ಎಂ.ಆರ್.ಕೆ ಕಾಲಂ

ಆಯ್ಕೆಯೇ ಕೂಗುಮಾರಿಗಳಾಗಿದ್ದಾಗ!

ಸುದ್ದಿಗಾಗಿ ಹಪಹಪಿಸುವವರು ಮಾಧ್ಯಮಗಳು ಮಾತ್ರ ಎನ್ನುವಂತೆ ಸುದ್ದಿ ಮಾಧ್ಯಮಗಳನ್ನು ಹಳಿಯುತ್ತ ಕಾಲ ಕಳೆಯುತ್ತಿದ್ದೇವೆ. ಸಾವನ್ನು, ನೋವನ್ನು ಮಾರಿಕೊಳ್ಳುತ್ತಿರುವವರ ಬಗ್ಗೆ ಇನ್ನಿಲ್ಲದ ಅಸಮಾಧಾನವನ್ನು, ಸಿಟ್ಟನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಾರಿಕೊಳ್ಳುತ್ತಿದ್ದೇವೆ. ಯಾವುದಾದಾರೂ ಒಂದು ಸುದ್ದಿ ಸಿಕ್ಕರೆ ಸಾಕು ಇಡೀ ದಿನ ಹಿಂಜಿ, ವಿಚಿತ್ರ ವಿಶೇಷಣಗಳನ್ನು ನೀಡಿ, ಕಿರುಚಿ, ಅರಚಿ, ನಮ್ಮೆಲ್ಲರ ತಲೆಕೆಡಿಸುತ್ತಿರುವ ಮಾಧ್ಯಮಗಳು ಒಂದು ಕಡೆಯಾದರೆ, ಇಂಥ ಸುದ್ದಿ ಸಿಕ್ಕರೆ ಇಡೀ ದಿನ ನೋಡುತ್ತಾ ಕಾಲ ಕಳೆಯಬಹುದು ಎನ್ನುವ ಮನೋಭಾವದ ಜನರು ಇನ್ನೊಂದು ಕಡೆ. ಈ ರೀತಿ ಮಾಧ್ಯಮಗಳು ವರ್ತಿಸುತ್ತಿರುವುದಕ್ಕೆ ನಮ್ಮ ಕೊಡುಗೆ ಏನು ಎಂದು ನಮ್ಮನ್ನು ಪ್ರಶ್ನಿಸಿಕೊಳ್ಳುವ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ.

ಸುದ್ದಿಗಾಗಿ ಹಪಹಪಿಸುವುದು ಬಹುಶಃ ಮನುಷ್ಯನ ಮೂಲಭೂತ ಗುಣಗಳಲ್ಲಿ ಒಂದು. ನನಗೆ ನೆನಪಿದ್ದಂತೆ ಮೇಟಿಕುರ್ಕೆ ಎಂಬ ಹಳ್ಳಿಯಲ್ಲಿ ನಾವಿದ್ದಾಗ ಬೆಳಗ್ಗೆ ಎದ್ದು, ಮುಖ ತೊಳೆದ ತಕ್ಷಣ ಜಗುಲಿಗೆ ಓಡಲು ಒದ್ದಾಡುತ್ತಿದ್ದೆವು. ಅಮ್ಮ ಆ ಸಮಯದಲ್ಲಿ ಕೆಲಸಗಳನ್ನು ಹೇಳಿದರೆ ಸಿಟ್ಟೇ ಬರುತ್ತಿತ್ತು. ಪಕ್ಕದ ಕೇರಿಯಲ್ಲಿ ನಡೆಯುತ್ತಿದ್ದ ಜಗಳ ನಮ್ಮ ಹುರುಪನ್ನು ಹೆಚ್ಚಿಸುತ್ತಿತ್ತು. ಕಾರಣವನ್ನು ತಿಳಿಯುವುದಕ್ಕೆ ತಿಂಡಿ ತಿನ್ನುವುದನ್ನು ಬಿಟ್ಟು ಗಂಟೆಗಟ್ಟಲೆ ಅದನ್ನು ನೋಡುತ್ತಾ ನಿಲ್ಲುವುದು ರೂಢಿಯಾಗಿತ್ತು. ಬದುಕಿನ ಏಕತಾನತೆಯನ್ನು ಸೀಳುವುದಕ್ಕೆ ಜನರಿಗೆ ಒಳ್ಳೆಯ ಸುದ್ದಿಗಳೇ ಬೇಕೆಂದೇನಿಲ್ಲ. ಒಳ್ಳೆಯದ್ದೋ ಕೆಟ್ಟದ್ದೋ ಏನಾದರೂ ಇಲ್ಲಿ ನಡೆಯುತ್ತಿರಬೇಕು. ಕೆಲಸವಿಲ್ಲದ ನಾವು ಅದರ ಬಗ್ಗೆ ಹರಟುತ್ತಿರಬೇಕು. ಹಿಂದೆಲ್ಲ ಮನೆಯಂಗಳಕ್ಕೋ, ಜಗುಲಿಗೋ ಓಡುತ್ತಿದ್ದವರು ಈಗ ಫೇಸ್ಬುಕ್ ಎಂಬ ಜಗುಲಿ ಕಟ್ಟೆಗೆ ಹರಟೆ ಹೊಡೆಯಲು ಬರುತ್ತಾರೆ ಅಷ್ಟೇ. ಯಾವುದೋ ಪತ್ರಿಕೆಯಲ್ಲೋ, ಸುದ್ದಿವಾಹಿನಿಯಲ್ಲೋ ಬಂದ ಸುದ್ದಿಯನ್ನು ಗಂಟೆಗಟ್ಟಲೆ ಚರ್ಚಿಸುತ್ತಾರೆ. ಅವೇನೂ ಸದಾ ಕಾಳಜಿ ತುಂಬಿದ ನುಡಿಗಳು ಎಂದು ನಾವು ಭಾವಿಸಬೇಕಿಲ್ಲ.

ಸ್ವಲ್ಪ ವಿಚಿತ್ರವಾದ, ನಾವು ಕಂಡಿರದ ಘಟನೆಗಳು ನಡೆದರೆ ಮುಗಿದೇ ಹೋಯಿತು. ನಾನು ಬೇಸಗೆಯ ರಜೆಯ ಸಂದರ್ಭದಲ್ಲಿ ತಿಪಟೂರಿನ ಸಮೀಪದಲ್ಲಿರುವ ನನ್ನ ಗಂಡನ ಊರಿಗೆ ಮಕ್ಕಳನ್ನು ಕರೆದುಕೊಂಡು ಹೋಗಿ ಎರಡು ತಿಂಗಳು ಇರುತ್ತಿದ್ದೆ. ಆ ಊರಿನಲ್ಲಿ ಇರುವುದೇ ಐವತ್ತು ಮನೆಗಳು. ನೀರಸವಾದ ಹಗಲುಗಳು, ನಿಡಿದಾದ ರಾತ್ರಿಗಳು. ಕೆಲಸ ಮಾಡದೆ ಅರಳಿಕಟ್ಟೆಯ ಕೆಳಗೆ ಕೂತು ಹರಟುವ ಒಂದಷ್ಟು ಜನ. ನನ್ನೊಂದಿಗೆ ಮಾತನಾಡಲು ಯಾರೂ ಇರುತ್ತಿರಲಿಲ್ಲ. ಸಂಜೆಯ ಸಮಯದಲ್ಲಿ ಕೆರೆಯ ದಡದ ಮೇಲೆ ವಾಕಿಂಗ್ ಮಾಡುವಾಗ ಗಿಡಗಂಟಿಗಳನ್ನು ಮಕ್ಕಳಿಗೆ ತೋರಿಸಿಕೊಂಡು, ಹಾಡುಗಳನ್ನು ಹೇಳಿಕೊಂಡು, ನನಗೆ ನಾನೇ ಮಾತನಾಡುತ್ತ ಬರುತ್ತಿದ್ದೆ. ನನ್ನ ಮಾವನವರು ಅವರ ತೋಟದ ಕೆಲಸದಲ್ಲಿ ಮುಳುಗಿರುತ್ತಿದ್ದರು. ಸುತ್ತ ಮುತ್ತ ಇದ್ದ ಮೂರು ಮತ್ತೊಂದು ಮನೆಗಳವರು ಮಾತಾಡುವಾಗ ಕಿರುಚಿಕೊಂಡೇ (ಸುದ್ದಿ ವಾಹಿನಿಯವರಂತೆ) ಮಾತಾಡುತ್ತಿದ್ದರು. ತೀರಾ ಸಣ್ಣ ಪುಟ್ಟ ಸಂಗತಿಗಳನ್ನು ಪ್ರಳಯವಾದ ಹಾಗೆ ವರ್ಣಿಸುತ್ತಿದ್ದರು. ಅದನ್ನು ಕೇಳಿಕೊಂಡು ಕುಳಿತುಕೊಳ್ಳಲು ನಾಲ್ಕಾರು ಜನ ಸೇರುತ್ತಿದ್ದರು.

ಅವರು ಹೇಳುತ್ತಿದ್ದ ಘಟನೆಗಳು ಕಥೆಗಳ ರೂಪವನ್ನು ತಾಳುತ್ತಿತ್ತು. ನಡೆದ ಘಟನೆಗೆ ತಮ್ಮದೇ ಕಲ್ಪನೆಗಳನ್ನು ಸೇರಿಸುತ್ತಿದ್ದರು. ಒಂದು ದಿನ ಬೆಳಗ್ಗೆ ತಿಂಡಿ ಮುಗಿಸಿ ಕೂತಿದ್ದೇನೆ. ನಮ್ಮ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಲ್ಲಿಗಮ್ಮ, `ಅಮ್ಮ, ಅಮ್ಮ, ಪಕ್ಕದ ಊರಿಗೆ ಆನೆ ಬಂದಿದೆಯಂತೆ, ಕೆರೆಯಲ್ಲಿ ಸ್ನಾನ ಮಾಡುತ್ತಿದೆಯಂತೆ, ತೋಟದ ತುಂಬಲ್ಲ ಇಷ್ಟಿಷ್ಟಗಲ ಹೆಜ್ಜೆಗಳು, ಬಾಳೆಗಿಡಗಳನ್ನೆಲ್ಲ ತುಳಿದುಹಾಕಿವೆ’ ಎಂದು ಓಡಿಬಂದಳು. ಆ ಊರಿನ ನೀರವತೆಯಿಂದ ಕೊಂಚ ಖಿನ್ನಳಾಗಿದ್ದ ನಾನು ಖುಷಿಯಿಂದ ಎದ್ದೆ. ಸ್ವಲ್ಪ ಸಂಕೋಚವಾದರೂ ನನ್ನ ಮಾವನವರಿಗೆ, `ಅಣ್ಣ, ಆನೆ ಬಂದಿದೆಯಂತೆ, ನಾನು ನನ್ನ ಮಕ್ಕಳು ನೋಡಿ ಬರುತ್ತೇವೆ’ ಎಂದೆ. `ಅಯ್ಯೋ ನಿಮ್ಮ ಮನೆಯಲ್ಲಿ ಟ್ರ್ಯಾಕ್ಟರ್ ಇದೆಯಲ್ಲ, ಎಲ್ಲರೂ ಹೋಗಬಹುದು’ ಎಂದು ಯಾರೋ ಸಲಹೆ ನೀಡಿದರು. ಒಟ್ಟು ಮೂವತ್ತು ಜನರು ಕೆಲಸ ಕಾರ್ಯಗಳನ್ನೆಲ್ಲ ಬಿಟ್ಟು, ಟ್ರ್ಯಾಕ್ಟರ್ ನಲ್ಲಿ ಕುಳಿತು ಮೂರು ಕಿಲೋಮೀಟರ್ ದೂರವಿರುವ ಈಚನೂರಿನ ಕೆರೆಗೆ ಹೋದೆವು . ಅಲ್ಲಿ ಒಂದು ಆನೆ ಸ್ನಾನ ಮಾಡುತ್ತಿದ್ದುದನ್ನು ಕಣ್ಣುತುಂಬಿಕೊಂಡು ಎಲ್ಲರೂ ಬಂದೆವು. ಆಮೇಲೆ ಒಂದು ವಾರದವರೆಗೂ ಈ ವಿಷಯದ ಚರ್ಚೆ ನಡೆದೇ ನಡೆಯಿತು. ಅದರಿಂದ ಏನು ಪ್ರಯೋಜನವಾಯಿತು ಎನ್ನುವುದನ್ನು ಮಾತ್ರ ಕೇಳಬೇಡಿ.

ಊರಿನಲ್ಲಿ ಮೆಟ್ಟಿಲ ಮೇಲೆ ಕೂತಿದ್ದಾಗ ಮಂಡರಗಪ್ಪೆಯೊಂದು ಸಮೀಪದಲ್ಲಿ ಹೋಗಿದ್ದು, ಚೇಳು ಕುಟುಕಿದ್ದು, ಯಾರದ್ದೋ ಅಟ್ಟದಲ್ಲಿ ತೆಂಗಿನಕಾಯಿಗಳ ನಡುವೆ ಹಾವು ಕಾಣಿಸಿಕೊಂಡಿದ್ದು ಮುಂತಾದ ವಿಷಯಗಳು ದಿನನಿತ್ಯ ಗಂಟೆಗಟ್ಟಲೆ ಚರ್ಚೆಗೆ ಒಳಪಡುತ್ತಿದ್ದವು. ಇನ್ನು ಯಾರಾದರೂ ಬಾವಿಗೋ, ನೀರಿಗೋ ಬಿದ್ದು ಆತ್ಮಹತ್ಯೆ ಮಾಡಿಕೊಂಡರೆ ಮುಗಿದೇಹೋಯಿತು. ಯಾರ್ಯಾರೂ ಊಹಿಸಿಕೊಳ್ಳಲಾಗದ ನೂರು ಸಂಗತಿಗಳನ್ನು ಮಾತಾಡಿ ಮಾತಾಡಿ ಬಾಯಿ ತೆವಲನ್ನು ತೀರಿಸಿಕೊಳ್ಳುವುದು. ನಮ್ಮೊಳಗೇ ಇಂತಹ ಅನಗತ್ಯ ಕುತೂಹಲ, ಆಸಕ್ತಿಗಳಿಲ್ಲದಿದ್ದರೆ ಈ ಸುದ್ದಿ ಮಾಧ್ಯಮಗಳು ಇಷ್ಟು ಸುಲಭವಾಗಿ ವ್ಯಾಪಾರಕ್ಕೆ ಇಳಿಯುವುದಕ್ಕೆ ಬಹುಶಃ ಸಾಧ್ಯವಾಗುತ್ತಿರಲಿಲ್ಲ. ಇಂತಹದ್ದನ್ನು ಧಿಕ್ಕರಿಸಿ ಬದುಕುವುದಕ್ಕೆ ನಮಗೆ ಸಾಧ್ಯವಿದ್ದಿದ್ದರೆ ಬದುಕು ಕೊಂಚ ನಿರಾಳವಾಗಿರುತ್ತಿತ್ತೇನೋ. ಕೆಲಸ ಮಾಡುವಾಗ ಈ ಎಲ್ಲದರಿಂದ ದೂರವಿರಬೇಕು ಎನ್ನುವ ಕನಿಷ್ಠ ಅರಿವೂ ನಮಗಿಲ್ಲ. ನಿಸಾರರ `ರಾಮನ್ ಸತ್ತ ಸುದ್ದಿ’ ಕವನದಲ್ಲಿ ವಿಜ್ಞಾನಿಯೊಬ್ಬನ ಸಾವು ಕೂಡ ಅರಿವಿಗೆ ಬಾರದಂತೆ ಕೆಲಸದಲ್ಲಿ ತೊಡಗಿಕೊಂಡಿದ್ದ ಮುಗ್ಧ ಹನುಮನ ಬಗ್ಗೆ ಉಲ್ಲೇಖವಿದೆ.

ಪುತಿನ ಬಹಳ ಹಿಂದೆಯೇ `ದಿನಪತ್ರಿಕೆ’ ಎಂಬ ಕವನವೊಂದನ್ನು ಬರೆದಿದ್ದರು. ದಿನವೂ ಬೆಳಗೋ, ಬೈಗೋ ಸಿಗುವ ದಿನಪತ್ರಿಕೆಗಾಗಿ ಕಾಯುತ್ತ, ಕೈಗೆ ಸಿಕ್ಕ ತಕ್ಷಣ ಮನೆ ಖುರ್ಚಿಯನ್ನು ಸಿಂಹಾಸನ ಮಾಡಿಕೊಂಡು ರಾಜ/ರಾಣಿಯರಾಗಿಬಿಡುತ್ತೇವೆ. ಅದೇ ಹೆಸರು, ಅದೇ ಹೊದಿಕೆ, ಅದೇ ಕಾತರ. ಅದು ಸ್ವಲ್ಪ ವ್ಯತ್ಯಾಸವಾದರೂ ಮನಸ್ಸಿಗೆ ಹಿಡಿಸುವುದಿಲ್ಲ. ಓಡುವವನು ದೊರೆಯಾದರೆ ಪತ್ರಿಕೆ ಮಂತ್ರಿಯಾಗುತ್ತದೆ. ಮಂತ್ರಿಯನ್ನು ವಿಷಯವೇನೆಂದು ಕೇಳಿದರೆ ಸಾಕು, ಅವನು ಒರೆಯುವ ಸುದ್ದಿ ಬರೀ ಭಯಾನಕವೇ! ಪತಿ ವಿಟನೊಂದಿಗೆ ಇದ್ದ ಕುಲಟೆಯನ್ನು ಕಡಿದ, (ಬಳಸುವ ಭಾಷೆಯನ್ನೂ ಗಮನಿಸಿ), ವಿದ್ಯಾವಂತನೊಬ್ಬ ವಿಷವನ್ನು ಕುಡಿದ, ನೆಲ ನಡುಗಿತು, ಪೂರ್ವ, ಪಶ್ಚಿಮದ ಜನರು ಪ್ರಕ್ಷುಬ್ಧರಾಗಿದ್ದಾರೆ, ಸತ್ತವನ ಬಗ್ಗೆ ಒಂದಿಷ್ಟು ಒಳ್ಳೆಯ ಮಾತುಗಳು, ಇದ್ದವನ ಮೋಜು ಮಸ್ತಿಗಳು, ಏನೂ ಇಲ್ಲದವರ ಹಾಹಾಕಾರ, ಎಲ್ಲ ಇರುವವರ ಹೋಹೋಕಾರ , ಹೊರನಾಡಿನವರ ಲಂಡತನ, ಒಳನಾಡಿನವರ ಭಂಡತನ, ಪಾರ್ಟಿಪಾರ್ಟಿಗಳ ಚೀರಾಟ, ಚೆಂಡು ದಾಂಡಿಗರ ತೂರಾಟ ಹೀಗೆ!

ಈ ದಿನಪತ್ರಿಕೆ ಎಂಬ ಅಂಗೈ ಅಗಲದ ತೆರೆಗನ್ನಡಿಯಲ್ಲಿ ಇಡೀ ಜಗತ್ತಿನ ನೆರಳು ಸುಳಿದಿದೆ. ವಿಕಟ, ವಿಕೃತ, ವಿಪರೀತಗಳೆಲ್ಲ ಇಲ್ಲಿ ಮೆರೆಯುತ್ತಿವೆ. ಆದರೂ ನಮ್ಮ ಬಿಸಿ ಕಾಫಿಯ ರುಚಿ ಕೆಟ್ಟಿಲ್ಲ, ಹೃದಯ ಯಾವುದಕ್ಕೂ ತುಡಿದಿಲ್ಲ, ಮನಸ್ಸಿನ ನೆಮ್ಮದಿ ಹಾಳಾಗಿಲ್ಲ. ನಿಮಿಷದಲ್ಲಿಯೇ ಎಲ್ಲ ಸುದ್ದಿಗಳು ಹಳಸಿ ಹೋಗಿವೆ. ಆದರೂ ಪತ್ರಿಕೆ ಬರುವತನಕ ತುಡಿದ ನಮ್ಮ ಮನಸ್ಸಾದರೂ ಎಂಥದ್ದು? ಈ ಬಗ್ಗೆ ನಾವು ಎಂದಾದರೂ ಯೋಚಿಸಿದ್ದೇವೆಯೇ? ಬಹುಶಃ ನಾವು ಇಂಥ ಸುದ್ದಿಗಳನ್ನು ನಿರಾಕರಿಸಿ ಟಿ ಆರ್ ಪಿ ಇಳಿಸಿದ್ದರೆ, ಜ್ಞಾನ ಸಂಬಂಧಿ ವಿಷಯಗಳನ್ನು ತಿಳಿಯಲು ಹಪಹಪಿಸಿದ್ದರೆ, ಸಮಾಜದ ಬಗ್ಗೆ ಕಾಳಜಿಯುಳ್ಳವರಾಗಿದ್ದರೆ ಮಾಡುವ ವಿಮರ್ಶೆಗೆ ಕೊಂಚ ಅರ್ಥ ಬರಬಹುದೇನೋ? ದಿನದಲ್ಲಿ ಒಂದೆರಡು ಗಂಟೆ ಫ್ರೆಂಚ್ ವಾಹಿನಿಯೊಂದನ್ನು ನೋಡುತ್ತೇನೆ. ಹೊಸ ಹೊಸ ಅರಿವನ್ನು ಮೂಡಿಸುವ, ಜ್ಞಾನದಾಹಿ ಮನೋಭಾವದವರಿಗೆ ಹೇಳಿ ಮಾಡಿಸುವಂತಿರುವ ಆ ಸುದ್ದಿವಾಹಿನಿ ನನ್ನೊಳಗನ್ನು ಕೆರಳಿಸುವುದಿಲ್ಲ, ವಿಕೃತಿಯನ್ನು ತುಂಬುವುದಿಲ್ಲ, ಮನಸ್ಸಿಗೆ ಕಿರಿಕಿರಿ ಮಾಡುವುದಿಲ್ಲ. ಆದರೆ ನನ್ನನ್ನೂ ಸೇರಿ, ಕೆಲವೊಮ್ಮೆ ನಮ್ಮ ಆಯ್ಕೆಯೇ ಕೂಗುಮಾರಿಯಾಗಿರುತ್ತದೆ. ಅದಕ್ಕೆ ಬಾಗಿಲು ತೆರೆದು ಬಾಯಿ ಬಡಿದುಕೊಳ್ಳುವುದರಲ್ಲಿ ಅರ್ಥವಿರುವುದಿಲ್ಲ.

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!