ಪಶುವೈದ್ಯ ಕ್ಷೇತ್ರದಲ್ಲಿ ಪಶುಗಳನ್ನು ಕಾಡುವ ಸಾಂಕ್ರಾಮಿಕ ರೋಗಗಳ ಪೈಕಿ ಅತ್ಯಂತ ಸಾಂಕ್ರಾಮಿಕ ಕಾಯಿಲೆಯೊಂದು ಇದೆ ಎನ್ನಬಹುದಾದರೆ ಅದು “ಕಾಲು-ಬಾಯಿ-ಜ್ವರ.” ವೈರಾಣು ಮೂಲದ್ದು ಎನಿಸಿರುವ ಈ ಕಾಯಿಲೆ ಸೀಳು ಗೊರಸು ಹೊಂದಿರುವಂಥ ಪ್ರಾಣಿಗಳನ್ನು ಮಾತ್ರ ಬಾಧಿಸಲಿದೆ.
ರೋಗಾಣು ವಿಶೇಷತೆಃ
ಜಗತ್ತಿನಾದ್ಯಂತ ಇಂದು ಈ ವೈರಾಣುಗಳು ಏಳು ಪ್ರಮುಖ ಪ್ರಬೇಧಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಈ ಪೈಕಿ ನಮ್ಮ ದೇಶದಲ್ಲಿ ಕಾಣಿಸಿಕೊಳ್ಳುತ್ತಿರುವುದು ನಾಲ್ಕು ಬಗೆಯ ಪ್ರಬೇಧಗಳು ಮಾತ್ರ. ಪ್ರತಿ ಪ್ರಬೇಧದ ಈ ವೈರಾಣುಗಳಲ್ಲಿ ಅನೇಕ ಉಪ ಪ್ರಬೇಧಗಳಿರುವುದನ್ನು ಸಹಿತ ವಿಜ್ಞಾನಿಗಳಿಂದು ಗುರ್ತಿಸಿದ್ದಾರೆ. ಕಾಲು-ಬಾಯಿ-ಜ್ವರ ವೈರಾಣುಗಳಿಗೆ ಸಂಬಂಧಿಸಿದಂತೆ ಒಂದು ಪ್ರಬೇಧ ಅಥವ ಉಪ ಪ್ರಬೇಧದ ವಿರುದ್ಧ ತಯಾರು ಮಾಡಿರುವಂಥ ಲಸಿಕೆ ಇದೇ ವೈರಾಣುವಿನ ಮತ್ತೊಂದು ಪ್ರಬೇಧ ಅಥವ ಉಪ ಪ್ರಬೇಧದ ವಿರುದ್ಧ ರಕ್ಷಣೆ ನೀಡದು ಎಂಬುದು ಈ ವೈರಾಣುಗಳ ವಿಶೇಷತೆ. ಸಾಲದೆಂಬುದಕ್ಕೆ ಇದ್ದಕ್ಕಿದ್ದಂತೆ ತಮ್ಮ ಪ್ರಬೇಧವನ್ನೇ ಬದಲಿಸಿಬಿಡುವಂಥ ಅಂದರೆ ರೂಪಾಂತರಗೊಳ್ಳುವಂಥ ವಿಶೇಷ ಗುಣವನ್ನೂ ಸಹಿತ ಇವು ಹೊಂದಿವೆ. ಕಾಲು-ಬಾಯಿ-ಜ್ವರವನ್ನುಂಟುಮಾಡುವ ವೈರಾಣುಗಳ ಈ ಗುಣವಿಶೇಷತೆಗಳೇ ನಮಗಿಂದು ಈ ಕಾಯಿಲೆಯ ನಿಯಂತ್ರಣಕ್ಕೆ ಸವಾಲೊಡ್ಡುತ್ತಿರುವ ಅಂಶಗಳು ಎನಿಸಿಕೊಂಡಿವೆ.
ಕಾಯಿಲೆಯ ಪ್ರಸಾರ ಹೇಗೆ?
ವೈರಾಣುಗಳಿಂದ ಕಲುಷಿತಗೊಂಡ ನೀರು, ಮೇವು ಅಥವ ಗಾಳಿಯ ಸೇವನೆಯಿಂದ ಸಾಮಾನ್ಯವಾಗಿ ಪಶುಗಳು ಈ ಕಾಯಿಲೆಗೀಡಾಗುತ್ತವೆ. ಪ್ರಾಣಿ. ಪಕ್ಷಿ, ವಾಹನ ಹಾಗು ಮನುಷ್ಯರ ಓಡಾಟದಿಂದ ಸಹಿತ ಈ ಕಾಯಿಲೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಪ್ರಸಾರಗೊಳ್ಳಬಹುದಾದ ಸಾಧ್ಯತೆ ಇದೆ.
ಕಾಯಿಲೆಯ ಪ್ರಸಾರಕ್ಕಿಲ್ಲಿ “ಗಾಳಿ ಸಹಿತ ಒಂದು ಮಾಧ್ಯಮ” ಎಂಬ ವಿಚಾರ ಇದರ ನಿಯಂತ್ರಣ ಕುರಿತಂತೆ ನಮಗಿಂದು ಎದುರಾಗಿರುವ ಮತ್ತೊಂದು ಸವಾಲು ಎನಿಸಿಕೊಂಡಿದೆ. ಗಾಳಿಯನ್ನು ತಡೆಯಲು ಯಾರಿಂದ ತಾನೇ ಸಾಧ್ಯ ಅಲ್ಲವೇ? ಹಾಗಾಗಿ ಗಾಳಿ ಬೀಸಿದ ದಿಕ್ಕಿನಲ್ಲಿ ಈ ಕಾಯಿಲೆ ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ಅತಿ ವೇಗದಲ್ಲಿ ಪ್ರಸಾರಗೊಳ್ಳುವ ಸಾಮಥ್ರ್ಯವನ್ನು ಹೊಂದಿದೆ. ಈ ಕಾರಣಕ್ಕಾಗಿಯೇ ಕಾಲು-ಬಾಯಿ-ಜ್ವರವನ್ನು ಗ್ರಾಮೀಣ ಭಾಷೆಯಲ್ಲಿ “ಗಾಳಿ ಅಮ್ಮ” ಎಂಬುದಾಗಿ ಕರೆಯುವುದು ಸಹಿತ ವಾಡಿಕೆಯಲ್ಲಿದೆ.
ಕಾಯಿಲೆಯ ಲಕ್ಷಣಗಳುಃ
ಕಾಲು-ಬಾಯಿ-ಜ್ವರ ಕಾಯಿಲೆ ಪೀಡಿತ ಪಶುಗಳು ವ್ಯಕ್ತಪಡಿಸುವ ಬಹುತೇಕ ಎಲ್ಲ ಲಕ್ಷಣಗಳು ಹಾಲುತ್ಪಾದಕರಿಗೆ ಚಿರಪರಿಚಿತ. ಪ್ರಾರಂಭದಲ್ಲಿ ಸಹಜವಾಗಿ ಅವು ಅತಿಯಾದ ಜ್ವgದಿಂದÀ ಬಳಲುತ್ತವೆ. ಮೇವಿನ ಸೇವನೆಯನ್ನು ಸ್ಥಗಿತಗೊಳಿಸುತ್ತವೆ. ನಾಲಗೆ ಹಾಗು ವಸಡುಗಳ ಮೇಲೆ ಪ್ರಾರಂಭದಲ್ಲಿ ಬೊಬ್ಬೆಗಳು ಕಾಣಿಸಿಕೊಳ್ಳುತ್ತವೆ. ಕ್ರಮೇಣ ಅವು ಒಡೆದು ಹುಣ್ಣುಗಳಾಗಿ ಪರಿವರ್ತನೆಗೊಳ್ಳುತ್ತವೆ. ಬಳಿಕ ನೊರೆ ಮಾದರಿಯಲ್ಲಿ ಅವು ಜೊಲ್ಲನ್ನು ಸುರಿಸಲಾರಂಭಿಸುತ್ತವೆ.
ನಾಲಗೆ ಮತ್ತು ವಸಡಿನ ಮೇಲೆ ಗೋಚರಿಸುವಂತೆಯೇ ಎಲ್ಲ ಕಾಲುಗಳ ಗೊರಸುಗಳ ಸಂಧುಗಳಲ್ಲಿ ಹಾಗು ಕೆಚ್ಚಲ ತೊಟ್ಟುಗಳ ಮೇಲೆ ಸಹಿತ ಬೊಬ್ಬೆ/ಹುಣ್ಣುಗಳು ಕಾಣಿಸಿಕೊಳ್ಳÀಬಹುದು. ಹಾಲುತ್ಪಾದನೆ ಇದ್ದಕ್ಕಿದ್ದಂತೆ ಕುಂಠಿತಗೊಳ್ಳುತ್ತದೆ. ಕೆಚ್ಚಲಬಾವು ಸಹಿತ ಕಾಣಿಸಿಕೊಳ್ಳಬಹುದಾದ ಸಾಧ್ಯತೆ ಇದೆ. ಗರ್ಭಧರಿಸಿದ ಪಶುಗಳಲ್ಲಿ ಈ ಕಾಯಿಲೆ ಗರ್ಭಪಾತದೊಂದಿಗೆ ಅಂತ್ಯಗೊಂಡರೂ ಸಹಿತ ಹೈನುಗಾರರು ಆಶ್ಚರ್ಯಪಡಬೇಕಿಲ್ಲ.
ವಯಸ್ಕ ಪಶುಗಳಲ್ಲಿ ಈ ಕಾಯಿಲೆ ತನ್ನಷ್ಟಕ್ಕೆ ತಾನು ಸಾವನ್ನು ತಂದೊಡ್ಡುವಷ್ಟು ಕ್ರೂರಿ ಏನಲ್ಲ. ಆದರೆ ಈ ಕಾಯಿಲೆಯ ಪ್ರಭಾವದಿಂದಾಗಿ ಪಶು ಯಾವಾಗ ವಾರಾನುಗಟ್ಟಲೆ ಮೇವನ್ನು ಸೇವಿಸದಂತಾಗುವುದೋ, ಆಗ ದೇಹದಲ್ಲಿ ರೋಗ ನಿರೋಧಕ ಶಕ್ತಿ ದುರ್ಬಲಗೊಳ್ಳತೊಡಗುತ್ತದೆ. ಇಂಥ ಪರಿಸ್ಥಿತಿಯ ಲಾಭವನ್ನು ಪಡೆದೇ ತೀರಬೇಕೆಂಬ ಉದ್ದೇಶದೊಂದಿಗೆ ಆರೋಗ್ಯವಂತ ಪಶುಗಳ ದೇಹದೊಳಗೆ ಗಂಟಲುಬೇನೆ ಕಾರಕ ಬ್ಯಾಕ್ಟೀರಿಯಗಳು ಹೊಂಚು ಹಾಕುತ್ತಾ ನೆಲೆಸಿರುತ್ತವೆ. ಸಾಮಾನ್ಯ ಪರಿಸ್ಥಿತಿಯಲ್ಲಿ ದೇಹದೊಳಗೆ ಅವು ನೆಲೆಸಿವೆ ಎಂದಾಗಿದ್ದರೂ ಸಹಿತ ಪಶುಗಳಿಗವು ಯಾವುದೇ ರೀತಿಯ ತೊಂದರೆಯನ್ನು ನೀಡಲಾರವು. ಆದರೆ ಪರಿಸ್ಥಿತಿ ಪ್ರೋತ್ಸಾಹಧಾಯಕ (ದುರ್ಬಲಗೊಂಡ ರೋಗ ನಿರೋಧಕ ಶಕ್ತಿ) ಎನ್ನುವಂತಿದ್ದಾಗ ಸಿಕ್ಕ ಅವಕಾಶವನ್ನು ಬಳಸಿಕೊಳ್ಳದೆ ಬಿಡಲು ಇಚ್ಛಿಸದ ಅವು ಇದ್ದಕ್ಕಿದ್ದಂತೆ ವೃದ್ಧಿಸಿ ದೇಹದ ಮೇಲೆ ಆಕ್ರಮಣ ನಡೆಸಲು ಸಜ್ಜಾಗುತ್ತವೆ. ಮಾತ್ರವಲ್ಲ, ಕಾಯಿಲೆಯ ಒಂದು ಘಟ್ಟದಲ್ಲಿ, ದೇಹದೊಳಗೆ ಅವು ನಂಜನ್ನು ಉತ್ಪಾದಿಸಲು ಆರಂಭಿಸುವ ಕಾರಣ ಚಿಕಿತ್ಸೆಗೆ ಪಶುಗಳು ಸ್ಪಂದಿಸದಂತಾಗುತ್ತವೆ. ಒಟ್ಟಾರೆ, ಕಾಲು-ಬಾಯಿ-ಜ್ವರ ಪೀಡಿತ ವಯಸ್ಕ ಪಶುವೊಂದು ಸಾವನ್ನಪ್ಪಿದೆ ಎಂದಾಗಿದ್ದರೆ ಆ ಸಾವಿಗೆ ಗಂಟಲುಬೇನೆಯಿಂದ ಉದ್ಭವಿಸುವ ಜಟಿಲತೆ ಬಹುತೇಕ ಸಂದರ್ಭಗಳಲ್ಲ್ಲಿ ಪ್ರಮುಖ ಕಾರಣವೆನಿಸಿಕೊಳ್ಳುವುದೇ ವಿನಃ ಕಾಲು-ಬಾಯಿ-ಜ್ವರವಂತೂ ಅಲ್ಲ ಎಂದು ಹೇಳಬಹುದಾಗಿದೆ.
ಈ ಕಾಯಿಲೆ ಚಿಕ್ಕ ಕರುಗಳಲ್ಲಿ ವ್ಯಕ್ತಗೊಳ್ಳುವ ರೀತಿಯಲ್ಲಿ ನಾವು ಭಿನ್ನತೆಯನ್ನು ಗಮನಿಸಬಹುದಾಗಿದೆ. ಸಾಮಾನ್ಯವಾಗಿ ವಯಸ್ಕ ಪಶುಗಳು ಈ ಕಾಯಿಲೆಯಲ್ಲಿ ವ್ಯಕ್ತಪಡಿಸುವಂಥ ಯಾವುದೇ ಲಕ್ಷಣಗಳನ್ನು ಅವು ವ್ಯಕ್ತಪಡಿಸುವುದಿಲ್ಲ. ಚಿಕ್ಕ ಕರುಗಳಲ್ಲಿ ಈ ವೈರಾಣುಗಳು ಪ್ರಮುಖವಾಗಿ ಘಾಸಿಗೊಳಿಸುವುದು ಹೃದಯದ ಮಾಂಸವನ್ನ. ಹಾಗಾಗಿ, ಬಹುತೇಕ ಕರುಗಳು ಈ ಕಾಯಿಲೆಯಲ್ಲಿ ಇದ್ದಕ್ಕಿದ್ದಂತೆ ಸಾವನ್ನಪ್ಪುವುದೇ ಹೃದಯ ಸಂಬಂಧಿ ಕಾಯಿಲೆಯ ಜಟಿಲತೆಯ ಪ್ರಭಾವದಿಂದಾಗಿ ಎನ್ನಬಹುದಾಗಿದೆ.
ಪ್ರಾಯಶಃ 2014 ನೇ ಸಾಲಿನಲ್ಲಿ ಈ ಕಾಯಿಲೆ ರಾಜ್ಯಾದ್ಯಂತ ಆರ್ಭಟಿಸಿದ್ದ ರೀತಿಯನ್ನು ನಾವಿಲ್ಲಿ ಸ್ಮರಿಸಬಹುದು. ಲಸಿಕೆಯಿಂದ ವಂಚಿತಗೊಂಡಿದ್ದ ಸಾವಿರಾರು ಪಶುಗಳು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದ ದೃಷ್ಯ ಇನ್ನೂ ನಮ್ಮಿಂದ ದೂರವಾಗಿಲ್ಲ. ಭಾರತ ದೇಶ ಈ ಒಂದು ಕಾಯಿಲೆಯಿಂದಾಗಿ ಪ್ರತಿ ವರ್ಷ ಸುಮಾರು 20 ಸಾವಿರ ಕೋಟಿಗೂ ಮೀರಿದ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದೆ. ಪ್ರಾಯಶಃ ಹೈನುಗಾರಿಕೆಗೆ ಸಂಬಂಧಿಸಿದಂತೆ ಇಷ್ಟೊಂದು ದೊಡ್ಡ ಗಾತ್ರದ ಆರ್ಥಿಕ ನಷ್ಟಕ್ಕೆ ಹೆಸರು ಮಾಡಿರುವಂಥ ಸಾಂಕ್ರಾಮಿಕ ಕಾಯಿಲೆ ಬೇರೊಂದಿಲ್ಲ ಎನ್ನಬಹುದಾಗಿದೆ. 2014 ರ ಘಟನೆ ಮತ್ತೆ ಮರುಕಳಿಸಬಾರದೆಂಬುದು ಕರ್ನಾಟಕ ಹಾಲು ಮಹಾ ಮಂಡಳಿಯ ಆಶಯ.
ಹಾಲು ಒಕ್ಕೂಟ ಮತ್ತು ಪಶುಪಾಲನಾ ಇಲಾಖೆಯ ಸಹಭಾಗಿತ್ವದಲ್ಲಿ ಪ್ರತಿ ಆರು ತಿಂಗಳಿಗೊಂದು ಬಾರಿಯಂತೆ ರಾಜ್ಯಾದ್ಯಂತ ಕಾಲು-ಬಾಯಿ-ಜ್ವರ ಕಾಯಿಲೆಯ ವಿರುದ್ಧ ಸಾಮೂಹಿಕ ಲಸಿಕಾ ಕಾರ್ಯಕ್ರಮವನ್ನು ಈಗಾಗಲೇ ಕಳೆದ ಹಲವಾರು ವರ್ಷಗಳಿಂದ ಪಾಲಿಸಿಕೊಂಡು ಬರಲಾಗುತ್ತಿದೆ.
ಪ್ರಾಯದಲ್ಲಿ 3 ತಿಂಗಳು ಮೇಲ್ಪಟ್ಟ ತಮ್ಮೆಲ್ಲಾ ಪಶುಗಳನ್ನು ಹಾಲುತ್ಪಾದಕರು ವರ್ಷಕ್ಕೆರಡು ಬಾರಿ ಪ್ರತಿ ವರ್ಷ ಲಸಿಕೆಗೊಳಪಡಿಸುವ ಅಭ್ಯಾಸವನ್ನು ರೂಢಿಸಿಕೊಂಡಿದ್ದೇ ಆದರೆ ಅವುಗಳನ್ನು ಕಾಲು-ಬಾಯಿ-ಜ್ವರ ಕಾಯಿಲೆಯಿಂದ ರಕ್ಷಿಸಿಕೊಳ್ಳಬಹುದು. ಈ ಕುರಿತ ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಪಶುವೈದ್ಯಾಧಿಕಾರಿಯನ್ನು ಸಂಪರ್ಕಿಸಬಹುದು.
ನೆನಪಿಡಿಃ
ಪಶುಗಳನ್ನು ಲಸಿಕೆಗೊಳಪಡಿಸಿದ ಮರುದಿನ ಸಾಮಾನ್ಯವಾಗಿ ಬಹುತೇಕ ಪಶುಗಳಲ್ಲಿ ಜ್ವರ ಕಾಣಿಸಿಕೊಳ್ಳಬಹುದಾದ ಸಾಧ್ಯತೆ ಇದೆ. ಈ ಹಂತದಲ್ಲಿ ಸಾಮಾನ್ಯವಾಗಿ ಅವು ಮೇವು ಸೇವಿಸದ ಹಾಗು ಹಾಲುತ್ಪಾದನೆ ಕಡಿಮೆಗೊಳ್ಳುವಂಥ ಲಕ್ಷಣಗಳನ್ನು ವ್ಯಕ್ತಪಡಿಸುವುದು ಸಹಜ. ತೀವ್ರತೆಯಲ್ಲಿ ಈ ಲಕ್ಷಣಗಳು ಪಶುವಿನಿಂದ ಪಶುವಿಗೆ ಭಿನ್ನಗೊಳ್ಳಬಹುದು. ಲಸಿಕೆ ಪಡೆದ ಬಳಿಕ ಪಶುಗಳು ವ್ಯಕ್ತಪಡಿಸುವ ಈ ಲಕ್ಷಣಗಳಿಗೆ ಹೈನುಗಾರರು ಆತಂಕ ಪಡಬೇಕಾದ ಅಗತ್ಯವಿಲ್ಲ. ಕಾಲು-ಬಾಯಿ-ಜ್ವರ ಕಾಯಿಲೆಯ ವಿರುದ್ಧ ಲಸಿಕೆ ಪಡೆದ ಪಶುವಿನ ದೇಹದೊಳಗೆ ರೋಗ ನಿರೋಧಕ ಶಕ್ತಿ ಬೆಳವಣಿಯಾಗುತ್ತಿದೆ ಎಂಬುದರ ಸೂಚಕ ಅದಾಗಿರುತ್ತದೆ. ಈ ಲಕ್ಷಣಗಳಿಗೆ ಚಿಕಿತ್ಸೆ ಕೊಡಿಸಬಾರದು. ಹಾಗೊಂದು ವೇಳೆ ಹಾಲುತ್ಪಾದಕರು ಈ ಲಕ್ಷಣಗಳಿಗೆ ಚಿಕಿತ್ಸೆ ಕೊಡಿಸಲು ಪ್ರಯತ್ನಿಸಿದ್ದೇ ಆದರೆ, ರೋಗ ನಿರೋಧಕ ಶಕ್ತಿಯ ಬೆಳವಣಿಗೆ ಕುಂಠಿತಗೊಳ್ಳುವುದು ನಿಶ್ಚಿತ. ಲಸಿಕೆ ಪಡೆದ ಪಶು ಮುಂದೊಂದು ದಿನ ಕಾಲು-ಬಾಯಿ-ಜ್ವರದಿಂದ ನರಳಿತು ಎಂದಾದರೆ ಲಸಿಕಾ ವೈಫಲ್ಯತೆಗೆ ಇದು ಸಹಿತ ಒಂದು ಕಾರಣವಾಗಬಹುದು ಎಂಬ ವಿಚಾರ ನೆನಪಿರಲಿ.
ಡಾ.ಎಲ್.ರಾಘವೇಂದ್ರ ಎಂ.ವಿ.ಎಸ್.ಸಿ.
ಜಂಟಿ ನಿರ್ದೇಶಕರು (ಪ್ರಯೋಗಾಲಯ)
ನಂದಿನಿ ವೀರ್ಯಾಣು ಕೇಂದ್ರ (ಕೆ.ಎಂ.ಎಫ್. ನ ಒಂದು ಘಟಕ)
ಕಾಕೋಳು, ಹೆಸರಘಟ್ಟ ಲೇಕ್ ನ ಹತ್ತಿರ, ಬೆಂಗಳೂರು-560 089.