ಕೈಲಾಸವಡಿವು ಶಿವನ್…ನಿಜ ಹೇಳಿ ನೀವು ನಿದ್ರೆ ಮಾಡಿ ಎಷ್ಟು ದಿನಗಳಾದವು. ರೆಕ್ಕೆಯ ಕುದುರೆ ಹತ್ತಿ ರೆಪ್ಪೆ ಮುಚ್ಚದೆ ಚಂದ್ರನಿಗೆ ಜಿಗಿದಿದ್ದವರು….ಕಂಡ ಚಂದಿರ ಸಿಗಲಿಲ್ಲ ಕಾಲೂರಲು..ಇರಲಿ. ಎಲ್ಲಿಗೆ ಹೋದಾನು?
ಅದೇಕೋ ಗೊತ್ತಿಲ್ಲ.ಇಂದು ನಿಮ್ಮೊಂದಿಗೆ ನಿಮ್ಮಂತೆಯೇ ಅತ್ತ ಕಣ್ಣುಗಳೆಷ್ಟೋ…
ನಿದ್ರೆ ಮಾಡದ ಅಷ್ಟೂ ಕಂಗಳ ಪ್ರತಿನಿಧಿಯಂತೆ ಕಾದಿದ್ದವರು. ಯಾರಿಗೂ ಎಟುಕದ ಚಂದ್ರನ ದಕ್ಷಿಣದಲ್ಲಿ ವಿಕ್ರಮನ ಗರ್ಭದಿಂದ ಪ್ರಜ್ಞಾನ್ ಇಳಿಯಬೇಕಿತ್ತಷ್ಟೇ. ಮಾತ್ರಕ್ಕೆ ದೂರ 2.1 K.M. ನಮ್ಮ ವ್ಯಾಪ್ತಿ ಪ್ರದೇಶದಿಂದ ವಿಕ್ರಮ ದೂರಾಗಿಬಿಟ್ಟ. ಕಣ್ಣ ಮುಂದೆಯೇ ಆಡುತ್ತಿದ್ದ ಕಂದ ಕಣ್ಮರೆಯಾಗಿಬಿಟ್ಟಂತೆ. ಅತ್ತೇ ಬಿಟ್ಟಿರಿ ಮೋದಿಯನ್ನ ತಬ್ಬಿ. ಶತೃ ಕೂಡ ಹಾರೈಸಿದ್ದ ಸಾಧನೆ ಅದು. ಆಗಲಿಲ್ಲ. ಆಗುವುದಿಲ್ಲವೇ? ಈ ಶಬ್ದವನ್ನೇ ಕಿತ್ತೆಸೆದು ಗತ್ತಿನಿಂದ ದೇಶವೇ ತಲೆ ಎತ್ತುವಂತೆ ಮಾಡಿದ್ದವರು ನೀವು. ಬೀಳುವುದು ಸೋಲಲ್ಲ, ಮೇಲೇಳಲು ನಿರಾಕರಿಸುವುದು ಸೋಲು ಎಂಬ ಮಾತಿಗೆ ನೀವೇ ಸಾಕ್ಷಿ.
ಕ್ರಯೋಜನಿಕ್ ಎಂಜಿನ್ ಗಳಲ್ಲಿ ನಿಮ್ಮ ಕೈ ಇಲ್ಲದಿದ್ದರೆ ಅದು ಕ್ರಯೋಜನಿಕ್ ಎಂಜಿನ್ನೇ ಅಲ್ಲ.
104 ಉಪಗ್ರಹಗಳನ್ನ ಏಕಕಾಲದಲ್ಲಿ ನಭಕ್ಕೆ ಚಿಮ್ಮಿಸಲು ನೀವೇ ಬರಬೇಕಿತ್ತು. ಅಂಥ ಸಾಧಕ.ಏರೋಸ್ಪೇಸ್ ಎಂಜಿನಿಯರಿಂಗ್ ಮಾಸ್ಟರ್ಸ್ ಮಾಡಿಕೊಂಡಿದ್ದು ಬೆಂಗಳೂರಿನಲ್ಲೇ. ಐಐಎಸ್ ಸಿಯಲ್ಲಿ. ಇಸವಿ 1982.ಸಾಧಾರಣ ಕುಟುಂಬದ ರೈತನ ಮಗ. ನಿಮ್ಮ ವಂಶಕ್ಕೇ ಡಿಗ್ರಿ ಮಾಡಿದ ಮೊದಲಿಗ. ಕನ್ಯಾಕುಮಾರಿಯವರು.ಮೇಲಸರಕ್ಕಲ್ ವಿಲ್ಲೈ ಹಳ್ಳಿಯಲ್ಲಿ ತಮಿಳು ಮಾಧ್ಯಮ ಸರ್ಕಾರಿ ಶಾಲೆಯಲ್ಲಿ ಓದಬೇಕಾದರೆ ಎಣಿಸಿದ ಚುಕ್ಕಿಗಳೆಷ್ಟೋ.
End to End mission planning, mission design, Mission Integration, Analysis..ಅಬ್ಬ! ನೀವು ನಿಖರವಿಲ್ಲದಿದ್ದರೆ ಅಷ್ಟು ಯಶಸ್ಸುಗಳು ಎಲ್ಲಿ ಸಾಧ್ಯವಿತ್ತು.
Polar sattelite launch vehicle project( PSLV) ಗೆಂದೇ ISRO ಸೇರಿದವರು. ಮಾಸ್ಟರ್ಸ್ ಮಾಡಿಕೊಂಡ ಅದೇ ವರ್ಷ.
2018 ರ ಜನವರಿಯಿಂದ ಇಸ್ರೋ ಚುಕ್ಕಾಣಿ ಹಿಡಿದು, ಜ್ಞಾನಿಗಳ ಹಿಂಡಿನೊಂದಿಗೆ ಗೆಲುವಿನದ್ದೇ ಗುಂಗಿನಲ್ಲಿ ದುಡಿಯುತ್ತಿದ್ದೀರಿ.ನಿಮ್ಮ ದುಡಿಮೆ ಅನೇಕರಂತೆ ಹೊಟ್ಟೆ ಪಾಡಿಗಲ್ಲ. ಕನಸುಗಳು ನನಸಾದರೆ ಅದೇ ಕೂಲಿ.ಚಂದ್ರ, ಮಂಗಳರನ್ನ ಹೇಗೆ ತಂದು ಕೊಡೋಣ. ನೀವೇ ಕೊಡಿಸುತ್ತೀರೆಂದು ನಂಬುತ್ತೇವೆ. ವಿಕ್ರಮ ಹೋಗದಿದ್ದರೇನು. ಮನುಷ್ಯನನ್ನೇ ಇಳಿಸಿಬಿಡಿ 2022ಕ್ಕೆ. ಮತ್ತೊಂದು ಮನುಕುಲದ ಮಹಾನ್ ಜಿಗಿತ ಆಗಿಯೇ ಹೋಗಲಿ.
ಶಿವನಿಗೆ ದಕ್ಕದ ಚಂದ್ರನೇ…
Ramakanth Aryan
Associate Editor
Suvarna News