ಏನಾದ್ರೂ ಒಂದು ಸಾಧನೆ ಮಾಡಲು ಅದ್ಭುತವಾದ ಐಡಿಯಾ ಬೇಕು ಅಂತಾ ಯಾರೂ ಹೇಳಿಲ್ಲ. ಸಣ್ಣದೊಂದು ಆಲೋಚನೆ ಮುಂದೊಂದು ದಿನ ದೊಡ್ಡ ಸಾಧನೆಯಾಗುತ್ತೆ. ಹೀಗಾಗಿ ಕೆಲವರು ತಾವು ನೋಡುವ ವಸ್ತುಗಳಲ್ಲಿ ಏನು ಮಾಡಬಹುದು ಅಂತಾ ವಿಚಾರ ಮಾಡ್ತಾರೆ. ಹಾಗೆ ವಿಭಿನ್ನ ಆಲೋಚನೆ ಮಾಡುವವರಲ್ಲಿ ಸೀಮಾ, ಕೃಷ್ಣಪ್ರಸಾದ ದಂಪತಿ ಸಹ ಒಬ್ಬರು.
ಸೋರೆಕಾಯಿ ಅಡುಗೆ ಕೆಲವರಿಗೆ ತುಂಬಾ ಇಷ್ಟ. ಇನ್ನು ಕೆಲವರಿಗೆ ಆಗಿ ಬರುವುದಿಲ್ಲ. ಅಂತಾ ಸೋರೆಕಾಯಿಯಲ್ಲಿ ಅದ್ಭುತವಾದ ಕಲಾಕೃತಿಗಳನ್ನ ಅರಳಿಸುವ ಮೂಲಕ ಹೊಸ ಹೆಜ್ಜೆ ಇಟ್ಟಿದ್ದಾರೆ. ಇದರ ಜೊತೆಗೆ ಸೋರೆಕಾಯಿ ಕಲೆ ಆರ್ಥಿಕ ಶಕ್ತಿಯನ್ನ ಸಹ ತುಂಬಿದೆ. ಸುಮಾರು 50ಕ್ಕೂ ಹೆಚ್ಚು ಬಗೆಯ ಸೋರೆ ತಳಿಗಳನ್ನ ಸಂರಕ್ಷಣೆ ಮಾಡ್ತಿರುವ ಈ ಜೋಡಿ, ರೈತರಿಗೆ ಉಚಿತವಾಗಿ ನೀಡ್ತಾರೆ. ಬಳಿಕ ಅವರಿಂದ 50 ರಿಂದ 100 ರೂಪಾಯಿ ಕೊಟ್ಟು ಸೋರೆಕಾಯಿ ಖರೀದಿಸ್ತಾರೆ.ಹೀಗೆ ತೆಗೆದುಕೊಳ್ಳುವ ಸೋರೆಕಾಯಿಯಲ್ಲಿ ಅತ್ಯಂತ ಸುಂದರವಾದ ಕಲಾಕೃತಿಗಳನ್ನ ತಯಾರಿಸಿ ಮಾರಾಟ ಮಾಡ್ತಿದ್ದಾರೆ. ಇವರ ಕಲಾಕೃತಿಗಳು ವಿದೇಶಗಳಿಗೂ ರಪ್ತಾಗ್ತಿವೆ. ಅಷ್ಟರ ಮಟ್ಟಿಗೆ ಡಿಮ್ಯಾಂಡ್ ಪಡೆದುಕೊಂಡಿದೆ.
ಕೀನ್ಯಾದಲ್ಲಿ ಕಂಡ ಕನಸುಸೀಮಾ ಮತ್ತು ಕೃಷ್ಣಪ್ರಸಾದ ದಂಪತಿ ಒಮ್ಮೆ ಕೀನ್ಯಾ ಪ್ರವಾಸಕ್ಕೆ ಹೋಗಿದ್ರು. ಅಲ್ಲಿ ಬುಡಕಟ್ಟು ಜನಾಂಗದವರು ಸೋರೆ ಬುರುಡೆಯಲ್ಲಿ ನಿರ್ಮಿಸಿದ ಕಲಾಕೃತಿಗಳನ್ನ ನೋಡಿದ್ದಾರೆ. ಮನೆ, ಹೋಟೆಲ್ ಗಳಲ್ಲಿಯೂ ಇವುಗಳ ಬಳಕೆ ಜೋರಾಗಿರುವುದನ್ನ ಕಂಡ ಅವರು, ನಾವ್ಯಾಕೆ ಇದನ್ನ ನಮ್ಮ ನೆಲದಲ್ಲಿ ಪ್ರಯೋಗ ಮಾಡಬಾರದೆಂದು ಯೋಚನೆ ಮಾಡಿದ್ದಾರೆ. ಬಳಿಕ ಮೈಸೂರಿಗೆ ಬಂದು ಸೋರೆ ಬುರುಡೆಯ ಕಲಾಕೃತಿ ಶುರು ಮಾಡಿದ್ದಾರೆ.ಒಂದೇ ದಿನದಲ್ಲಿ 20 ಸಾವಿರ ರೂಪಾಯಿ ವ್ಯಾಪಾರಸ್ವದೇಶದಕ್ಕೆ ಬಂದ್ಮೇಲೆ ಈ ಜೋಡಿ ಸೋರೆಕಾಯಿ ತಳಿಗಳನ್ನ ಪತ್ತೆ ಹಚ್ಚಿದೆ. ಆಗ ಇವರಿಗೆ 30 ತಳಿಗಳು ಸಿಕ್ಕಿವೆ. ಇದರಲ್ಲಿ ಅಡುಗೆ ಮಾಡುವುದು ಮತ್ತು ಅಡುಗೆಗೆ ಯೋಗ್ಯವಲ್ಲದ ಸೋರೆಕಾಯಿ ಪ್ರತ್ಯೇಕ ಮಾಡಿದ್ದಾರೆ. ರೈತರಿಂದ ಸೋರೆಕಾಯಿ ಖರೀದಿ ಮಾಡಿದ್ದಾರೆ. ಅವುಗಳಿಂದ ಕಲಾಕೃತಿಗಳನ್ನ ಅರಳಿಸಿದ್ದಾರೆ. ಒಮ್ಮೆ ದೆಹಲಿಯಲ್ಲಿ ನಡೆದ ಕರಕುಶಲ ಮೇಳದಲ್ಲಿ ಕೃಷಿ ಕಲಾ ತಂಡ ಬರೋಬ್ಬರಿ 20 ಸಾವಿರ ರೂಪಾಯಿ ವ್ಯಾಪಾರವನ್ನ ಒಂದೇ ದಿನಲ್ಲಿ ಮಾಡಿದೆ.
ಸೋರೆ ಕಲಾಕೃತಿ ನಿರ್ಮಾಣ ಹೇಗೆ?ಕೊಡತಿ, ಉದ್ದ, ತಂಬೂರಿ, ಹಂಸ, ಗದೆ ಹೀಗೆ ಹಲವು ಬಗೆಯ ಸೋರೆಕಗಳನ್ನ ಬಲಿತ ನಂತ್ರ ತೆಗೆದುಕೊಂಡು ಒಂದು ತಿಂಗಳ ಕಾಲ ಒಣಗಿಸುವುದು. ಬಳಿಕ ಅದರೊಳಗಿನ ಬೀಜ ತೆಗೆದು, ಅದನ್ನ ಸ್ವಚ್ಛ ಮಾಡಿಕೊಳ್ಳುವುದು. ಇದೆಲ್ಲ ಮುಗಿದ ನಂತರ ಸೋರೆಕಾಯಿ ಕಲಾಕೃತಿಗೆ ಸಿದ್ಧವಾಗುತ್ತೆ. ಚೆನ್ನಾಗಿ ಕಾದ ಕಬ್ಬಿಣದ ಸಲಾಕೆ ತೆಗೆದುಕೊಂಡು ಅದರ ಸೇಫ್ ನೋಡಿಕೊಂಡು ಸಾವಯವ ಕಲೆ ನಿರ್ಮಿಸುವುದು.ಸೀಮಾ ಮತ್ತು ಕೃಷ್ಣಪ್ರಸಾದ ದಂಪತಿಯ ಕೀನ್ಯಾ ಪ್ರವಾಸ ಅವರ ಬದುಕನ್ನ ಬದಲಿಸಿದೆ. ಅವರ ಆಲೋಚನೆ ಕೈ ಹಿಡಿದಿದೆ. ಇಂದು ‘ಕೃಷಿ ಕಲಾ’ ಅನ್ನೋ ಸಂಸ್ಥೆ ಕಟ್ಟಿ ದೇಶ, ವಿದೇಶಗಳಲ್ಲಿ ಸೋರೆ ಕಲಾಕೃತಿಗಳನ್ನ ಮಾರಾಟ ಮಾಡ್ತಿದ್ದಾರೆ. ಇದಕ್ಕೆ ಹೇಳೋದು, ನಾವು ಹೋಗುವ ದಾರಿ ಸರಿಯಿದ್ರೆ ಒಂದಲ್ಲ ಒಂದು ದಿನ ಸಕ್ಸಸ್ ಬಾಗಿಲು ತೆರೆಯುತ್ತೆ ಅಂತ.