ಸಾಧಕರು

ಕ್ಷೀರಬ್ರಹ್ಮನಿಗೊಂದು ಗೌರವಪೂರ್ಣ ನುಡಿ ನಮನ

ಯದಾ ಯದಾಹಿ ಧರ್ಮಸ್ಯ; ಗ್ಲಾನಿರ್ಭವತಿ ಭಾರತ.
ಆಭ್ಯುದ್ಧಾನಮಧರ್ಮಸ್ಯ: ತದಾತ್ಮಾನಂ ಸೃಜಾಮ್ಯಹಂ
ಪರಿತ್ರಾಣಾಯ ಸಾಧೂನಾಂ ವಿನಾಯಶಾಯ ಚ ದುಶ್ಕøತಾಂ
ಧರ್ಮಸಂಸ್ಥಾಪನಾರ್ಥಾಯ, ಸಂಭವಾಮಿ ಯುಗೇ ಯುಗೇ. . .

          ಜಗತ್ತಿನಲ್ಲಿ ಅಧರ್ಮ ಅನ್ಯಾಯಗಳು ಹೆಚ್ಚಿದಂತೆ ಅವುಗಳನ್ನು ಅಂತ್ಯಗೊಳಿಸಿ, ಮನುಕುಲವ ಉದ್ಧರಿಸಲು ಯುಗ ಯುಗಗಳಲ್ಲಿಯೂ ಅವತರಿಸುತ್ತೇನೆ ಎಂದು ಭಾಗವತದಲ್ಲಿ ಶ್ರೀ ಕೃಷ್ಣÀ್ಣನು ಹೇಳಿರುವಂತೆ, 20ನೆಯ ಶತಮಾನದ ಆದಿಯಲ್ಲಿ ಗುಜರಾತಿನಲ್ಲಿ ಹೈನುಗಾರಿಕೆಯನ್ನು ಅವಲಂಬಿಸಿದ ಸಹಸ್ರಾರು ಮಂದಿ ರೈತಾಪಿ ಜನರು ಮಧ್ಯವರ್ತಿಗಳ ಕಾಟದಿಂದ ಸಂಕಷ್ಟಟದಲ್ಲಿ ನಲುಗುತ್ತಿರುವಾಗ ಯುಗ ಪುರುಷನೊಬ್ಬನ ಜನನವಾಯಿತು. ಆ ಯುಗಪುರುಷರೇ, ಡಾ.ವರ್ಗಿಸ್ ಕುರಿಯನ್ನರು. ವರ್ಗೀಸರ ಜನನವು ಗುಜರಾತಿನ ಹೈನುಗಾರರಿಗೆ ಆ ದೇವರೇ ಧರೆಗಿಳಿದಂತಾಯ್ತು. ದಿನಾಂಕ 26.11.1921 ರಂದು ಕೇರಳದ ಕೋಯಿಕೋಡದ ಸಿರಿಯನ್ ಕ್ರೈಸ್ತ ಕುಟುಂಬವೊಂದರಲ್ಲಿ ಜನಿಸಿದ ಹಾಲು ಬಿಳುಪಿನ ವರ್ಣದ ಬೆಣ್ಣೆ ಮೊಗದ ಮಗುವೆ ವರ್ಗೀಸ್ ಕುರಿಯನ್ನರು. ದೇಶದೆಲ್ಲೆಡೆ ಹಾಲಿನ ಹೊಳೆಯನ್ನೇ ಹರಿಸಿ ಕ್ಷೀರ ಕ್ರಾಂತಿಯ ಹರಿಕಾರರಾಗಿ ಇಡೀ ದೇಶದಲ್ಲೇ ಹಾಲು ಉತ್ಪಾದನೆಯಲ್ಲಿ ದಾಖಲೆಯನ್ನು ಸೃಷ್ಟಿಸಿದ, ಆನಂದ್‍ನ ಅಮೂಲ್ ಸಹಕಾರಿ ಸಂಸ್ಥೆಯ ಉಗಮಕ್ಕೆ ಕಾರಣೀಭೂತರಾದವರು.

ವರ್ಗೀಸ್ ಕುರಿಯನ್ನರು ಮದರಾಸಿನ ಲಾಯಲ್ ಕಾಲೇಜಿನಲ್ಲಿ 1940 ರಲ್ಲಿ ಭೌತಶಾಸ್ತ್ರದಲ್ಲಿ ಪದವಿ, ಬಿ.ಈ, ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದರು. ಭಾರತ ಸರ್ಕಾರದ ವಿದ್ಯಾರ್ಥಿ ವೇತನದಿಂದ ಮಿಚಿಗನ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಜೆಮ್‍ಶೆಡ್ ಪುರ ಟಾಟಾ ಐರನ್ ಮತ್ತು ಸ್ಟೀಲ್ ಕಂಪೆನಿಯಲ್ಲಿ ಇಂಜಿನಿಯಿಂಗ್ ವಿಶೇಷ ತರಬೇತಿ ಪಡೆದರು. 1946ರಲ್ಲಿ ಬೆಂಗಳೂರಿನ ರಾಷ್ಟ್ರೀಯ ಡೈರಿ ಸಂಶೋಧನಾ ಸಂಸ್ಥೆಯಲ್ಲಿ (ಓಆಖI) ಡೇರಿ ಇಂಜಿನಿಯರಿಂಗ್ ನಲ್ಲಿ ಕೂಡ ಒಂಬತ್ತು ತಿಂಗಳ ವಿಶೇಷ ತರಬೇತಿಯನ್ನು ಪಡೆದರು. 1948 ರಲ್ಲಿ ವಿದೇಶದಿಂದ ಮರಳಿ 1949 ರ ಮೇ ಮಾಹೆಯಲ್ಲಿ ಆನಂದ್‍ನ ಹಾಲಿನ ಪೌಡರ್ ಉತ್ಪಾದನಾ ಘಟಕದಲ್ಲಿ ಸರ್ಕಾರಿ ಸೇವೆಗೆ ಸೇರಿಕೊಂಡರು. ಒಪ್ಪಂದದ ಅವಧಿ ಮುಗಿಸಿ ಆನಂದ್ ಬಿಡಬೇಕೆನ್ನುವ ಸಮಯದಲ್ಲಿ ಕೈರಾ ಜಿಲ್ಲೆಯ ಹಾಲು ಉತ್ಪಾದಕರು ದಲ್ಲಾಳಿಗಳಿಂದ ಸಂಕಷ್ಟಕ್ಕೊಳಗಾಗಿದ್ದು, ತ್ರಿಭುವನ್ ದಾಸ್ ಪಟೇಲರು ಸಹಕಾರಿ ಸಂಘಗಳ ಮೂಲಕ ರೈತರನ್ನು ಸಂಘಟಿಸಿ ಸಂಘಟನೆಯ ಉಳಿವಿಗಾಗಿ ಹೋರಾಡುತ್ತಿದ್ದನ್ನು ಕಂಡು ಅವರಿಂದ ಪ್ರೇರಿತರಾದ ಕುರಿಯನ್ನರು ಸರ್ಕಾರಿ ಹುದ್ದೆಯನ್ನು ತೊರೆದು, ಸ್ವ ಇಚ್ಛೆಯಿಂದ ಆ ಸಂಸ್ಥೆಗೆ ಜೀವ ತುಂಬಿದರು. ಅವರ ಈ ನಿಲುವು ಅಮೂಲ್ ಸಂಸ್ಥೆಯ ಉಗಮಕ್ಕೆ ನಾಂದಿಯಾಯಿತು. ಅಮೂಲ್ ಸಂಸ್ಥೆಯ ಉದ್ಘಾಟನೆಗೆ ಆಗಮಿಸಿದ ಅಂದಿನ ಪ್ರಧಾನ ಮಂತ್ರಿಗಳಾದ ಜವಹರ್ ಲಾಲ್ ನೆಹರೂರವರು ಇವರ ದಿಟ್ಟ ಹೆಜ್ಜೆಯನ್ನು ಮೆಚ್ಚಿ ಆಲಂಗಿಸಿದರು.

ಸಹಕಾರಿ ತತ್ವದ ನೆಲಗಟ್ಟಿನಲ್ಲಿ ಉಗಮವಾದ ಆಮೂಲ್ ಸಂಸ್ಥೆಯ ಪ್ರಗತಿ ಹಾಗೂ ಇವರ ಸಾಧನೆಗೆ ಮೆಚ್ಚಿದ ಅಂದಿನ ಪ್ರಧಾನ ಮಂತ್ರಿಗಳಾದ ಲಾಲ್ ಬಹದ್ದೂರ್ ಶಾಸ್ತ್ರಿಯವರು 1965 ರಲ್ಲಿ ರಾಷ್ಟ್ರೀಯ ಡೇರಿ ಅಭಿವೃದ್ಧಿ ನಿಗಮದ ಸ್ಥಾಪನೆಗೆ ಪ್ರೇರೇಪಿತರಾಗಿ ಸದರಿ ಸಂಸ್ಥೆಗೆ ಕುರಿಯನ್ನರನ್ನೇ ಅಧ್ಯಕ್ಷರನ್ನಾಗಿ ನೇಮಕ ಮಾಡಿದರು. ಮುಂದುವರೆದಂತೆ 1973 ರಲ್ಲಿ ಗುಜರಾತ್ ಕೋ ಅಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಸಂಸ್ಥೆಯ  ಹುಟ್ಟಿಗೆ ಕಾರಣವಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಸಮರ್ಥವಾಗಿ ಮಾರಾಟ ಮಾಡಲು ಅನುವು ಮಾಡಿ, ಇಡೀ ವಿಶ್ವವೇ ಭಾರತದೆಡೆಗೊಮ್ಮೆ ತಿರುಗಿ ನೋಡುವಂತೆ ಮಾಡಿದರು. ಹಾಲಿನ ಪುಡಿ ತಯಾರಿಕೆಯಲ್ಲಿ ಯೂರೋಪ್‍ನ ನೆಸ್ಲೆ ಕಂಪೆನಿಗೆ ಪೈಪೋಟಿಯಾಗಿ ನಿಂತರು. ದೇಶದ ಹೈನೋದ್ಯಮದಲ್ಲಿ ಒಂದು ಹೊಸ ಮನ್ವಂತರಕ್ಕೆ ನಾಂದಿಯಾದರು.

ಗುಜರಾತಿನ ಹೈನುಗಾರರು ಮಧ್ಯವರ್ತಿಗಳ ದಲ್ಲಾಳಿಗಳ ಹಾವಳಿಯಿಂದ ತತ್ತರಿಸುತ್ತಿರುವಾಗ, ಅವರಿಗೆ ದಾರಿ ದೀವಿಗೆಯಾದ ಕುರಿಯನ್ನರ ಸಹಕಾರಿ ತತ್ವದ ಪರಿಕಲ್ಪನೆಯ ಬುನಾದಿಯು ಇಡೀ ಭಾರತ ದೇಶದ ಎಲ್ಲಾ ರಾಜ್ಯಗಲ್ಲಿ ಡೈರಿ ಉದ್ಯಮಕ್ಕೆ ನಾಂದಿಯಾಯಿತು. ಅಂದು ಕುರಿಯನ್ನರು ವಿಶ್ವದಲ್ಲಿ ಭಾರತವು ಹಾಲು ಉತ್ಪಾದನೆಯಲ್ಲಿ ಮೊದಲ ಸ್ಥಾನ ಗಳಿಸಬೇಕೆಂದು ಕಂಡ ಕನಸಿಂದು ನನಸಾಗಿದೆ. ಭಾರತವು ಇಂದು ವಿಶ್ವದಲ್ಲೇ ಹಾಲು ಉತ್ಪಾದನೆಯಲ್ಲಿ ಅಗ್ರ ಸ್ಥಾನವನ್ನು ಪಡೆದ ಹೆಗ್ಗಳಿಕೆಯು ಡಾ. ಕುರಿಯನ್ ವರ್ಗೀಸರಿಗೇ ಸಲ್ಲಬೇಕು. ಯಾವುದೇ ಪ್ರತಿಕೂಲ ಪರಿಸ್ಥಿತಿಯಲ್ಲಿ ಕೂಡ ಒಬ್ಬ ವ್ಯಕ್ತಿ ಇಡೀ ಸಮಾಜಕ್ಕೆ, ದೇಶಕ್ಕೆ ಹೇಗೆ ದಾರಿ ದೀಪವಾಗಬಹುದೆಂಬುದಕ್ಕೆ ಕುರಿಯನ್ನರ ಕೌಶಲ್ಯ ಹಾಗೂ ಶ್ರಮದ ದುಡಿಮೆಯೇ ನಿದರ್ಶನವೆನ್ನಬಹುದು. ಕೌಶಲ್ಯಕ್ಕೆ ತಕ್ಕದಾಗಿ ಇವರ ಮುಡಿಗೇರಿದ ಪ್ರಶಸ್ತಿಗಳು ಹತ್ತು ಹಲವು. ಅವುಗಳೆಂದರೆ, ವಿಶ್ವ ಆಹಾರ ಪ್ರಸಸ್ತಿ, ಮ್ಯಾಗ್ಸೇಸ್ ಪ್ರಶಸ್ತಿ, ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ, ಕೃಷಿರತ್ನ ಪ್ರಶಸ್ತಿಗಳು ಹಾಗೂ ಹಲವು ವಿಶ್ವವಿದ್ಯಾಲಯದ ಡಾಕ್ಟರೇಟ್, ಹಲವಾರು ಅಂತರ ರಾಷ್ಟ್ರೀಯ ಪ್ರಶಸ್ತಿಗಳು. ವರ್ಗೀಸರ ಹೈನುಗಾರಿಕೆಯ ಪರಿಕಲ್ಪನೆಯಿಂದ ಪ್ರಭಾವಿತರಾಗಿ ಶ್ಯಾಮ್ ಬೆನೆಗಲ್ ರವರು ಮಂಥನ್ ಚಿತ್ರವನ್ನು ನಿರ್ಮಿಸಿದರು. ಜೀವನ ಪರ್ಯಂತ ರೈತರ ನೌಕರನಾಗಿ ಆನಂದ್ ನಲ್ಲಿ ಉಳಿಯುವ ನನ್ನ ಆಯ್ಕೆ, ನಿರ್ಧಾರ ಬಹಳ ಔಚಿತ್ಯವಾದುದೆಂದು ತಮ್ಮ ಆತ್ಮ ಚರಿತ್ರೆಯಲ್ಲಿ ಉಲ್ಲೇಖಿಸಿದ್ದಾರೆ.

ಒಮ್ಮೆ ಶ್ರೀಮತಿ ಮೌಳಿಯವರು ಆನಂದ್‍ನ ಚಾಕೋಲೇಟ್ ತಯಾರಿಕಾ ಘಟಕಕ್ಕೆ ಭೇಟಿ ನೀಡಲು ಗೆಳತಿಯರೊಂದಿಗೆ ಹೋದಾಗ, ಸಿಬ್ಬಂದಿಗಳನ್ನು ಹೊರತುಪಡಿಸಿ ಇತರರ ಒಳ ಪ್ರವೇಶಕ್ಕೆ ನಿರ್ಭಂಧವಿದ್ದ ಕಾರಣ ಸೆಕ್ಯೂರಿಟಿಯವರು ಕುರಿಯನ್ ರವರ ಪತ್ನಿಯೆಂದು ಹೇಳಿದರೂ ಕೂಡ ಒಳ ಬಿಡಲು ನಿರಾಕರಿಸಿದ ಘಟನೆಯನ್ನು ತಿಳಿದ ಕುರಿಯನ್ನರು, ಯಾವುದೇ ದಾಕ್ಷಿಣ್ಯಕ್ಕೊಳಪಡದೆ ಪ್ರವೇಶÀಕ್ಕೆ ಅವಕಾಶ ನೀಡದೆ ಶಿಸ್ತಿನಿಂದ ಕರ್ತವ್ಯ ನಿರ್ವಹಿಸಿದ ಸೆಕ್ಯೂರಿಟಿಯ ಕಾರ್ಯ ತತ್ಪರತೆಗೆ ಮೆಚ್ಚಿ ವಿಶೇಷ ವಾರ್ಷಿಕ ಬಡ್ತಿ ನೀಡಿದ್ದು, ಕುರಿಯನ್ನರ ಶಿಸ್ತು ಪರಿಪಾಲನೆ ಮತ್ತು ವೃತ್ತಿ ನಿಷ್ಟುರತೆಗೆ ನಿದರ್ಶನವಾದ ಒಂದು ಘಟನೆ. ಶುದ್ಧ ಹಸ್ತರು ಶಿಸ್ತು ಪರಿಪಾಲಕರಾದ ಇವರ ಕಾರ್ಯದಕ್ಷತೆ, ಕಾರ್ಯತತ್ಪರತೆ ಇತರರಿಗೆ ಅನುಕರಣೀಯ ಹಾಗೂ ಆದರ್ಶಪ್ರಾಯ.

ಕೇಳಿದ್ದನ್ನೆಲ್ಲ ಕೊಡುವ ಕಾಮಧೇನುವನ್ನು ಸುರಲೋಕದಿಂದ ಅಂಗೀರಸರು ಧರೆಗಿಳಿಸಿದಂತೆ, ನಂದಿನಿಯನ್ನು ತಂದ ವಶಿಷ್ಟರಂತೆ, ಕಲಿಯುಗದಲ್ಲಿ ಬೇಕಾದ ಹಾಲು ಮತ್ತು ಹಾಲಿನ ನೂರಾರು ಉತ್ಪನ್ನಗಳನ್ನು ಊತ್ಪಾದಿಸುವ ಡೇರಿ ಉದ್ಯಮವನ್ನು ದೇಶಕ್ಕೆ ನೀಡಿ ರೈತರ ಹೈನುಗಾರರ ಕಂಬನಿಯೊರೆಸಿದ ಮಹಾನ್ ಸಾಧಕ, ಅಮೂಲ್ಯವಾದ ಅಮೂಲ್‍ನ ಸಂಸ್ಥಾಪಕರೇ ಡಾ. ವರ್ಗೀಸ್ ಕುರಿಯನ್ನರು. ಕೇಳಿದ್ದೆಲ್ಲಾ ಸಿಗುವಂತ ಅಮೂಲ್ ಡೇರಿಯನ್ನು ಕಲಿಯುಗದಲ್ಲಿ ಸೃಷ್ಟಿಸಿದ ಹೆಗ್ಗಳಿಕೆ ಇವರದು. ಅಂತೆಯೆ ಅವರದೇ ಪರಿಕಲ್ಪನೆಯ ಬುನಾದಿಯಲ್ಲಿ ದೇಶದ ಸುಮಾರು 27 ರಾಜ್ಯಗಳಲ್ಲಿ ಹಲವಾರು ಸಹಕಾರಿ ಕ್ಷೀರ ಸಂಸ್ಥೆಗಳು ಹುಟ್ಟಿ ದೇಶದ ಬೆನ್ನೆಲುಬಾದ ರೈತ ಕೇವಲ ಕೃಷಿಯನ್ನೇ ಅವಲಂಬಿಸದೆ ಹೈನುಗಾರಿಕೆಯಿಂದ ಬದುಕನ್ನು ಕಟ್ಟಿಕೊಳ್ಳುವ ಭರವಸೆಯು ಹಳ್ಳಿ ಹಳ್ಳಿಗಳಲ್ಲಿ ಸಾಕಾರಗೊಂಡಿದೆ ಎಂದರೆ ಅದಕ್ಕೆ ಮೂಲ ಕಾರಣ ಈ ಮಹಾ ಪುರುಷ ರೆಂದು ಹೇಳಿದರೆ ಅಚ್ಚರಿಯಲ್ಲ.


ಕೇರಳದ ಮೂಲದವರಾದ ಕುರಿಯನ್ನರು, ಗುಜರಾತ್‍ನಲ್ಲೆ ಅರು ದಶಕಗಳ ಕಾಲ ನೆಲಸಿದ್ದರು ಪತ್ನಿ ಶ್ರೀಮತಿ ಮೌಳಿ, ಮಗಳು ನಿರ್ಮಲ ಕುರಿಯನ್ ಹಾಗೂ ಮೊಮ್ಮೊಗ ಸಿದ್ಧಾರ್ಥ. ಇವರು ತಮ್ಮ 90ನೆಯ ವಯಸ್ಸಿನಲ್ಲಿ 2012ರ ಸೆಪ್ಟೆಂಬರ್ 9 ರಂದು ತೀವ್ರ ಅನಾರೋಗ್ಯದಿಂದ ಮಂಬೈನಲ್ಲಿ ಕೊನೆಯುಸಿರೆಳೆದರು. ಸುಮಾರು ಆರು ದಶಕಗಳ ಕಾಲ ದೇಶದೆಲ್ಲೆಡೆ ದೇದೀಪ್ಯಮಾನವಾಗಿ ಬೆಳಗಿದ ಹಣತೆ ನಂದಿತು. ಇದು ಇಡೀ ದೇಶಕ್ಕೆ ತುಮಬಲಾರದ ನಷ್ಟವೇ ಸರಿ. ಇವರು ನೆಟ್ಟ ಸಸಿ, ಗಿಡವಾಗಿ ಮರವಾಗಿ ಹೆಮ್ಮರವಾಗಿ ಬೃಹದಾಕರವಾಗಿ ದೇಶದೆಲ್ಲೆಡೆ ರೆಂಬೆ ಕೊಂಬೆಗಳ ಚಾಚಿ ತನ್ನ ನೆರಳಲ್ಲಿ ಕೋಟ್ಯಾಂತರ ಜನರ ಬದುಕಿಗೆ ನೆಲೆಯಾಗಿದೆ.

ನವೆಂಬರ್ 26 ಇದು ಅಮೂಲ್ ಸಂಸ್ಥೆಯ ಸಂಸ್ಥಾಪಕ, ಕ್ಷೀರ ಬ್ರಹ್ಮ , ಕ್ಷೀರ ಕ್ರಾಂತಿಯ ಹರಿಕಾರ ಶ್ವೇತ ಕ್ರಾಂತಿಯ ಪಿತಾಮಹ ಡಾ. ವರ್ಗೀಸ್ ಕುರಿಯನ್ನರ ಜನುಮ ದಿನ. ಕುರಿಯನ್ನರು ಗತಿಸಿದ 2 ವರುಷಗಳ ತರುವಾಯ 2014ರಲ್ಲಿ, ಅವರ ಜನ್ಮದಿನವನ್ನು ಎನ್.ಡಿ.ಡಿ.ಬಿ.ಯು ರಾಷ್ಟ್ರೀಯ ಹಾಲು ದಿನವೆಂದು ಘೋಷಿಸಿದ್ದು ದೇಶದೆಲ್ಲೆಡೆ ಹಾಲಿನ ಹೊಳೆಯನ್ನೇ ಹರಿಸಿ ಹಾಲ್ಗಡಲನ್ನು ಸೃಷ್ಟಿಸಿದ ಕ್ಷೀರ ಬ್ರಹ್ಮ, ಶ್ವೇತ ಕ್ರಾಂತಿಯ ಹರಿಕಾರ, ಕ್ಷೀರ ಪಿತಾಮಹನಿಗೆ ಸಂದ ಭಾವ ಪೂರ್ಣ ಗೌರವವೆಂದರೆ ತಪ್ಪಾಗಲಾರದು. ಅಂತೆಯೇ ದೇಶದೆಲ್ಲೆಡೆ ಗ್ರಾಮೀಣ ಹೈನು ಕುಟುಂಬಗಳ ಬಡತನವನ್ನು ನೀಗಿ, ಅದರಲ್ಲೂ ಮಹಿಳೆಯರಿಗೆ ಆರ್ಥಿಕ ಸಬಲತೆಯನ್ನು ನೀಡಿ, ಸ್ವಾವಲಂಬನೆಯ ಬದುಕನ್ನು ಕಟ್ಟಿಕೊಟ್ಟ ಈ ಮಹಾನ್ ವ್ಯಕ್ತಿಗೆ ದೇಶ ನೀಡಿದ ಗೌರವವೆಂದು ಹೇಳಬಹುದು. ಹಾಲ್ಗಡಲನ್ನು ಕಡೆದಾಗ ಪರಶಿವ ವಿಷವುಂಡನಂತೆ, ಅಂತೆಯೇ ಇವರು ದೇಶದೆಲ್ಲೆಲ್ಲ ಹಾಲಿನ ಹೊಳೆ ಹರಿಸಿದರೂ ಜೀವಮಾನದಲ್ಲಿ ಒಮ್ಮೆಯೂ ಒಂದು ತೊಟ್ಟು ಹಾಲನ್ನು ಕುಡಿಯದಿರುವುದು ವಿಪರ್ಯಾಸವೇ ಸರಿ! ಇಡೀ ದೇಶದ ಹೈನುಗಾರರ, ಹಾಲು ಉತ್ಪಾದಕರ, ಡೇರಿ ಸಂಸ್ಥೆಯ ಸಿಬ್ಬಂದಿಗಳ, ಮಾರಾಟಗಾರ, ಹಾಗೂ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕಾರಿ ತತ್ವದಡಿ ಡೇರಿ ಉದ್ಯವiದಲ್ಲಿ ತೊಡಗಿಸಿಕೊಂಡು ಬದುಕನ್ನು ಕಟ್ಟಿಕೊಳ್ಳುತ್ತಿರುವ ಪ್ರತಿಯೊಬ್ಬ ಭಾರತೀಯನೂಈ ಯುಗಪುರುಷನನ್ನು ಸ್ಮರಿಸಿ, ನಮಿಸಿ, ಕೃತಙತೆ ಸಲ್ಲಿಸಬೇಕಾದ ಸುದಿನವಿದು. ಇಂಥಹ ಮಹಾ ಪುರುಷನನ್ನು ಪಡೆದ ಭಾರತಾಂಬೆ ನಿಜಕ್ಕೂ ಧನ್ಯಳು.

ರಾಜೇಶ್ವರಿ ಹೆಚ್.ಎಲ್.
ಹಾಸನ ಡೈರಿ, ಹಾಸನ.

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!