಿಸಿದರೆ ಅವರು ನನಗಿಂತ ಈ ವಿಷಯದಲ್ಲಿ ಇನ್ನೂ ವಿಚಿತ್ರವಾಗಿದ್ದಾರೆ. ಆದರೆ ಮಕ್ಕಳು ಕೂಡ ನನ್ನಂತೆ ಈ ಫೇಸ್ ಬುಕ್ ನಲ್ಲಿ ನಿರಂತರ ನಾಟ್ಯವಾಡುತ್ತಿದ್ದಾರೆ. ಮನಸ್ಸೇನೋ ಆದಿನಾಥನಾಗಿ ಬಹುಕಾಲವಾಯಿತು. ಆದಿನಾಥನಂತೆ ವರ್ತಿಸಿದ ದಿನವೇ ಬದುಕಿನ ಸಾವು ಎಂದು ತಿಳಿದಿರುವುದರಿಂದ ನರ್ತನ ಮುಂದುವರಿಯುತ್ತಿದೆ ಅಷ್ಟೇ. ಎಲ್ಲರೂ `ಆರು ಹಾಕಿಕೊಂಡೆ’ ಬದುಕಿರುವವರೆಗಾದರೂ ಬದುಕಲಿ!

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!