ಮಹಿಳಾ ಶಿಕ್ಷಣಕ್ಕೆಅಪಾರವಾಗಿ ಇಂಬು ನೀಡಿದ ಸಾವಿತ್ರಿಬಾಯಿ ಫುಲೆ ಅವರು ಜನಿಸಿದ ದಿನವಿದು. ಹೆಣ್ಣುಮಕ್ಕಳು ಶಿಕ್ಷಣ ಪಡೆಯಬೇಕೆಂಬ ಕನಸನ್ನು 19ನೇ ಶತಮಾನದ ಪ್ರಾರಂಭದಲ್ಲೇ ಕಂಡು ಈ ಧ್ಯೇಯೋದ್ಧೇಶಕ್ಕಾಗಿ ತಮ್ಮ ಪತಿ ಜ್ಯೋತಿಬಾ ಫುಲೆ ಅವರೊಂದಿಗೆ ನಿರಂತರ ಶ್ರಮಿಸಿದ ಮಹಾನ್ ತಾಯಿ ಈಕೆ. ಸಾಮಾಜಿಕವಾಗಿ ಹೆಣ್ಣುಮಕ್ಕಳು ವಿದ್ಯೆ ಪಡೆಯುವುದೇ ಕಷ್ಟವಿದ್ದ ಕಾಲಘಟ್ಟದಲ್ಲಿ ಈ ದಂಪತಿಗಳು ಹೆಣ್ಣು ಮಕ್ಕಳಲ್ಲಿ ಹತ್ತಿಸಿದ ಶಿಕ್ಷಣದ ಅರಿವಿನ ಕಿಡಿ ಎಂತದ್ದು ಎಂಬುದನ್ನು ನಾವು ಊಹಿಸಬಹುದಾಗಿದೆ.
“ನಿಜವಾಗಿ ನೋಡಿದರೆ ಈ ಅಭಿನಂದನೆ ನಿನಗೆ ಸಲ್ಲತಕ್ಕದ್ದು. ನಾನು ಕೇವಲ ಬೇರೆ ಬೇರೆ ಕಡೆ ಶಾಲೆಗಳನ್ನು ಪ್ರಾರಂಭಿಸಲು ಕಾರಣಕರ್ತ. ಆದರೆ ನೀನು ಮಾತ್ರ ಶಾಲೆಗಳ ಬೆಳವಣಿಗೆಯ ಹಾದಿಯಲ್ಲಿ ಎದುರಾದ ಎಲ್ಲ ಸಂಕಷ್ಟಗಳನ್ನು ಧೈರ್ಯದಿಂದ ಎದುರಿಸಿರುವೆ. ಅದರಿಂದಾಗಿ ಬಂದಂತಹ ಬಹುಪರಿಯ ದುಃಖಗಳನ್ನು ನುಂಗಿಕೊಳ್ಳುತ್ತಾ ಪ್ರತಿಯೊಂದು ಶಾಲೆಗೂ ಹೊಸ ರೂಪ ಮತ್ತು ಚೈತನ್ಯವನ್ನು ತುಂಬಿರುವೆ. ಅದಕ್ಕಾಗಿ ಇದೋ ನನ್ನ ಮನಃಪೂರ್ವಕ ಅಭಿನಂದನೆಗಳು” ಎನ್ನುತ್ತಾ ಸ್ವಇಚ್ಛೆಯಿಂದ ಶಿಕ್ಷಣ ಕೇಂದ್ರಗಳನ್ನು ತೆರೆದು ವಿದ್ಯಾ ದಾನ ಮಾಡಿದ ತಮಗೆ, ಬ್ರಿಟಿಷ್ ಸರ್ಕಾರ ಹೊದಿಸಿ ಗೌರವಿಸಿದ ಶಾಲನ್ನು ಮಹಾತ್ಮ ಜ್ಯೋತಿಬಾ ಫುಲೆ ಅವರು ತಮ್ಮ ಮಡದಿಗೆ ನೀಡಿದಾಗ, ಇಡೀ ಸಭೆಗೆ ಸಭೆಯೇ ಎದ್ದು ನಿಂತು ಕರತಾಡನದೊಂದಿಗೆ ಅವರಿಗೆ ಗೌರವ ಸೂಚಿಸಿತು. ಹೀಗೆ ಪತಿಯಿಂದ ಸಾಮಾಜಿಕವಾಗಿ ಪ್ರಶಂಸೆ ಮತ್ತು ಗೌರವವನ್ನು ಪಡೆದವರು ಸಾವಿತ್ರಿಬಾಯಿ ಫುಲೆ.
1847ರಲ್ಲಿ ನಾರ್ಮನ್ ಶಾಲೆಯಲ್ಲಿ ಕೇವಲ 17 ವರ್ಷದೊಳಗೆ ಶಿಕ್ಷಕಿ ತರಬೇತಿಯನ್ನು ಪಡೆದ ಸಾವಿತ್ರಿಬಾಯಿ ಅವರು ಮಹಾರಾಷ್ಟ್ರದಲ್ಲಿ ತರಬೇತಾದ ಮೊದಲ ಮಹಿಳಾ ಶಿಕ್ಷಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 1848ರಲ್ಲಿ ಜ್ಯೋತಿಬಾ ಅವರು ಪುಣೆಯಲ್ಲಿ ತೆರೆದ ಮೊಟ್ಟಮೊದಲ ಹೆಣ್ಣುಮಕ್ಕಳ ಶಾಲೆಯಲ್ಲಿ (ಭಾರತದಲ್ಲಿ ಎರಡನೆಯದು) ಉಪಾಧ್ಯಾಯಿನಿಯಾಗಿ ಈಕೆ ಕೆಲಸ ಪ್ರಾರಂಭಿಸಿದರು. 9 ಜನ ಹೆಣ್ಣುಮಕ್ಕಳಿಂದ ಪ್ರಾರಂಭವಾದ ಶಾಲೆ, ಮುಂದೆ ಅನೇಕ ಬಾಲೆಯರಿಗೆ ವಿದ್ಯಾದಾನದ ಕೇಂದ್ರವಾಯ್ತು.ಇದಕ್ಕಾಗಿ ಸಾವಿತ್ರಿಬಾಯಿ ಅವರು ಸಮಾಜದಲ್ಲಿ ಎದುರಿಸಿದ ಕಷ್ಟ ಅಷ್ಟಿಷ್ಟಲ್ಲ. ಸಾವಿತ್ರಿಬಾಯಿಯವರು ಶಾಲೆಗೆ ಹೋಗಿ ಬರುವ ದಾರಿಯಲ್ಲಿ ಅವರನ್ನು ಕೆಟ್ಟ ಶಬ್ದಗಳಿಂದ ನಿಂದಿಸಲಾಯಿತು. ಕಲ್ಲು, ಕೆಸರು, ತೊಪ್ಪೆಗಳನ್ನೆಸೆದು ಹೆದರಿಸಿ, ಕೊಲೆ ಬೆದರಿಕೆ ಹಾಕಿದರು. ಯಾವುದಕ್ಕೂ ಬಗ್ಗದಿದ್ದಾಗ, ಇವರ ಶಾಲೆಗೆ ಸೇರಿದ್ದ ಹೆಣ್ಣುಮಕ್ಕಳಿಗೆ ಜಾತಿ ಹಾಗೂ ಸಮಾಜ ಬಹಿಷ್ಕಾರದ ಬೆದರಿಕೆಯನ್ನು ಹಾಕತೊಡಗಿದರು. ಸಾವಿತ್ರಿಬಾಯಿ ಅವರು ಮನೆ ಮನೆಗಳಿಗೆ ಹೋಗಿ ಪೋಷಕರ ಮನವೊಲಿಸಿ, ಶಿಕ್ಷಣದ ಔನ್ನತ್ಯವನ್ನು ತಿಳಿ ಹೇಳಿ ಮಕ್ಕಳನ್ನು ಮರಳಿ ಶಾಲೆಗೆ ಕರೆತಂದು ಶಿಕ್ಷಣ ನೀಡಿದರು.ಜ್ಯೋತಿಬಾ ಫುಲೆಯವರು 1890 ವರ್ಷದಲ್ಲಿ ನಿಧನರಾದ ನಂತರವೂ ಸಾವಿತ್ರಿಬಾಯಿ ಅವರು 1897 ವರ್ಷದ ತಮ್ಮ ಬದುಕಿನ ಕೊನೆಯಗಳಿಗೆಯವರೆಗೆ ತಮ್ಮ ಜನಪರ ಕೆಲಸ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಿದರು.