ಅತಿಥಿ ಅಂಕಣ

” ಕ್ಷೀರಸಾಗರ ” ಸಿಂಹಾವಲೋಕನ # ಭಾಗ -2 ಹೈನೋದ್ಯಮದ ಭದ್ರಬುನಾದಿ

ಮುಂಚೂಣಿ ತಂಡದ ಸದಸ್ಯರಿಂದ ಗ್ರಾಮಾಂತರ ಪ್ರದೇಶದಲ್ಲಿರುವ ಹೆಚ್ಚುವರಿ ಹಾಲಿನ ಲಭ್ಯತೆ ಹಾಗೂ ಹಾಲು ಸಂಘಗಳ ಸ್ಥಾಪನೆಗೆ ಅತಿ ಅವಶ್ಯವಾದ ಮಾಹಿತಿಗಳನ್ನು ಸಂಗ್ರಹಿಸುವ
ಕಾರ್ಯ ಆರಂಭವಾಯಿತು. ಅಂದಿನ ಕಾಲದಲ್ಲಿ ಹಾಲಿನ ಮಾರಾಟವು ಪಾಪದ ಕೆಲಸವೆಂಬ ಅನಿಸಿಕೆಯಿತ್ತು. ಹೆಚ್ಚುವರಿಯಾಗಿ ಲಭ್ಯವಿರುವ ಹಾಲನ್ನು ಅವಶ್ಯಕತೆಯಿರುವ ಜನರಿಗೆ ಮಾರಾಟ
ಮಾಡುವುದರಿಂದ ಕೈನಲ್ಲಿ ಹಣ ಸೇರುತ್ತದೆಂಬ ಮಾಹಿತಿ ನೀಡುವಲ್ಲಿ ತಂಡದ ಸದಸ್ಯರುಗಳು ಯಶಸ್ಸುಗಳಿಸಿದ್ದು ಮುಂದಿನ ಪರಿವರ್ತನೆಗೆ ನಾಂದಿಯಾಯಿತು.

ಆಯ್ದ ಹಳ್ಳಿಗಳಲ್ಲಿನ ಪ್ರತಿಯೊಂದು ಮನೆಗಳಿಗೂ ಭೇಟಿ ನೀಡಿದ ತಂಡದ ಸದಸ್ಯರು ಹಳ್ಳಿಗರ ಮನೆಯಲ್ಲಿರುವ ಸದಸ್ಯರು,ಜಾನುವಾರುಗಳು, ಹಾಲು ಉತ್ಪಾದನೆ ಪ್ರಮಾಣ ಮುಂತಾದವುಗಳ
ಬಗ್ಗೆ ಮಾಹಿತಿ ಪಡೆಯಲು ಅವರು ಪಟ್ ಶ್ರಮದಬಗ್ಗೆ ಬರೆದರೆ ಅದೊಂದು ಕಥೆಯಾದೀತು.ಇವರು ಕೇಳುವ ಪ್ರಶ್ನೆಗಳಿಗೆ ಹೆದರಿಕೊಂಡು ಉತ್ತರಿಸದ ಮಂದಿಯೂ ಇದ್ದರು.ಆದರೂ ತಂಡದವರು ತೋರಿದ ಅತ್ಯಂತ ಶ್ರದ್ಧೆಯ ಫಲವಾಗಿ ಮೂಲಭೂತ ಕಾರ್ಯಗಳು ಸಂಪನ್ನವಾಯಿತು.ಸಂಘ ಸ್ಥಾಪನೆಗೆ ಗುರುತಿಸಲಾದ ಯೋಗ್ಯವಾದ ಹಳ್ಳಿಯಲ್ಲಿನ ಜನರನ್ನು ಸೇರಿಸಿ ‘ಗ್ರಾಮಸಭೆ’ ಆಯೋಜನೆ ಮಾಡಿ,ಅಲ್ಲಿ ಹಾಲು ಸಂಘದ ರೂಪು ರೇಷೆಗಳು,ಸಿಗುವ ಸೌಲಭ್ಯ,ಇದರಿಂದ ಆಗುವ ಆರ್ಥಿಕ ಪರಿವರ್ತನೆ ಬಗ್ಗೆ ಮನದಟ್ಟುಮಾಡಲಾಗುತ್ತಿತ್ತು.ಈ ಎಲ್ಲಾ ಕಾರ್ಯಗಳಲ್ಲೂ ಸಕ್ರಿಯವಾಗಿ ಕಾರ್ಯ ನಿರ್ವಹಿಸಲು ಆಯ್ಕೆಯಾದ ವಿಸ್ತರಣಾ ಅಧಿಕಾರಿಗಳ ತಂಡದಲ್ಲಿದ್ದ ಹಲವರಿಗೆ ಪ್ರಥಮ ಬಾರಿಗೆ ಹಳ್ಳಿಯ ಜನ ಜೀವನದ ಪರಿಚಯಆದದ್ದು ವಾಸ್ತವ ಸಂಗತಿ.ಆಗ ಈ ಕಾರ್ಯಕ್ಕೆ ಬಳಸುತ್ತಿದ್ದ ಬಿಳಿಯ ಜೀಪ್ ಮತ್ತೊಂದು ಕಸಿವಿಸಿಗೆ ಕಾರಣವಾಗಿತ್ತು.ಕಾರಣ
ಆಗ ಜಾರಿಯಲ್ಲಿದ್ದ ತುರ್ತು ಪರಿಸ್ಥಿತಿಯ ಫಲವಾಗಿ ಆರೋಗ್ಯಇಲಾಖೆಯು ಸಂತಾನ ಹರಣ ಚಿಕಿತ್ಸೆಗೆ ಗಂಡಸರನ್ನು ಬಲವಂತವಾಗಿ ಕರೆದೊಯ್ಯಲು ಇದೇ ರೀತಿಯ ಬಿಳಿಯ ಜೀಪ್ ಬಳಸಲಾಗುತ್ತಿತ್ತೆಂಬ ಆಪಾದನೆ ಇತ್ತು.ಹೀಗಾಗಿ ಹೈನು ಯೋಜನೆಯ ಕಾರ್ಯಕ್ಕೆ ಬಳಸುತ್ತಿದ್ದ ಬಿಳಿಬಣ್ಣದ ಜೀಪ್ ನೋಡಿದಾಕ್ಷಣ ಹಳ್ಳಿಯ ಎಲ್ಲಾ ಗಂಡಸರು ಓಡಿಹೋಗುತ್ತಿದ್ದ ಅಚ್ಚರಿಯ ಘಟನೆ ಜರುಗುತ್ತಿತ್ತು.

ಸಂಘ ಸ್ಥಾಪನೆಗೆ ಅವಶ್ಯವಾದ ನಿಗದಿತ ಸಂಖ್ಯೆಯ ಸದಸ್ಯರಿಂದ ತಲಾ 11 ರೂಪಾಯಿ ಷೇರು ಹಣವನ್ನು ಸಂಗ್ರಹಿಸುವುದು ಅಂದಿನ ಕಾಲಕ್ಕೆ ಸವಾಲಿನ ಕಾರ್ಯವಾಗಿತ್ತು. ಕೆಲವೊಮ್ಮೆ ತಂಡದ ಸದಸ್ಯರೇ ಕಡಿಮೆಯಾದ ಹಣವನ್ನು ತಮ್ಮ ಕೈಯಿಂದಲೇ ಹಾಕಿ ಸಂಘದ ನೊಂದಣಿಮಾಡುವ ಕಾರ್ಯದಲ್ಲಿ ನಿರತರಾಗಿದ್ದು ಇಂದು ಇತಿಹಾಸವಾಗಿದೆ. ಅಂತೂ ಇಂತೂ ಹಲವು ಸಂಘಗಳಿಂದ ಕೂಡಿದ
ಕ್ಷೀರಮಾರ್ಗಗಳನ್ನು ರಚಿಸಿ ಹೈನೋದ್ಯಮಕ್ಕೆ ಭದ್ರವಾದ ಅಡಿಪಾಯ ಹಾಕಲಾಯಿತು. ಹಾಲು ಸಂಘದ ಕಾರ್ಯಾಚರಣೆಗೆ ಅವಶ್ಯವಾದ  ಹಾಲಿನ ಶೇಖರಣೆ, ಪರೀಕ್ಷೆ ಹಾಗೂ ಲೆಕ್ಕಪತ್ರಗಳ ದಾಖಲೆ ಮುಂತಾದವುಗಳ ಬಗ್ಗೆ ಹಳ್ಳಿಯ ಆಯ್ದ  ವ್ಯಕ್ತಿಗೆ ತರಬೇತಿ ಒದಗಿಸುವ ಕಾರ್ಯವಾದ ನಂತರ ವಿದ್ಯುಕ್ತವಾಗಿ ಹಾಲುಸಂಘಗಳ ಕಾರ್ಯ ಚಟುವಟಿಕೆ ಆರಂಭವಾಯಿತು. ಗುಣಕ್ಕೆ ತಕ್ಕ ಬೆಲೆ ” ಅಮುಲ್ ” ಮಾದರಿ ಹಾಲು ಸಂಘಗಳ ವೈಶಿಷ್ಟ್ಯವಾಗಿದ್ದು ಯಾವುದೇ ರೀತಿಯ ಸಾಲದ ವ್ಯವಹಾರವಿಲ್ಲದೇ ಇರುವುದೇ ಕರ್ನಾಟಕ ಹೈನೋದ್ಯಮದ ಬೆಳವಣಿಗೆಗೆ ಕಾರಣವೆನ್ನಬಹುದು. ಹಾಲು ಸಂಘಗಳ ಸ್ಥಾಪನೆಯಿಂದ ಹಳ್ಳಿಗಳಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆಗಳು
ಕಣ್ಣಿಗೆ ಗೋಚರಿಸುವಂತಾಯಿತು.ಎಲ್ಲಾ ವರ್ಗದ ಜನತೆಯು ಒಂದೇ ಸಾಲಿನಲ್ಲಿ ನಿಂತು ಹಾಲು ಸರಬರಾಜು ಮಾಡುವಂತಹ ಸಾಮಾಜಿಕ ಪರಿವರ್ತನೆ ಸದ್ದಿಲ್ಲದೇ ಸಾಧ್ಯವಾಯಿತೆಂದರೆ ಅತಿಶಯೋಕ್ತಿಯಲ್ಲಾ.
(ಮುಂದುವರೆಯುವುದು….)

ವಿಶ್ವನಾಥ್ ಬಳುವನೇರಲು
ನಿವೃತ್ತ ಕಹಾಮ ಅಧಿಕಾರಿ

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!