ಕರ್ನಾಟಕದ ಸಹಕಾರಿ ಹೈನೋದ್ಯಮ ಸ್ಥಾಪನೆಯಾಗಿ 50 ವರ್ಷಗಳ ಹೊಸ್ತಿಲಲ್ಲಿರುವ ಸಂದರ್ಭದಲ್ಲಿ ಸಂಸ್ಥೆಯ ಉನ್ನತಿಗೆ ಕಾರಣವಾದ
ಅಪರೂಪದ ಅಂಶಗಳ ಸಿಂಹಾವಲೋಕನ ಮಾಡುವ ಸಂದರ್ಭವಿದು. ನಾನೂ ಈ ಸಂಸ್ಥೆಯ ಭಾಗವಾಗಿ 35 ವರ್ಷಗಳಷ್ಟು ಸುಧೀರ್ಘ ಸೇವೆ ಮಾಡಿರುವ ಅನುಭವದ ಸಾರಾಂಶವನ್ನುಇಂದಿನ
ಹೈನುಗಾರರು, ಅಧಿಕಾರಿಗಳು ಹಾಗೂ ಉದ್ಯೋಗಿಗಳಿಗೆ ಹಂಚುವ ಆಶಯ ನನ್ನದು.
ಐದು ದಶಕಗಳ ಹಿಂದೆ ನಾನು ಪಶುಸಂಗೋಪನಾ ಇಲಾಖೆಯಲ್ಲಿ ವಿಸ್ತರಣಾ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಇಲಾಖೆಯ ಅಧಿಕಾರಿಗಳು ರಾಜ್ಯದ ಹೈನು ಅಭಿವೃದ್ಧಿಗೆ ಪೂರಕವಾದ ವಿಶ್ವ ಬ್ಯಾಂಕ್ ನೆರವಿನ ಯೋಜನೆಗೆ ರಾಜ್ಯ ಸರ್ಕಾರದ ಪರವಾಗಿ ಪ್ರಸ್ಥಾವನೆ ಸಲ್ಲಿಸಿದ ನೆನಪು ಹಸಿರಾಗಿದೆ. ಕಾಲ ಉರುಳಿದಂತೆ ಪ್ರಸ್ಥಾವನೆಗೆ ಹಸಿರು ನಿಶಾನೆ ದೊರೆತು ” ಕರ್ನಾಟಕ ಹೈನು ಅಭಿವೃದ್ಧಿ ನಿಗಮ”1975 ರಲ್ಲಿಸಾಕಾರವಾಯಿತು.
ನಂತರದ ದಿನಗಳಲ್ಲಿ ಆಯ್ಕೆಯಾದ ಮುಂಚೂಣಿ ತಂಡದ ಸದಸ್ಯರುಗಳಿಗೆ ಸೂಕ್ತ ತರಬೇತಿ ನೀಡಿ ದಕ್ಷಿಣದ 8 ಜಿಲ್ಲೆಗಳಲ್ಲಿ ಕಾರ್ಯಾಚರಣೆ ಆರಂಭಿಸಲು ಬೆಂಗಳೂರು,ತುಮಕೂರು,ಹಾಸನ ಹಾಗೂ ಮೈಸೂರು ಘಟಕಗಳನ್ನು ರಚಿಸಲಾಯಿತು.
ಬೆಂಗಳೂರಿಗೆ ಡಾ.ದಯಾನಂದ, ಮೈಸೂರಿಗೆ ಡಾ. ಹೆಚ್.ಚೆನ್ನೇಗೌಡ, ತುಮಕೂರಿಗೆ ಡಾ.ಚಂದ್ರಶೇಖರಪ್ಪ ಹಾಗೂ ಹಾಸನಕ್ಕೆ ಡಾ.ಜಿ.ಎಸ್.ಕುಟ್ನೀಕರ್ ಅವರುಗಳನ್ನು ತಂಡದನಾಯಕರನ್ನಾಗಿ ನೇಮಿಸಲಾಯಿತು.
ಈ 4 ತಂಡಗಳ ಸದಸ್ಯರು ಶ್ರಮವಹಿಸಿ ಹಾಲು ಸಂಘಗಳ ಸ್ಥಾಪನೆಗಾಗಿ ಶ್ರಮಿಸಿದ್ದರ ಫಲವಿಂದು
ಹೆಮ್ಮರವಾಗಿ ಬೆಳೆದಿದೆ.ಈ ನಾಲ್ಕು ಘಟಕಗಳ ಒಂದು ವರ್ಷಗಳ ಕಾಲದ ಕಾರ್ಯಾಚರಣೆಯ ಫಲ ಬಿಡುವ ಕಾಲವಾದ 1977 ರಲ್ಲಿ ನಾನು ಈ ಬೃಹತ್ ಸಂಸ್ಥೆಯ ಭಾಗವಾದೆ.ಕೇಂದ್ರ ಸರ್ಕಾರದ ವಾರ್ತಾಇಲಾಖೆ ಯಿಂದ ಒಂದು ವರ್ಷದ ಎರವಲು ಸೇವೆ ಸಲ್ಲಿಸಲು ಬಂದ ರಾಜಪ್ಪಶೆಟ್ಟಿಯವರ ಜೊತೆಗೂಡಿ ಸಮೂಹಮಾಧ್ಯಮ ವಿಭಾಗದ ಸದಸ್ಯನಾಗಿ ವಿಶ್ವಬ್ಯಾಂಕ್ ನೆರವಿನ ಹೈನು ಅಭಿವೃದ್ಧಿ ಯೋಜನೆಯ ಬಗ್ಗೆ ಹೈನುಗಾರರಿಗೆ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ಕೆ ಸನ್ನದ್ಧರಾದೆವು. ಇದಕ್ಕಾಗಿ ಹಲವಾರು ಪತ್ರಿಕಾ ಗೋಷ್ಠಿಗಳು, ಹೈನು ಅಭಿವೃದ್ಧಿ ಯೋಜನಾ ಪ್ರದೇಶಕ್ಕೆ ಪತ್ರಿಕಾ ವರದಿಗಾರರ ಭೇಟಿ,ಮೈಸೂರು, ತುಮಕೂರು, ಹಾಸನ ಹಾಗೂ ಬೆಂಗಳೂರಿನಲ್ಲಿ ವಸ್ತು ಪ್ರದರ್ಶನಗಳ ಆಯೋಜನೆ, ಆಕಾಶವಾಣಿ ಕಾರ್ಯಕ್ರಮ, ವಾರಕ್ಕೊಮ್ಮೆ ಪ್ರಗತಿಯ ಬಗ್ಗೆ ವಾಲ್ ಪೇಪರ್ ಪ್ರಸಾರ ಮುಂತಾದ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದರ ಫಲವಾಗಿ ಯೋಜನೆಗೆ ವಿಶಿಷ್ಟವಾದ ಭದ್ರ ಬುನಾದಿ ದೊರೆಯಿತು.
ಕೇವಲ ಒಂದು ವರ್ಷದ ಅವಧಿಯಲ್ಲಿ ನೊಂದಣಿಯಾದ ”ಕ್ಷೀರಸಾಗರ” ಮಾಸಪತ್ರಿಕೆ ರಾಜ್ಯದ ಹೈನುಗಾರರ ಆಶಾಕಿರಣವಾಗಿ ಬೆಳೆಯಲಾರಂಭಿಸಿತು.1978 ರ ನಂತರ 34 ವರ್ಷಗಳ ಕಾಲ ಏಕಾಂಗಿಯಾಗಿ ಹೈನುಗಾರರಿಗೆ ಅತ್ಯವಶ್ಯ ಮಾಹಿತಿ ಒದಗಿಸುವ ಮಾಧ್ಯಮವಾಗಿ ಪರಿವರ್ತಿಸಲಾಯಿತು. ಇದಕ್ಕೆ ನಿರಂತರವಾಗಿ ಲೇಖನ ಒದಗಿಸಿದ ಹಲವಾರು ಸಂಸ್ಥೆಯ ವೈದ್ಯರು, ಪತ್ರಿಕಾ ಕರ್ತರಿಗೆ ಧನ್ಯವಾದ
ಹೇಳಲೇಬೇಕು. ಹೈನುಗಾರರ ಶಂಕೆಗಳಿಗೆ ಸೂಕ್ತಉತ್ತರ ನೀಡಲು ಆರಂಭಿಸಿದ ಪ್ರಶ್ನೋತ್ತರ ವಿಭಾಗವು ಸಾಕಷ್ಟು ಸಹಾಯ ಒದಗಿಸಿತು.
ಪತ್ರಿಕೆಯ ಪ್ರಕಟಣೆಗಾಗಿ ಚಿತ್ರ ತೆಗೆಯಲು ನನ್ನ ಮೊದಲ ಭೇಟಿ ಬೆಂಗಳೂರು ಡೇರಿಯಲ್ಲಿ ಹಾಲನ್ನು ಗಾಜಿನ ಶೀಷೆಗೆ ತುಂಬಿಸುವ ಯಂತ್ರ.
ನಂತರದ ದಿನಗಳಲ್ಲಿ ನಾನು ಮೊದಲು ಭೇಟಿ ಮಾಡಿದ್ದು ವಿಶ್ವನಾಥಪುರ ಹಾಲು ಸಂಘ.
(ಮುಂದುವರೆಯುವುದು)
ವಿಶ್ವನಾಥ್ ಬಳುವನೇರಲು